ದೃಶ್ಯಕ್ಕೊಂದು ನುಡಿಗಟ್ಟು

" ಪುಟ್ಟಣ್ಣ ಬದುಕಿನ ದಾರಿ ತೋರಿಸಿದರೆ ರಾಜಣ್ಣ ಚಿತ್ರರಂಗದಲ್ಲಿ ಉಳಿಲಿಕ್ಕೆ ದಾರಿ ಮಾಡಿಕೊಟ್ರು"- ಎಮ್ ಎಸ್ ಉಮೇಶ್

 ಮೊದಲ ಚಿತ್ರ ಮಕ್ಕಳ ರಾಜ್ಯ:೧೯೫೯ ನೇ ಇಸವಿಯಲ್ಲಿ ಕಣಗಾಲ್ ಪುಟ್ಟಣ್ಣನವರು, ಪಂತಲು ಅವರ ಮಕ್ಕಳರಾಜ್ಯ ಚಿತ್ರಕ್ಕೆ ಕರೆದುಕೊಂಡು ಹೋದರು. ಚಿತ್ರರಂಗಕ್ಕೆ, ಎಮ್.ವಿ ರಾಜಮ್ಮ ಕೂಡ ನಿರ್ಮಾಪಕರು, ಆ ಸಿನೆಮಾನ  ಮೂರು ಭಾಷೆಯಲ್ಲಿ ತೆಗೆದರು. ಆಗಿನ ಕಾಲದಲ್ಲೇ ದೊಡ್ಡ ಮೊತ್ತದ ಚಿತ್ರ. ೧೦೦೦ ಸಾವಿರ ಜನ ಹುಡುಗರನ್ನ ಸೇರಿಸಿದ್ದರು. ಸಂತೋಷ ಏನು ಅಂದ್ರೆ ಮೂರು ಭಾಷೆಯಲ್ಲೂ ಶಿವಾಜಿ ಗಣೇಶನ್ ಮಾಡಿದ್ದರು. ಆಗಿನ ಕಾಲದಲ್ಲೇ ದೊಡ್ಡ ನಟರು ಅವರು. ಭಾಷಾ ಶುದ್ಧತೆ, ಡ್ಯಾನ್ಸ್, ಫೈಟಿಂಗ್ ಎಲ್ಲದರ ತರಬೇತಿ ಕೊಡ್ತಾ ಇದ್ರು. ಹರಿಬಾಬು ಮೇಕ್ ಅಪ್ ಮ್ಯಾನ್. ಮುಖ ನೋಡಿ ಅದರ ಕೊರತೆ ಗುರುತಿಸಿ ಸರಿಪಡಿಸಬಲ್ಲವರಾಗಿದ್ದರು. ಟಿ ಜಿ ಲಿಂಗಪ್ಪ ಅವರ ಸಂಗೀತ, ಉಡುಪಿ ಜಯರಾಂ ಅವರ ಡ್ಯಾನ್ಸ್. ಮನುಷ್ಯನಿಗೆ ಟೈಮ್ ಬಂದಾಗ ಎಲ್ಲಾ ಒಳ್ಳೆದರ ಸಹವಾಸ ಸಿಗುತ್ತೆ ಅನ್ನೋದಕ್ಕೆ ನನ್ನ ಬದುಕಿನಲ್ಲಿ ಈ ಚಿತ್ರ ಒಂದು ಉತ್ತಮ ಉದಾಹರಣೆ.

ರಂಗಭೂಮಿಯ ದಿನಗಳು: ೪ನೇ ವರ್ಷಕ್ಕೆ ಬಣ್ಣ ಹಚ್ಚಿದ್ದು- ಈಗಿನ ಕಲ್ಪನಾ ಥೀಯೆಟರ್ ನಲ್ಲಿದ್ದ ಕೆ. ಹಿರಣ್ಣಯ್ಯನವರ ಕಂಪೆನಿಯಲ್ಲಿದ್ದೆ. ಬಳ್ಳಾರಿ ಲಲಿತಮ್ಮ ದೇವದಾಸಿ, ಸುಭದ್ರಾ ಕಲ್ಯಾಣದಲ್ಲಿ ಕೃಷ್ಣನ ಪಾತ್ರ ಮಾಡ್ತಾ ಇದ್ದರು. ಶ್ರೇಷ್ಠ ಕಲಾವಿದೆ ಅವರು. ಹಾರ್ಮೋನಿಯಂ ಕೃಷ್ಣರಾಯರೇ ನನಗೆ ಹಾರ್ಮೋನಿಯಂ ಹೇಳಿಕೊಟ್ರು. ಅ.ನ.ಕೃ ಅವರು ಬರೆದ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರ. ಚಿಲ್ರೆ ಕಾಸು ಜ಼ಲ್ ಜ಼ಲ್ ಎನಿಸಿ ಬಿಸ್ಕಿಟ್ ಆಸೆ ತೋರಿಸಿ ನನ್ನಿಂದ ಅಭಿನಯ ತೆಗೆಸೋರು. ನನ್ನ ಮಾತಿಗೆ ಜನ ಚಪ್ಪಾಳೆ ಹೊಡೆಯೋರು. ೧೯೫೩ ರಲ್ಲಿ ಕೆ.ಹಿರಣ್ಣಯ್ಯ ತೀರಿಕೊಂಡ್ರು. ಇದರ ಮಧ್ಯ ಎಂಟು ಹತ್ತು ತಿಂಗಳು ಶಾಲೆಗೆ ಹೋಗಿದ್ದೆ ನಾನು.
ನಂತರ ೫೪ ರಲ್ಲಿ ಗುಬ್ಬಿ ವೀರಣ್ಣ ಕಂಪೆನಿಯಲ್ಲಿ ರಾಜಕುಮಾರನ ಪಾತ್ರ ಮಾಡ್ತಿದ್ದೆ. ಗುಬ್ಬಿ ವೀರಣ್ಣನವರಲ್ಲಿ ನನಗೆ ಓದಲಿಕ್ಕೆ-ಬರಿಲಿಕ್ಕೆ ಆಸೆ ಇದೆ ಅಂತ ಕೇಳ್ಕೊಂಡೆ, ತುಂಬಾ ಸಂತೋಷದಿಂದ ಶ್ರೀನಾಥ್ ಅನ್ನೋ ಮೇಷ್ಟ್ರನ್ನ ನೇಮಿಸಿದರು. ಪ್ರಭಾಮಣಿ ವಿಜಯ ಚಿತ್ರದಲ್ಲಿ, ಪ್ರಭಾಮಣಿ ಪಾತ್ರ ಮಾಡಿಸೋರು. ಈ ಹೊತ್ತಿನಲ್ಲಿ ರಾಜಣ್ಣ, ಬಾಲಣ್ಣ ಎಲ್ಲಾ ಚಿತ್ರರಂಗಕ್ಕೆ ಹೋಗಿ ಬಿಟ್ಟಿದ್ದರು. ಆದರೆ ಗುಬ್ಬಿ ವೀರಣ್ಣ ಕರೆದಾಗಲೆಲ್ಲ ಬಂದು ನಾಟಕ ಆಡ್ತಾ ಇದ್ರು. ಬಿ.ಪುಟ್ಟಸ್ವಾಮಿಯವರ ಕೈಯಲ್ಲಿ ದಶಾವತರ ನಾಟಕ ಬರೆಸಿದ್ರು, ನಾಲ್ಕು ತಿಂಗಳು ಪೂರ್ತಿ ನಾಟಕ ಪ್ರಾಕ್ಟೀಸ್ ಮಾಡಿಸೋರು. ಪಿ.ಕಾಳಿಂಗರಾಯರು, ಪಿ. ಶಾಮಣ್ಣ ಇಬ್ರೂ ಸೇರಿ ಸಂಗೀತ ನೀಡಿದ್ರು. ಮೈಸೂರು ಮಹಾರಾಜರ ಸಮ್ಮುಖದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಯ್ತು, ನಾನು ಪ್ರಹ್ಲಾದನ ಪಾತ್ರ ಮಾಡ್ತಾ ಇದ್ದೆ. ಮಾಸ್ತಿ ಅಯ್ಯಂಗಾರರು ನನ್ನ ಪ್ರಹ್ಲಾದನ ಪಾತ್ರಕ್ಕೆ ಹತ್ತು ರೂಪಾಯಿ ಬಹುಮಾನ ನೀಡಿದ್ರು. ಆಗೆಲ್ಲ ಗುಬ್ಬಿ ಕಂಪೆನಿಯ ದಶಾವತರ ಅಂದ್ರೆ ತುಂಬಾ ಫ಼ೇಮಸ್.
ನಾಗಾರ್ಜುನ ಚಿತ್ರಕ್ಕೆ ಸಿಂಗ್ ಠಾಕೂರ್ ಅವರು ನನ್ನ ಬಳಸ್ಕೋಬೇಕು ಅಂತ ಗುಬ್ಬಿ ವೀರಣ್ಣನವರ ಬಳಿ ಕೇಳಿದ್ರು. ಆದ್ರೆ ಒಳ್ಳೆ ನಟರನ್ನ ವೀರಣ್ಣ ಎಂದೂ ಬಿಟ್ಟು ಕೊಡ್ತಾ ಇರಲಿಲ್ಲ. ಹಾಗಾಗಿ ಆಗ ಚಿತ್ರರಂಗಕ್ಕೆ ನಾನು ಬರ್ಲಿಕ್ಕೆ ಆಗಲಿಲ್ಲ.

ಯೋಗ ನರಸಿಂಹ ಅವರನ್ನ ಈ ಹೊತ್ತಿನಲ್ಲಿ ನಾನು ನೆನೆಸ್ಕೋಬೇಕು. ಒಳ್ಳೆ ನಾಟಕಕಾರರು, ಸಂಗೀತಗಾರರು, ವಾಘ್ಮಯಕಾರರು. ಅವರೇ ಸಾಹಿತ್ಯ ಬರೆದು ಸಂಗೀತ ನೀಡ್ತಾ ಇದ್ರು. ಅಪರೂಪದ ರಾಗಗಳನ್ನ ರಂಗಭೂಮಿಗೆ ಕೊಟ್ರು. ಅವರ ಚಂದ್ರಹಾಸದಲ್ಲಿ ನಾನು ಪ್ರಹ್ಲಾದನ ಪಾತ್ರ ಮಾಡಿದ್ದೆ, ಅಲ್ಲೇ ಪುಟ್ಟಣ್ಣನವರು ನನ್ನ ನೋಡಿದ್ದು, ಅಭಿನಯ ಮೆಚ್ಚುಕೊಂಡಿದ್ದು. ಅಲ್ಲಿಂದನೇ ನಾನು ಮಕ್ಕಳರಾಜ್ಯಕ್ಕೆ ಹೊರಟದ್ದು.

ಚಿತ್ರರಂಗದಿಂದ ತಿರುಗಿ ಬಂದ ಮೇಲೆ , ನಾನು ಸ್ವಲ್ಪ ಕುಳ್ಳ ಆಗ್ಬಿಟ್ಟಿದ್ದೆ, ಹಾಗಾಗಿ ಸೇವಕನ ಪಾತ್ರವೇ ಖಾಯಂ ಆದ ಹಾಗಾಯ್ತು. ಬದುಕು ನಡೆಸಲಿಕ್ಕೆ ಅದನ್ನೇ ಮುಂದುವರೆಸಬೇಕಾಯ್ತು. ಪುಟ್ಟಬಸಯ್ಯನವರ ದೆಸೆಯಿಂದ ಸಂಗೀತ, ಹಾರ್ಮೋನಿಯಂ ಕಲಿಯುವ ಹಾಗಾಯ್ತು. ಮಕ್ಕಳ ರಾಜ್ಯಕ್ಕೆ ೧೫೦೦ ರೂಪಾಯಿ ಕೊಟ್ಟಿದ್ರು, ಅದರಲ್ಲೇ ೪೫ ರೂಪಾಯಿ ಕೊಟ್ಟು ಹಾರ್ಮೋನಿಯಂ ತೊಗೊಂಡೆ. ಎರಡು ತಿಂಗಳಲ್ಲಿ ಅದನ್ನ ಕರಗತ ಮಾಡಿಕೊಂಡೆ. ಯೋಗ ನರಸಿಂಹ, ಪರಮ ಶಿವ ಇವರೆಲ್ಲಾ ಸ್ಪೂರ್ತಿಗಳು. ಅವರ ಸಹವಾಸದಿಂದ ಸಂಗೀತ ಕಲಿಯಲಿಕ್ಕೆ ಕಷ್ಟ ಆಗಲಿಲ್ಲ. ಇದರ ಜೊತೆಗೆ ಪೇಂಟಿಂಗ್ ಬೇರೆ, ವರ್ಗೀಸ್ ಅವರ ಜೊತೆಗೆ ಸೇರಿ ಅದನ್ನ ಕಲಿತುಕೊಂಡೆ. ರಾತ್ರಿ ಎಲ್ಲಾ ಹಾರ್ಮೋನಿಯಂ ಬಾರಿಸ್ತಾ, ಬೆಳಿಗ್ಗೆ ಬೋರ್ಡು ಬರೀತಾ ಹೊಟ್ಟೆಪಾಡು ನೋಡಿಕೋಳ್ತಾ ಇದ್ದೆ.

ಶೃತಿ ಸೇರಿದಾಗ ಚಿತ್ರದಲ್ಲಿ ಬೊಂಬೆಯಾಟವಯ್ಯ ಹಾಡು ನೋಡಿದಿರಲ್ವಾ, ಅದನ್ನೆಲ್ಲಾ ಮಾಡೋಕೆ ಅನುಕೂಲ ಆಯ್ತು. ಸ್ವಲ್ಪ ಸಾಹಿತ್ಯದ ಕಡೆನೂ ನನಗೆ ಆಸಕ್ತಿ ಇತ್ತು. ಅದೇ ರೀತಿ ಹಾವಿನ ಹೆಡೆ ಚಿತ್ರದ ಪಾತ್ರದ ಮ್ಯಾನರಿಸಂ ಕೂಡ ಆ ದಿನಗಳಲ್ಲಿ ತುಂಬಾ ಯಶಸ್ಸು ಕಂಡಿತ್ತು. ಆ ಪಾತ್ರ ತುಂಬಾ ಕಿಲಾಡಿ ಪಾತ್ರ, ಏನಾದ್ರೂ ಮಾಡ್ಬೆಕಲ್ಲ ಅಂತ ರಾಣಿ ಕಿಕ್ಡ್ ಪಿಕಿ ಅನ್ನೋ ಮ್ಯಾನರಿಸಂ ಸ್ಪಾಂಟೆನೆಸಿಯಸ್ ಆಗಿ ಬಂದಿದ್ದು. ಅದಕ್ಕೆ ಸ್ಪೂರ್ತಿ ಏನು ಗೊತ್ತೆ? ಡೊನಾಲ್ಡ್ ಡಕ್ ಪಾತ್ರ.

ಪುಟ್ಟಣ್ಣ ಮತ್ತು ರಾಜ್: ನನ್ನನ್ನ ಐವತ್ತು ವರ್ಷಗಳಿಂದ ಎಲ್ಲರೂ ಕೈ ಹಿಡಿದುಕೊಂಡು ಬಂದಿದ್ದನ್ನ ನಾನು ಮರೀಲಿಕ್ಕೆ ಆಗೋಲ್ಲ. ಮಕ್ಕಳ ರಾಜ್ಯ ಆದ ಮೇಲೆ ಮತ್ತೇ ಪುಟ್ಟಣ್ಣ ಅವರೇ ಕಥಾ ಸಂಗಮದಲ್ಲಿ ಅವಕಾಶ ಕೊಟ್ಟಿದ್ದು. ತಿಮ್ಮರಾಯಿ ಪಾತ್ರ: ನೆಗೆಟಿವ್ ಶೇಡ್ ಇರೋ ರೋಲ್ ಅದು.

ನನ್ನ ಎರಡು ಎಂಟ್ರಿ- ಪಂತಲು ಅವರ ಮಕ್ಕಳ ರಾಜ್ಯ- ಪುಟ್ಟಣ್ಣನವರ ಕಥಾಸಂಗಮ- ತುಂಬಾ ಅದ್ಭುತವಾಗಿತ್ತು. ನನ್ನ ಬದುಕಿನ ದಾರಿ ಸಿನೆಮಾ ಅಂತ ತೋರಿಸಿಕೊಟ್ಟವರು ಪುಟ್ಟಣ್ಣನವರು: ನನ್ನನ್ನ ಇಲ್ಲಿ ಉಳಿಯೋದಕ್ಕೆ ಅವಕಾಶ ಮಾಡಿ ಕೊಟ್ಟವರು ಡಾ. ರಾಜ್ ಕುಮಾರ್ ಅವರು. ಅವರಿಗೆ ರಂಗಭೂಮಿಯಲ್ಲಿರುವವರೆಂದರೇ ತುಂಬಾ ಪ್ರೀತಿ. ನನ್ನ ಬಗ್ಗೆ ತುಂಬಾ ಹೊಗೊಳವ್ರು. ಈ ಗಜಪತಿ ಗರ್ವಭಂಗ ಚಿತ್ರ ರಾಜ್ ಕುಮಾರ್ ಅವರು ಥಿಯೇಟರ್ ನಲ್ಲೇ ಸಿನೆಮಾ ನೋಡಿ ನನ್ನನ್ನ ಹುಡುಕಿ ಕೊಂಡ್ರು ಬಂದಿದ್ರು. ಆ ಪಾತ್ರ ನೋಡಿ ಬಾಚಿ ತಬ್ಬಿಕೊಂಡು ಬಿಟ್ರು" ಉಮೇಶ್ ಅವರೇ ಗಜಪತಿ ಗರ್ವಭಂಗ ಸಿನೆಮಾದಲ್ಲಿ ತುಂಬಾ ಚೆನ್ನಾಗಿ ಮಾಡಿದ್ದಿರಿ, ನನಗೆ ನರಸಿಂಹರಾಯರ ನೆನಪಾಯ್ತು". ಬಣ್ಣದ ಬದುಕು ಸಾರ್ಥಕ ಆಯ್ತು ಎನಿಸಿತ್ತು.

ಗೋಲ್ ಮಾಲ್ ರಾಧಾಕೃಷ್ಣದಲ್ಲಿ ಬೇಜಾರು ಮಾಡ್ಕೋಬೇಡಿ, ಬೇಜಾರು ಮಾಡ್ಕೋಬೇಡಿ ಅಂತ ಎಲ್ರುನ್ನೂ ಬೇಜಾರು ಮಾಡ್ತಿನಿ. ಈ ಪಾತ್ರಾನೂ ರಾಜ್ ಕುಮಾರ್ ಅವರು ತುಂಬಾ ಮೆಚ್ಚಿಕೊಂಡಿದ್ದರು. ಇವತ್ತು ಐವತ್ತು ವರ್ಷದಲ್ಲಿ ನಾನು ಐದು ಕೋಟಿ ಹಣ ಸಂಪಾದನೆ ಮಾಡಿಲ್ದೇ ಇರ್ಬಹುದು ಆದರೆ ಐದು ಕೋಟಿ ಜನರ ಪ್ರೀತಿ ಸಂಪಾದಿಸಿದ್ದೀನಿ.

ವೆಂಕಟ್ ಇನ್ ಸಂಕಟ್ ಪಾತ್ರದ ಕುರಿತು: ಆ ಪಾತ್ರಕ್ಕೆ ರಮೇಶ್ ಅವರನ್ನ ನೆನೆಸ್ಕೋಬೇಕು. ಗುಂಡಜ್ಜಿಯ ಪಾತ್ರ. ಗಂಡಸು ಅಜ್ಜಿ ಪಾತ್ರ ಮಾಡೋದು ಸಾಧ್ಯಾನಾ? ಅನ್ಸಿತ್ತು. ರಮೇಶ್ ಅವರು ಆಗುತ್ತೆ ಅಂದ್ರು. ಆ ಪಾತ್ರ ಮುಗಿಯೋವರೆಗೂ ನಾನು ತುಂಬಾ ಹುಶಾರಾಗಿದ್ದೆ. ಎಲ್ಲಿಯೂ ಉಮೇಶ್ ಛಾಯೆ ಕಾಣಬಾರ್ದು ಅಂತ ಹೇಳಿದ್ದೆ. ಸೊಂಟ ನೋವು ಇದ್ರೂ ಸಹ ಬಗ್ಗಿ ಪಾತ್ರ ಮಾಡಿದೆ. ಪಾತ್ರಕ್ಕೆ ಅಗತ್ಯ ಇತ್ತು ಇದು.  ಸ್ಪೂರ್ತಿ ಎಲ್ಲಿಂದನೋ ಬಂದ್ಬಿಡುತ್ತೆ.

ನೋವೆಲ್ಲಾ ಸೈಡ್ ವಿಂಗ್ ನಿಂದಾಚೆ: ಕಲಾವಿದನಿಗೆ ವೈಯಕ್ತಿಕ ನೋವು ಇದ್ರು ಸಹ ಆತ ಅದನ್ನ ತೋರ್ಪಡಿಸಬಾರ್ದು. ನನ್ನ ವೈಯಕ್ತಿಕ ಜೀವನದಲ್ಲೂ ಸಹ ಮಗನ ಹೆಣ ಇಟ್ಕೊಂಡು ಪಾತ್ರ ಮಾಡ್ತಾ ಇದ್ದೆ. ಪಾತ್ರ ಮುಗಿಸಿ ಬಂದು ಮಗನ ಹೆಣ ಸುಟ್ಟು ಮೇಕ್ ಅಪ್ ಕಳಚಿಟ್ಟೆ. ಮೇರಾ ನಾಮ್ ಜೋಕರ್ ಚಿತ್ರದ ನಾಯಕನಿಗೆ ಏನಾಯ್ತೋ , ನನ್ನ ಬದುಕಿನಲ್ಲೂ ಅದೇ ಆಯ್ತು.  ಕಲಾವಿದ , ಯೋಧ ಇಬ್ರೂ ಒಂದೇ, ಏನೇ ನೋವಿದ್ರೂ ಅವರು ಅಲರ್ಟ್ ಆಗಿರ್ಬೇಕು. ನೋವೆಲ್ಲಾ ಸೈಡ್ ವಿಂಗ್ ನಿಂದಾಚೆ. ಪಾತ್ರಕ್ಕೆ ನ್ಯಾಯ ಸಲ್ಲಬೇಕು. ವ್ಯಕ್ತಿ ದೊಡ್ಡದಲ್ಲ, ಪಾತ್ರ ದೊಡ್ಡದು.

ಪ್ರತಿಭೆಯ ಸದ್ಬಳಕೆ: ನಮ್ಮಲ್ಲಿ ಒಂದು ತಪ್ಪು ಕಲ್ಪನೆ ಇದೆ. ಕನ್ನಡದಲ್ಲಿ ಎಲ್ಲವೂ ಇದೆ, ಆದರೂ ಪ್ರತಿಭೆಯನ್ನ ಉಪಯೋಗ ಪಡಿಸಿಕೊಳ್ಳುವವರು ಯಾರೂ ಇಲ್ಲ. ಹಿಂದೆಲ್ಲಾ ಒಂದು ಚಿತ್ರದ ಕುರಿತು ತಿಂಗಳಾನುಗಟ್ಟಲ್ಲೇ ಚರ್ಚೆ ನಡೆದು ಸಿನೆಮಾ ಆಗುತ್ತಿತ್ತು. ಪಾತ್ರ ಪೋಷಣೆ ಇರ್ತಿತ್ತು. ಇವತ್ತು ಫೈಟಿಂಗ್,  ನಾಯಕ, ನಾಯಕಿ comedy umesh with M N satyanarayanaraoಯೇ ಮುಖ್ಯ. ಅದನ್ನ ತಪ್ಪು ಅಂತ ಹೇಳ್ತಾ ಇಲ್ಲ. ಇವತ್ತು ತಮಿಳು, ತೆಲುಗುವಿನಲ್ಲಿ ಪೋಷಕ ಕಲಾವಿದರಿಗೆ ಮನ್ನಣೆ ಇದೆ. ತಾಯ್ ನಾಗೇಶ್ ಇರೋವರೆಗೂ ಅವರಿಗೆ ಒಂದು ಸ್ಥಾನ ಇದ್ದೇ ಇತ್ತು. ಕಮಲಾಹಾಸನ್ ಅವರ ಕೈಯಲ್ಲಿ ವಿಲನ್ ರೋಲ್ ಕೂಡ ಮಾಡಿಸಿದ್ರು. ನಮ್ಮಲ್ಲೂ ಪ್ರತಿಭೆ ಇದೆ, ಅದನ್ನ ಸರಿಯಾಗಿ ಬಳಸಿಕೊಳ್ಳುವವರು ಬರ್ಬೇಕು.

ರಂಗಭೂಮಿ ಮತ್ತು ಸಿನೆಮಾ: ಆ ಮಾಧ್ಯಮವೇ ಬೇರೆ. ಚಿತ್ರರಂಗ ಖುಷಿ ಕೊಡೊದು ಸ್ವಲ್ಪ ಲೇಟು. ರಂಗಭೂಮಿ ನಿಜವಾದ ಕಲೆ, ಅಲ್ಲಿ ತಪ್ಪಿಗೆ ಅವಕಾಶವಿಲ್ಲ. ಅದು ಲೈವ್ ಶೋ. ಸಿನೆಮಾದಲ್ಲಿ ರೀ-ಟೇಕ್ ತೊಗೊಬಹುದು. ಆದರೆ ರಂಗಭೂಮಿಯಲ್ಲಿ ಹಾಗಲ್ಲ.


ಸುವರ್ಣ ಮಹೋತ್ಸವದಲ್ಲಿ ನಾನು ಹೇಳೋದು ಎನು ಅಂದ್ರೆ, ಮನೆಯಲ್ಲಿ ಟಿ.ವಿ ಮುಂದೆ ಕುಳಿತ ಪ್ರೇಕ್ಷಕರನ್ನ ಥಿಯೇಟರ್ ಗೆ ಕರ್ಕೊಂಡು ಬರ್ಬೇಕು. ಅದೇ ದೊಡ್ಡ ಸವಾಲು.

ಬಣ್ಣದ ಘಂಟೆ ರೂಪತಾರಾದಲ್ಲಿ ಬರ್ತಾ ಇತ್ತು. ಪತ್ರಕರ್ತರು ತುಂಬಾ ಪ್ರಚಾರ ಕೊಟ್ಟಿದ್ದಾರೆ. ಪ್ರಾಧಾನ್ಯತೆ ಕೊಟ್ಟಿದಾರೆ. ಇಂಟರ್ ನ್ಯಾಷನಲ್ ಲೈಬ್ರರಿ ಗೆ ಕೂಡ ಹೋಯ್ತು ಅದು. ಪತ್ರಕರ್ತರು ಎಂದೂ ನನ್ನ ಕೈ ಬಿಟ್ಟಿಲ್ಲ. ನಾನೊಬ್ಬ ಪುಣ್ಯವಂತ ಅಂದ್ಕೋತಿನಿ.

ನನಗೆ ಸ್ವಾಭಿಮಾನ ಸ್ವಲ್ಪ ಜಾಸ್ತಿ. ಹಾಗಾಗಿ ಕಿರುತೆರೆ ಕಡೆ ಹೋಗಿಲ್ಲ. ಇಷ್ಟೆಲ್ಲಾ ದುಡಿದೂ ಅಲ್ಲಿ ಎಲ್ಲರ ಮುಂದೆ ಕೈ ಕಟ್ಟಿ ನಿಲ್ಲಬೇಕು , ಅನುಭವಕ್ಕೆ ಬೆಲೆ ಕೊಡದೇ ಹೋದಾಗ ಅದು ಯಾಕೆ ಬೇಕು ಅನ್ಸುತ್ತೆ.

ಪ್ರತಿಯೊಬ್ಬ ಮನುಷ್ಯನಿಗೆ ಅವನ ಪ್ರಾಪ್ತಿ ಎಷ್ಟಿದಿಯೋ ಅಷ್ಟೇ ದೊರೆಯೋದು. ಹಿಂದಿನ ದಿನ ನೆನೆಸಿಕೊಂಡಾಗ ಈಗ ಇರೋದ್ರಲ್ಲಿ ತೃಪ್ತಿ ಇದೆ. ಇನ್ನೂ ಎತ್ತರಕ್ಕೆ ಬೆಳಿಬೇಕಿತ್ತು ಅಂತಾರೆ. ಆದರೆ ಪ್ರಾಪ್ತಿ ಇಲ್ಲ.

ಸಿನೆಮಾ ಚೂರು ಚೂರು ಕಲೆಯಾಗಿ ಉಳ್ಕೊಂಡಿದೆ. ವ್ಯಾಪಾರಿ ದೃಷ್ಠಿ ತಪ್ಪು ಅಂತ ಹೇಳಲ್ಲ. ಮೊದಲು ಚಿತ್ರಗಳನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡ್ತಾ ಇದ್ವಿ: ಆದರೆ ಇವತ್ತು ಕನ್ನಡ ಚಿತ್ರಗಳು ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಆಗ್ತಾ ಇದೆ. ಅದಕ್ಕೆ ಸಂತೋಷ ಪಡ್ಬೇಕು.


ಹಾಸ್ಯ ಪಾತ್ರ ನ ಮೂರು ವರುಷದ ಮಕ್ಕಳಿಂದ ನೂರು ವರ್ಷದ ಮುದುಕರವೆರೆಗೆ ಗುರುತಿಸಬೇಕು. ಆಗಲೇ ಆತ ನಿಜವಾದ ಹಾಸ್ಯಗಾರ ಅನ್ನಿಸಿಕೊಳ್ತಾನೆ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು