ದೃಶ್ಯಕ್ಕೊಂದು ನುಡಿಗಟ್ಟು

ಕೈರಿ: ಕಳಕೊಂಡವರ ಕನಸು

ತನ್ನ ಕನಸುಗಳಿಗೆ ರೆಕ್ಕೆ ನೀಡಬೇಕಾದ ಪೋಷಕರನ್ನ ಕಳಕೊಂಡ ಪೋರಿ ಒಂದೆಡೆ. ತನ್ನ ಭಾವನೆಗಳಿಗೆ ಬೆಂಕಿಯಿಟ್ಟು ದಾಂಪತ್ಯದ ಕಟು ವಾಸ್ತವದಲ್ಲಿ ದಿನ ನೂಕುತ್ತಿರುವ ತಾನಿ ಮೌಸಿ ಇನ್ನೊಂದೆಡೆ. ಇಬ್ಬರೂ Kairee Posterಕಳಕೊಂಡವರೇ; ಒಬ್ಬಳು ಕನಸನ್ನು, ಇನ್ನೊಬ್ಬಳು ರೆಕ್ಕೆಯನ್ನು.

ಹತ್ತನೇ ವಯಸ್ಸಿಗೆ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಳ್ಳುವ ಆ ಪೋರಿಯನ್ನ ಆಕೆಯ ಮಾವ ಶ್ರೀಪು ತನ್ನ ತಂಗಿ ತಾನಿ ಮೌಸಿಯ ಬಳಿ ತಂದು ಬಿಡುತ್ತಾನೆ. ತನ್ನ ಬರಡು ಬದುಕಿಗೆ ಉತ್ಸಾಹ ಚಿಲುಮೆಯಾಗಿ ಬರುವ ಆ ಪೋರಿ ತಾನಿಮೌಸಿಯಲ್ಲಿ ಹೊಸ ಭರವಸೆ ಹುಟ್ಟಿಸುತ್ತಾಳೆ. ಬದಲಿಗೆ ಆ ಪೋರಿಯಲ್ಲಡಗಿರುವ ನೂರಾರು ಕನಸುಗಳನ್ನು ಅರಳಿಸುತ್ತಾಳೆ. ತಮ್ಮದೇ ಭಾವಲೋಕದಲ್ಲಿ ಇಬ್ಬರೂ ಅರಳುತ್ತಾರೆ; ನಲಿಯುತ್ತಾರೆ, ನವಿಲಿನಂತೆ. ತಾನಿ ಮೌಸಿ ಅದೇ ಊರಿನ ಸರ್ಕಾರಿ ಶಾಲೆಯೊಂದರಲ್ಲಿ ಆ ಪೋರಿಯನ್ನ ಸೇರಿಸುತ್ತಾಳೆ. ಆ ಶಾಲೆಗೆಲ್ಲ ಆಕೆಯೊಬ್ಬಳೇ ಹೆಣ್ಣು ಹುಡುಗಿ, ತೀರಾ ಮಂಗಾಟಗಳೇ ನಡೆಯುವ ಶಾಲೆಯಲ್ಲಿ ಮಾಸ್ತರ್ ಕೂಡ ಸರಿಯಿಲ್ಲ.  ಮುಂದೆ ಅಲ್ಲಿನ ಮಾಸ್ತರನೊಡನೆ ಜಟಾಪಟಿ ನಡೆದು ಪಕ್ಕದ ಊರಿನ ಇನ್ನೊಂದು ಶಾಲೆಗೆ ಭರ್ತಿ ಮಾಡಿಸುತ್ತಾಳೆ. ಆ ಶಾಲೆಯ ಮಾಸ್ತರ್ ಜಾಧವ್ ಕೂಡ ಒಬ್ಬಂಟಿ. ಆ ಪುಟ್ಟ ಹುಡುಗಿಯಲ್ಲಡಗಿರುವ ಕವಿ ಮನಸ್ಸನ್ನ ಗುರುತಿಸುವ ಅವನು ಬಹು ಬೇಗ ಆಕೆಯನ್ನ ಹಚ್ಚಿಕೊಳ್ಳುತ್ತಾನೆ. ತಾನಿ ಮೌಸಿಯ ಬಗ್ಗೆ ಏನಾದರೂ ಬರೆಯುವಂತೆ ಆ ಪೋರಿಯನ್ನ ಪ್ರೇರೆಪಿಸುತ್ತಾನೆ. ಇತ್ತ ತನ್ನ ಗಂಡನ ಹಾದರದಿಂದ ಈಕೆ ಬೆಸತ್ತಿದ್ದಾಳೆ. ತನ್ನ ಮನೆಯಲ್ಲೇ ಕೆಲಸದವಳೊಡನೆ ತನ್ನ ಗಂಡ ಇರಿಸಿಕೊಂಡಿರುವ ಅನೈತಿಕ ಸಂಬಂಧದ ಅರಿವು ಆಕೆಗಿದೆ. ಪ್ರತ್ ಕ್ಷಣ ತಾನಿ ಮೌಸಿಯನ್ನ ಅದು ಸುಡುತ್ತಿದ್ದರೂ ಅವಳು ಧೃತಿ ಗೆಡದೆ ಬದುಕಿದ್ದಾಳೆ. ಗಂಡನ ಉಪಟಳ ಹೆಚ್ಚಾಗಿ ಆತ ಮಂಗಳಸೂತ್ರವನ್ನೂ ಕಸಿದುಕೊಳ್ಳಲು ಬಂದಾಗ ತಾನಿಮೌಸಿ ಜರ್ಜರಿತಳಾಗುತ್ತಾಳೆ. ಮಾರನೇ ದಿನವೇ ಆ ಪೋರಿಯನ್ನ ಮರಳಿ ತನ್ನ ಅಣ್ಣನ ಬಳಿಗೆ ಕಳಿಸುತ್ತಾಳೆ. ತಾನಿ ಮೌಸಿಯ ಬಗ್ಗೆ ಬರೆದಿದ್ದ ಆ ಪೋರಿಯ ಲೇಖನ ಮಾತ್ರ ಮಾಸ್ತರ್ ಜಾಧವ್ ನ ಕೈ ಸೇರುವುದಿಲ್ಲ ಎಂಬ ಆತಂಕದಿಂದ  ತಾನು ಹೊರಟ ಬಸ್ಸಿನಿಂದಲೇ ಬರೆದ ಹಾಳೆಗಳನ್ನ ತಾನಿ ಮೌಸಿ ಮತ್ತು ಜಾಧವ್ ಮಾಸ್ತರ್ ನ ಕಡೆಗೆ ಎಸೆದು ತೃಪ್ತಳಾಗುತ್ತಾಳೆ. ಅವಳ ಬರವಣಿಗೆ ಓದಿ ಇಬ್ಬರೂ ಹಸನ್ಮುಖರಾಗುವುದರೊಂದಿಗೆ ಆಕೆಯ ಬಾಲ್ಯದ ನೆನಪುಗಳು ಕೊನೆಗಾಣುತ್ತದೆ. ಮುಂದಿನ ದೃಶ್ಯದಲ್ಲಿ ಆ ಪೋರಿ ಕವಯಿತ್ರಿಯಾಗಿ ಹೆಸರು ಮಾಡಿ ತನ್ನ ಮಗನ ಜೊತೆಗೂಡಿ ಅದೇ ಊರಿಗೆ ಮರಳುತ್ತಾಳೆ. ಅಲ್ಲಿ ಅದೇ ತೊದಲುವ ಜಾಧವ್ ಮಾಸ್ತರ್ ನಿದ್ದಾನೆ; ಹಿಂದಿಗಿಂತ ಹೆಚ್ಚು ಶಿಸ್ತುಬದ್ದಾದ ಶಾಲೆಯ ಮಕ್ಕಳು ನಿಂತಿದ್ದಾರೆ, ಆದರೇ ತಾನಿಮೌಸಿ ಮಾತ್ರ ಇಲ್ಲ.  

ಅಮೋಲ್ ಪಾಲೇಕರ್ ನಿರ್ದೇಶನದ ಕೈರಿ ಇಬ್ಬರು ವಿಭಿನ್ನ ವಯೋಮಾನಗಳ ಹೆಣ್ಣುಗಳ ನಡುವಿನ ಬಾಂಧವ್ಯದ ಕತೆ ಹೇಳುತ್ತದೆ. ಕನಸು ಮತ್ತು ವಾಸ್ತವಗಳ ನಡುವಿನ ಜುಗಲ್ ಬಂದಿಯಂತೆ ಕಾಣುವ ಚಿತ್ರವನ್ನ ಅಮೋಲ್ ತೀರಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ತನ್ನ ನಿತ್ಯದ ಬದುಕನ್ನು ದಿಟ್ಟವಾಗಿ ಎದುರಿಸುವ ತಾನಿ ಮೌಸಿಯಲ್ಲಿನ್ನೂ ಮಗುವಿನ ಮನಸ್ಸಿದೆ; ಆದರೇ ಆಕೆಗಿನ್ನೂ ಮಕ್ಕಳಿಲ್ಲ. ಊಟಕ್ಕೆ ಸರಿಯಾಗಿ ಹಾಜರಾಗುವ ಯಜಮಾನನಿದ್ದಾನೆ; ತನ್ನ ಭಾವನೆಗಳಿಗೆ ಬೆಲೆಕೊಡುವ ಗಂಡನಿಲ್ಲ. ಬದಲಿಗೆ ಗಂಡನೆನಿಸಿಕೊಂಡವನು ಹೆಂಡತಿಯ ಎದುರಲ್ಲೇ ಹಾದರ ನಡೆಸುತ್ತಾನೆ. ಇಂತಹ ನಿತ್ಯ ನರಕದಲ್ಲಿ ಅವಳಿಗೆ ಜೊತೆಯಾಗುವವಳು ಆಕೆಯ ಅಕ್ಕನ ಮಗಳು. ಆ ಹುಡುಗಿಯ ಪಾಲನೆಯಲ್ಲೇ ತಾನು ಕಳೆದುಕೊಂಡ ಬದುಕನ್ನ ಮರಳಿ ಪಡೆಯುವ ಹಂಬಲ ಆಕೆಗೆ. ತಾನಿ ಮೌಸಿ ಆ ಪೋರಿಯೊಡನೆ ಕಳೆದ ರಸ ನಿಮಿಷಗಳೇ ಚಿತ್ರದ ತಿರುಳು; ಅಥವಾ ಚಿತ್ರ ಆ ಪೋರಿಯ ಪ್ರಜ್ಞೆಯಲ್ಲೇ ವಿಹರಿಸುವುದರಿಂದ ಆಕೆ ಮೌಸಿಯೊಡನೆ ಕಳೆದ ದಿನಗಳ ಚಿತ್ರಣವೆಂದಾದರೂ ತಿಳಿಯಬಹುದು. ಚಿತ್ರ ಅದರಾಚೆಗೆ ನಿಲ್ಲುವುದಿಲ್ಲ ಕೂಡ.


ತಾನಿ ಮೌಸಿಯ ಪಾತ್ರದಲ್ಲಿ ಶಿಲ್ಪಾ ನವಾಲ್ಕರ್, ಪುಟ್ಟ ಪೋರಿಯ ಪಾತ್ರದಲ್ಲಿ ಯೋಗಿತಾ ದೇಶ್ ಮುಖ್ ಅಭಿನಯ ಪ್ರಶಂಸನೀಯ. ಶಾಲೆಯ ದೃಶ್ಯಗಳು ಮತ್ತು ತಾನಿಮೌಸಿ ಪೋರಿಯೊಡನೆ ವಿಹರಿಸುವ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿದೆ. ಭಾಸ್ಕರ್ ಚಂದಾವರ್ಕರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಇನ್ನಷ್ಟು ಬಲ ನೀಡಿದೆ. ಮರಾಠಿ ಪರಿಸರದಲ್ಲಿ ನಡೆಯುವ ಈ ಕಥೆಯಲ್ಲಿ ಸಂಭಾಷಣೆ ಹಿಂದಿಯದ್ದಾಗಿದ್ದರೂ ಮರಾಠಿ ಮಣ್ಣಿನ ವಾಸನೆ ದಟ್ಟವಾಗಿದೆ.

ತುಸು ಹೆಚ್ಚೆ ಎನಿಸುವಷ್ಟು ಭಾವನಾತ್ಮಕವಾಗಿರುವ ಚಿತ್ರದಲ್ಲಿ ಕೊನೆಗೂ ತಾನಿ ಮೌಸಿಯ ನೋವಿಗೆ ವಾಸ್ತವದ ಪರಿಹಾರ ಸಿಗುವುದಾಗಲೀ, ಅಥವಾ ಅದರ ಸಾಧ್ಯತೆಯಾಗಲೀ ನಮಗೆ ಗೋಚರಿಸುವುದಿಲ್ಲ ಬದಲಿಗೆ ಆ ಪೋರಿ ತಾನಿಯ ಬಗ್ಗೆ ಬರೆದು ಹಾಳೆಗಳನ್ನೆಸೆವ ದೃಶ್ಯದಲ್ಲಿ ತಾನಿ ಮೌಸಿ ಹಾಗೂ ಜಾಧವ್ ಮಾಸ್ತರ್ ಒಂದಾಗುವರೆನೋ ಎನ್ನುವ ಅನುಮಾನವನ್ನಷ್ಟೆ ಹುಟ್ಟಿಸುತ್ತದೆ. ಕೊನೆಗೂ ಚಿತ್ರ ಹೇಳುವುದು ನಮ್ಮ ಸಮಾಜದ ಹೆಣ್ಣು ಮಗಳ ಅಸಹಾಯಕತೆಯನ್ನ; ಆ ಅಸಹಾಯಕತೆಯಲ್ಲೂ ಆಕೆ ಬದುಕುವ ಛಲವನ್ನ. ಇನ್ನೊಂದೆಡೆ ಮೌಸಿಯೊಡನೆ ಕಳೆದ ಆ ದಿನಗಳು ಆ ಪೋರಿಯ ಬಾಲ್ಯದ ಗಟ್ಟಿ ನೆನಪಾಗಿ ಉಳಿದುಕೊಳ್ಳುತ್ತದೆ. ಅತ್ಯುತ್ತಮ ಕಲಾಕೃತಿಯಾಗಲು ಅಲ್ಲಲ್ಲಿ ಎಡವಿದ್ದರೂ ನಮ್ಮ ಮಾಸ್ತಿಯವರ ಕತೆಯಂತೆ ಬದುಕಿನ ವಾಂಛೆ ಹೆಚ್ಚಿಸುವ , ಜೀವನ್ಮುಖಿ ಚಿತ್ರವಿದು.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು