ಕಮಿನೆ- ಚಿತ್ರ ವಿಮರ್ಶೆನಗರದ ಬದುಕು ಯಾಂತ್ರೀಕೃತವಾದಂತೆ, ಮನುಷ್ಯ ಸಂಬಂಧಗಳು ಬೇರೆ ಅರ್ಥಗಳಿಗಾಗಿ ತಡಕಾಡುತ್ತಿದ್ದಂತೆ ಕಲೆಯೂ ಯಾಂತ್ರಿಕ ಸ್ವರೂಪ ಪಡೆದುಕೊಳ್ಳುವುದು ಸಹಜ. ಅದೇ ಹೊತ್ತಿನಲ್ಲಿ ಕಲೆ ಮಾನವೀಯವಾಗಿ ಮನುಷ್ಯ ಸಂಬಂಧಗಳನ್ನ ಪುನರ್ ಪ್ರತಿಷ್ಟಾಪಿಸಬೇಕಾಗಿರುವುದು ಅಷ್ಟೇ ಅಗತ್ಯ ಕೂಡ. ಈ ಸಹಜತೆ ಮತ್ತು ಅಗತ್ಯತೆಗಳ ನಡುವಣ ವಿಶಾಲ್ ಭಾರದ್ವಾಜ್ ರ ಸಿನೆಮಾ ’ಕಮಿನೆ’ ಯನ್ನ ಗ್ರಹಿಸಬೇಕಿದೆ. ವೈವಿಧ್ಯಮಯ ಸಿನೆಮಾ ನೋಡುವ ಹುಚ್ಚು ಇದ್ದವರಿಗೆ ಮಾತ್ರ ಮೊದಲ ಗ್ರಹಿಕೆಗೆ ನಿಲುಕುವ ಚಿತ್ರ ಇದು. (ಇದನ್ನ ತೀರಾ ಬುದ್ದಿವಂತರಿಗೆ ಮಾತ್ರ ಎಂದು ಬಹುತೇಕ ಪತ್ರಿಕೆಗಳು ಬರೆದದ್ದು ನಿಜವಲ್ಲ.) ಪ್ರತಿಯೊಂದು ದೃಶ್ಯವೂ ಸಂಶ್ಲೇಷಣ ಮಾದರಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡು ಕ್ಲೈಮ್ಯಾಕ್ಸಿನಲ್ಲಿ ಎಲ್ಲಾ ಎಳೆಗಳು ಒಂದನ್ನೊಂದು ಸಂಧಿಸಿದಾಗ ಅಲ್ಲಿ ಸಂಭವಿಸುವುದು ಮಹಾಪತನ. ಚಿತ್ರದ ಮೊದಲ ದೃಶ್ಯದಿಂದಲೂ ಮುಂಬೈ ಮಹಾನಗರಿಯ ಕ್ರೌರ್ಯವನ್ನ ಬೇರೆ ಬೇರೆ ಸ್ತರಗಳಲ್ಲಿ ನಿರೂಪಿಸುವ ಈ ಕಥಾ ಎಳೆಗಳು ಕೊನೆಯಲ್ಲಿ ಸಂಧಿಸಿದಾಗ ಮಾತ್ರ ಎಲ್ಲವೂ "ಶುಭಂ". ಮೇಲೆ ಹೇಳಿದ ಈ ಸಹಜತೆ ಮತ್ತು ಅಗತ್ಯತೆ ನಡುವಣ ಚಿತ್ರ ಆರಿಸಿಕೊಳ್ಳುವುದು ಸಹಜತೆ ಯನ್ನೇ! ತಾಂತ್ರಿಕವಾಗಿ ಚಿತ್ರ ಯಾವುದೇ ಚಿತ್ರವನ್ನ ಮೀರಿಸುವಂತಿದೆ. ಬಿಗಿಯಾದ ಸಂಕಲನ, ಎಲ್ಲೂ ಡಾಳಾಗದ ಕ್ಯಾಮೆರಾ ಮೂವಮೆಂಟುಗಳು ನಿಮ್ಮನ್ನು ಬಿಗಿಯಾಗಿ ಹಿಡಿದು ಕೂರಿಸುತ್ತದೆ. ಚಿತ್ರದ ನಿರೂಪಣೆಯೂ ನಮ್ಮ ಎಂದಿನ ಸಿನೆಮಾಗಳ ಹಾಗೆ ಸಾಗದೆ, ಹಾಲಿವುಡ್ ಸಿನೆಮಾಗಳ ಶೈಲಿಯನ್ನು ಅನುಕರಿಸುತ್ತದೆ. ಚಿತ್ರ ಹೇಳುವುದೇನನ್ನು? ವಾಚ್ ಕದ್ದು ಸಿಕ್ಕಿಹಾಕಿಕೊಳ್ಳುವ ಅಪ್ಪ ಅವಮಾನದಿಂದಾಗಿ ನೇಣಿಗೆ ಶರಣಾದಾಗ ಅವಳಿ ಜವಳಿ ಮಕ್ಕಳಿಬ್ಬರ ಹಾದಿ ಬೇರೆ ಯಾಗುತ್ತದೆ. ಒಬ್ಬ ಸೌಮ್ಯ ಸ್ವಭಾವದ ಬದುಕನ್ನು ಪ್ರೀ ಪ್ಲಾನ್ ಆಗಿ ಎದುರಿಸಲು ಹೊರಟವನಾದರೆ ಇನ್ನೊಬ್ಬ ಬದುಕಿನಲ್ಲಿ ಶಾರ್ಟ್ ಕಟ್ ದಾರಿ ಹುಡುಕಿ ಹೊರಟವನು. ಬೇರೆ ಬೇರೆಯಾದ ಇಬ್ಬರ ಬದುಕೂ ಒಂದು ದಿನ ಒಂದು ಬಿಂದುವಿನಲ್ಲಿ ಸಂಧಿಸಿಬಿಡುತ್ತದೆ. ಈ ಸಂಧಿಯಿಂದ ಇಬ್ಬರೂ ಹೇಗೆ ಪಾರಾಗುತ್ತಾರೆ ಅನ್ನುವುದು ಕಥೆ. ಮೇಲ್ನೋಟಕ್ಕೆ ಇದು ಕಥೆಯಾದರೂ ನಿರ್ದೇಶಕ ಹೇಳ ಹೊರಟಿರುವುದು ಇದನ್ನಷ್ಟೇ ಅಲ್ಲ. ಮುಂಬೈ ನಂತಹ ಮಹಾನಗರಿಯೊಂದು ಅನಾಥರಿಬ್ಬರ ಕನಸುಗಳನ್ನು ನನಸು ಮಾಡುವ ಕಥೆಯನ್ನಾಗಿಯೂ ಇದನ್ನು ನೋಡಬಹುದು. ಜೊತೆಗೆ ಮರಾಠಿ ಮತ್ತು ಉತ್ತರ ಭಾರತೀಯ ರಾಜಕಾರಣ, ಡ್ರಗ್ಸ್ ಮಾಫ಼ಿಯಾ, ಭ್ರಷ್ಟ ಪೋಲಿಸ್ ವ್ಯವಸ್ಥೆ ಇವೆಲ್ಲ ಒಳಗೊಂಡ ಮುಂಬೈ ನ ಬದುಕಿನ ಒಂದು ತುಣುಕಾಗಿಯೂ ಇದನ್ನು ನೋಡಬಹುದು. ಇದೆಲ್ಲವನ್ನು ನಮಗೆ ಅತ್ಯಂತ ಬುದ್ದಿವಂತಿಕೆಯಿಂತ ಕಟ್ಟಿಕೊಡುವ ವಿಶಾಲ್ ಕೊನೆಯಲ್ಲಿ ಚಿತ್ರ ಮಾನವೀಯವನ್ನಾಗಿಸುವಲ್ಲಿ ಸೋಲುತ್ತಾರೆ. ಚಿತ್ರದಲ್ಲಿ ಪ್ಲಾಶ್ ಬ್ಯಾಕಿನಲ್ಲಿ ಬರುವ ಅಪ್ಪನ ಸಾವಿನ ಪ್ರಕರಣ, ನಾಯಕನ ಮರಾಠಿ ಹುಡುಗಿಯೊಂದಿಗಿನ ಪ್ರೇಮ ಪ್ರಕರಣ ಇವೆಲ್ಲ ತಾಂತ್ರಿಕವಾಗಿ ಅದ್ಭುತವಾಗಿರುವ ಈ ಚಿತ್ರದಲ್ಲಿ ಮಾನವೀಯತೆಯ ಸ್ಪರ್ಶ ನೀಡಲು ಯತ್ನಿಸುವತ್ತಾದರೂ ಅದು ಚಿತ್ರದೊಳಗೆ ಸುತ್ತಿಕೊಳ್ಳದೇ ಹೊರಗೇ ಉಳಿದುಬಿಡುತ್ತದೆ. ಹೀಗೆ ಬಹು ಅಗತ್ಯವಾದದ್ದನ್ನು ಮರೆಯುವ ಈ ಚಿತ್ರ ಶಾಶ್ವತವಾಗದೇ ಸದ್ಯದಲ್ಲೇ ತೃಪ್ತಿಕೊಡುವ ಪ್ರಯತ್ನವಷ್ಟೇ!
|
|