ಕಬಡ್ಡಿ: ನಾನು ನೋಡಿದ ಸಿನೆಮಾ
ಆತ ಮಾಜಿ ಸ್ಟೇಟ್ ಕಬಡ್ಡಿ ಪ್ಲೇಯರ್; ಈಗ ಊರಿನ ಹಿರಿಯ, ಧರ್ಮದರ್ಶಿ. ಕಬಡ್ಡಿಯನ್ನು ಪ್ರೀತಿಸುತ್ತಾನೆ. ತನ್ನೂರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕೆಂದು ಕನಸು ಕಾಣುತ್ತಾನೆ. ಅವನಿಗೆ ಬೆಂಗಾವಲಾಗಿ ಗುರೂಜಿ ಇದ್ದಾರೆ; ಅವರು ಕಬಡ್ಡಿ ಕೋಚ್. ಆ ಊರಿನಲ್ಲೊಂದು ಶ್ರೇಷ್ಠ ಕಬಡ್ಡಿ ತಂಡ ಕಟ್ಟುವುದು ಅವರ ಕನಸು. ಈ ಇಬ್ಬರು ಕನಸುಗಾರರ ನಡುವೆ ಪ್ರವೀಣ ನೆಂಬ ಕಬಡ್ಡಿ ಪ್ರವೀಣ ಹುಟ್ಟುತ್ತಾನೆ. ಧರ್ಮದರ್ಶಿಯ ತಂಗಿಯ ಜೊತೆ ಪ್ರೇಮ ಅರಳುತ್ತದೆ. ಪ್ರೇಮಿಸಿದ ತಪ್ಪಿಗೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ. ಬಂಡಾಯವೆದ್ದ ಆತ ವಿರೋಧಿ ತಂಡವನ್ನ ಸೇರುತ್ತಾನೆ. ಧರ್ಮದರ್ಶಿಯ ಕೋಪಕ್ಕೆ ತುತ್ತಾಗಿ ಊರು ಬಿಡುತ್ತಾನೆ. ಕೊನೆಯಲ್ಲಿ ಆತ ಕಬಡ್ಡಿಯನ್ನೂ ಪ್ರೀತಿಯನ್ನೂ ಹೇಗೆ ಗೆಲ್ಲುತ್ತಾನೆ ಎಂಬುದು ಚಿತ್ರ ಕಥೆ. ಕಬಡ್ಡಿಯಂತ ದೇಸಿ ಆಟವನ್ನು, ಪ್ರೀತಿಯೆಂಬ ಗಾಂಧಿನಗರದ ಫ಼ಾರ್ಮುಲಾವನ್ನು ಹದವಾಗಿ ಬೆರೆಸಿ ನರೆಂದ್ರ ಬಾಬು ಈ ಚಿತ್ರ ಮಾಡಿದ್ದಾರೆ. ಅಲ್ಲಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅನ್ನಿಸಿದರೂ ಒಟ್ಟಾರೆಯಾಗಿ ಚಿತ್ರ ವಿಭಿನ್ನ, ವಿಶಿಷ್ಟ. ಪಾತ್ರ ಪೋಷಣೆ ಚಿತ್ರದ ಇನ್ನೊಂದು ಗೆಲುವು. ಇಲ್ಲಿ ಬರುವ ಪಾತ್ರಗಳೆಲ್ಲ ಬದುಕಿಗೆ ಹತ್ತಿರ. ನಾಯಕನ ಮೇಲೆ ಹರಿ ಹಾಯುವ, ಪರ ನಾರಿ ಸಂಗ ಮಾಡುವ ಖಳನಾಯಕ ಕೂಡ ಕಬಡ್ಡಿಯನ್ನು, ತಂಗಿಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಊರಿನ ಕಬಡ್ಡಿ ಕೋಚ್ ಗುರೂಜಿ ಮೇಲೆ ಅಪಾರ ಗೌರವ ಇಟ್ಟಿರುತ್ತಾನೆ. ಹಾಗೆಯೇ ಮೌಲ್ಯಗಳಲ್ಲಿ ಬದುಕುವ ಕೋಚ್ ಗುರೂಜಿ ಕೂಡ ಧರ್ಮದರ್ಶಿ ವೆಂಕಟೇಶನ ಹಂಗಿನಲ್ಲಿ ಅಸಾಹಯಕನಾಗಿದ್ದಾನೆ. ನಾಯಕ ಕೂಡ ಅಪ್ರತಿಮ ಕಬಡ್ಡಿ ಆಟಗಾರನಾದರೂ ನಮ್ಮೆಲ್ಲರಂತೆ ಸಾಮಾನ್ಯ. ಹೀಗೆ ತೀರಾ ನಮ್ಮದೇ ಎನ್ನುವ ಕಥೆ, ಅಪ್ಪಟ ದೇಸಿ ಸಂಭಾಷಣೆ, ಗಟ್ಟಿ ಪಾತ್ರ ಪೋಷಣೆ ಇವೆಲ್ಲ ಕಬಡ್ಡಿಯನ್ನು ಇತ್ತೀಚಿನ ವರ್ಷಗಳಲ್ಲಿ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳ ಸಾಲಿಗೆ ನಿಲ್ಲಿಸುತ್ತದೆ. ಕನ್ನಡದ ಸಾಂಸ್ಕೃತಿಕ ಸನ್ನಿವೇಶದಲ್ಲಿ ಈ ಚಿತ್ರದ ಬಗ್ಗೆ ಗಂಭೀರ ವಿಮರ್ಶೆ , ಸಂವಾದ ಅತ್ಯಗತ್ಯ.
|
|