ದೃಶ್ಯಕ್ಕೊಂದು ನುಡಿಗಟ್ಟು

ಕಳ್ಳರ ಸಂತೆಯಲ್ಲಿ ಒಂದಾದ ಅನಂತಮೂರ್ತಿ-ಭೈರಪ್ಪ

ಸೂಕ್ಷ್ಮ ಸಂವೇದನೆಯ ಕ್ರಾಂತಿಕಾರಿ ಸೋಮು ವ್ಯವಸ್ಥೆಯ ಬಲಿಪಶುವಾಗಿ ಕಳ್ಳ ಸೋಮುವಾಗಿ ಭ್ರಷ್ಟ ಸರ್ಕಾರವನ್ನು ಉರುಳಿಸುವುದು ಕಳ್ಳರ ಸಂತೆಯ ಒಟ್ಟಾರೆ ಕತೆ. ಈ ಸಂತೆಯಲ್ಲಿ ಚಿತ್ರ ವಿಚಿತ್ರ ಪಾತ್ರಗಳು ನಿಮ್ಮನ್ನೆದುರುಗೊಳ್ಳುತ್ತವೆ. ಹಲವಾರು ಜ್ವಲಂತ ಸಮಸ್ಯೆ- ಕನ್ನಡ ಇಂಗ್ಲೀಷ ತಿಕ್ಕಾಟ, ಭ್ರಷ್ಟಾಚಾರ, ಆಟೋ ಚಾಲಕರ , ಬೀದಿ ವೈಶ್ಯೆಯರ ಸಂಕಟ, ರೈತರ ಸಮಸ್ಯೆಗಳು ಹೀಗೆ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನೆಲ್ಲಾ ಒಂದೆಡೆ ಕೂಡಿ ಹಾಕಿ ನಿರ್ದೇಶಕರು ವಿಭಿನ್ನ ರುಚಿಯ ಚಿತ್ರಾನ್ನವನ್ನ ಉಣಬಡಿಸಿದ್ದಾರೆ.

ಕಥೆ ವಿಭಿನ್ನವಾಗಿಯೇ ಇದೆ. ಕೊನೆಯ ಅರ್ಧಗಂಟೆ ಏಕತಾನತೆಯಿಂದ ಬಳಲಿದರೂ ಬೋರು ಹೊಡೆಸುವುದಿಲ್ಲ. ಚಿತ್ರ ವಿಡಂಬನಾತ್ಮಕವಾಗಿ ನಿರೂಪಿಸಿರುವುದು ಇದಕ್ಕೆ ಕಾರಣ. ಕಥೆಯಲ್ಲಿ-ಚಿತ್ರಕಥೆಯಲ್ಲಿರುವ ವಿಡಂಬನೆ ದೃಶ್ಯಗಳಲ್ಲಿ ಅಭಿವ್ಯಕ್ತಿಯಾಗದಿರುವುದು ನಿರ್ದೇಶಕಿಯ ಸೋಲು. ಸಂಭಾಷಣೆ ಅಲ್ಲಲ್ಲಿ ಪುಸ್ತಕೀಯವೆನಿಸಿದರೂ ಕೆಲವು ಕಡೆ ಹರಿತವಾಗಿದೆ. ಸಂಕಲನ, ಸಂಗೀತ ಎರಡೂ ಮುಗ್ಗರಿಸಿದೆ.

ಸಾಮಾಜಿಕ ಬದುಕಿನಲ್ಲಿ ಸೂಕ್ಷ್ಮ ಸಂವೇದನೆಯ ಯುವಕನ ಪರಿಪಾಟಲುಗಳನ್ನು ಹೇಳಲು ಹೊರಟ ಚಿತ್ರದಲ್ಲೇ ಸೂಕ್ಷ್ಮತೆಯ ಕೊರತೆಯಿದೆ. ಚಿತ್ರದಲ್ಲಿ ಬರುವ ಅನಂತಮೂರ್ತಿ ಮತ್ತು ಭೈರಪ್ಪನವರ ನಕಲಿ ಪಾತ್ರಗಳನ್ನು ತೀರ ಸರಳೀಕರಿಸಿ ನೋಡಲಾಗಿದೆ. ಅದು ನಿರ್ದೇಶಕರ ಅಲ್ಪಮತಿಯ ಫಲ. ವಾಸ್ತವದಲ್ಲಿ ಅನಂತಮೂರ್ತಿ-ಭೈರಪ್ಪ ಒಂದೇ ವೇದಿಕೆ ಹಂಚಿಕೊಂಡು ತಮ್ಮ ಚಿಂತನೆಯ ದೋಷಗಳನ್ನು ಒಪ್ಪಿಕೊಳ್ಳುವುದು ಎಂದಿಗೂ ಸಾಧ್ಯವಿರದಿದ್ದರೂ ಅಗ್ನಿ ಶ್ರೀಧರ್ ಅದನ್ನು ತಮ್ಮ ಸಿನೆಮಾದಲ್ಲಿ ಸಾಧ್ಯ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ನಾಯಕನ ವಿಚಾರಧಾರೆಯನ್ನು ಈ ಇಬ್ಬರು ಮಹನೀಯರು ಒಪ್ಪಿಕೊಳ್ಳುವಂತೆ ಮಾಡಿದ್ದು ಶ್ರೀಧರ್ ರ ಇನ್ನೊಂದು ಸಾಧನೆ!!

ಈ ಎಡವಟ್ಟುಗಳ ನಡುವೆಯೂ ಚಿತ್ರ ನೋಡುವಂತಿದೆ. ಎದ್ದೇಳೊ ಮಂಜುನಾಥ, ಮನಸಾರೆ, ಜಂಗ್ಲಿಯ ನಂತರ ಸಂಭಾಷಣೆಯನ್ನೇ ನೆಚ್ಚಿಕೊಂಡ ಇನ್ನೊಂದು ಚಿತ್ರ ಕಳ್ಳರ ಸಂತೆ. ನಿರ್ದೇಶಕರು ದೃಶ್ಯ ರೂಪಕಕ್ಕಿಂತ ಆಕರ್ಷಕ ಸಂಭಾಷಣೆಯತ್ತ ಹೆಚ್ಚು ವಾಲುತ್ತಿರುವುದು ಗಮನಿಸಬೇಕಾದ ಬದಲಾವಣೆ.


"ಧೀರ್ಘ ಧಾರಾವಾಹಿ ನೋಡಿದಂತಾಯಿತು", ಸೆಕೆಂಡ್ ಶೋ ಸಿನೆಮಾ ಮುಗಿಸಿ ಮನೆಗೆ ಮರಳುವಾಗ ಆಟೋ ಡ್ರೈವರ್ ಹೇಳಿದ ಈ ಮಾತು ಚಿತ್ರದ ಮೇಲಿನ ಒನ್ ಲೈನ್ ವಿಶ್ಲೇಷಣೆ.

೧೯-೧೨-೦೯


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು