ದೃಶ್ಯಕ್ಕೊಂದು ನುಡಿಗಟ್ಟು

ಒಂದು ಈ ಮೇಲ್ ಕಥೆ


ಒಂದು ಇ-ಮೇಲ್ ಕಥೆ

ಚಿತ್ರಕಥೆ: ವೀರನ್ನಾರಾಯಣ

(ಶೂಟಿಂಗ್ ಮಾಡ ಬಯಸುವವರು ಬರಹಗಾರರ ಅನುಮತಿ ಪಡೆಯಲು ಮರೆಯದಿರಿ)

ದೃಶ್ಯ ೧
ಓಪನ್ ಶಾಟ್
ದೊಡ್ಡ ಕಾರ್ಪೊರೇಟ್ ಆಫೀಸ್ (ಇನ್‌ಡೋರ್)

ಲ್ಯಾಪ್‌ಟಾಪ್‌ನ ಕೀ-ಬೋರ್ಡ್ ಮೇಲೆ ಬೆರಳಾಡುತ್ತಿರುವ ದೃಶ್ಯದಿಂದ ಓಪನ್ ಆಗುತ್ತೆ. ಮಧ್ಯೆ ಮಧ್ಯೆ ಆ ಕಾರ್ಪೊರೇಟ್ ಆಫೀಸ್‌ನ ಸಿಬ್ಬಿಂದಿ ಮೊಬೈಲ್ ಹಿಡಿದು ತಮ್ಮದೇ ಗಡಿಬಿಡಿಯಲ್ಲಿ ಓಡಾಡುತ್ತಿರುವ ದೃಶ್ಯಗಳು ಬಂದು ಹೋಗುತ್ತವೆ. ಲ್ಯಾಪ್‌ಟಾಪ್ ಸ್ಕ್ರೀನ್‌ನಲ್ಲಿ ಇ-ಮೇಲ್‌ನೊಳಗೆ ಟೈಟಲ್ ಬರುತ್ತದೆ.

ಒಂದು ಇ-ಮೇಲ್ ಕಥೆ
ಕೀಬೋರ್ಡ್ ಮೇಲೆ ಬೆರಳಾಡುತ್ತಿರುವ ದೃಶ್ಯ ಕಂಟಿನ್ಯೂ ಆಗುತ್ತೆ.

ದೃಶ್ಯ ೨
ಬಡ ಯುವಕನ ರೂಂ (ಇನ್ ಮತ್ತು ಔಟ್‌ಡೋರ್)
ಹಳೆಯ ಚೊಂಬಿನಲ್ಲಿ ಶೇವಿಂಗ್ ಸ್ಟಿಕ್ ಅದ್ದಿ ತೆಗೆಯುವಲ್ಲಿಂದ ಶಾಟ್ ಓಪನ್ ಆಗುತ್ತೆ. ಚಿಕ್ಕ ಮುರಿದ ಕನ್ನಡಿ ನೋಡಿಕೊಳ್ಳುತ್ತಾ ಯುವಕ ಶೇವ್ ಮಾಡಿಕೊಳ್ಳುತ್ತಾನೆ. ಮಧ್ಯೆ ಮಧ್ಯೆ ಕಾರ್ಪೊರೇಟ್ ಆಫೀಸ್‌ನಲ್ಲಿ ಕೀಬೋರ್ಡ್ ಮೇಲೆ ಬೆರಳಾಡುವ ದೃಶ್ಯಗಳು ಓವರ್‌ಲ್ಯಾಪ್ ಆಗುತ್ತವೆ. ಯುವಕ ಶೇವ್ ಮಾಡಿಕೊಳ್ಳತ್ತಲೇ ಏನೋ ನೆನಪಿಸಿಕೊಂಡಂತೆ ರೂಮ್‌ನೊಳಗಿನ ಹಳೇ ರೇಡಿಯೋಗೆ ಹೋಗಿ ಬಡಿದಾಗ ಎಫ್‌ಎಂ ಹಾಡುಗಳು ಕೇಳಿ ಬರುತ್ತವೆ. ಶೇವ್ ಮುಗಿಸಿ ಹಳೇ ಚೊಂಬಿಗೆ ಬಿಸಿನೀರು ಹಾಕಿ ಹಳೇ ಶರ್ಟೊಂದನ್ನು ಇಸ್ತ್ರಿ ಮಾಡಿಕೊಳ್ಳುವ ದೃಶ್ಯ. ಶರ್ಟ್ ಹಾಕಿಕೊಂಡು ಮುರಿದ ಕನ್ನಡಿಯಲ್ಲೇ ನೋಡಿಕೊಂಡು, ತಲೆ ಬಾಚಿಕೊಳ್ಳುತ್ತಾನೆ. ರೇಡಿಯೋ ಆಫ್ ಮಾಡುತ್ತಾನೆ.
ನಂತರ ರೂಂನಿಂದ ಫೈಲ್‌ಒಂದನ್ನು ತೆಗೆದುಕೊಂಡು ಹೊರಬಂದು ಹಳೇ ಚಪ್ಪಲಿ ಹಾಕಿಕೊಂಡು, ರೂಂಗೆ ಬೀಗ ಹಾಕಿ, ಬೀಗ ಎರಡೆರಡು ಸಾರಿ ಜಗ್ಗಿನೋಡಿ ಹೊರಡುತ್ತಾನೆ.



ದೃಶ್ಯ ೨ಎ
ರೂಂನಿಂದ ಹೊರಭಾಗ (ಔಟ್‌ಡೋರ್)
ಹೊರಗೆ ಹಳೇ ಸೈಕಲ್ ಹತ್ತುತ್ತಾನೆ. ಅದು ಪಂಕ್ಚರ್ ಆಗಿರುತ್ತದೆ. ತಳ್ಳಿಕೊಂಡೇ ಸ್ವಲ್ಪ ದೂರ ಹೋಗುತ್ತಾನೆ.

ದೃಶ್ಯ ೨ಬಿ
ಸೈಕಲ್ ಶಾಪ್
ಸೈಕಲ್ ಶಾಪ್‌ನಲ್ಲಿ ಬ್ಲೋ ಹಾಕಿಸಿಕೊಳ್ಳುವ ದೃಶ್ಯ.
ಜೇಬಿನಲ್ಲಿನ ದುಡ್ಡು ತೆಗೆದು ನೋಡುವನು. ಹತ್ತು ರೂಪಾಯಿಗಳ ಹತ್ತು ನೋಟುಗಳಿರುತ್ತವೆ. ಅದನ್ನು ಕಿಸೆಯಲ್ಲಿಟ್ಟು. ಒಂದು ರೂ. ನಾಣ್ಯ ತೆಗೆದು ಪಂಚರ್‌ಶಾಪ್‌ನವನಿಗೆ ಕೊಟ್ಟು ಸೈಕಲ್ ಹತ್ತಿ ಹೊರಡುವನು. ಸೈಕಲ್ ಚಕ್ರ ತಿರುಗುವಲ್ಲಿನ ಶಾಟ್‌ಗೆ ಕ್ಲೋಸ್...

ದೃಶ್ಯ ೩
ಕಾರ್ಪೊರೇಟ್ ಆಫೀಸ್
ಕಂಪ್ಯೂಟರ್ ಪರದೆ ಮೇಲೆ ಸೈಕಲ್ ರೇಸ್/ಕಾರ್ ರೇಸ್ ದೃಶ್ಯದಿಂದ ಓಪನ್. ಆಫೀಸ್ ಸಿಬ್ಬಂದಿ ಮೋಜಿನಲ್ಲಿ ತೊಡಗಿರುವ ದೃಶ್ಯ. ಲ್ಯಾಪ್‌ಟಾಪ್ ಕೀಬೋರ್ಡ್ ಮೇಲೆ ಅದೇ ಬೆರಳಾಡುತ್ತಿರುವ ದೃಶ್ಯ. ಆ ಬೆರಳುಗಳಿಂದ ನಿಧಾನವಾಗಿ ಝೂಮ್‌ಔಟ್ ಆಗುತ್ತಿದ್ದಂತೆ ಆ ಕಚೇರಿಯ ಮ್ಯಾನೇಜರ್ ಎನಿಸುವ ಯುವತಿ ಪಕ್ಕಾ ಕಾರ್ಪೊರೇಟ್ ಲುಕ್‌ನಿಂದ ಕಂಗೊಳಿಸುತ್ತಾಳೆ.

ದೃಶ್ಯ ೩ಎ
ಆಫೀಸ್ ಹೊರಗೆ
ಯುವಕ ಸೈಕಲ್‌ನಿಂದ ಇಳಿದು ಸೈಕಲ್ ನಿಲ್ಲಿಸಲು ಜಾಗ ಹುಡುಕುತ್ತಾನೆ. ಕಾರ್, ಬೈಕ್‌ಗಳಿಂದ ತುಂಬಿರುವ ತಾಣದಲ್ಲಿ ಸೈಕಲ್‌ಗೆ ಜಾಗವಿಲ್ಲ. ಕೊನೆಗೆ ರಸ್ತೆಯ ಚರಂಡಿ ಬದಿ ನಿಲ್ಲಿಸಿ ಬರುತ್ತಾನೆ. ಕಚೇರಿ ಮೆಟ್ಟಿಲು ಹತ್ತುತ್ತಾ ಏನನ್ನೋ ನೆನಪಿಸಿಕೊಂಡಂತೆ ಮತ್ತೆ ಬಂದು ಎನ್‌ಟ್ರೆನ್ಸ್ ಡೋರ್ ಗ್ಲಾಸ್‌ನಲ್ಲಿ ತಲೆ ಬಾಚಿಕೊಳ್ಳುತ್ತಾನೆ.

ಕಚೇರಿ ಡೋರ್ ತೆಗೆಯಲು ಹೋದಾಗ ಆಗುವುದಿಲ್ಲ. ಸೆಕ್ಯುರಿಟಿ ಬೇರೆ ಯಾರ ಜೊತೆಯೋ ಮಾತನಾಡುತ್ತಿದ್ದವನೋ ಚಕ್ಕನೆ ತಿರುಗಿ  ಹಿಂದಿಯಲ್ಲಿ ಪ್ರಶ್ನಿಸುತ್ತಾನೆ.

ಸೆಕ್ಯುರಿಟಿ: ‘ಅರೆ ಆಯಿಯೇ ಇದರ್. ಕೋನ್ ಹೆ ಆಪ್. ಕಿಸ್‌ಸೆ ಮಿಲ್ನಾ ಚಾಹಿಯೇ?’
ಯುವಕ: ನಾನು... ಶ.. ಶಂಕ್ರ ಅಂತ. ಆಫೀಸ್‌ಬಾಯ್ ಕೆಲಸಕ್ಕೆ ಅಪ್ಲೈ ಮಾಡಿದ್ದೆ. ಇವತ್ತು ಬರೋಕೆ ಹೇಳಿದ್ರು....

ಸೆಕ್ಯುರಿಟಿ: ಆಫೀಸ್ ಬಾಯ್? ಏಕ್ ಮಿನಿಟ್ ರುಖೋ..
(ಫೋನ್‌ನಲ್ಲಿ ಮಾತನಾಡಿ) ಜರಾ ಬೈಟೋ ಯಹಾಪೆ.

ಯುವಕ ಅಲ್ಲೇ ಕುಳಿತುಕೊಳ್ಳುವನು. ಗ್ಲಾಸ್‌ನಿಂದ ಹೊರಗಿನ ಬೀದಿಯನ್ನು ನೋಡುತ್ತಾ ಕುಳಿತಿರುವನು. ಸ್ವಲ್ಪ ಹೊತ್ತಿಗೆ

ಸೆಕ್ಯರಿಟಿ: ಅರೇ ಭಾಯ್ ಯಹಾ ಆನಾ... ಅರೇ ಭಾಯ್ (ಮತ್ತೆ ಕರೆಯುವನು). ಅಂದರ್ ಜಾನಾ. ಯುವಕ ಹೋಗತೊಡಗುವನು. ಅರೇ ಯಹಾ ಎಂಟ್ರಿ ಕರ್ನಾ. ವಿಸಿಟರ‍್ಸ್ ಲೆಡ್ಜರ್‌ನಲ್ಲಿ ಎಂಟ್ರಿ ಮಾಡಿಸುವನು.

ದೃಶ್ಯ ೩ಬಿ

ಕಾರ್ಪೊರೇಟ್ ಯುವತಿಯ ಛೇಂಬರ್. ಯುವತಿ ಗಂಭೀರವಾಗಿ ಲ್ಯಾಪ್‌ಟಾಪ್ ಕುಟ್ಟುತ್ತಿರುತ್ತಾಳೆ. ಗ್ಲಾಸ್ ಡೋರ್ ತೆಗೆದ ಶಂಕ್ರ
‘ಕಮಿಂಗ್ ಮಿಸ್’ ಅನ್ನುತ್ತಾನೆ. ಯುವತಿ ಅತ್ತ ನೋಡದೇ ಗಂಭೀರಳಾಗಿ ತಲೆಯಲ್ಲೇ ಹೌದೆನ್ನುತ್ತಾಳೆ. ಶಂಕ್ರ ಒಳಗೆ ಬಂದು ಆಕೆಯನ್ನು ಮಾತನಾಡಿಸಲು ಹೋಗಿ ಮತ್ತೆ ಹಿಂಜರಿಯುತ್ತಾನೆ. ಆ ಛೇಂಬರ್‌ನ ಸುತ್ತಲೂ ಅವಲೋಕಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಆ ಯುವತಿ

‘ಯೂ ಆರ್ ಶಂಕರ್ ರೈಟ್’

ಹತ್ತಿರದ ಫೈಲ್ ತೆಗೆದು ಅಪ್ಲಿಕೇಶನ್ ಅವಲೋಕಿಸುತ್ತಾಳೆ.

‘ಗುಡ್ ಮಾರ್ಕ್ಸ್ ಇನ್ ಎಸ್‌ಎಸ್‌ಎಲ್‌ಸಿ. ಎಜುಕೇಶನ್ ಏಕೆ ಕಂಟಿನ್ಯೂ ಮಾಡಲಿಲ್ಲ?’

ಶಂಕ್ರ: ಅದೂ.. ಅದೂ ನಮ್ ತಂದೆ-ತಾಯಿ ಇರೋದು ಹಳ್ಳೀಲಿ ಮೇಡಂ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು... (ಯುವತಿಗೆ ತನ್ನ ಹೇಳಿಕೆಯಲ್ಲಿ ಆಸಕ್ತಿ ಇಲ್ಲ ಎಂದುಕೊಂಡು ತಡವರಿಸುವನು).

ಯುವತಿ: ಓಕೆ. ಯು ರಿಸೈಡ್ ಇನ್ ವಿವೇಕಾನಂದನಗರ್ ನೊ. ದೆನ್ ಆಫೀಸ್‌ಗೆ ತುಂಬಾ ಹತ್ತಿರ. ಎಷ್ಟು ಹೊತ್ತಿಗಾದರೂ ಮನೆಗೆ ರೀಚ್ ಆಗ್ಬೋದು.

ಶಂಕ್ರ: ಏನೂ ತೊಂದ್ರೆ ಇಲ್ಲ ಮೇಡಂ
(ಅಷ್ಟು ಹೊತ್ತಿಗೆ ಮತ್ತೊಬ್ಬ ಆಫೀಸ್ ಬಾಯ್ ಟೀ ತರುವನು)
ಶಂಕ್ರ: ಇದೆಲ್ಲಾ ಏನು ಬೇಡ ಮೇಡಂ...

(ಆಫೀಸ್‌ಬಾಯ್ ಮೇಡಂ ಬಳಿ ಟೀ ಇಟ್ಟು ಇವನಾರೋ ಬಕರಾ ಎಂಬಂತೆ ನೋಡಿ ಹೋಗುವನು)

ಯುವತಿ: ಓಕೆ ಯು ಆರ್ ಸೆಲೆಕ್ಟೆಡ್ ಟೆಂಟಿಟೀವ್ಲಿ. ಗೀವ್ ಮಿ ಯುವರ್ ಇ-ಮೇಲ್ ಐಡಿ. ನಾನು ಒಂದೆರಡು ದಿನದಲ್ಲಿ ಅಪಾಯ್ಟ್‌ಮೆಂಟ್ ಲೆಟರ್ ಕಳಿಸ್ತೀನಿ.

ಶಂಕ್ರ: ಇ-ಮೇಲ್, ಇ-ಮೇಲ್... ಅದು... ಅದು ಇಲ್ಲ ಮೇಡಂ.

ಯುವತಿ: (ತೀರಾ ಆಶ್ಚರ್ಯದಿಂದ) ಡೋಟ್ ಯು ಹ್ಯಾವ್ ಎನ್ ಇ-ಮೇಲ್ ಐಡಿ?

ಶಂಕ್ರ: ಇಲ್ಲ ಮೇಡಂ

ಯುವತಿ: ಓಹ್... ಸೀ, ಇಫ್ ಯು ಡೋಂಟ್ ಹ್ಯಾವ್ ಎನ್ ಇ-ಮೇಲ್ ಇಟ್ ಮೀನ್ಸ್ ಯು ಡಸ್‌ನ್ಟ್ ಎಗ್ಸಿಸ್ಟ್. ಇ-ಮೇಲ್ ಇಲ್ಲ ಅಂದ್ರೆ ನೀನು ಅಸ್ತಿತ್ವದಲ್ಲೇ ಇಲ್ಲ ಅಂತ ಅರ್ಥ...

(ಶಂಕ್ರ ಪೆಚ್ಚಾಗುವನು. ಯುವತಿ ಊಫ್ ಎನ್ನುತ್ತಾ ಫೈಲ್ ತೆಗೆದಿರಿಸಿ, ಟೀ ಸಿಪ್ ಮಾಡಿ ಲ್ಯಾಪ್‌ಟಾಪ್ ಕೀಬೋರ್ಡ್ ಕುಟ್ಟಲು ಹೊರಳುವಳು. ಶಂಕ್ರ ನಿಂತೇ ಇರುತ್ತಾನೆ)

ಯುವತಿ: ಯೂ ಕ್ಯಾನ್ ಗೋ ನೌ

ಶಂಕ್ರ: ಮೇಡಂ ಮೇಡಂ...
ಯುವತಿಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದೆ ಕೊನೆಗೆ ಹೊರಡುವನು.

ದೃಶ್ಯ ೩ಸಿ
ಈಚೆ ಬಂದರೆ ಸೈಕಲ್ ತೆಗೆಯಲು ಆಗದಂತೆ ಕಾರುಗಳು ಅಡ್ಡ ನಿಂತಿರುತ್ತವೆ. ಕಷ್ಟಪಟ್ಟು ತೆಗೆದು ಹೊರಡುತ್ತಾನೆ.

ದೃಶ್ಯ ೪
ಪಾರ್ಕ್ (ಹಗಲು)
ಶಂಕರ್ ಸುಮ್ಮನೆ ಯೋಚಿಸುತ್ತಾ ಕುಳಿತಿರುತ್ತಾನೆ. ಕಾರ್ಪೊರೇಟ್ ಯುವತಿ ಹೇಳಿದ ಮಾತುಗಳು ಆಡಿಯೋ ರಿಕಲೆಕ್ಟ್ ಆಗುತ್ತಿರುತ್ತವೆ. ಮೋಂಟೇಜ್ ಶಾಟ್‌ಗಳು
ಫೈಲ್‌ನಿಂದ ಸರ್ಟಿಫಿಕೇಟ್‌ಗಳನ್ನು ತೆಗೆದು ಸುಮ್ಮನೆ ನೋಡುತ್ತಾನೆ. ದೂರದಲ್ಲಿ ಕಡಲೆಕಾಯಿ ಮಾರುವವರನ್ನು ನೋಡುತ್ತಾನೆ.
ಕಡಲೆ ಕಾಯಿ ತಾನು ಮಾರುವಂತೆ ಕಲ್ಪಿಸಿಕೊಳ್ಳುತ್ತಾನೆ. ಕಡಲೆ ಕಾಯಿ ಮಾರುವವಳು ಬಂದು ಬೇಕೆ? ಎಂದಾಗ ಎಚ್ಚರಗೊಳ್ಳುತ್ತಾನೆ. ಇಡೀ ಮಂಕರಿ ಎಷ್ಟು ಎಂದಾಗ ಇನ್ನೂರು ರೂ. ಎನ್ನುತ್ತಾಳೆ. ಜೇಬಿನಿಂದ ದುಡ್ಡು ತೆಗೆದು ನೋಡುತ್ತಾನೆ. ಹತ್ತರ ಹತ್ತು ನೋಟುಗಳಿರುತ್ತವೆ.
ಮಾರುವವಳು: ಇಡೀ ಮಂಕರಿ ತಗೊಂಡು ಏನು ಮಾಡ್ತೀರಾ. ಒಂದೆರಡು ರೂಪಾಯ್ಗೆ ತಗೊಳ್ಳಿ. ಗರ‍್ಮಾಗರಂ ಕಡ್ಲೆಕಾಯಿ...
ಶಂಕರ್ ಸುಮ್ಮನೆ ಇರುವನು...
ಮಾರುವವಳು ಹಯ್ಯೋ ಒಳ್ಳೆ ಗಿರಾಕಿ ಎಂದು ಕೊಂಡು ಹೋಗುವಳು.

ದೃಶ್ಯ ೫
ಶಂಕರ್ ರೂಂ ಹತ್ತಿರ (ಬೀದಿ)
ಬೈಕ್‌ನಲ್ಲಿ ಕುಳಿತವನೊಬ್ಬ ಮೊಬೈಲ್‌ನಲ್ಲಿ ಮಾತಾಡುತ್ತಿರುತ್ತಾನೆ. ಶಂಕರ್ ಸೈಕಲ್ ತಳ್ಳಿಕೊಂಡು ಬಂದು ನಿಲ್ಲಿಸಿ. ರೂಮ್‌ಗೆ ಹೊರಟವ ಈತನನ್ನು ನೋಡಿ ನಿಲ್ಲುತ್ತಾನೆ.
ವ್ಯಕ್ತಿ ಮಾತು ಮುಗಿಸಿ ಫೋನ್ ಒಳಗಿಟ್ಟು

ವ್ಯಕ್ತಿ: ಏನಪ್ಪಾ ಶಂಕರ್. ಆ ಆಫೀಸ್‌ಬಾಯ್ ಕೆಲಸ ಏನಾಯಿತು?

ಶಂಕ್ರ: ಇಲ್ಲಾ ಅಣ್ಣ ಅದು ಆಗಲಿಲ್ಲ...

ವ್ಯಕ್ತಿ: ಯಾಕೆ ಏನಾಯ್ತು?... ಹೋಗ್ಲಿ ಬಿಡು. ಸೆಕ್ಯರುಟಿ ಏಜೆನ್ಸಿ ಒಂದಕ್ಕೆ ಹುಡುಗ್ರು ಬೇಕಂತೆ. ವಾಚ್‌ಮನ್ ಕೆಲಸ... ಮಾಡ್ತೀಯಾ?

ಶಂಕ್ರ: ಇಲ್ಲಾ ಅಣ್ಣ... ಈಗ ನಾನೇ ಸ್ವಂತ ಏನಾದ್ರು ವ್ಯಾಪಾರ ಮಾಡೋಣ ಅಂತಾ ಇದೀನಿ...

ವ್ಯಕ್ತಿ: ವೋನ್ ಬಿಸಿನೆಸ್? ಭಲೇ ಭಲೇ ಪರವಾಗಿಲ್ಲ...
ಏನು ಮಾಡ್ತೀಯಾ?

ಶಂಕ್ರ: ಕಡಲೆಕಾಯಿ ಮಾರೋಣ ಅಂತ.

ವ್ಯಕ್ತಿ: ಹೂಂ ಪರವಾಗಿಲ್ಲವೇ! ಬಂಡವಾಳ ಎಷ್ಟಿಟ್ಟಿದೀಯಪ್ಪಾ?

ಶಂಕ್ರ ತೆಗೆದು ತೋರಿಸುವನು: ಹತ್ತರ ಹತ್ತು ನೋಟುಗಳು...

ವ್ಯಕ್ತಿ: (ನಗುತ್ತಾ) ನೂರು ರೂಪಾಯಿಯಲ್ಲಿ ಎಂಥಾ ವ್ಯಾಪಾರ? ಹೂಂ ಆಗಲಿ, ಅದೂ ಒಂದು ಕೈ ನೋಡು. ಆದರೆ ಒಂದು ಟೆಕ್ನಿಕ್ ತಿಳಕೋ. ಎಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತೋ ಅಲ್ಲಿ
ಕೊಂಡುಕೊಂಡು ಎಲ್ಲಿ ಅದಕ್ಕೆ ತುಂಬಾ ಬೇಡಿಕೆ ಇರುತ್ತೋ ಅಲ್ಲಿ ಮಾರಬೇಕು. ಅವಾಗಲೇ ಲಾಭ.

ಶಂಕ್ರ ಗಮನದಿಂದ ಕೇಳಿಸಿಕೊಳ್ಳುವನು.

ವ್ಯಕ್ತಿ: ಈಗ ನೋಡು ಹಿಮಾಲಯದಲ್ಲಿ ಐಸ್‌ಗೆ ಬೆಲೆ ಇಲ್ಲ. ಅದನ್ನು ಅಲ್ಲಿಂದ ರಾಜಸ್ಥಾನ ಮರುಭೂಮಿಗೆ ತಗೊಂಡು ಹೋದರೆ ನಿನ್ನ ಸರಕಿಗೆ ಬೇಡಿಕೆ... ಉದಾಹರಣೆಗೆ ಹೇಳಿದೆ. ಗೊತ್ತಾಯ್ತಾ...

ಶಂಕ್ರ: ಹೂಂ ಎನ್ನುವನು.

ವ್ಯಕ್ತಿ ಬೈಕ್ ಕಿಕ್ ಮಾಡಿ ಹೊರಡುವನು.

ದೃಶ್ಯ ೬
ಹಲವಾರು ಶಾಟ್ಸ್
ಮಾರುಕಟ್ಟೆ, ರೆಸಿಡೆನ್ಷಿಯಲ್ ಬೀದಿ ಇತ್ಯಾದಿ ಬೇರೆ ಬೇರೆ ಲೊಕೇಶನ್‌ಗಳು. ಶಂಕ್ರ ವಿವಿಧ ಬಗೆಯ ಮಾರಾಟ, ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬರುವ ಶಾಟ್‌ಗಳು....

ದೃಶ್ಯ ೭
ತರಕಾರಿ ಅಂಗಡಿಯೊಂದರಲ್ಲಿ ಶಂಕ್ರ ತರಕಾರಿಗಳನ್ನು ವೀಕ್ಷಿಸುವಾಗ. ಮಹಿಳೆಯೊಬ್ಬರು ಬಂದು ಟೊಮೋಟ ಕೇಳುವರು. ಆಗ ಅಂಗಡಿಯವ: ಅಯ್ಯೋ ಟೊಮೋಟ ಇಲ್ಲ ತಾಯಿ. ಮೂರು ದಿನಗಳಿಂದ ಸಪ್ಲೈ ಇಲ್ಲ. ಹೋದ ವರ್ಷ ಟೊಮೋಟ ಜಾಸ್ತಿ ಬೆಳೆದು ರೈತರು ಬೆಲೆನೇ ಸಿಗದೆ ರಸ್ತೆ ಮೇಲೆ ರಾಶಿ ಹಾಕಿದರು. ಈ ಸಾರಿ ಯಾರೂ ಬೆಳೆದಿಲ್ಲ.
ಮಹಿಳೆ: ಅಯ್ಯೋ ಯಾವಾಗ ಬರುತ್ತಪ್ಪಾ?
ಅಂಗಡಿಯವ: ಗೊತ್ತಿಲ್ಲಾ ತಾಯಿ; ವಾರ ಆಗ್ಬಹುದು. ತಿಂಗ್ಳಾದ್ರೂ ಆಗ್ಬಹುದು. 
ಶಂಕ್ರ ಅದನ್ನು ಕುತೂಹಲದಿಂದ ಕೇಳಿಸಿಕೊಳ್ಳುವನು.

ದೃಶ್ಯ ೮
ಮುಂದಿನ ಶಾಟ್. ದೊಡ್ಡ ತರಕಾರಿ ಮಾರುಕಟ್ಟೆ. ಟೊಮೋಟೊ ರಾಶಿ ಇರುತ್ತದೆ. ಶಂಕ್ರ ಅಲ್ಲಿ ಹೋಗಿ. ನೂರು ರೂಪಾಯಿಗೆ ಒಂದು ಬುಟ್ಟಿ ಟೊಮೊಟೋ ಕೊಳ್ಳುತ್ತಾನೆ.

ದೃಶ್ಯ ೮ ಎ
ನಂತರ ಬೀದಿಯಲ್ಲಿ ಟೊಮೋಟೊ ಮಾರುವ ದೃಶ್ಯ. ಮಹಿಳೆಯರು ಕೊಳ್ಳುವ ದೃಶ್ಯ. ಒಂದೇ ನಿಮಿಷಕ್ಕೆ ಬುಟ್ಟಿ ಖಾಲಿಯಾಗುತ್ತದೆ.
ಶಂಕ್ರ ತನಗೆ ಬಂದ ಆದಾಯ ಎಣಿಸುತ್ತಾನೆ. ಹತ್ತರ ೧೩ ನೋಟುಗಳಿರುತ್ತವೆ.
ಶಂಕ್ರ: ಒಂದು ದಿನಕ್ಕೆ ೩೦ ರೂಪಾಯಿ ಲಾಭ!

ದೃಶ್ಯ ೮ ಬಿ
ಮೋಂಟೇಜ್ ಶಾಟ್ಸ್ ವಿತ್ ಬಿಜಿ‌ಎಂ.
ಮಾರುಕಟ್ಟೆ ದೃಶ್ಯ, ಶಂಕ್ರ ಎರಡು ಬುಟ್ಟಿ ಟೊಮೋಟೊ ಕೊಳ್ಳುವುದು. ವಿವಿಧ ಬೀದಿಗಳಲ್ಲಿ ಟೊಮೋಟೊ ಮಾರುವುದು. ಮಹಿಳೆಯರು ಕೊಳ್ಳುವುದು... ದುಡ್ಡು ಎಣಿಸುವುದು. ನೂರರ ಮೂರು ನೋಟುಗಳು... ಇಂತಹ ಹಲವು ಶಾಟ್ಸ್.
ನಂತರ ತಿರುಗುವ ಚಕ್ರದ ದೃಶ್ಯದಿಂದ ಝೂಮ್ ಔಟ್ ಮಾಡಿದಾಗ. ಶಂಕ್ರ ಕೈಬಂಡಿಯಲ್ಲಿ ಟೊಮೊಟೊ ಮಾರುತ್ತಿರುತ್ತಾನೆ. ಇದರ ಹಲವು ದೃಶ್ಯಗಳು....
ಆದಾಯ ಎಣಿಸಿದಾಗ ನೂರರ ಹತ್ತು ನೋಟುಗಳು ಕಾಣುತ್ತವೆ.

ದೃಶ್ಯ ೯
ನಂತರ ತರಕಾರಿ ಮಳಿಗೆಗೆ ಮಹಿಳೆಯೊಬ್ಬಳು ಬಂದು ಟೊಮೊಟೋ ಎಷ್ಟು ಕೆ.ಜಿ. ಎನ್ನುತ್ತಾಳೆ.
ಪ್ಯಾನ್ ಮಾಡಿದರೆ ಮಾರಾಟಗಾರ ಶಂಕ್ರ.
ಕೆಜಿಗೆ ಇಪ್ಪತ್ತು. ಎನ್ನುತ್ತಾನೆ. ಟೊಮೊಟೋ ತೂಕ ಮಾಡುವಾಗ ತಕ್ಕಡಿಯ ಮೇಲೆ ಝೂಮ್ ಇನ್.

ಐದು ವರ್ಷಗಳ ನಂತರ

ದೃಶ್ಯ ೧೦
ದೊಡ್ಡ ಸೂಪರ್ ಮಾರ್ಕೆಟ್ ಮೇಲೆ ಶಂಕರ‍್ಸ್ ಸೂಪರ್ ಮಾರ್ಕೆಟ್, ಶಂಕರ‍್ಸ್ ಆಗ್ರೋ ಪ್ರಾಡಕ್ಸ್ ಅಂತ ಇರುತ್ತೆ.
ಹೊರಗೆ ಕಾರ್ ಬಂದು ನಿಲ್ಲುತ್ತೆ. ಡೋರ್ ಓಪನ್ ಆಗಿ ಬೂಟ್ ಕೆಳಗೆ ಇಳಿಯುತ್ತೆ. ವ್ಯಕ್ತಿ ಒಳ ಬರುತ್ತಾನೆ. ಕ್ಯಾಮೆರಾ ಫಾಲೋಸ್ ದಿ ಬೂಟ್.

ದೃಶ್ಯ ೧೦ ಎ
ಕುರ್ಚಿಯ ಮೇಲೆ ಕುಳಿತು ಮೊಬೈಲ್ ತೆಗೆದು ತಿರುಗುತ್ತಾನೆ. ಆತ ಶಂಕರ್. ಶೂಟ್ ಧರಿಸಿ ಠಾಕು ಠೀಕಾಗಿ ಇರುತ್ತಾನೆ. ಪಕ್ಕಾ ಕಾರ್ಪೊರೇಟ್ ಚೇರ್‌ಮನ್ ಇದ್ದ ಹಾಗೆ.
ಸೂಪರ್ ಮಾರ್ಕೆಟ್‌ನಲ್ಲಿ ತರಕಾರಿ ಜೋಡಿಸಿರುವುದನ್ನು ಶಂಕರ್ ವೀಕ್ಷಿಸುವ ದೃಶ್ಯಗಳೂ ಇರುತ್ತವೆ.
ಆತನ ಅಸಿಸ್ಟೆಂಟ್ ಬಂದು ಪ್ರಾಡಕ್ಟ್ ಡಿಟೇಲ್ಸ್ ತಂದಿಡುತ್ತಾನೆ. ಆಗ ಶಂಕರ್ ಅದನ್ನೊಮ್ಮೆ ನೋಡಿ.
ಶಂಕರ್: ನೋಡಿ ಈ ಸಲ ಹಾಸನ, ಶಿವಮೊಗ್ಗ ಮಲೆನಾಡು ಭಾಗದಲ್ಲಿ ಬಾಳೆ ತುಂಬಾ ಚೀಪಾಗಿ ಸಿಗುತ್ತೆ. ಈ ಐಟಂನ ಇಲ್ಲಿಂದ ಕ್ಯಾನ್ಸಲ್ ಮಾಡಿ. ಅಲ್ಲಿಂದ ತರಿಸಿ. ಆಗ ನಮ್ಮ ಕಾಂಪಿಟೆಟರ್‌ಗಳಿಗಿಂತ ಕಡಿಮೆ ಬೆಲೇಲಿ ನಾವು ಮಾರಬಹುದು.

ಅಸಿಸ್ಟೆಂಟ್ ಫೈಲ್ ತೆಗೆದು ಹೊರಡುವಾಗ
ಶಂಕ್ರ: ಅವನನ್ನು ತಡೆದು. ನೋಡಿ ಬಿಸಿನೆಸ್‌ನಲ್ಲಿ ಒಂದು ಟೆಕ್ನಿಕ್ ಇದೆ. ಈಗ, ಹಿಮಾಲಯದಲ್ಲಿ ಐಸ್‌ಗೆ ಬೆಲೆ ಇಲ್ಲ. ಅದನ್ನು ಅಲ್ಲಿಂದ ತಗೊಂಡು ರಾಜಸ್ಥಾನ ಮರುಭೂಮಿಗೆ ಹೋದರೆ ನಮ್ಮ ಸರಕಿಗೆ ಬೇಡಿಕೆ. ಉದಾಹರಣೆಗೆ ಹೇಳಿದೆ ಗೊತ್ತಾಯ್ತಾ...

ಅಸಿಸ್ಟೆಂಟ್ ಹೂಂಗುಡುವನು. ಆತ ಹೋದ ನಂತರ ಶಂಕ್ರ ಮೇಜು ಬಡಿಯುತ್ತಾ ಅಂದಿನ ಪೇಪರ್ ನೋಡುತ್ತಾ ಕೂರುವನು. ಪಕ್ಕದಲ್ಲಿ ಟೊಮೋಟೊ ತುಂಬಿದ ಸಣ್ಣ ಅಲಂಕಾರಿಕ ಪೋರ್ಸೆಲಿನ್ ಬೋಲ್ ಇರುತ್ತೆ. ಟೊಮೊಟೊ ಒಂದನ್ನು ತೆಗೆದು ಅದನ್ನು ಟೇಬಲ್ ಮೇಲೆ ತಿರುಗಿಸುತ್ತಾ ಇರುತ್ತಾನೆ
ಫೋನ್ ರಿಂಗ್ ಆಗುತ್ತೆ. ಶಂಕ್ರ ರಿಸೀವ್ ಮಾಡಿ.
ಇನ್ಸೂರೆನ್ಸ್ ಕಂಪನಿಯವರಂತಾ? ಸರಿ ಕಳ್ಸಿ.
ಸ್ವಲ್ಪ ಹೊತ್ತಿಗೆ. ವ್ಯಕ್ತಿಯೊಬ್ಬ ಬರುತ್ತಾನೆ.

ವ್ಯಕ್ತಿ: ಸರ್ ನಾನು (ಮೆಟ್‌ಲೈಫ್) ಇನ್ಷೂರೆನ್ಸಿಂದಾ... ತಾವು ಇವತ್ತು ಬರಲಿಕ್ಕೆ ಹೇಳಿದ್ರಿ.

ಶಂಕ್ರ: ಯಾ ಯಾ ಬನ್ನಿ. ಟೇಕ್ ಯುರ್ ಸೀಟ್...

ವ್ಯಕ್ತಿ. ಥ್ಯಾಂಕ್ಯೂ ಸರ್. (ಕುಳಿತು ತನ್ನ ಇನ್ಷೂರೆನ್ಸ್ ಪಾಲಿಸಿ ಡಿಟೇಲ್ಸ್‌ನೆಲ್ಲಾ ಹೇಳುವನು).

ಶಂಕ್ರ: ಪರವಾಗಿಲ್ಲ. ಅಂದರೆ ೨೦ ವರ್ಷಕ್ಕೆ ಮೆಚೂರ್ ಆಗುತ್ತೆ, ೧೦ ಲಕ್ಷ ರೂ. ಸಿಗುತ್ತೆ, ಈ ಮಧ್ಯೆ ಮೆಡಿಕಲ್ ಎಕ್ಸ್‌ಪೆನ್ಸ್ ಎಲ್ಲಾ ಸಿಗುತ್ತೆ. ಓಕೆ. ಅದೊಂದು ಪಾಲಿಸಿ ಮಾಡಿಬಿಡಿ.

ಇನ್ಷೂರೆನ್ಸ್ ಏಜೆಂಟ್: ಥ್ಯಾಂಕ್ಯು ಸಾರ್. ಆಮೇಲೆ ನಮ್ಮ ಪೇಮೆಂಟ್‌ನ ಇ-ಮೇಲ್‌ಲ್ಲಿ ಕೂಡಾ ಪೇ ಮಾಡ್ಬಹುದು ಸರ್. ಅಂದ ಹಾಗೆ ನಿಮ್ಮ ಇ-ಮೇಲ್ ಐಡಿ ಕೊಡಿ ಸರ್. ಎಲ್ಲಾ ಡಿಟೇಲ್ಸ್ ಕಳಿಸ್ತೀನಿ.

ಶಂಕ್ರ: ಇ-ಮೇಲ್ ಐಡಿ? (ನಗುತ್ತಾ) ಇಲ್ಲ ಕಣ್ರಿ.

ವ್ಯಕ್ತಿ: ಇಲ್ವಾ ಸಾರ್!

ಶಂಕ್ರ: ಅಯ್ಯೋ, ಅದು ಇಲ್ದೇ ಇದ್ದಿದ್ದಕ್ಕೇ ಕಣ್ರೀ ನಾನು ಇಲ್ಲಿ ಕುಳಿತಿರೋದು. ಇ-ಮೇಲ್ ಇದ್ದಿದ್ರೆ ಆಫೀಸ್ ಬಾಯ್ ಆಗಿರ‍್ತಿದ್ದೆ.

ವ್ಯಕ್ತಿ ಅರ್ಥವಾಗದೇ ಪೆಚ್ಚಾಗುವನು. ಶಂಕ್ರ ನಗುತ್ತಾ ಟೊಮೊಟೋ ತಿರುಗಿಸುತ್ತಾ ಇರುವನು. ತಿರುಗುವ ಟೊಮೊಟೊ ಮೇಲೆ ಕ್ಯಾಮೆರಾ ಜೂಮ್ ಅಗುತ್ತೆ.

ಕ್ಯಾಸ್ಟ್ ಅಂಡ್ ಕ್ರೂ ಡಿಟೇಲ್ಸ್ ವಿತ್ ಮ್ಯೂಸಿಕ್... ರನ್ ಆಗುತ್ತೆ.

------------------------




ಪಾತ್ರವರ್ಗ

ಶಂಕರ್      
ಕಾರ್ಪೊರೇಟ್ ಲೇಡಿ    
ಸೆಕ್ಯುರಿಟಿ
ಆಫೀಸ್‌ಬಾಯ್     
ಟ್ರೇಡ್‌ಟೆಕ್ನಿಕ್ ಹೇಳುವ ವ್ಯಕ್ತಿ   
ತರಕಾರಿ ಮಾರಾಟಗಾರ
ತರಕಾರಿ ಕೊಳ್ಳುವ ಮಹಿಳೆ   
ಶಂಕರ‍್ಸ್ ಅಸಿಸ್ಟೆಂಟ್    
ಇನ್ಷೂರೆನ್ಸ್ ಏಜೆಂಟ್    
ಇಬ್ಬರು ಆಫೀಸ್ ಸಿಬ್ಬಂದಿ









ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು