ಸಾಂಗತ್ಯ ಕುಪ್ಪಳಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾಲ (ಆ.8 ಮತ್ತು 9 ) ನಡೆದ ಚಿತ್ರೋತ್ಸವ ಯಶಸ್ವಿಯಾಯಿತು.
40 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 8 ಚಲನಚಿತ್ರಗಳನ್ನು ವೀಕ್ಷಿಸಲಾಯಿತು. ಬರೀ ವೀಕ್ಷಿಸಿದ್ದಷ್ಟೇ ಅಲ್ಲ ; ಚರ್ಚಿಸಲಾಯಿತು. ಒಂದು ಚಿತ್ರ ನೋಡುವ ಬಗೆಯನ್ನು ಹಾಗೂ ಚಿತ್ರಮಾಧ್ಯಮದ ಭಾಷೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು.
ಸಿನಿತಜ್ಞರಾದ ಶ್ರೀ ಪರಮೇಶ್ ಗುರುಸ್ವಾಮಿ ಅವರು ಸಮರ್ಥ ಮಾರ್ಗದರ್ಶನ ನೀಡಿದರೆ, ನಿರ್ದೇಶಕ ಶ್ರೀ ಗುರುಪ್ರಸಾದ್ ನಿರ್ದೇಶನದ ಕುರಿತ ಮಾಹಿತಿ ಹಾಗೂ ಕನ್ನಡ ಚಿತ್ರರಂಗದ ಸ್ಥಿತಿಗತಿ ಕುರಿತು ನಡೆದ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಚಿತ್ರೋತ್ಸವದ ಸಂಭ್ರಮ ಹೆಚ್ಚಿಸಿದರು.
ಆ. 8 ರ ಬೆಳಗ್ಗೆ 9. 30 ಕ್ಕೆ ಉತ್ಸವಕ್ಕೆ ಚಾಲನೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಕಡಿದಾಳ್ ಪ್ರಕಾಶ್ ಅವರು ಉದ್ಘಾಟಿಸಬೇಕಿತ್ತು. ಕಾರಣಾಂತರದಿಂದ ಬರಲಿಲ್ಲ. ಶ್ರೀ ಪರಮೇಶ್ ಗುರುಸ್ವಾಮಿಯವರು ಉದ್ಘಾಟಿಸಿ, ‘ನಾವು ಚಿತ್ರ ವೀಕ್ಷಣೆಗೆ ಮಹತ್ವ ನೀಡಬೇಕಿರುವ ದಿನಗಳಿವು’ ಎಂದು ಅಭಿಪ್ರಾಯಪಟ್ಟರು.
“ನಮ್ಮ ಚಲನಚಿತ್ರಗಳಿಗೂ ಪ್ರೇಕ್ಷಕರ ಸ್ಪಂದನೆ ದೊರೆಯಬೇಕಿದ್ದರೆ ಸಾರ್ವಕಾಲಿಕ ಎನ್ನುವ ಸಂಗತಿಗಳನ್ನು ಆಧರಿಸಿ ಕೈಗೊಳ್ಳಬೇಕು. ಒಂದು ಉತ್ತಮ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ ಇದ್ದೇ ಇರುತ್ತದೆ’ ಎಂದರು
ಹಾಗೆಯೇ ಸಮಾರೋಪದಲ್ಲಿ ಭಾಗವಹಿಸಿದ್ದ ನಿರ್ದೇಶಕ ಶ್ರೀ ಗುರುಪ್ರಸಾದ್, “ಇದೊಂದು ಒಳ್ಳೆಯ ಪ್ರಯತ್ನ. ಈ ಮೂಲಕ ಒಳ್ಳೆಯ ನಿರ್ದೇಶಕರನ್ನು, ಪ್ರೇಕ್ಷಕರನ್ನು ರೂಪಿಸಲು ಸಾಧ್ಯ. ಬೆಂಗಳೂರಿನಂಥ ಪ್ರದೇಶದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಂಡರೆ ನಾವು ಮತ್ತು ನಮ್ಮ ಗೆಳೆಯರು (ಚಿತ್ರರಂಗಕ್ಕೆ ಸಂಬಂಧಿಸಿದವರು)ಸಾಂಗತ್ಯಕ್ಕೆ ಎಲ್ಲ ಸಹಕಾರವನ್ನು ಒದಗಿಸುತ್ತೇವೆ. ಒಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸೋಣ’ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕಡಿದಾಳ್ ಪ್ರಕಾಶ್, “ಸಾಂಗತ್ಯದಂಥ ಸಂಸ್ಥೆ ದೂರದೂರಿನಿಂದ ಬಂದು ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ನಾವು ಅಗತ್ಯ ಸಹಕಾರ ನೀಡಲಿದ್ದೇವೆ’ ಎಂದು ಹೇಳಿದರು. ಶ್ರೀ ಪರಮೇಶ್ ಗುರುಸ್ವಾಮಿಯವರು ಚಿತ್ರೋತ್ಸವ ನಡೆದ ರೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ವಾದಿರಾಜ್ ಅವರು ನಿರೂಪಿಸಿದರು.
ಚಿತ್ರೋತ್ಸವಕ್ಕೆ ಕಿರೀಟಪ್ರಾಯ
ನಮ್ಮ ಚಿತ್ರೋತ್ಸವಕ್ಕೆ ಕಿರೀಟಪ್ರಾಯವೆನಿಸಿದ್ದು ಸಚ್ಚಿದಾನಂದ ಹೆಗಡೆ ಅವರ ಕಥೆ ಆಧರಿಸಿ ಭಾರತೀಶಂಕರ್ ಅವರು ಪ್ರದರ್ಶಿಸಿದ “ಕಾರಂತಜ್ಜನಿಗೊಂದು ಪತ್ರ” ಚಲನಚಿತ್ರ ಪ್ರದರ್ಶಿತವಾಯಿತು. ಇದಿನ್ನೂ ಬಿಡುಗಡೆಯಾಗಿಲ್ಲ. ನಮ್ಮ ಚಿತ್ರೋತ್ಸವದಲ್ಲೇ ಅದರ ಚೊಚ್ಚಲ ಪ್ರದರ್ಶನ. ನಂತರ ಒಳ್ಳೆಯ ಚರ್ಚೆಯೂ ನಡೆಯಿತು. ಇದಕ್ಕೆ ಸಹಕರಿಸಿದ ಚಿತ್ರ ನಿರ್ದೇಶಕರು, ಕಥೆಗಾರ ಸಚ್ಚಿದಾನಂದ ಹೆಗಡೆಯವರ ಮತ್ತಿತರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವಿಶಿಷ್ಟ ಚಿತ್ರಗಳು
ಈ ಚಿತ್ರೋತ್ಸವ ಮೊದಲಿನಂತಿರಲಿಲ್ಲ. ಸ್ವಲ್ಪ ವಿಶೇಷವಾಗಿತ್ತು. ಒಟ್ಟು ಎಂಟು ಚಿತ್ರಗಳ ಪೈಕಿ ಜನರಲ್ ವಿಭಾಗದಲ್ಲಿ “ದಿ ಗೋಸ್ಟ್ ಅಂಡ್ ದಿ ಡಾರ್ಕ್ ನೆಸ್’, “ದಿ ಬಾಯ್ ವಿತ್ ದಿ ಸ್ಟ್ರೈಪ್ಡ್ ಪೈಜಾಮ”, “ಬಲ್ಜಾಕ್ ಅಂಡ್ ದಿ ಲಿಟ್ಲ್ ಚೈನೀಸ್ ಸೀಮ್ಸ್ಟ್ರೆಸ್” ಪ್ರದರ್ಶನಗೊಂಡಿತು. ಛಾಯಾಗ್ರಹಣಕ್ಕೆ ಮಹತ್ವ ನೀಡಿದ್ದ “ಆಷಸ್ ಅಂಡ್ ಸ್ನೋ” ಹಾಗೂ “ವಿಂಗ್ಡ್ ಮೈಗ್ರೇಷನ್”, ಅಮೆಚೂರ್ ವಿಭಾಗದಲ್ಲಿ ಕಾರ್ತಿಕ್ ಪರಾಡ್ಕರ್ ಅವರ “ನಾಗಮಂಡಲ’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ತೌಲನಿಕ ಅಧ್ಯಯನ
ತೌಲನಿಕ ಅಧ್ಯಯನ ಈ ಬಾರಿಯ ವಿಶೇಷ. ಇದರಡಿ ಮ್ಯಾಕ್ ಬೆತ್ ಆಧರಿಸಿದ ಅಕಿರಾ ಕುರಸೋವಾರ “ಥ್ರೋನ್ ಆಫ್ ಬ್ಲಡ್” ಹಾಗೂ ರೋಲನ್ ಪೋಲಂಸ್ಕಿಯವರ “ದಿ ಟ್ರಾಜಿಡಿ ಆಫ್ ಮ್ಯಾಕ್ ಬೆತ್” ಪ್ರದರ್ಶನಗೊಂಡಿತು. ಈ ಬಗ್ಗೆಯೂ ಚರ್ಚೆ ನಡೆದದ್ದು ಚೆನ್ನಾಗಿತ್ತು. ಎಲ್ಲರೂ ಚರ್ಚೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ನಂತರ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಉಳಿದಂತೆ ಊಟ ಉಪಚಾರ. ಮೊದಲ ದಿನ ತಿಂಡಿಗೆ ಹಲಸಿನ ಎಲೆ ಕಡುಬು (ಕೊಟ್ಟೆ ಕಡುಬು), ಊಟದಲ್ಲಿ ಬಿಸಿಬೇಳೆಬಾತು, ಅನ್ನ ರಸಂ, ಪಕೋಡ ಇತ್ಯಾದಿ. ಮಧ್ಯಾಹ್ನ ಅಂಟಿನುಂಡೆಯೊಂದಿಗೆ ಸ್ನ್ಯಾಕ್ಸ್. ರಾತ್ರಿ ಕಾಯಿ ಹೋಳಿಗೆಯೊಂದಿಗೆ ಸರಳ ಊಟ. ಎರಡನೇ ದಿನ ಬೆಳಗ್ಗೆ ಇಡ್ಲಿ ಸಾಂಬಾರ್ ತಿಂಡಿ. ಮಧ್ಯಾಹ್ನ ಊಟವೆಂದರೆ ವೆಜಿಟಬಲ್ ಫಲಾವ್, ಅನ್ನ ಸಾಂಬಾರ್, ಸಾಂಗತ್ಯದ ಸುಧೀರ್ ಕುಮಾರ್ ಮುರೊಳ್ಳಿಯವರ ಹುಟ್ಟುಹಬ್ಬದ ಪ್ರಯುಕ್ತ “ಜಹಾಂಗೀರ್” ಹಾಜರಾಗಿದ್ದರು. ಸಂಜೆ ಸ್ನ್ಯಾಕ್ಸ್-ಕಷಾಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಚಿತ್ರೋತ್ಸವ ಹೊಸ ನೆನಪುಗಳನ್ನು ಉಳಿಸಿದ್ದು ವಿಶೇಷ. ಕೊನೆಯ ಚಿತ್ರವಾಗಿ ಪ್ರದರ್ಶಿತಗೊಂಡ “ದಿ ಬಾಯ್ ವಿತ್ ದಿ ಸ್ಟ್ರೈಪ್ಡ್ ಪೈಜಾಮ” ಬಹಳ ಕಾಡಿತು. ಹಿಟ್ಲರ್ ಕಾಲದ ಹಿಂಸೆಯನ್ನು ಅತ್ಯಂತ ಸಾಂಕೇತಿಕವಾಗಿ ಕಟ್ಟಿಕೊಟ್ಟ ಚಿತ್ರ ಎಲ್ಲರ ಮನಸ್ಸನ್ನು ಕಲಕಿದ್ದು ನಿಜ.
ಒಟ್ಟೂ ಈ ಚಿತ್ರೋತ್ಸವ, ಆಸಕ್ತರು ಪಾಲ್ಗೊಂಡು ಪ್ರೋತ್ಸಾಹಿಸಿದ ಬಗೆ ಸಾಂಗತ್ಯಕ್ಕೆ ಮತ್ತಷ್ಟು ಹುರುಪು ತುಂಬಿದಂತೂ ಸತ್ಯ. ಸಹಕಾರ ನೀಡಿದ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ, ಅದರ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರಮಾಣ ಪತ್ರ ಪೂರೈಸಿದ ಬೆಂಗಳೂರಿನ ಮೇಫ್ಲವರ್ ಮೀಡಿಯಾ ಹೌಸ್ ಮತ್ತು ಅದರ ಮುಖ್ಯಸ್ಥ ಜಿ. ಎನ್. ಮೋಹನ್, ಸಿನಿತಜ್ಞರಾಗಿ ಭಾಗವಹಿಸಿ ಸಲಹೆ ನೀಡಿದ ಪರಮೇಶ್ ಗುರುಸ್ವಾಮಿ, ಗುರುಪ್ರಸಾದ್ ಅವರನ್ನು ನೆನೆಯಲೇಬೇಕು. ನಮಗೆಲ್ಲಾ ಚೆಂದದ ಸಹಕಾರ ನೀಡಿದ ಪ್ರತಿಷ್ಠಾನದ ಉದ್ಯೋಗಿ ಮಂಜುನಾಥ್ ಮತ್ತು ಸಿಬ್ಬಂದಿಗೂ ಕೃತಜ್ಞತೆ ಸಲ್ಲಲೇಬೇಕು