ದೃಶ್ಯಕ್ಕೊಂದು ನುಡಿಗಟ್ಟು

ಬುಸುಗುಡುವ ಬಳ್ಳಾರಿ ನಾಗ

ಆತ ನಾಗ. ಬಳ್ಳಾರಿ ನಾಗ. ದನ ಕರುಗಳ ಜೊತೆ ಬೆಳೆದು ಅದರ ಹಾಗೆ ಆಡುತ್ತಾನೆ. ಅವನಿಗೆ ಮನುಷ್ಯರ ಭಾಷೆಗಿಂತ ಪ್ರಾಣಿಗಳ ಭಾಷೆಯೇ ಸಲೀಸು. ಆತನಿಗೆ ಭಾವನೆಗಳಿಲ್ಲ. ಚಿಕ್ಕಂದಿನಲ್ಲಿ ಹೆತ್ತ ತಾಯಿ ತನ್ನನ್ನು ತಿರಸ್ಕರಿಸಿದಾಗಲೇ ಭಾವನೆಗಳೆಲ್ಲ ಬಾವಿಗೆ ಬಿದ್ದು ಹೋಗಿದೆ. ಆದರೂ ಧಣಿಯ ಋಣ ತಲೆ ಮೇಲಿದೆ. ಆತನ ಸಂಪೂರ್ಣ ಆಸ್ತಿಗೆ ಕೇರ್ ಟೇಕರ್ ಆಗಿ ಆತ ಬರುತ್ತಾನೆ. ಧಣಿಯ ಮಕ್ಕಳ ಸೊಕ್ಕು ಮುರಿಯುತ್ತಾನೆ. ಬುದ್ದಿ ಕಲಿಸುತ್ತಾನೆ. ಧಣಿಯ ಎರಡನೇ ಹೆಂಡತಿಗೆ ತನ್ನಿಂದ ತಪ್ಪಿ ಹೋದ ಮಗ ಇವನೇ ಎಂದು ತಿಳಿಯುವಲ್ಲಿಗೆ ಮಧ್ಯಂತರ ಬಂದಿರುತ್ತೆ. ಮುಂದೇನಿದ್ದರೂ ಪ್ರೀತಿ, ಮಾನವೀಯತೆ, ಒಳ್ಳೆಯತನ ಉಳಿಯುತ್ತೆ. ದುಷ್ಟರಿಗೆ ಶಿಕ್ಷೆಯಾಗುತ್ತೆ.

ಕೆಲವು ತಿಂಗಳ ಹಿಂದೆ ಪೈಂಟರ್ ಎಂಬ ಮಹಾನ್ ಚಿತ್ರ ನೀಡಿದ ದಿನೇಶ್ ಬಾಬು ಅವರ ಇನ್ನೊಂದು ಮಹತ್ವದ ಚಿತ್ರವಿದು. ಹಿಂದೆ ಇದೇ ಜೋಡಿ ಸುಪ್ರಭಾತ ಎಂಬ ಸದಭಿರುಚಿಯ ಚಿತ್ರವನ್ನ ನೀಡಿತ್ತು!!

ಈ ಚಿತ್ರದ ಬಗ್ಗೆ ಹೇಳಿ ಕೊಳ್ಳುವಂತದ್ದೇನೂ ಇಲ್ಲ. ಚಿತ್ರ ರೀಮೇಕ್ ಆದರೂ ಚಿತ್ರಕತೆ ಅಯೋಮಯ. ಸಂಕಲನ ಮತ್ತು ಛಾಯಾಗ್ರಹಣವೂ ಚಿತ್ರವನ್ನ ಇನ್ನಷ್ಟು ಹಾಳುಗೆಡವಿದೆ.

ವಿಷ್ಣು ಚಿತ್ರದಲ್ಲಿ ನಾಯಕಿಯರೊಂದಿಗೆ ಕುಣಿಯುವುದಿಲ್ಲ, ಅವರು ತೊಡೆ ತಟ್ಟಿದಾಕ್ಷಣ ರೌಡಿಗಳು ಬೀಳುವುದಿಲ್ಲ ಎಂಬುದೇ ಸಮಾಧಾನ.

ಮೊಗ್ಗಿನ ಮನಸಿನ ನಂತರ ರಾಜೇಶ್ ಅವರಿಗೆ ಗಟ್ಟಿ ಪಾತ್ರ ಸಿಕ್ಕಿದೆ, ಅದನ್ನವರು ಚೆನ್ನಾಗಿ ಬಳಸಿಕೊಂಡಿದ್ದಾರೆ.

ವಿಷ್ಣು ಅವರ ಮ್ಯಾನರಿಸಂ, ಸಂಭಾಷಣೆ ಎರಡೂ ಖುಷಿ ಕೊಡುತ್ತದೆ. ದಿನೇಶ್ ಬಾಬು ಇನ್ನಷ್ಟು ಸೀರಿಯಸ್ ಆಗಿ ಇದನ್ನು ನಿಭಾಯಿಸಿದ್ದರೆ, ಇದೊಂದು ಒಳ್ಳೆಯ ಚಿತ್ರವಾಗುವುದರ ಜೊತೆಗೆ ವಿಷ್ಣು ಅವರ ಪಾತ್ರ ಮೈಲಿಗಲ್ಲಾಗುವ ಸಾಧ್ಯತೆ ಇತ್ತು.

ಗಡಿಬಿಡಿಯಲ್ಲಿ ನಿರ್ದೇಶಕರ ಬಡಿಸಿರುವ ಈ ಅರೆ ಬೆಂದ ಅಡಿಗೆಯನ್ನ ಸವಿಯಬೇಕಾದದ್ದು, ಪ್ರೇಕ್ಷಕನ ಕರ್ಮ!


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು