ಈ ಶತಮಾನದ ಜನಪ್ರಿಯ ಕಲಾ ಮಾಧ್ಯಮ ಸಿನೆಮಾ. ಸಾಹಿತ್ಯ, ಸಂಗೀತದ ಹಾಗೆ ಮತ್ತು ಅದಕ್ಕಿಂತ ಹೆಚ್ಚಿನದಾಗಿ ನಮ್ಮ ಸಮುದಾಯವನ್ನು ಹಿಡಿದಿಡಬಲ್ಲ ಜನಪ್ರಿಯತೆಯನ್ನು ಸಿನೆಮಾ ಪಡೆದುಕೊಂಡಿದೆ. ಕನ್ನಡದಲ್ಲೇ ಪ್ರತಿ ವರ್ಷ ಸುಮಾರು ನೂರು ಸಿನೆಮಾಗಳು ಬಿಡುಗಡೆಯಾಗುತ್ತವೆ. ಭಾರತಾದಾದ್ಯಂತವಾದರೆ ೩ ಸಾವಿರಕ್ಕೂ ಹೆಚ್ಚು ಸಿನಿಮಾ. ಬಂಡವಾಳವಾದರೆ ರೂ. ೪೦೦೦ ಕೋಟಿಗೂ ಹೆಚ್ಚು ಎಂದೆನ್ನುವುದು ಸಾಮಾನ್ಯ ಲೆಕ್ಕಾಚಾರ. ಪ್ರತಿದಿನ ನಮ್ಮ ಮಾತುಗಳಲ್ಲಿ ಒಮ್ಮೆಯಾದರೂ ಸಿನೆಮಾ ಕುರಿತಾದ ವಿಷಯ ಹಾದು ಹೋಗುತ್ತದೆ. ಕ್ರಿಕೆಟಿನ ನಂತರ ಸಿನೆಮಾ ನಮ್ಮ ಸಾಮಾಜಿಕ ಬದುಕಿನ ಬಹುದೊಡ್ಡ ಭಾಗ. ಇದರ ಜೊತೆಗೆ, ಟಿ ವಿ ಮಾಧ್ಯಮ, ಕಲೆ, ಶಿಲ್ಪ ಕಲೆ, ನಾಟಕ, ನಾಟ್ಯ ಇತ್ಯಾದಿ. ಮನರಂಜನೆ ಹಾಗು ಸೃಜನಶೀಲತೆ ಎರಡನ್ನೂ ಸೇರಿಸಿ ದೃಶ್ಯಮಾಧ್ಯಮವೆಂದೆನ್ನಬಹುದಾದರೆ, ಇಂತಹ ಬೃಹತ್- ಸಾಮಾಜಿಕ-ಆರ್ಥಿಕ ಚಟುವಟಿಕೆ ಬಗೆಗೆ ಹೆಚ್ಚೆಚ್ಚು ಕ್ರಮಬದ್ಧವಾದ ಚಿಂತನೆ, ವಿಮರ್ಶೆಯ ಅಗತ್ಯ ಹಿಂದೆಂಗಿಂತಲೂ ಹೆಚ್ಚಿನ ಅಗತ್ಯವಿದೆ. ಇಲ್ಲದಿದ್ದರೆ ಗಟ್ಟಿ ಪೊಳ್ಳು ಎಲ್ಲವೂ ಸಮವಾಗಿಹೋದಾತು.
ಇಂಥಹ ಜನಪ್ರಿಯತೆ-ಮನ್ನಣೆಯಿರುವ ಕಲಾ ಮಾಧ್ಯಮವೊಂದು ಕೇವಲ ಮನರಂಜನಾ ಉದ್ಯಮವಾಗಿ ಇಂದು ಬೆಳೆದು ನಿಂತಿರುವುದು ನೋವಿನ ಸಂಗತಿ. ಅದಕ್ಕಿಂತ ಮಿಗಿಲಾಗಿ ಈ ಕಲಾ ಪ್ರಕಾರದ ಬಗ್ಗೆ ನಮ್ಮಲ್ಲಿ ಅಕಾಡೆಮಿಕ್ ಆದ ಶಿಕ್ಷಣವಾಗಲಿ , ಸಾಹಿತ್ಯವಾಗಲಿ ಇಲ್ಲದಿರುವುದು ಇನ್ನೂ ಆಶ್ಚರ್ಯದ ವಿಷಯ. ಸಂಗಿತಕ್ಕೆ ಅದಕ್ಕೆ ಸಂಬಂಧ ಪಟ್ಟ ಹಾಗೆ ಸಾಹಿತ್ಯವಿದೆ, ಆದರೆ ಸಿನೆಮಾ ಕುರಿತಾದ ಗಂಭೀರ ಬರಹಗಳು ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದರೆ ತಪ್ಪಿಲ್ಲ. ನಾವೆಲ್ಲ ಪ್ರತಿ ವಾರ ದಿನ ಪತ್ರಿಕೆಯಲ್ಲಿ ಬರುವ ಕಳಪೆ ಗುಣಮಟ್ಟದ ವಿಮರ್ಶೆಗಳನ್ನೋ, ಹೊಗಳು ಭಟ್ಟರ ಗೂಡಾಗಿರುವ ಟಾಬ್ಲಾಯ್ಡ್ ಗಳನ್ನೊ, ವಸ್ತುನಿಷ್ಠವಾಗದೇ ಸ್ವಪಕ್ಷಪಾತಿಯಾಗಿ ಒಡೆದುಕೊಂಡಿರುವ ಬರಹಗಾರರ ವಲಯವನ್ನೋ ನಂಬಿ ಕುಳಿತಿದ್ದೇವೆ. ಯಾವುದೆ ಸೂಕ್ಶ್ಮ ಒಳ ನೋಟಗಳಿಲ್ಲದ, ಪೂರ್ವಾಭ್ಯಾಸವಿಲ್ಲದ ಈ ವಿಮರ್ಶೆಗಳು ಸಿನೆಮಾ ಮಾಧ್ಯಮವನ್ನು ಕುಲಗೆಡಿಸುತ್ತಿರುವುದರ ಜೊತೆಗೆ ಪ್ರೇಕ್ಶಕರ ಅಭಿರುಚಿಯನ್ನೂ ಪಾತಳಕ್ಕೆಸೆಯುತ್ತಿವೆ. ಉದಾಹರಣೆಗೆ ಮೊನ್ನೆ ಬಿಡುಗಡೆಯಾದ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ನ ಬಗ್ಗೆ ಬಂದ ಒಂದೇ ಒಂದು ಒಳ್ಳೆಯ ಬರಹವೆಂದರೆ ಅನಂತಮೂರ್ತಿಯವರದ್ದು!!. ಈ ಮಟ್ಟಿನ ಬರಗಾಲ ನಮ್ಮಲ್ಲೇಕೆ??
ಹೋಗಲಿ, ಸಿನೆಮಾವನ್ನು ತೀವ್ರತರವಾದ ಶಿಸ್ತಿನೊಂದಿಗೂ, ಅಧ್ಯಯನ ಸಾಮಗ್ರಿಗಳೊಂದಿಗೂ ಕಲಿಯಲಾದರೂ ನಮಗೆ ಅವಕಾಶಗಳೂ ಸಾಧ್ಯತೆಗಳೂ ಇವೆಯೆ ಎಂದು ಪ್ರಶ್ನಿಸಿಕೊಂಡರೆ ಉತ್ತರಕ್ಕೆ ಆಕಾಶ ನೋಡಬೇಕು ಅಷ್ಟೇ. ಅದಕ್ಕೆ ಬೇಕಾದ ಚಿತ್ರಕತೆ, ಸಂಕಲನ, ಹಿನ್ನೆಲೆ ಸಂಗೀತಕ್ಕೆ ಸಂಬಂಧಪಟ್ಟ ಯಾವುದೇ ರೆಫರೆನ್ಸ್ ಮಟಿರಿಯಲ್ ನಮ್ಮ ಬಳಿ ಇಲ್ಲ. ಇಂತಹ ಸಾಮಾಗ್ರಿ ನಮಗೆ ಬೇಕೆಂದು ಯಾರಿಗೂ ಅನ್ನಿಸಿಯೇ ಇಲ್ಲವೇ? ನಾವೆಲ್ಲ ಸಿನೆಮಾ ಅರ್ಥ ಮಾಡಿಕೊಂಡಿರುವುದು ಟಿವಿಯಲ್ಲಿ , ಚಿತ್ರ ಮಂದಿರದಲ್ಲಿ ಪ್ರದರ್ಶಿತವಾಗುವ ಸಿನೆಮಾಗಳ ಮೂಲಕ. ಅಲ್ಲಿ ಬರುತ್ತಿರುವ ಚಲನ ಚಿತ್ರಗಳಾದರೂ ಎಂತಹದ್ದು? ಪ್ರೀತಿ ಮತ್ತು ರೌಡಿಯಿಸಮ್ ಬಿಟ್ಟರೆ ಮನುಷ್ಯನ ಬದುಕಿನಲ್ಲಿ ಬೇರೆನೂ ಇಲ್ಲವೇ ಇಲ್ಲ ಎಂಬರ್ಥದಲ್ಲಿ ಚಿತ್ರ ತಯಾರಾಗುತ್ತವೆ. ಈಗ ಚಿತ್ರಗಳನು ನಿರ್ಮಿಸುತ್ತಿರುವ ಮೂರೂ ಮುಕ್ಕಾಲು ವೀಸಾ ಜನ ಚಿತ್ರೋದ್ಯಮಕ್ಕೆ ತಯಾರಿಯೊಂದಿಗೆ ಬಂದದ್ದು ಆರ್ಥಿಕ, ಮೋಜಿನ ಆಲೋಚನೆಗಳೊಂದಿಗೆ ಮಾತ್ರ. ಹೀಗಿರುವಾಗ ಶ್ರೇಷ್ಠತೆಯ ಕಲ್ಪನೆ ಮತ್ತು ಗುಣಮಟ್ಟದ ಅಪೇಕ್ಷೆಗಳನ್ನು ಸೃಷ್ಟಿಸುವ ಮೂಲಕವಾದರೂ ಸಿನೆಮಾಗಳ ಗುಣಮಟ್ಟವನ್ನು ಹೆಚ್ಚಿಸಬೇಕಿದೆ.. ಈ ರೀತಿಯ ಸೀರಿಯಸ್ ಆದ ಅಧ್ಯಯನವನ್ನು ರೂಪಿಸುವುದೂ, ಯಾವುದೇ ಮುಲಾಜುಗಳಿಗೆ ಈಡಾಗದಂತೆ ಕ್ರಿಯಾಹೀನ ಸಿಸೆಮಾಗಳಿಗೆ ಇಲಾಜು ಮಾಡುವುದು ನಮ್ಮ ಮುಂದಿರುವ ಕನಸು.
ಸಿನೆಮಾಗಳಿಗೆ ಇಲ್ಲಿಯ ವರೆಗು ಬಡಿದಿರುವ ತಮಾಶೆಯ, ಕೇವಲ ಮನೋರಂಜನಮಾತ್ರದ ಪೊರೆಗಳನ್ನು ಕಳಚಬೇಕು
ಆದರೆ ಸಿನೆಮಾ ಸಾಕಷ್ಟು ಸಾಧ್ಯತೆಗಳಿರುವ ಮಾಧ್ಯಮ. ಇಂಗಮರ್ ಬರ್ಗಮನ್, ಕುರೊಸೊವ, ಚಾಪ್ಲಿನ್, ಫೆಲಿನಿ, ಸತ್ಯಜಿತ್ ರೇ, ಆನಂದ್ ಪಟವರ್ಧನ್ ಇವರೆಲ್ಲ ಈ ಮಾಧ್ಯಮವನ್ನು ದುಡಿಸಿಕೊಂಡಿರುವ ರೀತಿ ಅದ್ಭುತವಾದದ್ದು. ನಮ್ಮವರೇ ಆದ ಕಾರ್ನಾಡ್, ಕಾಸರವಳ್ಳಿ, ಕಾರಂತ ಸಾಕಷ್ಟು ಪ್ರಯೋಗಶೀಲತೆಯನ್ನ ಇದರಲ್ಲಿ ನಡೆಸಿದ್ದಾರೆ. ಇಂತಹ ಅಪಾರ ಸಾಧ್ಯತೆಗಳುಳ್ಳ ದೃಶ್ಯ ಮಾಧ್ಯಮದ ಕುರಿತು ನಮ್ಮ ನಿರ್ಲಕ್ಷ್ಯ ನಮಗೇ ನಾಚಿಕೆಗೇಡಿನ ಸಂಗತಿ.
ನಮ್ಮಲ್ಲಿ ಬಂಗಾಳಿ ಹಾಗೂ ಮಲಯಾಳಿ ಸಿನೆಮಾಗಳ ಹಾಗೆ ಪ್ರೇಕ್ಶಕರ ಅಭಿಪ್ರಾಯವನ್ನೂ ಅಪೇಕ್ಷೆಗಳನ್ನೂ ರೂಪಿಸುವ ಸಿನೆಮಾಗಳು ಬಂದದ್ದಕ್ಕಿಂತ ಹೆಚ್ಚಾಗಿ ಪ್ರೇಕ್ಶಕರ ಸದ್ಯದ ಕಾಮ ಪೀಪಾಸೆಯನ್ನು ಇನ್ನಷ್ಟು ಉದ್ದೀಪಿಸುವ, ಆ ಮೂಲಕ ಬಂಡವಾಳ ವಾಪಾಸು ತೆಗೆಯುವ ಸಿನೆಮಾಗಳು ಬಂದದ್ದೇ ಹೆಚ್ಚು. ೨೦೦ ಕೋಟಿ ಬಂದವಾಳ ಸುರಿದ ದಶಾವತಾರಂ ನಮ್ಮಲ್ಲಿ ಕೆರಳಿಸುವ ಕುತೂಹಲ, ೨೦ ಲಕ್ಷದಲ್ಲಿ ತಯಾರಾದ ಕಾಡು ಬೆಳದಿಂಗಳು ಹುಟ್ಟಿಸುವುದಿಲ್ಲ. ಆದರೇ ಇದು ಅದಕ್ಕಿಂತ ಹೆಚ್ಚು ಅರ್ಥ ಪೂರ್ಣ ಮತ್ತು ಗುಣಮಟ್ಟದ ಸಿನೆಮಾ ಎಂಬುದನ್ನ ನಾವೆಲ್ಲರೂ ಒಪ್ಪುತ್ತೇವೆ.
ಹೀಗೆ ಮನರಂಜನಾ ಉದ್ಯಮವಾಗಿ ಕಲೆಯ ಸೌಂದರ್ಯವನ್ನು ಕಳೆದುಕೊಂಡಿರುವ ನಮ್ಮ ಸಿನೆಮಾಗಳು ನಮ್ಮ ಬದುಕಿಗೆ ಇನ್ನಷ್ಟು ಹತ್ತಿರವಾಗಬೇಕಿದೆ. ಬದುಕಿಗೆ ಮನರಂಜನೆಯ ಜೊತೆಗೆ ಹೊಸ ಅರ್ಥಗಳನ್ನು ಕಲ್ಪಿಸುವ, ನಮ್ಮನ್ನು ಕಾಡುವ ಸಂಕಟಗಳಿಗೆಲ್ಲ ಹೊಸ ರೂಪ ಕೋಡುವ, ಕನಸಿನಾಚೆಗೆ ಜಿಗಿಯುತ್ತಲೇ ನಿಂತ ಹೆಜ್ಜೆಯನ್ನು ನೆನಪಿಸುವ ಸಿನೆಮಾಗಳು ನಮಗೆ ಬೇಕಿವೆ. ೭೦ ರ ದಶಕದ ಹೊಸ ಅಲೆಯ ಸಿನೆಮಾಗಳು ತಂದುಕೊಟ್ಟ ಬದಲಾವಣೆಯನ್ನು ನಾವೀಗ ಕಾತರದಿಂದ ಕಾಯುತ್ತಿದ್ದೇವೆ...?
ನಮ್ಮ ಈ ಎಲ್ಲ ಮೇಲಿನ ಆತಂಕಗಳಿಗೆ ನಾವು ಕೊಡಲು ಹೊರಟಿರುವ ಹೊಸ ರೂಪ ಸಂವಾದ ಡಾಟ್ ಕಾಂ.
ಕನ್ನಡಸಾಹಿತ್ಯ ಡಾಟ್ ಕಾಮ್ ಕಳೆದ ಎಂಟು ವರ್ಷ ಗಳಿಂದ ಶ್ರೇಷ್ಠ ಗುಣಮಟ್ಟದ ಕನ್ನಡ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತ ಬಂದಿದೆ. ಪ್ರಾದೇಶಿಕತೆಯೊಡನೆ ತಂತ್ರಜ್ಞಾನವನ್ನು ಬೆರೆಸುವಲ್ಲಿ ತನ್ನದೇ ಆದ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆದಿದೆ. ಅದರ ನಂತರದ ಹೆಜ್ಜೆಯಾಗಿ ಮೂಡಿ ಬಂದಿರುವ ಸಂವಾದ ಡಾಟ್ ಕಾಂ ಭವಿಷ್ಯದಲ್ಲಿ ಯಾವ ರೂಪ ಪಡೆದುಕೊಳ್ಳಬಹುದೆಂಬುದರ ಬಗ್ಗೆ ಸ್ವತಃ ನಾವೂ ಕುತೂಹಲಿಗಳಾಗಿದ್ದೇವೆ.
ಸಂವಾದದ ಆಲೋಚನೆ ನಮ್ಮೊಳಗೆ ಬಹಳ ಹಿಂದಿನಿಂದ ಇತ್ತಾದರೂ ಅದಕ್ಕೊಂದು ವೇದಿಕೆ ಸಿಕ್ಕಿದ್ದು ಆರು ತಿಂಗಳ ಹಿಂದೆ. ಗುರು ಪ್ರಸಾದ್ ಅವರ ಮಠ ಚಲನ ಚಿತ್ರ ನೋಡಿದ ಸಂದರ್ಭದಲ್ಲಿ. ನಮ್ಮೆಲ್ಲರಿಗೂ ಇದೊಂದು ವಿಶಿಷ್ಠ ಬಗೆಯ ಚಿತ್ರ ಮತ್ತು ನಮ್ಮ ಕಮರ್ಶಿಯಲ್ ಮತ್ತು ಕ್ಲಾಸಿಕಲ್ ಸಿನೆಮಾದ ಭಾಷೆಯನ್ನು ಮುರಿದು, ಸ್ವಲ್ಪ ಮಟ್ಟಿಗಾದರೂ ಅವೆರಡರಿಂದ ಆಚೆ ನಿಂತ ಚಿತ್ರವಾಗಿ ಕಾಣಿಸಿತು. ಇಂತಹ ಸಿನೆಮಾ ವನ್ನು ನಮ್ಮ ಪತ್ರಿಕಾ ವಿಮರ್ಶಕರೂ ಗುರುತಿಸದೆ ಹೋದದ್ದು ಆಶ್ಚರ್ಯದ ವಿಷಯ. ಈ ಸಿನೆಮಾವನ್ನು ಸಹೃದಯ ಮಿತ್ರರಿಗೆ ಪ್ರದರ್ಶಿಸಿ , ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಆಗಸ್ಟ್‌ನಲ್ಲಿ ಮಠ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಸಾಕಷ್ಟು ಮಿತ್ರರು ಮಠ ಚಿತ್ರ ಪ್ರದರ್ಶನದ ಬಗ್ಗೆ ಅಷ್ಟೊಂದು ಒಲವು ತೋರಿರಲಿಲ್ಲ, ಬಹುಷ್ಃ ಸಿನೆಮಾ ನೋಡದೆ ಅವರು ಈ ನಿಲುವು ತೆಗೆದುಕೊಂಡಿದ್ದಿರಬಹುದು. ಯಾವತ್ತೂ ಗುಣಮಟ್ಟದ ಜೊತೆಗೆ ರಾಜಿ ಮಾಡಿಕೊಳ್ಳದ ಕನ್ನಡಸಾಹಿತ್ಯ ಡಾಟ್ ಕಾಮ್ ಮಠ ಚಿತ್ರ ಶ್ರೇಷ್ಠ ಚಿತ್ರಗಳ ಸಾಲಿಗೆ ನಿಲ್ಲದಿದ್ದರೂ ಒಂದು ವಿಭಿನ್ನ ಪ್ರಯೋಗ ಎಂಬುದನ್ನು ಗುರುತಿಸಿದೆ ಮತ್ತು ಪ್ರೋತ್ಸಾಹಿಸಿದೆ. ಜೊತೆಗೆ ಮಠ ಚಿತ್ರದ ಮಗ್ಗೆ ವಿಮರ್ಶಾ ಸ್ಪರ್ಧೆಯೂ ಇತ್ತು. ವಿಮರ್ಶಾ ಸ್ಪರ್ಧೆಗೆ ಪ್ರತಿಕ್ರಿಯೆ ನೀರಸವಾಗಿದ್ದರೂ ಬಂದ ಬರಹಗಳು ಒಳಗೊಂಡಿದ್ದ ಸೂಕ್ಷ್ಮ ಒಳ ನೋಟಗಳು ನಮಗೆ ಹೆಮ್ಮೆ ತರುವಂತದ್ದು.
ಈ ಸ್ಪರ್ಧೆಯಲ್ಲಿ ವಿಜೇತರಾದ ಅವಿನಾಶ್ ಮತ್ತು ಟೀನಾ ಶಶಿಕಾಂತ್ ಅವರ ಬರಹಗಳನ್ನು ಪ್ರಕಟಿಸಲಾಗಿದೆ ಮತ್ತು ಇಬ್ಬರಿಗೂ ಕನ್ನಡ ಸಾಹಿತ್ಯ ಡಾಟ್ ಕಾಮ್ ಪರವಾಗಿ ಅಭಿನಂದನೆ ಸಲ್ಲುತ್ತವೆ.
ಇದೀಗ ಇನ್ನೂ ಬಹು ಮುಖ್ಯವಾದ ಯೋಜನೆಯೊಂದು ಸಂವಾದ ಡಾಟ್ ಕಾಂ ಕಾರ್ಯ ರೂಪಕ್ಕೆ ತರುತ್ತಿದೆ. ಭಾರತದ ಪರ್ಯಾಯ ಸಿನೆಮಾಗಳ ಇತೀಹಾಸದಲ್ಲಿ ಕನ್ನಡಕ್ಕೆ ಅದರದ್ದೇ ಆದ ಸ್ಥಾನ ಮಾನ ಗಳಿವೆ. ಇದನ್ನು ತಂದುಕೊಡುವಲ್ಲಿ ಗಿರಿಶ್ ಕಾಸರವಳ್ಳಿಯವರ ಪಾತ್ರ ಹಿರಿದು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನೆಮಾಗಳಿಗೆ ಗೌರವ ತಂದುಕೊಟ್ಟ ಕಾಸರವಳ್ಳಿಯವರಿಗೆ ಕನ್ನಡದಲ್ಲಿ ಅಂತಹ ಮನ್ನಣೆ ಸಿಗದಿರುವುದು ಖೇದಕರ. ಅಂದರೆ, ಪ್ರಶಸ್ತಿಗಳ ರೂಪದಲ್ಲಿ ಅಪಾರವಾದ ಮನ್ನಣೆ ಸಿಕ್ಕಿದ್ದರೂ, ನಮ್ಮ ಯುವ ಜನಾಂಗದ ಹೊಸ ಪೀಳಿಗೆ ಅವರನ್ನು ಸರಿಯಾದ, ಸೂಕ್ತವಾದ ರೀತಿಯಲ್ಲಿ ಗೌರವಿಸುತ್ತಿಲ್ಲವೇನೋ- ಎನ್ನುವ ಶಂಕೆ ಏನಾದರೂ ಇದ್ದರೆ, ಅದು ಕಾಸರವಳ್ಳಿಯವರ ತಪ್ಪಲ್ಲ. ನವಪೀಳಿಗೆಯೊಂದರ ದೌರ್ಬಲ್ಯವೇ ಸರಿ.ಕಾಸರವಳ್ಳಿ ಘಟಶ್ರಾದ್ಧದಿಂದ ಗುಲಾಬಿ ಟಾಕೀಸ ನವರೆಗೆ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಿದ್ದಾರೆ. ಅವರಲ್ಲಿದೆ ಕನ್ನಡದ ಶ್ರೇಷ್ಠ ಸಿನೆಮಾಗಳ ಇತೀಹಾಸವನ್ನು ನೆನೆಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಇಂತಹ ಪ್ರತಿಭೆಗೆ ನಮಿಸುತ್ತ ಅವರ ಗೌರವಾರ್ಥವಾಗಿ ಇದೇ ಬರುವ ನವೆಂಬರ್ ೨೨ ಮತ್ತು ೨೩ ರಂದು "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ" ಎನ್ನುವ ವಿಷಯದ ಕುರಿತು ಎರಡು ದಿನದ ಶಿಬಿರ ನಡೆಯಲಿದೆ. ಕನ್ನಡಲ್ಲಿ ಅಥವಾ ಭಾರತೀಯ ಸಿನೆಮಾದ ಯಾವುದೇ ಎರಡು ಶ್ರೇಷ್ಠ ಚಿತ್ರಗಳ ಪ್ರದರ್ಶನದ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆಯೂ ಇರುತ್ತದೆ. ಸ್ಥಳ ಇನ್ನೂ ನಿಗದಿಯಾಗಿಲ್ಲ. ಭಾಗವಹಿಸುವವರು ಇನ್ನೂರು ರೂಪಾಯಿಯ ನೊಂದಣಾ ಶುಲ್ಕ ಭರಿಸಬೆಕಾಗುತ್ತದೆ. ಅದಕ್ಕೆ ಸಂಬಂಧಪಟ್ಟ ನೋಂದಾವಣೆ ಫಾರಮ್‍ಗಾಗಿ ಇಲ್ಲಿ ಕ್ಲಿಕ್ ಮಾಡಿ .
ಸಂವಾದ ತಂಡದ ಪರವಾಗಿ
ಎಂ ಕಿರಣ್