ಕಳೆದ ಬಾ

ರಿಯ ರಾಜ್ಯ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದ ಕೇಸರಿ ಹರವೂ ಕನ್ನಡದ ಪ್ರಮುಖ ಸೃಜನಶೀಲ ನಿರ್ದೇಶಕರಲ್ಲೊಬ್ಬರು. ಸಿನಿಮಾ ಅಲ್ಲದೆ ಪರಿಸರ ಆಂದೋಲನದಲ್ಲೂ ಭಾಗಿಯಾಗಿರುವ ಹರವೂ, ದಶಕದ ಹಿಂದೆ ನಿರ್ದೇಶಿಸಿದ ‘ಭೂಮಿಗೀತ’ ಚಿತ್ರ ದೇಶೀಯ ಮಾತ್ರವಲ್ಲದೆ, ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಬಹುಮನ್ನಣೆ ಗಳಿಸಿತು. ಇದೀಗ ರೈತರ ಸಮಸ್ಯೆ ಕುರಿತ ಕಥಾವಸ್ತುವಿನ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ ಅವರು. ಈ ಸಂದರ್ಭದಲ್ಲಿ ವೀರನ್ನಾರಾಯಣ ಅವರೊಂದಿಗೆ ನಡೆಸಿದ ಮಾತುಕಥೆಯ ಆಯ್ದ ಭಾಗ ಇಲ್ಲಿದೆ.
ಕನ್ನಡ ಕಲಾತ್ಮಕ ಚಿತ್ರಗಳು ಆರ್ಥಿಕವಾಗಿ ಕೂಡಾ ಲಾಭದಾಯಕವೇ?
ಒಳ್ಳೆಯ ಕಲಾತ್ಮಕ ಚಿತ್ರಗಳು ಹೆಸರನ್ನೂ ಮಾಡಬಹುದು; ಹಣವನ್ನೂ ಮಾಡಬಹುದು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ಚಿತ್ರೋತ್ಸವಗಳು ನಡೆಯುತ್ತವೆ. ಸ್ಪರ್ಧಾತ್ಮಕ ಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಕ್ಕೆ ಒಳ್ಳೆಯ ನಗದು ಪ್ರಶಸ್ತಿ ಇರುತ್ತದೆ. ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ಬಹುಮಾನ ಮೊತ್ತ ಡಾಲರ್ ಲೆಕ್ಕದಲ್ಲಿ ಇರುವುದರಿಂದ ಅದು ನಮ್ಮ ಚಿತ್ರಗಳಿಗೆ ಒಳ್ಳೆಯ ಹಣವೇ. ಇನ್ನು ಸ್ಪರ್ಧಾತ್ಮಕವಲ್ಲದ ಚಿತ್ರೋತ್ಸವಗಳಲ್ಲಿ ಸದಭಿರುಚಿಯುಳ್ಳ ವಿತರಕರು ಬಂದಿರುತ್ತಾರೆ. ಚಿತ್ರ ಹಿಡಿಸಿದರೆ ತಮ್ಮ ರಾಷ್ಟ್ರಗಳ ವಿತರಣೆಯ ಹಕ್ಕು ಪಡೆಯುತ್ತಾರೆ. ಹೀಗಾಗಿ ಉತ್ತಮ ಚಿತ್ರಕ್ಕೆ ಮಾರುಕಟ್ಟೆ ಇದ್ದೇ ಇದೆ. ಇನ್ನು ಕರ್ನಾಟಕದಲ್ಲಂತೂ ಕಲಾತ್ಮಕ ಚಿತ್ರಗಳಿಗೆ ತುಂಬಾ ಪ್ರೋತ್ಸಾಹ ಇದೆ. ಉತ್ತಮ ಚಿತ್ರಕ್ಕೆ ಹತ್ತು ಲಕ್ಷ ರೂ. ಸಹಾಯಧನ ಕೊಡಲಾಗುತ್ತದೆ. ಯಾವುದೇ ಚಿತ್ರ ‘ಸ್ವರ್ಣ ಕಮಲ’ ಪಡೆದರೆ ೨೫ ಲಕ್ಷ ರೂ. ಬಹುಮಾನ ಇದೆ. ಇನ್ನು ಯಾವುದೇ ಕೆಟಗರಿಯಲ್ಲಿ ಪ್ರಶಸ್ತಿ ಗಳಿಸಿದರೂ ಐದು ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಟೆಲಿವಿಷನ್ ಹಕ್ಕುಗಳಿಗೇ ಹತ್ತರಿಂದ ಹದಿನೈದು ಲಕ್ಷ ರೂ. ಇದೆ. ಹೀಗಾಗಿ ಕಲಾತ್ಮಕ ಚಿತ್ರಗಳು ನಷ್ಟ ಅನುಭವಿಸಬೇಕಾದ ಸಂಭವ ಇಲ್ಲ.
ಕನ್ನಡದ ಕೆಲವು ಕಲಾತ್ಮಕ ಚಿತ್ರಗಳು ತೀರಾ ಸಪ್ಪೆಯಾಗಿ, ನಿಧಾನಗತಿಯಲ್ಲಿರುತ್ತವೆ. ಕಲಾತ್ಮಕ ಚಿತ್ರಗಳೆಂದ ಮಾತ್ರಕ್ಕೆ ನಿಧಾನಗತಿಯಲ್ಲೇ ಇರಬೇಕೇ?
ತನ್ನ ಕಥಾವಸ್ತುವಿನ ಅಗತ್ಯಕ್ಕೆ ತಕ್ಕಂತೆ ಚಿತ್ರ ನಿರ್ಮಾತೃ (ನಿರ್ದೇಶಕ) ನಿಧಾನಗತಿಯಲ್ಲಿ ಸಿನಿಮಾ ಹೇಳಬಹುದು. ಆದರೆ ಬೇರೊಂದು ಚಿತ್ರದಲ್ಲಿ ನಿಧಾನಗತಿ ಇಟ್ಟಿದ್ದಾರೆ ಎಂದು ಅನಗತ್ಯವಾಗಿ ತಾವೂ ನಿಧಾನಗತಿಯ ಸಿನಿಮಾ ತೆಗೆದ ಉದಾಹರಣೆಗಳೂ ಕನ್ನಡದಲ್ಲಿ ಇವೆ. ಎಲ್ಲಾ ಕಲಾತ್ಮಕ ಚಿತ್ರಗಳೂ ಹೀಗಿರಬೇಕಿಲ್ಲ. ಸಾಕಷ್ಟು ‘ಆಕ್ಷನ್’ ಇರುವ ಅಕಿರಾ ಕುರೊಸಾವ ಚಿತ್ರಗಳು ಸಾಹಸಮಯವಾಗಿ, ತೀವ್ರಗತಿಯಲ್ಲಿದ್ದೂ ಕಲಾತ್ಮಕ ಎನಿಸಿವೆ. ಇಂದು ನಿಧಾನಗತಿ, ತೀವ್ರಗತಿ ಎಂಬ ಪರಿಕಲ್ಪನೆ ಹೋಗಿಬಿಟ್ಟಿದೆ. ವ್ಯಕ್ತಿಯೊಬ್ಬನ ಆಂತರಿಕ ತುಮುಲಗಳನ್ನು ದೃಶ್ಯದಲ್ಲಿ ಕಟ್ಟಿಕೊಡುವುದು ಉತ್ತಮ ಚಿತ್ರ ಎನಿಸುತ್ತದೆ. ನಮ್ಮಲ್ಲಿ ಸಿನಿಮಾ ಭಾಷೆಯನ್ನು ಅರ್ಥ ಮಾಡಿಕೊಂಡಿರುವವರು ತುಂಬಾ ಕಡಿಮೆ. ಕೇವಲ ಸಂಭಾಷಣೆ ಆಧಾರಿತ ಸಿನಿಮಾಗಳೇ ಹೆಚ್ಚು. ಅವುಗಳನ್ನು ನೋಡುವ ಅಗತ್ಯವೇ ಇರುವುದಿಲ್ಲ. ಕಣ್ಣು ಮುಚ್ಚಿಕೊಂಡು ಕೇವಲ ಸಂಭಾಷಣೆ ಕೇಳಿದರೆ ಸಾಕು. ಆದರೆ ಶಬ್ದವು ದೃಶ್ಯಕ್ಕೆ ಪೂರಕವಾಗಿರಬೇಕೇ ವಿನಾ ಶಬ್ದವೇ ಚಿತ್ರ ಆಗಬಾರದು.
‘ಜ್ಯೂರಿ’ಗಳ ದೃಷ್ಟಿಯಿಂದ ನಿರ್ಮಿಸುವ ಕಲಾತ್ಮಕ ಸಿನಿಮಾಗಳ ಬಗ್ಗೆ ಏನು ಹೇಳುತ್ತೀರಿ?
‘ಜ್ಯೂರಿ’ಗಾಗಿಯೇ ಸಿನಿಮಾ ತೆಗೆಯುವುದು ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ‘ಜ್ಯೂರಿ’ ಕೂಡಾ ಅಂತಿಮವಾಗಿ ಒಬ್ಬ ಪ್ರೇಕ್ಷಕನೇ ತಾನೆ. ಯಾವುದೇ ಜ್ಯೂರಿ ಕೂಡಾ ಪ್ರೇಕ್ಷಕನಾಗಿಯೇ ಸಿನಿಮಾ ನೋಡುತ್ತಾನೆ. ಅಲ್ಲದೆ ಆತ ಚಿತ್ರ ಎಷ್ಟು ‘ಸಿನಿಮಾಟಿಕ್’ ಆಗಿದೆ ಎಂದು ಪ್ರತಿ ಹಂತದಲ್ಲೂ ನೋಡುತ್ತಾನೆ. ಆದರೂ ಕೆಲವು ನಿರ್ದೇಶಕರು ‘ಅವಾರ್ಡ್’ ಗಮನದಲ್ಲಿಟ್ಟುಕೊಂಡೇ ಚಿತ್ರ ನಿರ್ಮಿಸಬಹುದು. ಹಾಗೆ ಮಾಡುವವರು ‘ಸಿನಿಮಾ ಮೇಕರ‍್ಸ್’ ಅಲ್ಲ, ‘ಸಿನಿಮಾ ಮಾಕರ‍್ಸ್’. ಆದರೆ ಪ್ರತಿಭಾವಂತ ನಿರ್ದೇಶಕರು ಹಾಗೆ ಮಾಡುವುದಿಲ್ಲ.
ಸಿನಿಮಾ ಮಾಧ್ಯಮವನ್ನು ನೀವು ನೋಡುವ ಬಗೆ ಹೇಗೆ?
ನಿಜವಾದ ನಿರ್ದೇಶಕನಿಗೆ ಸಿನಿಮಾ ಒಂದು ವೈಯಕ್ತಿಕ ಅನ್ವೇಷಣೆ. ಕಥಾ ವಸ್ತುವೊಂದನ್ನು ತಾನು ಹೇಗೆ ನೋಡುತ್ತೇನೆ ಎಂಬ ಬಗೆ ಅದು. ಹಿಂದೆ ಬುದ್ಧದೇವ ದಾಸಗುಪ್ತ ಅವರೂ ಕೂಡಾ ಇದೇ ಮಾತು ಹೇಳಿದ್ದರು. ಅದರ ಅರ್ಥ. ಅದು ನಿರ್ದೇಶಕನ ಅನ್ವೇಷಣೆಯ, ಆತನ ಅರ್ಥವಂತಿಕೆ ಹುಡುಕಾಟದ ಚಿತ್ರ ಎಂದು; ಜ್ಯೂರಿಗಾಗಿ ಮಾಡುವುದಲ್ಲ. ಆದರೆ ಆಗ ಆ ಮಾತು ತುಂಬಾ ವಿವಾದ ಸೃಷ್ಟಿಸಿತ್ತು. ‘ಹಾಗಿದ್ದರೆ ಅವರು ಪ್ರೇಕ್ಷಕರಿಗಾಗಿ ಸಿನಿಮಾ ತೆಗೆಯೋಲ್ಲ; ಅವರೊಬ್ಬರೇ ಸಿನಿಮಾ ನೋಡಲಿ’ ಎಂಬಂಥ ಮಾತುಗಳು ಬಂದಿದ್ದವು. ಆದರೆ ‘ನಿರ್ದೇಶಕನ ಒಂದು ವೈಯಕ್ತಿಕ ಅನುಭವ ಎಲ್ಲರ ಅನುಭವವೂ ಆಗುವುದಾದರೆ...’ ಎಂಬ ಶೈಲಿ ಅದು.
ಒಂದು ಚಿತ್ರವನ್ನು ಹಲವು ಬಗೆಯಲ್ಲಿ ಹೇಳಬಹುದು. ಕಥಾವಸ್ತುವಿನ ಒಳಗಿದ್ದುಕೊಂಡೇ ಅದರ ಜೊತೆಗೇ ಚಿತ್ರ ಪ್ರಸ್ತುತಪಡಿಸುವ ಬಗೆ ಒಂದು ರೀತಿ. ಮತ್ತೊಂದು ನಿರ್ದೇಶಕ ಕಥಾವಸ್ತುವಿನ ಹೊರಗೆ ನಿಂತು ತಾನು ಅದನ್ನು ಹೇಗೆ ನೋಡುತ್ತೇನೆ ಎಂದು ಅನ್ವೇಷಿಸುತ್ತಾ ಸಾಗುವ ಬಗೆ. ನನ್ನ ಮೊದಲ ಚಿತ್ರ ಭೂಮಿಗೀತವನ್ನು ಮೊದಲನೇ ಶೈಲಿಯಲ್ಲಿ ನಿರ್ಮಿಸಿದ್ದೇನೆ. ಆದರೆ ೨ನೇ ಚಿತ್ರದಲ್ಲಿ ಕಥಾವಸ್ತುವಿನ ಹೊರಗಿದ್ದು ನೋಡುವ ಶೈಲಿಯಲ್ಲಿ ನಿರ್ದೇಶಿಸಲು ಬಯಸಿದ್ದೇನೆ. ಗಿರೀಶ್ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಸು’ ಚಿತ್ರದಲ್ಲಿಯೂ ನೀವು ಇಂಥ ಶೈಲಿ ಕಾಣಬಹುದು. ಇಡೀ ಕಥಾವಸ್ತುವಿನ ಬಗ್ಗೆ ಗಿರೀಶ್ ಅವರ ದೃಷ್ಟಿಕೋನವನ್ನು ಕಾಣಬಹುದು. ಪ್ರೇಕ್ಷಕರು ಅವರೊಂದಿಗೆ ಚರ್ಚೆಗೆ ಇಳಿಯಬಹುದು. ಹಾಗೇ ಕಾರ್ನಾಡರ ‘ಕಾಡು’ ಕೂಡಾ ಇಂಥದೇ ಬಗೆಯ ಸಿನಿಮಾ.
ಕೇಂದ್ರದಲ್ಲಿ ಚಿತ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹೇಗೆ?
ಭಾರತ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ನಮೂದಿಸಲಾಗಿರುವ ಅಧಿಕೃತ ಭಾಷೆಗಳಲ್ಲದೆ, ತುಳು, ಭೋಜಪುರಿಯಂತಹ ಉಪಭಾಷೆಗಳ ಚಿತ್ರಗಳೂ ಜೊತೆಗೆ ಭಾರತೀಯ ಇಂಗ್ಲಿಷ್ ಚಿತ್ರಗಳೂ ಪ್ರಶಸ್ತಿಗೆ ಸ್ಪರ್ಧಿಸಬಹುದು. ಯಾವ ‘ಕೆಟಗರಿ’ಗಾದರೂ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು. ಕಳೆದ ಬಾರಿ ೯೬ ಸಿನಿಮಾ ಸ್ಪರ್ಧೆಗೆ ಬಂದಿದ್ದವು. ಆಯ್ಕೆ ಸಮಿತಿಯ ಎಲ್ಲಾ ೧೪ ಸದಸ್ಯರನ್ನು (ಅಧ್ಯಕ್ಷರೂ ಸೇರಿದಂತೆ) ಮೊದಲಿಗೆ ನಾಲ್ಕು ಪ್ಯಾನಲ್ ಆಗಿ ವಿಭಾಗಿಸಲಾಗಿತ್ತು. ಪ್ರತಿ ಪ್ಯಾನೆಲ್‌ನ ಸದಸ್ಯರು ೨೪ ಸಿನಿಮಾಗಳನ್ನು ನೋಡಿ ಅವುಗಳಲ್ಲಿ ೮ನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಬೇಕಿತ್ತು. ಈ ರೀತಿಯಲ್ಲಿ ಅಂತಿಮ ಹಂತಕ್ಕೆ ೩೨ ಸಿನಿಮಾ ಬಂದಿದ್ದವು. ಅಂತಿಮ ಹಂತದ ಚಿತ್ರಗಳನ್ನು ಎಲ್ಲಾ ೧೪ ಸದಸ್ಯರೂ ನೋಡುತ್ತಾರೆ. ಅಂತಿಮ ಹಂತಕ್ಕೆ ಆಯ್ಕೆಯಾಗದ ಚಿತ್ರವೊಂದು ಮತ್ತೊಮ್ಮೆ ಪರಿಶೀಲನೆಗೆ ಅರ್ಹ ಎನಿಸಿದರೆ ಅದನ್ನು ‘ರಿ ಕಾಲ್’ ಮಾಡಬಹುದು. ಹೀಗೆ ಮಾಡಬೇಕಾದರೆ ಸದಸ್ಯರೊಬ್ಬರು ಸೂಚಿಸಿ ಅದನ್ನು ಇತರ ಇಬ್ಬರು ಸದಸ್ಯರು ಅನುಮೋದಿಸಬೇಕು. ಈ ಬಾರಿ ಹೀಗೆ ಐದು ಚಿತ್ರಗಳನ್ನು ‘ರಿ ಕಾಲ್’ ಮಾಡಲಾಗಿತ್ತು.
ಆಯ್ಕೆಯಲ್ಲಿ ಲಾಬಿ ನಡೆಯುವುದುಂಟೆ?
ನನಗಂತೂ ಅಂಥಾ ಯಾವುದೇ ಅನುಭವ ಆಗಿಲ್ಲ. ಯಾರಿಂದಲೂ ಒತ್ತಡ ಬರಲಿಲ್ಲ. ಆಯ್ಕೆ ಪ್ರಕ್ರಿಯೆ ಸಂಪೂರ್ಣ ೧೪ ಮಂದಿ ಸದಸ್ಯರನ್ನೊಳಗೊಂಡ ಜ್ಯೂರಿ ತಂಡದ ಹಕ್ಕು ಮತ್ತು ಹೊಣೆಗಾರಿಕೆ.
ರಾಜ್ಯದಲ್ಲಿ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕಾಗಿಯೇ ಒಂದು ಚಿತ್ರಮಂದಿರ ನಿರ್ಮಿಸುವ ಅಗತ್ಯ ಇದೆಯಲ್ಲವೇ?
ಖಂಡಿತಾ ಇದೆ. ಸರ್ಕಾರ ಕೂಡಾ ಈ ಬಗ್ಗೆ ಚಿಂತನೆ ನಡೆಸಿದೆ. ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕಾಗಿಯೇ ಪ್ರತಿ ಜಿಲ್ಲಾ ಕೇಂದ್ರದಲ್ಲೂ ೧೫೦ ಸೀಟ್‌ಗಳ ಒಂದು ಸಣ್ಣ ಸಿನಿಮಾ ಮಂದಿರ ನಿರ್ಮಿಸಬೇಕೆಂಬ ಪ್ರಸ್ತಾವ ಇದೆ. ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಇಂಥ ಚಿತ್ರ ಮಂದಿರ ನಿರ್ಮಿಸಬೇಕೇ ಎಂಬ ಚರ್ಚೆ ಇದೆ. ಕಲಾತ್ಮಕ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ ಎಂಬುದು ಸುಳ್ಳು. ನೀವು ಗಮನಿಸಿರುವಂತೆ ‘ಯುಟಿವಿ ಸಿನಿಮಾ ಆಫ್ ದಿ ವರ್ಲ್ಡ್’ ಚಾನಲ್‌ನಲ್ಲಿ ಜಾಗತಿಕವಾಗಿ ನಾನಾ ಭಾಷೆಯ ಕಲಾತ್ಮಕ ಚಿತ್ರಗಳನ್ನು ಪ್ರಸಾರ ಮಾಡುತ್ತದೆ. ಅದಕ್ಕೆ ಅತಿ ಹೆಚ್ಚು ಟಿಆರ್‌ಪಿ ರೇಟ್ ಇದೆ. ಅದು ಚಿತ್ರರಂಗದವರಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಭಾರಿ ಜನಪ್ರಿಯವಾಗಿದೆ.
ನಿಮ್ಮ ರಂಗಭೂಮಿ ಹಿನ್ನೆಲೆ...
ಸಿನಿಮಾ ಮಾಧ್ಯಮವನ್ನು ನಾನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲು ರಂಗಭೂಮಿಯೇ ಕಾರಣ ಎನ್ನಬಹುದು. ಕಾಲೇಜು ದಿನಗಳಲ್ಲಿ ನಟನೆ, ನಿರ್ದೇಶನದಲ್ಲಿ ತುಂಬಾ ತೊಡಗಿಸಿಕೊಂಡಿದ್ದೆ. ನನಗೆ ಸಾಂಸ್ಕೃತಿಕ ಗಟ್ಟಿತನ ಕೊಟ್ಟಿದ್ದೇ ರವೀಂದ್ರ ಕಲಾಕ್ಷೇತ್ರ. ಈಗ ರಂಗಭೂಮಿಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳದಿದ್ದರೂ ಉತ್ತಮ ನಾಟಕ ಬಂದರೆ ತಪ್ಪದೇ ಹೋಗಿ ನೋಡುತ್ತೇನೆ.
ಮೊದಲ ಚಿತ್ರಕ್ಕೂ, ೨ನೇ ಚಿತ್ರಕ್ಕೂ ಹತ್ತು ವರ್ಷಗಳಷ್ಟು ಸುದೀರ್ಘ ಅಂತರ ಇರಲು ಕಾರಣ?
ಮೊದಲನೆಯದಾಗಿ ಹಣಕಾಸು ಸಮಸ್ಯೆ. ೨ನೆಯದಾಗಿ ನಾನೇ ಕೆಲವು ವರ್ಷಗಳ ಕಾಲ ಚಿತ್ರ ನಿರ್ಮಾಣದಿಂದ ದೂರವಿದ್ದು ಬಾಗೂರು-ನವಿಲೆ ಭಾಗದ ರೈತರ ಸಮಸ್ಯೆಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೆ. ಉಳಿದಂತೆ ಪರಿಸರಕ್ಕೆ ಸಂಬಂಧಪಟ್ಟ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದೆ.
ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಯನ್ನು ಬೆಳೆಯಲು ಬಿಡದ ಪಟ್ಟಭದ್ರ ಹಿತಾಸಕ್ತಿಗಳಿವೆಯೇ? ಹಲವಾರು ಕನ್ನಡ ಪ್ರತಿಭೆಗಳು ತಮಿಳು ಮತ್ತಿತರ ಭಾಷಾ ಚಿತ್ರರಂಗಕ್ಕೆ ವಲಸೆ ಹೋಗಬೇಕಾದ್ದು ಈ ಕಾರಣದಿಂದಲೇ?
ರಜನಿ ಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ, ಮುರಳಿ ಮುಂತಾದ ಹಲವು ನಟರು, ತಂತ್ರಜ್ಞರು ತಮಿಳುನಾಡಿಗೆ ವಲಸೆ ಹೋಗಿ ಅಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರು ಇಲ್ಲೇ ಇದ್ದಿದ್ದರೆ ಅದೇ ಬಗೆಯ ಸಾಧನೆ ಮಾಡುತ್ತಿದ್ದರೆ ಅಥವಾ ಇಲ್ಲವೇ ಎಂಬುದು ಜಿಜ್ಞಾಸೆಯ ಪ್ರಶ್ನೆ. ಅದಿರಲಿ. ಆದರೆ ಕನ್ನಡ ಚಿತ್ರರಂಗದ ಬಗ್ಗೆ ಪದೇ ಪದೇ ಆಡುವ ಮಾತೆಂದರೆ ‘ನಮ್ಮದು ಸೀಮಿತ ಮಾರುಕಟ್ಟೆ. ಕರ್ನಾಟಕದ ಹೊರಗೆ ನಮ್ಮ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ’ ಎಂಬುದು. ಹೊರ ರಾಜ್ಯಗಳಲ್ಲಿ ಬಿಡಿ; ನಮ್ಮ ರಾಜ್ಯದಲ್ಲಿಯೇ ನಮ್ಮ ಮಾರುಕಟ್ಟೆ ಹೇಗಿದೆ? ನಮ್ಮಲ್ಲಿ ಚಿತ್ರ ವೀಕ್ಷಿಸುವವರ ಸಂಖ್ಯೆ ಶೇ. ೧೮ಕ್ಕಿಂತ ಕಡಿಮೆ. ಆಂಧ್ರದಲ್ಲಿ ಶೇ. ೩೫ಕ್ಕಿಂತ ಹೆಚ್ಚು; ತಮಿಳುನಾಡಿನಲ್ಲಿ ಶೇ. ೨೭ಕ್ಕಿಂತ ಹೆಚ್ಚು. ಕೇರಳದಲ್ಲಿ ಶೇ. ೨೦ಕ್ಕಿಂತ ಹೆಚ್ಚು. ಹೀಗೇಕೆ? ಚಿತ್ರರಂಗದವರು ‘ಜನ ಚಿತ್ರ ನೋಡುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆಯೇ ವಿನಾ ತಮ್ಮಲ್ಲಿ ಏನು ತಪ್ಪಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲೇ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸಿಲ್ಲ. ಏಳೆಂಟು ವರ್ಷದ ಹಿಂದೆ ೨೮೦೦ರಷ್ಟಿದ್ದ ಸಿನಿಮಾ ಮಂದಿರಗಳು ಈಗ ೧೮೦೦ಕ್ಕಿಳಿದಿವೆ. ಇದಕ್ಕೆ ಕಿರುತೆರೆಯನ್ನು ದೂರುವುದೂ ಸರಿಯಲ್ಲ. ಕಿರುತೆರೆ ಸಿನಿಮಾಕ್ಕೆ ಪ್ರತಿಸ್ಪರ್ಧಿಯೇನಲ್ಲ. ಬದಲಿಗೆ ಅದು ಸಿನಿಮಾಗಳ ವಿಸ್ತರಣೆಯಷ್ಟೇ. ನಮ್ಮ ಬಹುತೇಕ ಟಿವಿ ಚಾನೆಲ್‌ಗಳ ಕಾರ್ಯಕ್ರಮ ಸಿನಿಮಾ ಆಧಾರಿತವೇ ಆಗಿವೆ. ಹೀಗಾಗಿ ಅವು ಸಿನಿಮಾಗಳಿಗೆ ಪೂರಕವೇ ಆಗುತ್ತಿವೆ. ಕನ್ನಡ ಚಿತ್ರರಂಗದ ಮುಖ್ಯ ನ್ಯೂನತೆ ಎಂದರೆ ಪ್ರೇಕ್ಷಕರನ್ನು ವಿಸ್ತರಿಸಿಕೊಳ್ಳಲು ಮುಂದಾಗಿಲ್ಲ. ನಮ್ಮ ಮುಖ್ಯವಾಹಿನಿ ಸಿನಿಮಾಗಳಲ್ಲಿ ‘ಸ್ಟಾರ್ ಇಮೇಜ್’ಗೆ ಕಟ್ಟು ಬಿದ್ದವೇ ಹೆಚ್ಚು. ನಮ್ಮ ನಿರ್ಮಾಪಕರು ಬಜೆಟ್ ಹಾಕುವುದೇ ‘ಸ್ಟಾರ್’ ಮೇಲೆ ವಿನಾ ನಿರ್ದೇಶಕರನ್ನು ಅಥವಾ ಕಥಾವಸ್ತುವನ್ನು ನಂಬಿ ಅಲ್ಲ. ಕೇವಲ ಸ್ಟಾರ್‌ಗಾಗಿ ಕಥೆ ಹೊಸೆಯಲಾಗುತ್ತದೆ. ಹೀಗಾದಾಗ ಒಟ್ಟಾರೆ ಚಿತ್ರೋದ್ಯಮವೇ ಕುಗ್ಗುತ್ತದೆ. ಪಾಪ ‘ಸ್ಟಾರ್’ಗಳೂ ಇಮೇಜ್ ಬಿಟ್ಟು ನಟಿಸಲು ಉತ್ಸುಕರಾಗಿರಬಹುದು. ‘ಸ್ಟಾರ್’ ಸಾಧ್ಯತೆಗಳು ಹಿಗ್ಗಿದರಷ್ಟೇ, ಸಿನಿಮಾ ಸಾಧ್ಯತೆ ಹಿಗ್ಗುವುದು. ಆದರೆ ನಮ್ಮಲ್ಲಿ ‘ಬ್ರಾಂಡ್’ ಮಾಡುವ ಚಾಳಿ ಇದೆ. ಹೀಗಾಗಿ ‘ವೆರೈಟಿ’ ಇಲ್ಲ. ಈ ಎಲ್ಲಾ ಕಾರಣಗಳಿಂದ ನಮ್ಮ ಚಿತ್ರೋದ್ಯಮ ತುಂಬಾ ಕುಗ್ಗಿದೆ. ಇದೇ ಕಾರಣಕ್ಕೆ ಇಲ್ಲಿ ಪ್ರತಿಭೆಗಳು ಬೆಳೆಯುವುದೂ ಕಷ್ಟ. ‘ಇಂಡಸ್ಟ್ರಿ’ಯೇ ಬೆಳೆಯುತ್ತಿಲ್ಲ, ಇನ್ನು ಪ್ರತಿಭೆಗಳು ಹೇಗೆ ಬೆಳೆಯುತ್ತವೆ?
ಇತ್ತೀಚೆಗೆ ಈ ಟ್ರೆಂಡ್ ಬದಲಾಗುತ್ತಿದೆ ಅಲ್ಲವೇ?
ನಿಜ. ಆದರೆ ಈ ಬದಲಾವಣೆ ತಂದವರು ಹೊಸ ನಿರ್ಮಾಪಕರೇ ವಿನಾ ‘ಎಸ್ಟಾಬ್ಲಿಷ್ಡ್’ ನಿರ್ಮಾಪಕರಲ್ಲ. ‘ರಿಯಲ್ ಎಸ್ಟೇಟ್ ಬೂಮ್’ ಆದಾಗ ತುಂಬಾ ದುಡ್ಡು ಮಾಡಿದವರು ಚಿತ್ರರಂಗದಲ್ಲಿ ಹಣ ಹೂಡಲು ಮುಂದಾದರು. ಅವರ ದೃಷ್ಟಿಯಲ್ಲಿ ‘ಚಿತ್ರ ಗೆದ್ದರೆ ಸಿಕ್ಕೋದು ಒಂದು ಲೇಔಟ್, ಚಿತ್ರ ಸೋತರೆ ಹೋಗುವುದು ಒಂದು ಸೈಟು!’ ಎಂಬ ಧೋರಣೆ. ಈ ಹೊಸ ನಿರ್ಮಾಪಕರಿಗೆ ಹಳೇ ನಿರ್ದೇಶಕರು, ಸ್ಟಾರ್‌ಗಳು ತಕ್ಷಣ ಲಭ್ಯವಾಗದ ಕಾರಣ ಅವರು ಹೊಸ ಕಥಾವಸ್ತು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದರು. ವೆರೈಟಿ ಇದ್ದಿದ್ದರಿಂದಾಗಿ ಅಂಥ ಸಿನಿಮಾಗಳನ್ನು ಜನರೂ ಮೆಚ್ಚಿದರು. ಒಮ್ಮೆ ಈ ಮಾದರಿಯ ಚಿತ್ರಗಳು, ಪ್ರತಿಭೆಗಳು ಗೆದ್ದಾಗ ನಮ್ಮ ‘ಎಸ್ಟಾಬ್ಲಿಷ್ಡ್’ ನಿರ್ಮಾಪಕರೂ ಅಂತಹ ಚಿತ್ರಗಳನ್ನು ತೆಗೆಯಲು ಮುಂದಾದರೆ ಹೊರತು ತಾವು ಹೊಸದಾಗಿ ಯಾವ ಸಾಹಸಕ್ಕೂ ಕೈಹಾಕಿದವರಲ್ಲ. ಈಗ ಏನಾಗಿದೆ ನೋಡಿ. ರಿಯಲ್ ಎಸ್ಟೇಟ್ ಉದ್ಯಮ ಕುಸಿತವಾಗಿದ್ದು ಅದರ ಪರಿಣಾಮ ಚಿತ್ರರಂಗದ ಮೇಲೂ ಆಗಿದೆ. ಇಲ್ಲಿ ಯಾವುದೇ ಹೊಸ ಪ್ರಯತ್ನಗಳಾಗುತ್ತಿಲ್ಲ.
ರಿಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುವುದು ಎಷ್ಟು ಸರಿ?
ಅದು ತಪ್ಪು. ಇದರ ವಿರುದ್ಧ ಹೋರಾಟ ಮಾಡಿದವರಲ್ಲಿ ನಾನೂ ಒಬ್ಬ. ನಮ್ಮಲ್ಲಿಯೂ ಒಳ್ಳೆಯ ಕಥೆಗಳಿವೆ. ಕಥೆಗಾರರಿದ್ದಾರೆ. ಸಾಹಿತ್ಯ ಕೃತಿಗಳನ್ನು ಬಳಸಿಕೊಳ್ಳದಿದ್ದರೆ ಬೇಡ. ಉತ್ತಮ ಕಮರ್ಷಿಯಲ್ ಚಿತ್ರಕಥೆ ಮಾಡುವ ಪ್ರತಿಭಾವಂತರು ತುಂಬಾ ಇದ್ದಾರೆ. ಆದರೆ ಅವರನ್ನು ಬಳಸಿಕೊಳ್ಳಲು ನಮ್ಮ ಚಿತ್ರರಂಗ ತಯಾರಿಲ್ಲ. ಒಳ್ಳೆಯ ಚಿತ್ರ ಮಾಡಲು ನಮ್ಮವರಿಗೂ ಬರುತ್ತದೆ. ಈಗ ನೋಡಿ ಕಳೆದ ಬಾರಿ ರಾಷ್ಟ್ರೀಯ ಪ್ರಶಸ್ತಿ ಕಣದಲ್ಲಿ ಸುಮಾರು ೧೫, ೧೬ ಭಾಷೆಗಳಿಂದ ಒಂದೇ ಒಂದು ಚಿತ್ರ ಕೂಡಾ ಸ್ಪರ್ಧಿಸಿರಲಿಲ್ಲ. ಆದರೆ ಕನ್ನಡದಿಂದ ೧೭ ಸಿನಿಮಾಗಳು ‘ಎಂಟ್ರಿ’ ಪಡೆದಿದ್ದವು. ಹಿಂದಿ ನಂತರ ಅತಿ ಹೆಚ್ಚು ಅಂದರೆ ಕನ್ನಡದ್ದೇ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಇವುಗಳಲ್ಲಿ ಅಂತಿಮ ಹಂತಕ್ಕೆ ಮೂರು ಸಿನಿಮಾಗಳು ಪ್ರವೇಶ ಪಡೆದಿದ್ದವು. ಹೀಗಾಗಿ ಇಂಥ ಪ್ರತಿಭಾವಂತರನ್ನು ಉದ್ಯಮ ಬಳಸಿಕೊಳ್ಳಬೇಕು.