ಸಿನೆಮಾ ಕೃಷಿ ಮಾಡುವೆನೆ ಹೊರತು ದಂಧೆ ಮಾಡಲಾರೆ: ನರೇಂದ್ರ ಬಾಬು (ಕಬಡ್ಡಿ ಚಿತ್ರ ದಿಗ್ದರ್ಶಕ)ಕಬಡ್ಡಿಯಂತಹ ಪ್ರಶಂಸನೀಯ ಚಿತ್ರ ನೀಡಿದ ನರೇಂದ್ರ ಬಾಬು ಚಿತ್ರದ ಬಗ್ಗೆ, ಸಿನೆಮಾಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡ ಅನುಭವಗಳ ಕೆಲವು ತುಣುಕುಗಳು..
ಹಿನ್ನೆಲೆ: ಸಿನೆಮಾ ಆಸಕ್ತಿಯ ಹಿನ್ನೆಲೆ ಜಾಸ್ತಿ. ಮನೆಯಲ್ಲಿ ಜನಪದ ಸಾಹಿತ್ಯ, ಪ್ರಸ್ತುತ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ನನಗೆ ಸಿನೆಮಾ ಆಸಕ್ತಿ ಜಾಸ್ತಿ. ಏಳನೇ ಕ್ಲಾಸ್ ಮುಗಿಯುತ್ತಿದ್ದಾಗಲೇ ನನಗೆ ಅನ್ನಿಸಿತ್ತು ಸಿನೆಮಾ ಮಾಡಲೇಬೇಕು. ರಂಗಭೂಮಿ: ಬಿ ಇ ಎಸ್ ಕಾಲೇಜಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮೇಷ್ಟ್ರಾಗಿದ್ದರು. ಅವರು ಸಿಕ್ಕ ಮೇಲೆ ಸಿನೆಮಾಗಳ ಬಗ್ಗೆ ನನ್ನ ಚಿಂತನೆಯೇ ಬದಲಾಯ್ತು. ಮುಂದೆ ರಂಗಭೂಮಿಗೆ ಬಂದಾಗ ಮೈನಾ ಅವರು ನನ್ನ ಗುರು. ಬಿ.ಸುರೇಶ , ಎನ್ ಎಸ್ ಶಂಕರ್ ಅವರ ಒಡನಾಟ ನನ್ನನ್ನ ರಂಗಭೂಮಿಯಲ್ಲಿ ಸಕ್ರೀಯವಾಗಿಸ್ತು. ನನಗೆ ನಟ ಆಗಬೇಕೂಂತ ಇತ್ತು. ಸಿಂಗರ್ ಆಗ್ಬೇಕು ಅಂತ ಇತ್ತು. ಗೊತ್ತಿಲ್ಲ ಅದ್ಯಾವ ಗಳಿಗೆಯಲ್ಲಿ ನಿರ್ದೇಶಕ ಆಗ್ಬೇಕು ಅಂದ್ಕೊಂಡ್ನೊ ನೆನಪಿಲ್ಲ.
ಡಾಕ್ಯೂಮೇಂಟರಿ: ಎಸ್ಕೇಪ್ ತು ಥ್ರಿ ಸಿನೆಮಾ ನನ್ನನ್ನ ಸಾಕಷ್ಟು ಕಾಡಿದ ಸಿನೆಮಾ. ಬಹುಷಃ ಅದನ್ನ ನೋಡಿದ್ದರಿಂದಲೇ ಕಬಡ್ಡಿ ಡಾಕ್ಯೂಮೆಂಟರಿ ಆಗುವ ಅಪಾಯದಿಂದ ತಪ್ಪಿಸಿಕೊಳ್ತು ಅಂತ ಕಾಣುತ್ತೆ.ಜೊತೆಗೆ ಬಾಲ್ಯದಲ್ಲಿ ನೋಡಿದ್ದ ಕಬಡ್ಡಿಯ ರೋಚಕತೆ, ಅದನ್ನಾಡುವವರ ಚಹರೆ, ನಿಲುವು ಇವೆಲ್ಲ ನನ್ನೊಳಗೆ ಅಚ್ಚಳಿಯದೆ ನಿಂತಿದೆ. ಕಬಡ್ಡಿ ಮಾಡಿ ನಾನು ಖಾಲಿಯಾಗಿಲ್ಲ. ಎಲ್ಲಾ ನಿರ್ದೇಶಕರು ಮೂರು ಸಿನೆಮಾ ಕೊಟಿದ್ದಾರೆ. ಸಿದ್ದಲಿಂಗಯ್ಯ ೩ ಸಿನೆಮಾ ಮಾಡಿದಾರೆ, ಪುಟ್ಟಣ್ಣ ಮೂರು ಸಿನೆಮಾ ಕೊಟ್ಟಿದ್ದಾರೆ, ಅಕಿರಾ ಕುರೊಸವಾ ಕೂಡ ಕೊಟ್ಟಿರೋದು ಮೂರು ಅಪ್ರತಿಮ ಸಿನೆಮಾ ಕೊಟ್ಟಿದಾರೆ. ಹಾಗಾಗಿ ನನ್ನಲ್ಲಿನ್ನೂ ಎರಡು ಸಿನೆಮಾ ಬಾಕಿ ಇದೆ. ಸುರ್ಯೋದಯದಿಂದ ಸುರ್ಯಾಸ್ತದವರೆಗೆ ಸಿನೆಮಾ ಮಾಡಬೇಕಿತ್ತು. ಮುಂದೆ ಅನಾಹತ್ ಅಂತ ಅದನ್ನ ಅಮೋಲ್ ಪಾಲೇಕರ್ ಮಾಡಿದ್ರು. ಸಿ.ಪಿ ಯೋಗೆಶ್ವರ್ ಒಪ್ಪಲಿಲ್ಲ. ಮುಂದೆ ಅನಾಹತ್ ಕ್ಲಿಪ್ಪಿಂಗ್ಸ್ ತೋರ್ಸಿದಾಗ ಸಿ.ಪಿ ಯೋಗೆಶ್ವರ್ ಮಾತಾಡಲಿಲ್ಲ.
ನಟರ ಅಭಿನಯದ ಬಗ್ಗೆ: ನಾಯಕಿ ಈ ಚಿತ್ರಕ್ಕೆ ಎರಡು ವರ್ಷ ಕಾದಿದಾರೆ. ಆ ಮಟ್ಟಿಗೆ ನಾನು ಅವರಿಗೆ ಕೃತಜ್ಞ್ನ. ನಾಯಕನ ಪಾತ್ರದಲ್ಲಿ ಪ್ರವೀಣ ಚೆನ್ನಾಗಿ ಅಭಿನಯಿಸಿದ್ದಾನೆ. ಕೊನೆಯ ದೃಶ್ಯದಲ್ಲಿನ ಅವನ ಅಭಿನಯ ಇಷ್ಟ ಆಯ್ತು. ಗುರೂಜಿ ಪಾತ್ರ ಕೊನೆಗೆ Optimistic ಆಗ್ಬೇಕಿತ್ತು ಅಂತ ಅನ್ನಿಸ್ತಿದೆ. ರಂಗಭೂಮಿಯಿಂದ ಬಂದಿದ್ದರಿಂದ , ಸಾಹಿತ್ಯದಿಂದ ಸಂಪರ್ಕದಿಂದ ಕಥೆಯಲ್ಲಿ ಸಂಕೀರ್ಣತೆ ಬರೋದಕ್ಕೆ ಸಾಧ್ಯ ಆಯ್ತು.
ಮುಂದಿನ ಯೋಜನೆ: ಶಿವಣ್ಣರ ಡೇಟ್ಸ್ ಇದೆ. ಒಳ್ಳೆ ಚಿತ್ರ ಮಾಡೋ ಯೋಚನೆ ಇದೆ. ಮಾಡಿದ್ರೆ ಖಂಡಿತ ಸೆನ್ಸಿಬಲ್ ಸಿನೆಮಾ ಮಾಡ್ತಿನಿ. ಸಿನೆಮಾ ಬಗ್ಗೆ ಯಾವತ್ತಿದ್ರೂ ಕೃಷಿ ಮಾಡ್ತಿನೆಯೇ ಹೊರತು ದಂಧೆ ಮಾಡಲಾರೆ. ಮಾಧ್ಯಮದವರ ಬೆಂಬಲ ತುಂಬಾ ಇದೆ ಈ ಸಿನೆಮಾಕ್ಕೆ. ನಾಗೇಂದ್ರ ಅವರು ಪಿ ಆರ್ ಓ ಆಗಿ ಅದ್ಭುತ ಕೆಲಸ ಮಾಡಿದ್ದಾರೆ. ಚಿತ್ರ ಈ ಮಟ್ಟಿಗೆ ಪ್ರಚಾರ ಕಂಡಿದೆ ಅಂದ್ರೆ ಅದರಲ್ಲಿ ಅವರ ಶ್ರಮ ಸಾಕಷ್ಟಿದೆ.
|
|