ಸಿನೆಮಾ ಎಂಬ ಸರಕು..
ಈ ವರ್ಷ ದಕ್ಷಿಣ ಭಾರತದಲ್ಲಿ ಬಿಡುಗಡೆಗೆ ಮುನ್ನ ನಿರೀಕ್ಷೆ ಹುಟ್ಟಿಸಿದ್ದ ಚಿತ್ರಗಳು ಮೂರು. ತಮಿಳಿನ ’ಕಂದಸ್ವಾಮಿ’, ತೆಲುಗಿನ ’ ಮಗಧೀರ’ ಹಾಗೂ ಕನ್ನಡದ ’ರಾಜ್’. ಈ ಚಿತ್ರ ಈ ಮಟ್ಟಿಗಿನ ನಿರೀಕ್ಷೆ ಹುಟ್ಟಿಸಿದ್ದಕ್ಕೆ ಕಾರಣ ಕುತೂಹಲಕರವಾದದ್ದು , ಅದರಲ್ಲಿ ಜನಪ್ರಿಯ ನಾಯಕ ನಟರು ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ , ಚಿತ್ರದಲ್ಲಿ ಹೂಡಲಾದ ಬಂಡವಾಳ ಆ ಮಟ್ಟಿಗಿನ ನಿರೀಕ್ಷೆಯನ್ನ ಹುಟ್ಟಿಸಿತ್ತು. ಚಿತ್ರವೊಂದಕ್ಕೆ ಅನಗತ್ಯ ಖರ್ಚು ಮಾಡುವುದನ್ನೆಲ್ಲಾ ಪ್ರೇಕ್ಷಕ ಪ್ರೋತ್ಸಾಹಿಸುತ್ತಿರುವುದು ಆಶ್ಚರ್ಯವಾಗುತ್ತದೆ. ಖರ್ಚು ಮಿತಿ ಮೀರಬಾರದು ಎಂಬ ನಮ್ಮ ಸಮಾಜದ ಹಳೇ ನಂಬಿಕೆ ಎಂದೇ ಕಲಿತುಕೊಂಡು ಬಂದಿರುವ ನಾವು, ಈ ಚಿತ್ರಗಳು ಅನಗತ್ಯ ಖರ್ಚು ಮಾಡಿ ನಮ್ಮ ಮುಂದೆ ನಿಂತಾಗ ನಾವೆಲ್ಲ ಚಕಾರವೆತ್ತದೇ , ಅದನ್ನೊಂದು ಹೆಮ್ಮೆಯ ವಿಷಯವೆಂಬಂತೆ ನೋಡಲಾಗುತ್ತದೆ.
ಕಂದಸ್ವಾಮಿಯಲ್ಲಿ ಸಿರಿವಂತರ ಹಣ ದೋಚಿ ಅದನ್ನ ಬಡವ ಬಲ್ಲಿದರಿಗೆ ಹಂಚುವ ನಾಯಕ (ಅದೇ ಹಳೆ ರಾಬಿನ್ ಹುಡ್) ಮಗಧೀರದಲ್ಲಿ ೪೦೦ ವರ್ಷಗಳ ಹಿಂದಿನ ತನ್ನ ವಿಫಲ ಪ್ರೇಮವನ್ನ ಈಗ ಖಳನಾಯಕರನ್ನ ಮಟ್ಟ ಹಾಕಿ ಸಾಕ್ಷಾತ್ಕರಿಸಿಕೊಳ್ಳುವ ನಾಯಕ. ರಾಜ್ ನಲ್ಲಿ, ಸಿನೆಮಾ ಹುಚ್ಚಿನಿಂದ ೩೦ ಕುರಿಗಳನ್ನ ಕಳೆದುಕೊಂಡು ಪಟ್ಟಣ ಸೇರುವ ನಾಯಕ ಮುಂದೆ ದೊಡ್ಡ ಸಿನೆಮಾ ನಾಯಕ ನಟನಾಗುತ್ತಾನೆ. ಮೇಲ್ನೋಟಕ್ಕೆ ವಿಭಿನ್ನ, ವಿನೂತನ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಬಂದ ಈ ಮೂರು ಚಿತ್ರಗಳೂ ಹೇಳಿದ್ದು ಮಾತ್ರ ಅದೇ ಹಳೇ ಕಥೆಗಳನ್ನೇ. ನಾಯಕ ಪ್ರಧಾನ ಚಿತ್ರಗಳನ್ನು ಹೊರತು ಪಡಿಸಿ , ಕಥಾ ಪ್ರಧಾನ ಪಾತ್ರಗಳನ್ನಾಗಲೀ, ವಿನೂತನವಾದದ್ದೇನೋ ಹೇಳುವ ಪ್ರಯತ್ನವಾಗಲೀ ಇದ್ದಂತಿಲ್ಲ. ಹೂಡಿದ ಬಂಡವಾಳಕ್ಕೆ ಪ್ರತಿಯಾಗಿ ಲಾಭ ತೆಗೆಯುವುದಷ್ಟೇ ಈ ಚಿತ್ರಗಳ ಉದ್ದೇಶ ಎನಿಸುವಂತಿದೆ. ಹಾಗಾಗಿ ಬಿಡುಗಡೆಯ ಸಾಕಷ್ಟು ಮುನ್ನವೇ ಇಂತಹ ಚಿತ್ರಗಳ ಕುರಿತ ಪ್ರಚಾರ ಆರಂಭವಾಗುತ್ತದೆ. ಬಿಡುಗಡೆಯ ದಿನ ಹತ್ತಿರ ಬರುತ್ತಿದ್ದಂತೆ ಪ್ರಚಾರದ ಭರಾಟೆ ಇನ್ನಷ್ಟು ಹೆಚ್ಚಾಗಿ ಈ ಚಿತ್ರವನ್ನ ನಾವು ನೋಡದಿದ್ದರೇ ಏನನ್ನೋ ಕಳೆದುಕೊಂಡಂತೆ ಎಂಬಂತೆ ಬಿಂಬಿಸಲಾಗುತ್ತದೆ. ಬಿಡುಗಡೆಯ ದಿನದ ವಿಮರ್ಶೆಗಳು ನಕಾರಾತ್ಮಕವಾಗಿದ್ದರಂತೂ ನಿರ್ಮಾಪಕರಾದಿಯಾಗಿ ಎಲ್ಲರೂ ತಮ್ಮನ್ನು ಚಿತ್ರರಂಗ ತುಳಿಯುತ್ತಿದೆ ಎಂಬಂತೆ ಮಾತನಾಡುತ್ತಾರೆ. ತಮ್ಮ ಕಷ್ಟಕ್ಕೇ ಬೆಲೆಯೇ ಇಲ್ಲ ಎಂದು ಕೊರಗುತ್ತಾರೆ. ಚಿತ್ರದ ಬಗೆಗಿನ ಅಭಿಪ್ರಾಯಗಳು, ಚಿತ್ರದ ಕಥಾ ಹಂದರಕ್ಕಿಂತ ಹೆಚ್ಚಾಗಿ ಚಿತ್ರಕ್ಕೆ ಮಾಡಿದ ವೆಚ್ಚವನ್ನ ಗಮನದಲ್ಲಿರಿಸಿ ನೀಡಬೇಕೆಂಬುದು ಇವರ ಒತ್ತಾಯವಾಗಿರುತ್ತದೆ. ಹೀಗೆ ಚಿತ್ರವೊಂದು ’ಚಿತ್ರ’ ಕ್ಕಿಂತ ಹೆಚ್ಚಾಗಿ ಒಂದು ಉತ್ಪನ್ನವಾಗಿ ಅದನ್ನ ಪರಿಗಣಿಸಲಾಗುತ್ತದೆ. ಚಲನಚಿತ್ರ ವೆಂಬ ಈ ಉತ್ಪನ್ನಕ್ಕೆ ಬೇಡಿಕೆ ಹುಟ್ಟಿಸಬಹುದಾದ್ದು ಚಿತ್ರ ಬಿಡುಗಡೆಯಾಗುವ ತನಕ ಮಾತ್ರ.ಬಿಡುಗಡೆಯಾದ ನಂತರ ಚಿತ್ರದ ನೈಜ ಬಣ್ಣ ತಿಳಿದು ಬಿಡುವುದರಿಂದ ಆ ನಂತರದ ಪ್ರಮೋಷನ್ ಗಳೇ ಬೇರೆ ಇರುತ್ತವೆ. ಇಂತಹ ಉತ್ಪನ್ನಗಳಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ಪುಕ್ಕಟೆ ಜಾಹೀರಾತು ಕೂಡ ನೀಡಲಾಗುತ್ತದೆ. ಟಾಕ್ ಶೋ ಗಳನ್ನು ಏರ್ಪಡಿಸಿ ಚಿತ್ರದ ಎಲ್ಲಾ ವಿಭಾಗಗಳು ಚೆನ್ನಾಗಿವೆ ಎಂದು ಪದೆ ಪದೆ ಹೇಳಲಾಗುತ್ತದೆ. ಕರೆ ಮಾಡುವ ಪ್ರೇಕ್ಷಕರು ಕೂಡ ಚಿತ್ರದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಯನ್ನೇ ನೀಡುವಂತೆ ನೋಡಿಕೊಳ್ಳಲಾಗುತ್ತದೆ. ಇನ್ನು ಚಿತ್ರದೊಳಗಿನ ವಿಷಯಕ್ಕೆ ಬಂದರೆ ಅಲ್ಲಿ ತಾಂತ್ರಿಕ ವಿಭಾಗಗಳಲ್ಲಿ ಮಾತ್ರ ಪ್ರಯೋಗ ಗಳು ನಡೆಯುತ್ತವೆಯೇ ಹೊರತು. ಚಿತ್ರದ ಕಥೆ ಅಥವಾ ಪಾತ್ರ ಮಾತ್ರ ಈ ಪ್ರಯೋಗಗಳಿಂದ ಹೊರತಾಗಿರುತ್ತದೆ. ಮೂರೂ ಚಿತ್ರಗಳಲ್ಲಿನ ಇನ್ನೊಂದು ಸಾಮ್ಯವೆಂದರೆ ಚಿತ್ರದ ಪ್ರಧಾನ ಪಾತ್ರಗಳ ಆರ್ಥಿಕ ಹಿನ್ನೆಲೆ. ಈ ಎಲ್ಲ ಪಾತ್ರಗಳು ತಮ್ಮ ಹೊಟ್ಟೆಪಾಡಿನ ಬಗ್ಗೆ ಚಿಂತಿತರಾಗದಿರುವುದು ಮತ್ತು ಆ ಹೊಟ್ಟೆಪಾಡು ಅವರಿಗೆ ಯಾವ ಕಾರಣಕ್ಕೂ ಮುಖ್ಯವಾಗದಿರುವುದು ಕೂಡ ಆಶ್ಚರ್ಯದ ವಿಷಯ. ಹೆಚ್ಚು ಬಂಡವಾಳ ತೊಡಗಿಸಿರುವುದರಿಂದ ಇಲ್ಲಿ ಪಾತ್ರಗಳ ಬಡತನವನ್ನೂ ಶ್ರೀಮಂತವಾಗಿ ತೋರಿಸುವುದು ಅನಿವಾರ್ಯ. ರಾಜ್ ಚಿತ್ರದಲ್ಲಿ ಸಹ ನಟನಾಗಿ ಕೆಲಸ ಮಾಡುವ ನಾಯಕ ಧರಿಸುವ ಬಟ್ಟೆಗಳು ಮಾತ್ರ ಶ್ರೀಮಂತಿಕೆಯನ್ನ ಪ್ರತಿನಿಧಿಸುತ್ತಿರುತ್ತದೆ. ಹಾಗೆ ಕನಸಿನ ನೃತ್ಯಗಳಲ್ಲಿ ನಾಯಕ ನಾಯಕಿಯರು ವಿದೇಶದಲ್ಲೆಲ್ಲೋ ದುಬಾರಿ ಬಟ್ಟೆಗಳಲ್ಲಿ ಕುಣಿಯುತ್ತಾರೆ. ಇವತ್ತಿನ ಆಧುನಿಕ ನಾಗರಿಕ ಬದುಕನ್ನು ಆವರಿಸಿಕೊಂಡಿರುವ ಬಂಡವಾಳಷಾಹಿ , ಸಿನೆಮಾ ಕಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ನಿತ್ಯ ಬಳಕೆಯ ಸೋಪು, ಬಟ್ಟೆಗಳಂತೆ ಸಿನೆಮಾ ಕೂಡ ಸರಕಾಗಿ ಬಿಟ್ಟಿರುವುದು ಸ್ಪಷ್ಟವಾಗಿದೆ. ತೀರಾ ಭಾವೋದ್ವೇಗದ ಚಿತ್ರಗಳು ಬರುತ್ತಿರುವ ಹೊತ್ತಿನಲ್ಲಿ , ಈ ಮೂರು ಭಾರಿ ಬಜೆಟ್ಟಿನ ಚಿತ್ರಗಳು ತೀರಾ ಪ್ಲೇನ್ ಆಗಿ ನಮ್ಮೆದುರು ಬಿಚ್ಚಿಕೊಳ್ಳುವುದು ಕೂಡ ಗಮನಾರ್ಹ. ಪ್ರೇಕ್ಷಕನನ್ನು ಯಾವ ರೀತಿಯಲ್ಲೂ ತಡಕಾಡದೇ ಕೇವಲ ಅಚ್ಚರಿಯನ್ನಷ್ಟೇ ಮೂಡಿಸುವುದು ಇಂದಿನ ಚಿತ್ರಗಳ ಉದ್ದೇಶವಿದ್ದಂತಿದೆ. ಎರಡೂವರೆ ಗಂಟೆ ಪ್ರೇಕ್ಷಕನನ್ನು ಭಾವನಾತ್ಮಕವಾಗಿಯೂ, ಬೌದ್ದಿಕವಾಗಿಯೂ ವಿಚಲಿತಗೊಳಿಸುವುದಿಲ್ಲ. ನಗರ ಜೀವನದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ " ಬಿ ಆಲ್ವೇಸ್ ಹ್ಯಾಪಿ" ಎಂಬ ಸೂತ್ರವನ್ನಿಟ್ಟುಕೊಂಡೆ ಈ ಚಿತ್ರಗಳನ್ನ ತಯಾರಿಸಲಾಗುತ್ತದೆ. ಅದಕ್ಕೆ ಸಕರಾತ್ಮಕವಾಗಿ ಪ್ರತಿಸ್ಪಂದಿಸುತ್ತಿರುವ ನಗರದ ಯುವಜನ , ಚಿತ್ರವನ್ನ ಕಾಲಹರಣ ಮಾಡಲೊಂದು ನೆಪವಾಗಿ ಹುಡುಕಿಕೊಂಡಿದ್ದಾರಷ್ಟೆ. ಕಾಫ಼ಿ ಡೆ ಯಲ್ಲಿ, ಲಾಲ್ ಬಾಗಿ ನಂತೆ, ಸಿನೆಮಾ ಮಂದಿರಗಳಾಗಿವೆಯಷ್ಟೆ. ಹೀಗಾಗಿ ತೀರಾ ಭಾವನಾತ್ಮಕವೂ ಆದ ವೈಚಾರಿಕವೂ ಆದ ಚಿತ್ರಗಳು ಗೆಲ್ಲುವುದಿಲ್ಲ ಎಂಬ ನಂಬಿಕೆ ಚಿತ್ರ ನಿರ್ಮಾತೃಗಳಲ್ಲಿ ಬಂದಿದೆ. ಈ ನಂಬಿಕೆಯ ಪರಿಣಾಮವೆಂದರೆ ಚಲನಚಿತ್ರಗಳೂ ಕೂಡ ಜಾಹೀರಾತಿನ ರೂಪ ಪಡೆದಿರುವುದು. ನಗರ ಜೀವನವನ್ನೂ, ಬದುಕನ್ನು ಬಿಂದಾಸ್ ಆಗಿ ಅನುಭವಿಸಬೇಕೆಂಬ ಇಂದಿನ ನಗರದ ಯುವ ಜನಾಂಗದ ಅಪೇಕ್ಷೆಯನ್ನೇ ಈ ಚಿತ್ರಗಳು ಮತ್ತೆ ಮತ್ತೆ ದೃಢಿಕರಿಸತೊಡಗುತ್ತವೆ. ಸಿನೆಮಾ ಕಥೆಗಿಂತ ಮಿಗಿಲಾಗಿ ಸಂಭ್ರಮವಾಗುತ್ತದೆ. ಹೀಗೆ ಚಿತ್ರಗಳು ನಗರೀಕೃತವಾಗುತ್ತಿದ್ದಂತೆ, ಬಿ ಮತ್ತು ಸಿ ಸೆಂಟರ್ ಗಳೆನಿಸಿಕೊಂಡಿರುವ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಹಜವಾಗಿ ಈ ಚಿತ್ರಗಳು ಆರ್ಥಿಕವಾಗಿ ಸೋಲನುಭವಿಸುತ್ತವೆ ಮತ್ತು ಗ್ರಾಮೀಣ ಪ್ರೇಕ್ಷಕರು ಚಿತ್ರಗಳೊಂದಿಗಿನ ತಮ್ಮ ಸಂಬಂಧವನ್ನು ನಿಧಾನಕ್ಕೆ ಕಳಚಿಕೊಳ್ಳಬಯಸುತ್ತಾರೆ. ಹೀಗೆ ಚಿತ್ರೋದ್ಯಮ ಮೆಲ್ಲನೆ ತನ್ನ ಬಹುದೊಡ್ಡ ಪ್ರೇಕ್ಷಕ ವರ್ಗವಾದ ಗ್ರಾಮೀಣ ಸಮುದಾಯದಿಂದ ದೂರವಾಗುತ್ತ, ನಗರದ ಬದುಕಿಗೆ (ಅದರಲ್ಲೂ ಯುವ ಜನತೆಗೆ) ಮಾತ್ರ ತನ್ನನ್ನು ಸೀಮಿತ ಗೊಳಿಸಿಕೊಳ್ಳುತ್ತದೆ.
|
|