ದೃಶ್ಯಕ್ಕೊಂದು ನುಡಿಗಟ್ಟು

ಸ್ಲಂ ಡಾಗ್ ಮಿಲೇನಿಯರ್: ನಾನು ನೋಡಿದ ಸಿನೆಮಾ

ಪ್ರಕಾಶಿಸುತ್ತಿರುವ ಭಾರತವನ್ನು ಬೆತ್ತಲಾಗಿಸುವ
ಸ್ಲಂ ಡಾಗ್ ಮಿಲಿಯನೇರ್
ಭಾರತ ದೇಶ ಕುರಿತ ಪ್ರಮುಖ ಕಥಾವಸ್ತುವನ್ನುಳ್ಳ ‘ಸ್ಲಂ ಡಾಗ್ ಬಿಲಿಯನೇರ್’ ಎಂಬ ಇಂಗ್ಲೀಷ್ ಚಿತ್ರ ಈ ವರ್ಷದ ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಬಾಚಿಕೊಂಡಿದೆಯಲ್ಲದೆ, ದೇಶದ ಮಾಧ್ಯಮಗಳಲ್ಲಿ ಅತೀವ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದೊಂದು ಹಾಲಿವುಡ್ ಚಿತ್ರವಾದರೂ ಅನಿಲ್ ಕಪೂರ್ ಮತ್ತು ಎ.ಆರ್. ರೆಹಮಾನ್‌ಯಾದಿಯಾಗಿ ಹಲವು ಭಾರತೀಯ ನಟರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಭಾಗವಹಿಸಿರುವುದು ವಿಶೇಷ.

ಮುಂಬೈನಲ್ಲಿ ನಡೆಯುವ ಕೋಮುದಳ್ಳುರಿಗೆ ಸಿಕ್ಕಿ ಅನಾಥರಾಗುವ ಮಕ್ಕಳೇ ಕಥೆಯ ಕೇಂದ್ರ ಪಾತ್ರಗಳಾದರೂ ಕಥೆಯ ಸುರುಳಿ ಬಿಚ್ಚಿಕೊಂಡಂತೆಲ್ಲ ಅದರ ಮಗ್ಗಲುಗಳ ಘಟನೆಗಳನ್ನು ಕಥಾಕೊಂಡಿಯಾಗಿ ಚಿತ್ರಕಥೆಯು ಅಂಟಿಕೊಂಡಿಸಿದೆ. ಇದರಿಂದಾಗಿ ಕಥೆಯೊಳಗೆ ಹಲವು ಕಥೆಗಳನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ಪರಿಚಯಿಸುತ್ತಾ ಸಾಗುವ ವಿನೂತನ ಕಥಾಶೈಲಿ ಮತ್ತು ತಂತ್ರಗಳನ್ನು ಈ ಸಿನಿಮಾ ಒಳಗೊಂಡಿದೆ.  ಇದೇ ಮಕ್ಕಳು ಮುಂದೆ ಬದುಕಲು ತಾವು ಪಡುವ ಬವಣೆಯನ್ನು, ಸಾವಿನ ಬಾಯಿಂದ ಬದುಕುಳಿಯುತ್ತಾ ಸಾಗುತ್ತಿರುವಾಗಲೇ ಅಚಾನಕ್ಕಾಗಿ ಕೋಟ್ಯಾಧಿಪತಿಯಾಗುವ ಅವಕಾಶದ ನಡುವೆಯೂ ಚಿತ್ರಹಿಂಸೆಗೆ ಗುರಿಯಾಗುವ ರೋಚಕಕತೆಯಿಂದ ಚಿತ್ರ ಮನಸೆಳೆಯುತ್ತದೆ.

ಚಿತ್ರದ ಆರಂಭದಲ್ಲಿ ಜಮಾಲ್ ಮಲ್ಲಿಕ್ (ದೇವ್ ಪಟೇಲ್) ಎಂಬ ಯುವಕನನ್ನು ಎಳೆತಂದು ಪೊಲೀಸ್ ಸ್ಟೇಷನ್ನಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ‘ಕೌನ್ ಬನೇಗಾ ಕ್ರೋರ್‌ಪತಿ’ ಎಂಬ ಕಾರ್ಯಕ್ರಮದ ಮಾದರಿಯ ‘ಉ ವಾಂಟ್ಸ್ ಟು ಬಿ ಯೇ ಮಿಲಿಯನೇರ್?’ ಎಂಬ ಇಂಗ್ಲೀಷ್ ಕಾರ್ಯಕ್ರಮದಲ್ಲಿ ಜಮಾಲ್ ಮಲ್ಲಿಕ್ ಯುವಕ ಕಾರ್ಯಕ್ರಮದ ನಿರೂಪಕರಿಗೆ ಮತ್ತು ಪ್ರೇಕ್ಷಕರಿಗೆಲ್ಲರಿಗೂ ಅದ್ಹೇಗೆ ವಂಚನೆ ಮಾಡಿದ್ದಾನೆಂದು ತಿಳಿದುಕೊಳ್ಳುವುದೇ ಪೊಲೀಸ್ ವಿಚಾರಣೆಯ ಉದ್ದೇಶ. ಜಮಾಲ್ ತಾನೇನೂ ತಪ್ಪೆಸಗಿಲ್ಲವೆಂದರೂ ಬಿಡದ ಪೊಲೀಸರು “ಕೊಳಚೆಪ್ರದೇಶದಲ್ಲಿ ವಾಸಿಸುವ ಒಂದು ನಾಯಿಗೆ ಅದ್ಹೇಗೆ ಅಂಥದೊಂದು ದೊಡ್ಡ ಫೈನಲ್ ತಲುಪಲು ಸಾಧ್ಯವಾಯಿತೆಂಬುದೇ” ಪೊಲೀಸರ ಜಿಜ್ಞಾಸೆ. ಎಲ್ಲ ಕಠಿಣ ಪ್ರಶ್ನೆಗಳಿಗೂ ಉತ್ತರಿಸಿ ಅಂತಿಮ ಸುತ್ತು ತಲುಪಿರುವ ಈ ಚಾಯ್‌ವಾಲಾ ಹೇಗೋ ವಂಚನೆ ಮಾಡಿ ಫೈನಲ್ ತಲುಪಿದ್ದಾನೆಂದು ಕಾರ್ಯಕ್ರಮದ ನಿರೂಪಕನಿಗೂ ಸಂಶಯ ಬಂದು ಅವನೇ ಜಮಾಲ್‌ನನ್ನು ಪೊಲೀಸರ ತೆಕ್ಕೆಗೆ ವಿಚಾರಣೆಗಾಗಿ ಕಳುಹಿಸಿರುತ್ತಾನೆ. ಇದಕ್ಕಾಗಿ ಪೊಲೀಸರು ತಮಗೆ ಗೊತ್ತಿರುವ ಎಲ್ಲ ಪೊಲೀಸ್ ಟ್ರೀಟ್‌ಮೆಂಟ್‌ಗಳನ್ನು ಜಮಾಲ್‌ಗೆ ನೀಡುತ್ತಾರೆ. ದೇಹ ದಂಡಿಸುತ್ತಾರೆ, ಎಲೆಕ್ಟ್ರಿಕ್ ಶಾಕ್ ನೀಡುತ್ತಾರೆ, ಏರೋಪ್ಲೇನ್ ಹತ್ತಿಸುತ್ತಾರೆ, ಇತ್ಯಾದಿ. ಇದು ಚಿತ್ರಕಥೆ ಸವೆಸುವ ಒಂದು ಹಾದಿ.

ಇಲ್ಲಿಂದೀಚೆಗೆ ನಿರೂಪಕನ ಪ್ರತಿಯೊಂದು ಪ್ರಶ್ನೆಗೂ ಜಮಾಲ್ ಅದ್ಹೇಗೆ ಉತ್ತರ ಗೊತ್ತಿತ್ತೆಂಬ ರಹಸ್ಯವನ್ನು ಹೊರಗೆಡುಹುತ್ತಾ ಹೋಗುತ್ತಾನೆ. ಜಮಾಲ್ ಆ ಕಾರ್ಯಕ್ರಮದಲ್ಲಿ ನೀಡಿದ ಉತ್ತರದ ಬಗೆಯನ್ನು ತಿಳಿದುಕೊಳ್ಳುವ ಸಲುವಾಗಿ ಕ್ಯಾಮೆರಾ ನಿಧಾನವಾಗಿ ಆ ಕಾರ್ಯಕ್ರಮದತ್ತ ತಿರುಗುತ್ತದೆ. ಇದು ಕಥೆಯ ಎರಡನೇ ಕವಲು. ಕಾಲ್ ಸೆಂಟರ್ ಕಂಪನಿಯೊಂದರಲ್ಲಿ ಚಾಯ್ ಸರಬರಾಜು ಮಾಡುವ  ಜಮಾಲ್‌ನನ್ನು ಪರಿಚಯಿಸಿಕೊಂಡ ಕಾರ್ಯಕ್ರಮದ ನಿರೂಪಕ (ಅನಿಲ್ ಕಪೂರ್) ಮುಂಬೈ ನಗರದಲ್ಲಿ ಚಾಯ್ ಮಾರುತ್ತಾ ಬದುಕುತ್ತಿರುವ ಚಾಯ್‌ವಾಲಾ ಜಮಾಲ್ ಮಲ್ಲಿಕ್‌ಗೆ ಈ ಕಾರ್ಯಕ್ರಮವೇನೂ ಚಾಯ್ ಮಾರಿದಷ್ಟು ಸುಲಭವಲ್ಲ ಎಂದು ಕುಟುಕುತ್ತಲೇ ಆರಂಭಿಸುತ್ತಾನೆ. ಈಗ ನಿರೂಪಕನ ಮೊದಲ ಪ್ರಶ್ನೆ: ‘ಜಂಜೀರ್’ ಹಿಂದಿ ಸಿನಿಮಾದ ನಾಯಕ ಯಾರು?.

ನಿರೂಪಕನ ಪ್ರಶ್ನೆಗೆ ಜಮಾಲ್ ಮಲ್ಲಿಕ್ ಉತ್ತರ ಆಲೋಚಿಸುತ್ತಿರುವಂತೆಯೇ ಕ್ಯಾಮೆರಾ ಅವನು ಆಡಿಬೆಳೆದ ಸ್ಲಂನೆಡೆಗೆ ಹರಿಯುತ್ತದೆ. ಇದು ಚಿತ್ರಕಥೆಯು ಮೂರನೇ ಬಾರಿಗೆ ಕವಲೊಡೆಯುವ ಬಗೆ ಹಾಗೂ ಇದೇ ಜಾಡಿನ ಮೂಲಕ ನೈಜ ಭಾರತವನ್ನು ಬೆತ್ತಲುಗೊಳಿಸುವ ದಿಗ್ಧರ್ಶಕನಂತೆ ಅದು ಸಾಗುತ್ತದೆ. ಏರ್‌ಪೋರ್ಟ್ ಮೈದಾನದಲ್ಲಿ ಪೊಲೀಸರ ಕಣ್ತಪ್ಪಿಸಿ ಕ್ರಿಕೆಟ್ ಆಟ ಆಡುತ್ತಾ ಬೆಳೆಯುವ ಸ್ಲಂ ಹುಡುಗರು. ವಿಕಾರವಾಗಿ ಅವತರಿಸುವ ಮೋರಿಗಳು, ಆಗಸದ ಚುಕ್ಕಿಗಳಂತೆ ಒಂದಕ್ಕೊಂದು ಮುತ್ತಿರುವ ಅಸಂಖ್ಯಾತ ಸ್ಲಂ ಗೂಡು ಮನೆಗಳು. ಹೀಗೆ ಇಂಡಿಯಾದ ಅತಿ ದೊಡ್ಡ ಸ್ಲಮ್ಮುಗಳ ಅನಾವರಣವಾಗುತ್ತದೆ. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾನೆಂದು ಜಮಾಲ್ ಉತ್ತರವೀಯುತ್ತಾನೆ.

ಎರಡನೇ ಪ್ರಶ್ನೆ : ಭಾರತದ ರಾಷ್ಟ್ರೀಯ ಲಾಂಛನದಡಿಯಲ್ಲಿ ಬರೆದಿರುವುದೇನು? ಎಂಬ ಪ್ರಶ್ನೆಗೆ ಜಮಾಲ್‌ಗೆ ಉತ್ತರ ಗೊತ್ತಿರೋದಿಲ್ಲವಾದ್ದರಿಂದ ಅದಕ್ಕಾಗಿ ಲೈಫ್‌ಲೈನ್ ಬಳಸಿಕೊಂಡು ಉತ್ತರಿಸುತ್ತಾನೆ. ಆದರೆ ಈ ಪ್ರಶ್ನೆಗೆ ನನ್ನ ೫ ವರ್ಷದ ಮಗಳು ಬೇಕಾದರೆ ಉತ್ತರ ಹೇಳಬಲ್ಲಳು ಎಂದು ಇನ್ಸೆಪೆಕ್ಟರ್ ಹಂಗಿಸುತ್ತಾನೆ.

ಹೀಗೆ ನಿರೂಪಕನ ಪ್ರತಿ ಪ್ರಶ್ನೆಗೂ ಜಮಾಲ್ ಉತ್ತರಕ್ಕಾಗಿ ಆಲೋಚಿಸುತ್ತಿರುವಂತೆಯೇ ಅವನ ಬದುಕಿನ ಘೋರ ಪುಟಗಳು ಒಂದೊಂದಾಗಿ ತೆರೆಯುತ್ತಾ ಹೋಗುತ್ತವೆ. ಅವನ ಬದುಕಿನ ಪ್ರತಿ ಘಟನೆಯು ಈ ದೇಶದ ಕ್ರೌರ್‍ಯಭರಿತ ಇತಿಹಾಸದ ಭಾಗ ಕೂಡ ಆಗಿರುವುದೇ ಈ ಹೃದಯ ಸ್ಪರ್ಶಿ ಚಿತ್ರಕಥೆಯ ವಿಶೇಷತೆ.

ಹಠಾತ್ತನೆ ಶುರುವಾಗುವ ಕೋಮುಗಲಭೆಯಲ್ಲಿ ಅಣ್ಣ ಸಲೀಂ, ಜಮಾಲ್ ಮತ್ತು ಅವನ ತಾಯಿ ಸಿಕ್ಕಿಬೀಳುತ್ತಾರೆ. ತ್ರಿಶೂಲ, ಭರ್ಜಿ, ಲಾಂಗು, ಮಚ್ಚು ದೊಣ್ಣೆ, ಇತ್ಯಾದಿ ಮಾರಕಾಸ್ತ್ರಗಳನ್ನು ಹಿಡಿದ ಹಿಂದೂಗಳ ಗುಂಪೊಂದು ಮಹಿಳೆಯರು, ಮಕ್ಕಳು, ಗಂಡಸರು, ಹೀಗೆ ಕೈಗೆ ಸಿಕ್ಕವರನ್ನು ಕೊಲ್ಲುತ್ತಾ ಮನೆಗಳಿಗೆ ಬೆಂಕಿ ಹಚ್ಚುತ್ತಾ ಹೋಗುವ ದೃಶ್ಯ ನಿಜಕ್ಕೂ ಎದೆ ಝಲ್ ಎನಿಸುವಂತೆ ಮೂಡಿಬಂದಿದೆ. ಮುಸ್ಲಿಮರ ಮೇಲೆ ಧಾಳಿಯಾಗುತ್ತಿರುವಾಗ ಈ ಪುಟ್ಟ ಮಕ್ಕಳು ರಕ್ಷಣೆಗಾಗಿ ಪೊಲೀಸ್ ವ್ಯಾನಿನ ಬಳಿ ಓಡಿಹೋಗುತ್ತಾರೆ. ಆದರೆ ತಮ್ಮ ಮುಂದೆಯೇ ಮನುಷ್ಯರನ್ನು ಬೆಂಕಿಯಿಟ್ಟು ಕೊಲ್ಲುತ್ತಿದ್ದರೂ ಜಪ್ಪಯ್ಯ ಎನ್ನದ ಪೊಲೀಸರು ಈ ಮಕ್ಕಳನ್ನು ಅಲ್ಲಿಂದ ದೂರ ಓಡಿಸುವ ದೃಶ್ಯ ಮನಕಲಕುವಂತಿದೆ. ಇಡೀ ಸ್ಲಮ್ಮಿನಲ್ಲಿ ಕೋಮುಗಲಭೆಯ ನಂತರ ಬದುಕುಳಿಯುವುದು ಅಣ್ಣ ಸಲೀಂ, ಜಮಾಲ್ ಮತ್ತು ಪುಟ್ಟ ಹುಡುಗಿ ಲತಿಕಾ. ಇವರೆಲ್ಲರೂ ಅಪ್ಪ ಅಮ್ಮಂದಿರನ್ನು ಕಳೆದುಕೊಂಡು ಅನಾಥರಾಗುತ್ತಾರೆ.

ಅಣ್ಣ ಸಲೀಮನಿಗೆ ಲತಿಕಾ ಪಥ್ಯವಾಗದಿದ್ದರೂ ಜಮಾಲ್ ಅವಳನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಾನೆ. ಹೀಗೆ ಅನಾಥರಾಗುವ ಮಕ್ಕಳು ದೊಡ್ಡದೊಂದು ತಿಪ್ಪೆಗುಂಡಿಯಲ್ಲಿ ಚಿಂದಿ ಹಾಯುತ್ತಾ ಬದುಕು ಸವೆಸುತ್ತಿರಬೇಕಾದರೆ, ಮೆಮೊನ್ ಎಂಬ ಮಕ್ಕಳ ದಂಧೆ ನಡೆಸುವ ಪಾತಕಿಯ ಪ್ರವೇಶವಾಗುತ್ತದೆ. ಮಕ್ಕಳ ಕಣ್ಣು ಮತ್ತು ಇತರೆ ಅಂಗಾಂಗಗಳನ್ನು ಕಿತ್ತು ಅಂಗವಿಕಲಗೊಳಿಸಿ ಮಕ್ಕಳನ್ನು ಭಿಕ್ಷೆ ಬೇಡಲು ಕಳಿಸುವ, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕುವುದು ಮೆಮೊನ್‌ನ ಪಾತಕಿ ಕೃತ್ಯಗಳು. ಅವನ ರಾಕ್ಷಸಿ ಗುಹೆ, ಬೀಭತ್ಸಮಯ ಪರಿಸರ, ಇವೆಲ್ಲವನ್ನು ನೈಜವಾಗಿ ತೆರೆಯ ಮೇಲೆ ಸೃಷ್ಟಿಸಲಾಗಿದೆ. ಕಣ್ಣು ಕೀಳುವ ಸರದಿಯಲ್ಲಿ ಮುಂದಿನದು ತನ್ನ ತಮ್ಮ ಜಮಾಲನದೇ ಎಂದು ತಿಳಿದುಕೊಳ್ಳುವ ಸಲೀಂ, ಕಣ್ಣು ಕೀಳುವವನ ಮೇಲೆ ಆಸಿಡ್ ಎರಚಿ ಅಲ್ಲಿಂದ ತಮ್ಮನೊಡನೆ ಪರಾರಿಯಾಗುವ ದೃಶ್ಯ ಬೇಟೆಗಾರ ಮತ್ತು ಬೇಟೆಗಳ ನಡುವಿನ ಚೇಸಿಂಗ್ ಅತ್ಯಮೋಘ. ಅವರೊಡನೆ ಲತಿಕಾ ಸೇರಿಕೊಳ್ಳುತ್ತಾಳಾದರೂ, ಸಲೀಂ ಅವಳನ್ನು ತಮ್ಮೊಂದಿಗೆ ಬರದಂತೆ ದೂರತಳ್ಳುತ್ತಾನೆ. ಹೀಗೆ ಮತ್ತೊಂದು ಭಯಾನಕ ಜಗತ್ತನ್ನು ಪ್ರೇಕ್ಷಕರ ಅರಿವಿಗೆ ತರುತ್ತದೆ.

ಅಲ್ಲಿಂದ ತಪ್ಪಿಸಿಕೊಂಡು ಬರುವ ಇವರಿಬ್ಬರು ಹಣ್ಣು ಮಾರುತ್ತಾ, ಊಟ ಕದಿಯುತ್ತಾ, ಶೂಗಳನ್ನು ಕದಿಯುತ್ತಾ ಹಾಗೆಯೇ ಸಣ್ಣ ವ್ಯಾಪಾರ ಮಾಡುತ್ತಾ ದಿನ ನೂಕುತ್ತಾರೆ. ರೈಲಿನಲ್ಲಿ ಊಟ ಕದಿಯುವಾಗ ಸಿಕ್ಕಿಬೀಳುವ ಅವರು ತಪ್ಪಿಸಿಕೊಳ್ಳುವಾಗ ತಾಜ್‌ಮಹಲ್ ಬಳಿ ತಲುಪುತ್ತಾರೆ. ಅಲ್ಲಿ ವಿದೇಶಿಯರಿಗೆ ಗೈಡ್ ಆಗಿ ಒಂದಷ್ಟು ಬ್ಲಫ್ ಮಾಡುತ್ತಾ ಡಾಲರ್‌ನಲ್ಲಿ ಆದಾಯ ಗಳಿಸುತ್ತಾರೆ. ಈ ದೇಶದ ಬಹುಸಂಖ್ಯಾತ ಬಡಜನತೆಗೆ ರೂಪಾಯಿಯನ್ನು ಗಳಿಸಲು ಕೊಡಮಾಡದ ಈ ವ್ಯವಸ್ಥೆಯಲ್ಲಿ ಅವರೂ ಕೂಡ ರೂಪಾಯಿಯ ಮುಖ ಕಾಣದಿದ್ದರೂ ಡಾಲರ್ ನೋಡುವ ಸೌಭಾಗ್ಯ ಆಕಸ್ಮಿಕವಾಗಿ ಕಂಡುಬರುತ್ತದೆ. ಅದರಿಂದಲೇ ಜಮಾಲನಿಗೆ ಒಂದು ಸಾವಿರ ರೂಪಾಯಿ ನೋಟಿನ ಮೇಲೆ ಮುದ್ರಿತವಾಗಿರುವ ಗಾಂಧೀಜಿಯ ಚಿತ್ರಕ್ಕಿಂತ ಒಂದು ನೂರು ಡಾಲರ್ ನೋಟಿನ ಮೇಲೆ ಮುದ್ರಿತವಾಗಿರುವ ಬೆಂಜಮಿನ್ ಫ್ರಾಂಕ್ಲಿನ್ನನ ಪೋಟೋ ಗುರುತು ಹಿಡಿಯುತ್ತಾನೆ.

ಕಾರ್ಯಕ್ರಮದ ನಿರೂಪಕನ ಪ್ರಶ್ನೆಗಳಿಗೆ ಉತ್ತರ ಹೇಳೋದಿಕ್ಕೆ ಯಾರೂ ಕೂಡ ‘ಜೀನಿಯಸ್’ ಏನೂ ಆಗಿರಬೇಕಿಲ್ಲವೆನ್ನುವ ಜಮಾಲನ ಮಾತುಗಳಲ್ಲಿ ಅವನ ಬದುಕನ್ನು ಚಿಂದಿ ಮಾಡುವ ಈ ದೇಶದ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಘಟನಾವಳಿಗಳ ಮೂಸೆಯಿಂದ ಮೂಡಿಬರುವ ಅತ್ಯಂತ ಕಠೋರ ಉತ್ತರಗಳು ಸಂವೇದನಾಶೀಲ ಪ್ರೇಕ್ಷಕರ  ಹೃದಯಕ್ಕೆ ಪದೇ ಪದೇ ತಾಗುತ್ತವೆ. ಹಾಗೆಯೇ ಶಾಲಾ ಶಿಕ್ಷಣ ಕಲಿಸದ ಜೀವನದ ಅನೇಕ ಕ್ರೂರ ಪಾಠಗಳನ್ನು ಅವರು ಕಲಿಯುತ್ತಾರೆ.

ಅಂತಿಮವಾಗಿ ಜಮಾಲ್ ಮತ್ತು ಲತಿಕಾ ಜೋಡಿ ಹೇಗೋ ಬೆಂಕಿಯ ಕುಲುಮೆಯಿಂದ ತಪ್ಪಿಸಿಕೊಂಡು ಕುಬೇರರಾಗುತ್ತಾರೆಂದು ಪ್ರೇಕ್ಷಕರು ಸಂತೋಷಪಟ್ಟರೂ, ಅಂಥಹ ಕೋಟ್ಯಾಂತರ ಜಮಾಲ್, ಸಲೀಂ, ಲತಿಕಾರ ಜೀವಗಳ ಸ್ಥಿತಿ ಮೆಮೊನ್ ಮತ್ತು ಜಾವೇದ್‌ರಂಥಹ ಪಾತಕಿಗಳ ಹಿಡಿತದಲ್ಲಿ ಸಿಲುಕಿ ನಾಶವಾಗುತ್ತಿರುವುದು ಪ್ರೇಕ್ಷಕರನ್ನು ಕಾಡದೆ ಬಿಡದು.

ಚಿತ್ರದುದ್ದಕ್ಕೂ ಅಣ್ಣ ಸಲೀಂ ದುಡ್ಡಿಗಾಗಿ ದುಷ್ಟರ ಹಿಂದೆ ಬಿದ್ದಂತೆ ಕಂಡರೆ ಜಮಾಲ ಮಾತ್ರ ತನ್ನ ಬಾಲ್ಯ ಸ್ನೇಹಿತೆ ಲತಿಕಾಳ ಬೆಂಬತ್ತಿ ಪ್ರೀತಿ ಶೋಧನೆ ಮಾಡುವುದು ಆಕರ್ಷಣೀಯವಾಗಿ ಬಿಂಬಿತವಾಗಿದೆ. ಹಲವು ವೇಳೆ ಪಾತಕಿಗಳ ದಾಳವಾಗಿ ಬಳಕೆಯಾಗುವ ಸಲೀಂ ಕ್ರೂರ ಪಾತ್ರಧಾರಿಯಾಗಿ ಕಂಡರೂ, ಬದುಕಿನ ಅನಿವಾರ್‍ಯತೆಯಿಂದ ಪಾತಕಿಗಳ ಸಹವಾಸಕ್ಕೆ ಸಿಲುಕಿದರೂ ಅತ್ಯಂತ ನಿರ್ಣಾಯಕ ಸನ್ನಿವೇಶಗಳಲ್ಲಿ ಅತಿ ಮಾನವೀಯತೆ ಪ್ರದರ್ಶಿಸಿ ಜಮಾಲನ ಬದುಕಿನ ಹಾದಿಯ ಮುಳ್ಳುಗಳನ್ನು ಸವರಿ ಹಾಕಿ ಹಾದಿ ಸುಗಮಮಾಡುವುದು, ಬಂಡಾಯವೇ ಮೈವೆತ್ತಂತಿರುವ ಸಲೀಂ ಪಾತ್ರದ ವೈಶಿಷ್ಟ್ಯತೆ. ವಿಕಾಸ್ ಸ್ವರೂಪ ರಚಿಸಿರುವ ಸೃಜನಶೀಲ ಕೃತಿ ‘ಕ್ಯೂ ಅಂಡ್ ಎ’ ಆಧಾರದಲ್ಲಿ ರೂಪಿಸಿರುವ ಈ ಚಿತ್ರದಲ್ಲಿ ಏನುಂಟು ಏನಿಲ್ಲ ಎಂದು ಕೇಳುವ ಹಾಗಿಲ್ಲ. ಮುಂಬೈ ನಗರ ಸಂಸ್ಕೃತಿಯನ್ನು ಸಂಪೂರ್ಣವಾಗಿ ಹಿಡಿದಿಡುವಲ್ಲಿ, ಚಿತ್ರದ ಪ್ರತಿ ಫ್ರೇಮೂ ಕೂಡ ಅದ್ಭುತವಾಗಿ ಮೂಡಿಬರುವಲ್ಲಿ ನಿರ್ದೇಶಕ ಡ್ಯಾನಿ ಬಾಯ್ಲ್ ಯಶಸ್ವಿಯಾಗಿದ್ದರೆ, ಚಿತ್ರದ ಪ್ರತಿ ಶಾಟ್ ಮತ್ತು ಘಟನಾವಳಿಗೆ ಅಂದವಾದ ಸಂಗೀತ ನೀಡಿದ್ದಾರೆ ನಮ್ಮ ಸಂಗೀತ ಜೀನಿಯಸ್ ಎ.ಆರ್.ರೆಹಮಾನ್.

ಚಿತ್ರಕ್ಕೆ ಟೀಕೆ ಮತ್ತು ವಿರೋಧ:

ಈ ಚಿತ್ರ ಎಂದಿನಂತೆ ಹಿಂದೂ ಮುಲ್ಲಾಗಳಿಗೂ ಮತ್ತು ಬಂಡವಾಳಶಾಹಿ ಮಾಧ್ಯಮಗಳಿಗೂ ಅಪಥ್ಯವೆನಿಸಿದೆ. ಕೋಮುಗಲಭೆಯನ್ನು ಅಂತರಾಷ್ಟ್ರೀಯ ಪರದೆಯ ಮೇಲೆ ಬೆತ್ತಲೆಗೊಳಿಸುವ ಕಾರಣಕ್ಕಾಗಿ ಹಿಂದೂ ಮುಲ್ಲಾಗಳು ಜರಿಯುತ್ತಿದ್ದರೆ, ಭಾರತದ ಬಡತನವನ್ನು ಮಾರಾಟಕ್ಕಿಟ್ಟು ಲಾಭಗಳಿಸುವ ಉದ್ದೇಶವನ್ನು ಈ ಚಿತ್ರ ಮಾಡಿದೆಯೆಂದು ಬಂಡವಾಳಶಾಹಿ ಮಾಧ್ಯಮಗಳು ಟೀಕಿಸುತ್ತಿವೆ. ಅಷ್ಟಕ್ಕೂ ನಾವು ಕಾಣಬಹುದಾದ್ದು ಎರಡು ಭಾರತಗಳು: ಒಂದು ಪ್ರಕಾಶಿಸುತ್ತಿರುವ ಭಾರತ ಮತ್ತು ಇನ್ನೊಂದು ಸಂಕಷ್ಟಮಯ ಭಾರತ. ಅಂಬಾನಿ, ಟಾಟಾ, ಬಿರ್ಲಾ, ಪ್ರೇಮ್‌ಜೀಗಳಿಗೆ ಭಾರತ ಪ್ರಕಾಶಿಸುತ್ತಿದ್ದರೆ, ಈ ದೇಶದಲ್ಲಿ ದಿನವೊಂದಕ್ಕೆ ಕೇವಲ ರೂ. ೨೦ನ್ನು ಮಾತ್ರವೇ ಗಳಿಸುವ ಶೇ. ೮೦ರಷ್ಟು ಮಂದಿಗೆ ಭಾರತ ನರಕದ ಕೂಪದಂತಿದೆ. ದೇಹಕ್ಕೆ ರೋಗ ಬಂದು ಕೊಳೆತು ನಾರುತ್ತಿದ್ದರೂ, ಚಿಕಿತ್ಸೆ ನೀಡುವುದಿರಲಿ, ಗಾಯದ ಕಡೆಗೆ ಮುಖ ಕೂಡ ತೋರಿಸ್ಬೇಡಿ ಅನ್ನೋದು ಬೌದ್ದಿಕ ದಿವಾಳಿತನವಲ್ಲದೆ ಬೇರೆನಲ್ಲ.

ಚಿತ್ರದ ಎಲ್ಲ ಕಲಾವಿದರು ಪೈಪೋಟಿಗೆ ಬಿದ್ದಂತೆ ನಟಿಸಿದ್ದರೆ, ತಂತ್ರಜ್ಞರು ತಮ್ಮ ಮೇರುಮಟ್ಟದ ಕೈಚಳಕವನ್ನು ಚಿತ್ರದುದ್ದಕ್ಕೂ ತೋರಿಸಿದ್ದಾರೆ. ಈ ಚಿತ್ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲದೆ, ಆಸ್ಕರ್ ಪ್ರಶಸ್ತಿಗಾಗಿ ಸುಮಾರು ೧೦ ವಿಭಾಗಗಳಲ್ಲಿ ನಾಮಿನೇಟ್ ಆಗಿರುವುದು ಆಶ್ಚರ್ಯವೇನಲ್ಲ.

ಭಾರತೀಯ ನಿರ್ಮಾಪಕರು ಮತ್ತು ನಿರ್ದೇಶಕರು ಅದರಲ್ಲೂ ಬಾಲಿವುಡ್ ಮಂದಿ ವರ್ಷವೊಂದಕ್ಕೆ ನೂರಾರು ಚಿತ್ರಗಳನ್ನು ನಿರ್ಮಿಸಿ ಸಾವಿರಾರು ಕೋಟಿ ಕಳೆದುಕೊಳ್ಳುವ ಬದಲು ಇಂಥಹ ಉತ್ತಮ ಕಾದಂಬರಿಯಾಧಾರಿತ ಚಿತ್ರಗಳ ನಿರ್ಮಾಣಕ್ಕಾಗಿ ಆಲೋಚಿಸಲು ಇದು ಸಕಾಲ.
-ರಾಕೇಶ್ ಮಾನ್ಪಡೆ
************





ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು