ಆಸ್ಕರ್ ಗೆದ್ದ ಬೀದಿ ನಾಯಿಯ ಕಥೆ!!ಕಳೆದ ಕೆಲವು ತಿಂಗಳೂ ಗಳಿಂದ ನಮ್ಮ ಮೀಡಿಯಾಗಳೂ ಪತ್ರಿಕೆಗಳೂ "ಸ್ಲಂ ಡಾಗ್ ಮಿಲೇನಿಯರ್.." ಚಿತ್ರವನ್ನು ನೋಡಲೇ ಬೇಕೆಂದು ನಡೆಸಿದ್ದ ಪಿತೂರಿಯಿಂದ ನಾನೂ ತಪ್ಪಿಸಿಕೊಳ್ಳಲಾಗಲಿಲ್ಲ. ಬಹುಷಃ ನಿನ್ನೆ ಅದಕ್ಕೆ ಆಸ್ಕರ್ ಬರದೇ ಹೋಗಿದ್ದರೆ ಅದೊಂದು ದೊಡ್ಡ ದುರಂತವೆಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿತ್ತು. ಅದೃಷ್ಟವಷಾತ್ ಹಾಗಾಗದೆ ಆಸ್ಕರ್ ಕೊಳ್ಳೆ ಹೊಡೆದದ್ದರಿಂದ ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಅದನ್ನ ಸೇರಿಸಿ ನಾವೆಲ್ಲ ಕೃತಾರ್ಥರಾಗಿದ್ದೇವೆ. ಸ್ಲಂ ಡಾಗ್ .. ಕೊಳೆಗೆರಿಯ ಕುರಿತಾದ ಸಿನೆಮಾ ಅಲ್ಲ. ಕೊಳೆಗೆರಿಯವನ ಕಥೆ. ತನ್ನ ಬಾಲ್ಯದ ಗೆಳತಿ ಲಿಖಿತಾಳನ್ನು ಪಡೆಯುತ್ತಾ, ಕಳೆದುಕೊಳ್ಳುತ್ತಾ ಕೊನೆಗೆ ಅವಳಿಗಾಗಿ ಮಿಲೇನಿಯರ್ ರಿಯಾಲಿಟಿ ಶೋ ನಲ್ಲೂ ಭಾಗವಹಿಸಿ, ಕೋಟ್ಯಾಧಿಪತಿಯಾಗುವ ಜಮಾಲ್ ಮಲೀಕ್ ನ ಕಥೆ ಇದು. ಆಕಸ್ಮಿಕ , ಅದೃಷ್ಟಗಳದ್ದೇ ಆಟ ಇಲ್ಲಿ. ಇಷ್ಟು ಸರಳವಾದ ಕಥೆಯನ್ನ ತುಂಬಾ ರಸವತ್ತಾಗಿ, ನಮ್ಮ ಬಾಲಿವುಡ್ಡಿನ ಘಟಾನುಘಟಿ ನಿರ್ದೇಶಕರನ್ನೂ ಮೀರಿಸಿ , ರೋಚಕವಾಗಿ ಹೆಣೆಯಲಾಗಿದೆ. ರೋಚಕತೆ ಮತ್ತು ಭಾವೋನ್ಮಾದ ನಮ್ಮ ಸೋ ಕಾಲ್ಡ್ ಬಾಲಿವುಡ್ ಸಿನೆಮಾಗಳ ಯಶಸ್ಸಿನ ಗುಟ್ಟು. ಶಾರುಖ್ ಅದೆಷ್ಟು ಮೃದುವಾಗಿ ನಮ್ಮೆಲ್ಲರ ಭಾವನೆಗಳನ್ನ ತಟ್ಟಿ ಕಣ್ಣೀರನ್ನ ಹೊರ ತೆಗೆಸುತ್ತಾನೆ ಎನ್ನುವುದರ ಮೇಲೆಯೇ ಅವನ ಚಿತ್ರಗಳ ಯಶಸ್ಸು ನಿಂತಿರುತ್ತದೆ. ಇಂತಹದೇ ರೋಚಕತೆ, ಭಾವುಕತೆ ಯ ಕಥಾ ಹಂದರವುಳ್ಳ ತಾರೆ ಜಮೀನ್ ಪರ್, ಲಗಾನ್, ರಂಗ್ ದೇ ಬಸಂತಿ ಯಂತಹ ಚಿತ್ರಗಳೂ ಕೂಡ ಶ್ರೇಷ್ಠ ಚಿತ್ರಗಳೆಂದು ಬಾಲಿವುಡ್ ಪಂಡಿತರೂ, ಮಾಧ್ಯಮ ಮಿತ್ರರೂ ನಂಬಿಕೊಂಡಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಬಾಲಿವುಡ್ ಸೇರಿದಂತೆ ಭಾರತೀಯ ಸಿನೆಮಾ ರಂಗ ಬದಲಾಗಿದೆ ಎಂದಂದುಕೊಂಡರೆ ಅದು ನಮ್ಮ ಮೂರ್ಖತನವಷ್ಟೆ. ಬದಲಾಗಿರುವುದು ಮೇಕಿಂಗ್ ಮಾತ್ರ. ಇಂದಿಗೂ ನಮ್ಮನ್ನಳಿಸುವ ಮುಂಗಾರು ಮಳೆ, ರಬ್ ನೆ ಬನಾದಿ ಜೋಡಿ ಯಂತಹ ಚಿತ್ರಗಳೇ ಒಳ್ಳೆಯ ಚಿತ್ರಗಳು ಎಂಬ ಭ್ರಮೆಯಲ್ಲಿ ನಾವಿದ್ದೇವೆ ಅಥವಾ ನಮ್ಮನ್ನು ಆ ಭ್ರಮೆಯಲ್ಲಿ ಇಡಲಾಗಿದೆ. ಮತ್ತೆ ಸ್ಲಂ ಡಾಗ್ ಗೆ ಬಂದರೆ , ಮಾಮೂಲಿ ಬಾಲಿವುಡ್ ಸಿನೆಮಾಗಳ ಭಾವನಾತ್ಮಕ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹದ್ದು ಎನೂ ಇಲ್ಲ. ಸ್ಲಂ ಡಾಗ್ ಮಿಲೇನಿಯರ್ ಎಂಬ ಶೀರ್ಷಿಕೆಯೇ ವೈರುಧ್ಯದಿಂದ ಕೂಡಿದೆ. ಭಾರತೀಯ ಸಮಾಜದಲ್ಲಿ ಕೊಳೆಗೇರಿಯ ನಾಯಿ ಪಾಡು ಒಂದು ಬಗೆಯ ಬದುಕಾದರೇ, ಮಿಲೇನಿಯರ್ ಪಟ್ಟ ಬದುಕಿನ ಯಶಸ್ಸಿನ ಸಂಕೇತ. ಪ್ರತೀ ಕೊಳೆಗೆರಿಯ ಬದುಕಿಗೂ ಮಿಲೇನಿಯರ್ ಎಂದೂ ಕೈಗೆಟುಕದ ಕುಸುಮ, ಹೀಗೆ ಎಂದೂ ಒಂದಾಗದ ಎರಡು ವಿಭಿನ್ನ ಪದಗಳು ಒಡಗೂಡಿ ಚಿತ್ರದ ಶೀರ್ಷಿಕೆ ರೂಪುಗೊಂಡಿದೆ. ಈ ಶೀರ್ಷಿಕೆ ಒಡೆಯುವಾಗ ನೆನಪಾಗುವ ಇನ್ನೊಂದು ಇಂತಹದ್ದೇ ಪದ- ಪ್ರಜಾ ಪ್ರಭುತ್ವ. ಪ್ರಜೆ ಎಂದೂ ಪ್ರಭುವಾಗದ ಸಾಮಾಜಿಕ ಸ್ಥಿತಿಯಲ್ಲಿ ನಾವಿರುವಾಗಲೂ ನಮ್ಮಗಿಷ್ಟ ಬಂದಂತೆ ಆ ಪದಕ್ಕೆ ಬೇರೆ ಬೇರೆ ಅರ್ಥಗಳನ್ನು ಆರೋಪಿಸುತ್ತ ಅದೊಂದ ಮಹತ್ವದ ಮತ್ತೂ ಅಸ್ತಿತ್ವದಲ್ಲಿರುವ ಸ್ಥಿತಿ ಎಂದೇ ಭಾವಿಸಿದ್ದೇವೆ. ಈ ಚಿತ್ರದಲ್ಲಿಯೂ ಕೂಡ ಕೊಳೆಗೆರಿಯವನೊಬ್ಬ ಮಿಲೇನಿಯರ್ ಆಗುವುದು ವಾಸ್ತವದಲ್ಲಿ ತೀರಾ ಕಷ್ಟದ ಮಾತು. ಆದರೂ ಅದರ ಸಾಧ್ಯತೆಯನ್ನು ತನ್ನ ಶಿರ್ಷೀಕೆಯಲ್ಲೇ ಘೋಷಿಸುವ ಮೂಲಕ ಚಿತ್ರ ನಮ್ಮೆಲ್ಲರನ್ನೂ ಮೊದಲ ಏಟಿಗೇ ಸೆಳೆದುಕೊಂಡು ಬಿಡುತ್ತದೆ. ಬೀದಿ ನಾಯಿಯೊಬ್ಬ ಮಿಲೇನಿಯರ್ ಆಗುವ ಸಾಧ್ಯತೆಯೇ ಎಂತಹ ರೋಚಕವಾದದ್ದು! ಈ ರೋಚಕತೆಯನ್ನೇ ಚಿತ್ರದುದ್ದಕ್ಕೂ ಕಾಪಾಡಿಕೊಂಡು ಬರಲಾಗಿದೆ. ಅತಿಯಾದ ಜಾಣ್ಮೆಯಿಂದ ಚಿತ್ರವನ್ನು ನಿರೂಪಿಸಲಾಗಿದೆ. ಸ್ಲಂ ಡಾಗ್ ಮಲೀಕ್ ನಿಂದ ಹಿಡಿದು ಯಾವ ಪಾತ್ರಗಳ ಪೋಷಣೆಯೂ ಸರಿಯಿಲ್ಲ. ನಮ್ಮ ಅಂತರಾಳವನ್ನು ತಟ್ಟಬಲ್ಲ ಕೊಳೆಗೇರಿ ನಿವಾಸಿಗಳ ಬದುಕಿನ ಸೂಕ್ಷ್ಮಗಳನ್ನು ತೋರಿಸುವ ಒಂದೇ ಒಂದು ದೃಶ್ಯವೂ ಚಿತ್ರದಲ್ಲಿಲ್ಲ. ಚಿತ್ರದ ಮೊದಲ ದೃಶ್ಯದಲ್ಲೇ ಮಿಲೇನಿಯರ್ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಲಂ ನಿವಾಸಿಯೊಬ್ಬನಿಂದ ಚಿತ್ರ ಆಧುನಿಕತೆ ಮತ್ತು ಬಡತನಗಳ ನಡುವಿನ ಜುಗಲ್ ಬಂದಿ ಎನೋ ಎಂಬಂತೆ ತೆರೆದುಕೊಳ್ಳುತ್ತದೆ. ಆದರೆ ಚಿತ್ರ ಸಾಗಿದಂತೆ ಇದು ಕೇವಲ ಜಮಾಲ್ ಮಲೀಕ್ ನೊಬ್ಬ ಕಂಡ ಬದುಕಿನ ಹಲವು ಬಿಡಿ ಭಾಗಗಳಾಗಿ ಮಾತ್ರ ಉಳಿದುಕೊಳ್ಳುತ್ತದೆಯೇ ಹೊರತು ಅದನ್ನು ಅವನ ಅನುಭವಾಗಿಸುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಸೋತಿದ್ದಾರೆ. ಆಧುನಿಕ ಭಾರತದ ಎಲ್ಲಾ ನೋವುಗಳನ್ನ ಆತ ನೋಡಿ ಬಿಟ್ಟಿದ್ದಾನೆ, ಕೋಮು ಗಲಭೆ, ಮಕ್ಕಳ ಮಾರಾಟ ದಂಧೆ, ವೇಶ್ಯಾವಾಟಿಕೆ ಪ್ರತಿಯೋಂದನ್ನೂ ಅವನು ಕಣ್ಣಾರೆ ಕಂಡಿದ್ದಾನೆ , ಆದರೆ ಅದ್ಯಾವುದೂ ಆತನೊಳಗೆ ಇಳಿಯುವುದೇ ಇಲ್ಲ. ತನ್ನ ಗೆಳತಿಯೊಂದಿಗೆ ಅಣ್ಣ ಮಲಗಿದ ನಂತರವೂ ಅವಳನ್ನೇ ವರಿಸುವ ಉದಾತ್ತ ಪ್ರೇಮಿ ಅವನು!. ಇಷ್ಟಾಗಿಯೂ ಕೋಟ್ಯಾಧಿಪತಿಯಾಗುವ ಕೊಳೆಗೇರಿಯ ಬಾಲಕನ ಕಥೆಯನ್ನು ಅವನ ಗೆಲುವು ಎನ್ನುವಂತೆ ಬಣ್ಣಿಸಿರುವುದು ತೀರಾ ಅಪಾಯಕಾರಿಯಾದದ್ದು. ಆತನ ಗೆಲುವು ತೀರಾ ಆಕಸ್ಮಿಕವಾದದ್ದೇ ಹೊರತು ಅಲ್ಲಿ ಆ ಬಾಲಕನ ಯಾವುದೇ ಪ್ರಯತ್ನವೂ ಇರುವುದಿಲ್ಲ. ಅಥವಾ ಸ್ಲಂ ನ ಬದುಕು ಅವನನ್ನ ಯಾವ ಥರದಲ್ಲೂ ಗಟ್ಟಿ ಗೊಳಿಸಿರುವುದೂ ಇಲ್ಲ. ಹೀಗೆ ಬರೀ ಆಕಸ್ಮಿಕ ಅದೃಶ್ಟಗಳನ್ನೇ ನೆಚ್ಚಿಕೊಂಡು ಓಡಾಡುವ ಜಮಾಲ್ ನ ಪಾತ್ರ ನಮ್ಮ ಕೊಳೆಗೇರಿಯ ಪ್ರತಿನಿಧಿಯೆಂದು ಒಪ್ಪಲು ಬರುವುದಿಲ್ಲ. ಆತನ ಗೆಲುವು ಕೊನೆಗೂ ಆತನ ವೈಯಕ್ತಿಕ ಗೆಲುವಾಗಿಯೇ ಉಳಿಯುತ್ತದೆ ಹೊರತು, ಕೊಳೆಗೆರಿಯ ಜನರ ಗೆಲುವಾಗುವುದಿಲ್ಲ. ದೃಶ್ಯಗಳ ನಿರ್ವಹಣೆಯಲ್ಲೂ ನಿರ್ದೇಶಕರು ಸೋತಿದ್ದಾರೆ, ಪ್ರೇಕ್ಷಕನನ್ನು ತಲ್ಲಣಗೊಳಿಸುವ ಒಂದು ದೃಶ್ಯವೂ ಚಿತ್ರದಲ್ಲಿಲ್ಲ. ಎಲ್ಲವನ್ನೂ ವೈಭವೀಕರಿಸುವ ಮೂಲಕ ಚಿತ್ರ ನೈಜತೆಯನ್ನು ಕಳೆದುಕೊಂಡಂತೆ ಭಾಸವಾಗುತ್ತದೆ. ಕ್ಲೋಸ್ ಅಪ್ ದೃಶ್ಯಗಳೂ ಕೂಡ ಕಡಿಮೆಯೇ. ಭಾರತದ ಬಡತನವನ್ನು ಈ ಚಿತ್ರ ಶೋ ಕೇಸ್ ಮಾಡಿದೆ ಎಂಬ ಆರೋಪ ಇದೆ. ಆದರೆ ಭಾರತದ ಬಡತನದ ಕುರಿತು ಚಿತ್ರ ತೆಗೆಯುವುದು ತಪ್ಪಲ್ಲ. ಆದರೇ ಅದನ್ನ ಕೇವಲ 'ವಸ್ತು' ವಾಗಿಟ್ಟುಕೊಳ್ಳುವುದು ತಪ್ಪು, ಮತ್ತು ಅಂತಹ ತಪ್ಪಿನಿಂದ ಈ ಚಿತ್ರವೂ ಹೊರತಾಗಿಲ್ಲ ಕೇವಲ ಎನ್.ಆರ್.ಐ ಗಳನ್ನೂ, ನಗರವಾಸಿಗಳನ್ನು ತೃಪ್ತಿ ಪಡಿಸುವ ಭಾರತೀಯ ಮುಖ್ಯವಾಹಿನಿಯ ಸಿನೆಮಾಗಳು ಎಂದೂ ನೈಜ ಭಾರತವನ್ನ, ಅದರ ಆತಂಕಗಳನ್ನು ಬಿಂಬಿಸುವಲ್ಲಿ ಸೋತಿವೆ. ಹಾಗೆಯೇ ಕೊಳೆಗೇರಿಯ ಕುರಿತಾದ ಸ್ಲಂ ಡಾಗ್ .. ಕೂಡ ಕೊಳೆಗೇರಿಯ ಆತಂಕಗಳನ್ನೂ, ಅಲ್ಲಿನ ನೈಜ ಚಿತ್ರಣವನ್ನ ಹಿಡಿಯಲು ಸೋತಿದೆ ಮತ್ತು ಇದು ಕೂಡ ಬಡತನವನ್ನ ಒಂದು ವಸ್ತುವನ್ನಾಗಿಸಿಕೊಂಡು ಅದನ್ನು ರೋಚಕವಾಗಿ ಚಿತ್ರಿಸುವುದರ ಮೂಲಕ - ಭಾರತೀಯ ಮುಖ್ಯವಾಹಿನಿಯ ವ್ಯಾಪಾರಿಯ ಸಿನೆಮಾದ ಸಾಲಿನಲ್ಲೇ ನಿಲ್ಲುತ್ತದೆ ಹೊರತು ಅದಕ್ಕಿಂತ ಹೆಚ್ಚಿನದನ್ನೇನೂ ಸಾಧಿಸುವುದಿಲ್ಲ. ಇಷ್ಟೆಲ್ಲವನ್ನು ಇಲ್ಲಿ ಏಕೆ ದಾಖಲಾಯಿಸಬೇಕಾಯಿತೆಂದರೆ ನಮ್ಮ ದೃಶ್ಯ ಮಾಧ್ಯಮಗಳು ಇದನ್ನು ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಸೇರಿಸಹೊರಟದ್ದಕ್ಕೆ. ರಾಷ್ತ್ರಪ್ರಶಸ್ತಿ ಗೆಲ್ಲುವ ನಮ್ಮ ಚಿತ್ರಗಳ ಕುರಿತೂ ಇಷ್ಟೊಂದು ಚರ್ಚೆ ಆಗರಿಲಿಕ್ಕಿಲ್ಲ. ಒಂದು ಸಾಧಾರಣ ಚಿತ್ರವೊಂದಕ್ಕೆ ಇಷ್ಟೆಲ್ಲ ಪ್ರಚಾರ ಕೊಟ್ಟು, ಭಾರತೀಯರು ಮೆಚ್ಚುವ ಮೊದಲೇ ಭಾರತೀಯರೆಲ್ಲ ಮೆಚ್ಚಿ ಬಿಟ್ಟರು ಎಂಬಂತೆ ಘೋಷಿಸುವುದರ ಬದಲು, ನಮ್ಮನ್ನು ಚಿಂತನೆಗೆ ಹಚ್ಚುವ ಒಳ್ಳೆಯ ಚಿತ್ರಗಳಿಗೆ ಸ್ವಲ್ಪ ಸಮಯವನ್ನ ನಮ್ಮ ಮಾಧ್ಯಮಗಳು ಮೀಸಲಿಟ್ಟರಾದರೂ ಅದೊಂದು ಕ್ರೀಯಾತ್ಮಕ ಕೆಲಸವಾದೀತು. ಆಸ್ಕರ್ ಗಳಿಸಿದ ಮಾತ್ರಕ್ಕೆ ಚಿತ್ರ ಶ್ರೇಷ್ಠವಾಗುವುದಿಲ್ಲ. ಶ್ರೇಷ್ಠ ಚಿತ್ರಗಳಿಗೆಲ್ಲ ಆಸ್ಕರ್ ಸಿಗುವುದೂ ಇಲ್ಲ.
|
|