ದೃಶ್ಯಕ್ಕೊಂದು ನುಡಿಗಟ್ಟು

ಕ್ರಿಯಾ ಸಮಿತಿಯಿಂದ ಕೆಲಸಕ್ಕೆ ಬಾರದ ನಿರ್ಣಯಗಳು

ಕೆಲವು ದಿನಗಳ ಹಿಂದೆ ನಡೆದ ನಿರ್ದೇಶಕರ, ತಂತ್ರಜ್ಞರ ಕ್ರಿಯಾ ಸಮಿತಿ ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವರದಿ ಬಂದಿದೆ:

೧. ಚಿತ್ರ ನಿರ್ದೇಶಕನಾಗುವ ಅರ್ಹತೆ ಪಡೆಯಲು ಕನಿಷ್ಟ ೫ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರಬೇಕು.
೨. ೪೫ ದಿನಗಳೊಳಗೆ ಚಿತ್ರೀಕರಣ ಮುಗಿಸಬೇಕು
೩. ಸೆಟ್ ನಲ್ಲಿ ನಿರ್ದೇಶಕರು ಮೊಬೈಲ್ ಬಳಸಬಾರದು.
೪. ತಮ್ಮ ಭತ್ಯೆಗಳನ್ನು ನಿರ್ದೇಶಕರೇ ಭರಿಸಬೇಕು


೫. ನಿಗದಿ ಮಾಡಿದಷ್ಟು ಸಂಭಾವನೆಯನ್ನು ನಿರ್ಮಾಪಕರು ನಿರ್ದೇಶಕರಿಗೆ ಕೊಡಬೇಕು
೬. ಸದಸ್ಯತ್ವ ಕಡ್ಡಾಯ
೭. ಹೊರಗಿನಿಂದ ಕಲಾವಿದ, ತಂತ್ರಜ್ಞರನು ಕರೆಸದೆ ಸ್ಥಳಿಯರಿಗೆ ಅವಕಾಶ ನೀಡಬೇಕು.
೮. ಸಿನೆಮಾ ಒಂದಕ್ಕೆ ೫೨ ಸಾವಿರ ಅಡಿಗಿಂತ ಹೆಚ್ಚಾಗಿ ರೀಲ್ ಬಳಸಬಾರದು


ಹೇಳಿ ಕೇಳಿ ಸಿನೆಮಾ ಒಂದು ಸೃಜನಶೀಲ ಮಾಧ್ಯಮ. ಇಡೀ ಚಿತ್ರ ನಿರ್ದೇಶಕನ ಕ್ರೀಯಾಶೀಲತೆಯ ಮೇಲೆ ನಿಂತಿರುತ್ತದೆ. ಮೇಲೆ ಹೇಳಿದ ತಿಕ್ಕಲು ನಿರ್ಣಯಗಳಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಲಾಭವಿದ್ದಂತಿಲ್ಲ.

ನಿರ್ದೇಶಕನಾದವನು ೫ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಬೇಕೆಂದರೆ , ಚಿತ್ರರಂಗಕ್ಕೆ ಬಂದ ೮-೧೦ ವರ್ಷ ಅದರಲ್ಲೇ ಕಳೆದು ಹೋಗುತ್ತದೆ. ಅಷ್ಟಕ್ಕೂ ನಿರ್ಮಾಪಕನಿಗೆ ನಿರ್ದೇಶಕನ ಮೇಲೆ ವಿಶ್ವಾಸವಿದ್ದರೆ, ಈ ಅನುಭವವನ್ನ ಕಟ್ಟಿಕೊಂಡು ಯಾರಿಗೇನಾಗಬೇಕು.

ಇಂದಿಗೂ ಕನ್ನಡದ ಕ್ಲಾಸಿಕ್ ಎಂದೆನಿಸಿಕೊಂಡಿರುವ ಘಟಶ್ರಾದ್ಧ ಮಾಡಿದ ಗಿರೀಶ್ ಕಾಸರವಳ್ಳಿಗೆ ಐದು ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ ಅನುಭವವೇನೂ ಇರಲಿಲ್ಲ.

ನಿರ್ದೇಶಕರ ಸಂಘದ ಸದಸ್ಯತ್ವ ಕಡ್ಡಾಯ ಮಾಡುವ ಮೊದಲು ಆ ಸಂಘ ಕನ್ನಡ ಚಿತ್ರರಂಗಕ್ಕೆ ಏನು ಕೊಡುಗೆ ನೀಡುತ್ತಿದೆ ಎಂದು ಆಲೋಚಿಸಬೇಕು. ಸುಮ್ಮನೇ ವರ್ಷಕ್ಕೊಂದು ಸಭೆ ಸೇರಿ ಭಾಷಣ ಬಿಗಿದು ಬಿಟ್ಟರೆ ಎನೂ ಆಗುವುದಿಲ್ಲ.

ಇನ್ನು ಮೊಬೈಲ್ ಬಳಸಬಾರದು, ೪೫ ಅಡಿಗಿಂತ ಹೆಚ್ಚು ರೀಲು ಸುತ್ತಬಾರದು, ಹೊರಗಿನ ತಂತ್ರಜ್ಞರನ್ನು ಕರೆಸಬಾರದು ಎಂದೆನ್ನುವುದೆಲ್ಲ ಬಾಲಿಶ ನಿರ್ಣಯಗಳು.

ಇಂತಹ ಕೆಲಸಕ್ಕೆ ಬಾರದ ರೂಲ್ಸು ಮಾಡುವುದು ಬಿಟ್ಟು ನಿರ್ದೇಶಕ, ನಿರ್ಮಾಪಕರ ಸಂಘ ಈ ಕೆಳಗಿನ ಸಲಹೆಗಳ ಮೇಲೆ ಗಮನ ಹರಿಸಿದರೆ, ಏನಾದರೂ ಉಪಯೋಗವಾದೀತು.

೧. ನಟರಿಗೆ ದುಬಾರಿ ಸಂಭಾವನೆ ನೀಡದಿರುವುದು.
೨. ಹೊಸ ನಿರ್ದೇಶಕರನ್ನ ಗುರುತಿಸಿ ಅವರಿಗೆ ಗೌರವ ಸದಸ್ಯತ್ವ ನೀಡುವುದು.
೩. ಪ್ರತಿಭಾವಂತರಿಗೆ ಚಿತ್ರ ಕಥೆ, ಛಾಯಾಗ್ರಹಣ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಪರಿಣಿತಿ ಒದಗಿಸುವುದು.
೪. ಮೂರು ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಕನ್ನಡ ಚಿತ್ರರಗಳ ಗುಣಮಟ್ಟದ ಕುರಿತು ಚರ್ಚಿಸಿ, ಲೋಪ ದೋಷಗಳನ್ನ ಸರಿ ಪಡಿಸಿಕೊಳ್ಳುವುದು
೫. ಅನಗತ್ಯವಾಗಿ ವಿದೇಶಿ ಚಿತ್ರೀಕರಣ, ಕಾಸ್ಟ್ಯೂಮ್ ಅಂತ ಹಣ ವ್ಯಯಿಸದೆ, ಕಥೆಗೆ, ಚಿತ್ರ ಕಥೆಗೆ ಹೆಚ್ಚಿನ ಮಹತ್ವ ಕೊಡುವುದು.
೬. ರಾಜ್ಯಾದ್ಯಾಂತ ಜನರೊಡನೆ ಸಂವಾದ ನಡೆಸಿ ಚಿತ್ರಗಳ ಗುಣಮಟ್ಟದ ಬೆಳವಣಿಗೆಗೆ ಶ್ರಮಿಸುವುದು.

ಸಂವಾದ ತಂಡ

ಡಿಸೆಂಬರ್ ೪, ೨೦೦೯, ಶುಕ್ರವಾರ


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು