ದೃಶ್ಯಕ್ಕೊಂದು ನುಡಿಗಟ್ಟು

ಮಡಗಾಸ್ಕರ್: ಹಾಲಿವುಡ್ ಸಿನೆಮಾಗಳ ‘ಸಿ’ ಸೆಂಟರ್

ಈ ಲೇಖನವನ್ನು ಯಾವುದೇ ಒಳನೋಟ ಮತ್ತು ಆಶಾವಾದಗಳ ಹಂಗಿಲ್ಲದೇ ಬರೆಯುವುದು, ವಿಷಯದ ಆರೋಗ್ಯಕ್ಕೂ ಮತ್ತು ಸತ್ಯವನ್ನು ಮಾತ್ರ ಹೇಳುವುದಕ್ಕೂ ಸಹಕಾರಿಯಾಗಬಲ್ಲದು ಎಂಬ ಮಾತನ್ನು ಯಾವುದೇ ವ್ಯಂಗ್ಯದ ಲೇಪನವಿಲ್ಲದೇ ಹೇಳುತ್ತ: ಆರಂಭ.

ಮಡಗಾಸ್ಕರ್ ಎಂಬ ಈ ದೇಶದ ರಾಜಧಾನಿಯಾದ ಅಂಟಾನಾನರಿವೊ ಎಂಬ ಹನ್ನೊಂದು ಕಿಲೋಮೀಟರು ವಿಸ್ತೀರ್ಣದ ಪಟ್ಟಣದಲ್ಲಿ ಎರಡು ಸಿನೆಮಾಗಳಿವೆ. ( ಕ್ಷಮಿಸಿ, ಫ್ರಾನ್ಸ್ ದೇಶದ ಕಾಲನಿಗಳಲ್ಲಿ ಒಂದಾದ ಈ ದೇಶದ ಭಾಷೆ ಸಹಜವಾಗಿ ಫ್ರೆಂಚ್; ಇನ್ನೊಂದು ದೇಶಭಾಷೆಯೆಂದರೆ ಮಲಗಾಸಿ. ಫ್ರೆಂಚ್ ನಲ್ಲಿ ‘ಸಿನೆಮಾ’ ಎಂದರೆ ನಾವು ಸಿನೆಮಾ ನೋಡಲು ಹೋಗುವ ಥಿಯೇಟರ್; ಮತ್ತು ಥಿಯೇಟರ್ ಎಂದರೆ ನಾಟಕ ಮಂದಿರ. ಫಿಲ್ಮ್ ಎಂದರೆ ಫಿಲ್ಮ್ ಎಂದೇ! ) ಈ ಎರಡು ಸಿನೆಮಾಗಳಲ್ಲಿ ಸದಾ ಹಾಲಿವುಡ್ ಸಿನೆಮಾಗಳ ಫ್ರೆಂಚ್ ಆವೃತ್ತಿ ಮತ್ತು ಕ್ಷೀಣವಾಗಿ ತಾನಿನ್ನೂ ಇದ್ದೇನೆ ಎಂಬುದನ್ನು ಘೋಷಿಸಲೋ ಎಂಬಂತೆ ಆಗಾಗ ಮಲಗಾಸಿ ಸಿನೆಮಾಗಳು ಬಿಡುಗಡೆಯಾಗುತ್ತವೆ. ಈ ಎರಡು ಸಿನೆಮಾಗಳ ಹೊರತಾಗಿ ಇಡೀ ದೇಶದ ತುಂಬ, ಮುಖ್ಯವಾಗಿ ಸಣ್ಣ ಹಳ್ಳಿ,ಪಟ್ಟಣಗಳಲ್ಲಿ ಮತ್ತು ನಗರದ ಗಲ್ಲಿಗಳಲ್ಲಿ ಕೆಲವು ಟಿ.ವಿ ಮಂದಿರಗಳು ಸಿನೆಮಾ ಪ್ರದರ್ಶಿಸುತ್ತವೆ. ಒಂದು ಸಿನೆಮಾಗೆ, ತಲೆಗೆ ೩-೪ ರುಪಾಯಿ. ನನ್ನ ಎಂದಿನ ಚೂಪು ವ್ಯಂಗ್ಯವನ್ನು ನಾನಿಲ್ಲಿ ಉಪಯೋಗಿಸಬಹುದಾದರೆ, ‘ತಲೆಗೆ’ ಎಂಬ ಪದವನ್ನು ನಾನು ಬಳಸಬಾರದಿತ್ತು ಎನ್ನಿಸುತ್ತದೆ. ಏಕೆಂದರೆ, ತಲೆಯಿಲ್ಲದೇ ಇರುವ ಜನ ಮಾತ್ರ ನೋಡಬಹುದಾದ ಸಿನೆಮಾಗಳನ್ನು ಇಲ್ಲಿನ ಜನ ವೈದ್ಯ ಸೂಚಿಸಿದ ಪಥ್ಯವೇನ್ನುವ ಹಾಗೆ ದಿನಕ್ಕೆ ನಾಲ್ಕರಂತೆ ನೋಡುತ್ತಾರೆ. ಈ ನಾಲ್ಕು ಸಿನೆಮಾಗಳಲ್ಲಿ ಅಗತ್ಯವಾಗಿ, ( ಅನಗತ್ಯವಾಗಿ? ) ಒಂದು ಜೆಟ್ ಲೀ, ಇನ್ನೊಂದು ಸಿಲ್ವೆಸ್ಟರ್ ಸ್ಟಲೋನ್ ಮತ್ತೆರಡು ಇನ್ಯಾವುದೇ ಈ ಇಬ್ಬರ ದರ್ಜೆಯ ಹುರಿಗಟ್ಟಿದ ನರಗಳ ಮತ್ತು ಜಡ್ಡುಗಟ್ಟಿದ ಬುದ್ಧಿಯ ಸಮರ ಕಲಾ ಪರಿಣಿತರು.

ಇಂಥದ್ದೆ ವ್ಯಂಗ್ಯವನ್ನು ನಾನು ಬಳಸುತ್ತ ಇಲ್ಲಿ, ಒಬ್ಬಳು ಹುಡುಗಿಗೆ- ಏಕೆ ಇಲ್ಲಿ ಎಲ್ಲ ಜನರೂ ಶಾಪಗ್ರಸ್ತರಂತೆ ದಿನಕ್ಕೆ ಮೂರು ನಾಲ್ಕು ರಕ್ತದ ಹೊಳೆಗಳನ್ನು ಸಿನೆಮಾಗಳ ರೂಪದಲ್ಲಿ ಆಸ್ವಾದಿಸುತ್ತ ತಮ್ಮ ದಿನ ಮತ್ತು ಹಣವನ್ನು ಹಾಳುಮಾಡಿಕೊಳ್ಳುತ್ತಾರೆ? ಆಫ್ರಿಕಾದ ಇತರ ಬಹುಪಾಲು ದೇಶಗಳಂತೆ ಆಗಾಗ ಸಂಭವಿಸಬಹುದಾದ ಮಿಲಿಟರಿ ಧಂಗೆ ಮತ್ತು ಹಿಂಸೆಗಳಿಗೆ ತಮ್ಮನ್ನು ಈ ಹಿಂಸಾತ್ಮಕ ಸಿನೆಮಾಗಳ ಮುಖಾಂತರ ಇಮ್ಯೂನೈಸ್ ಮಾಡಿಕೊಳ್ಳುತ್ತರೆಯೇ? ಎಂದು ಕೇಳಿದ್ದೆ. ಆ ಹುಡುಗಿ ತನ್ನ ಸಮರ್ಥನೆಯಲ್ಲಿ ಕೇವಲ ಬಾಂಬು ಮತ್ತು ಗನ್ನುಗಳ ಸಿನೆಮಾಗಳ ಇರುವಿಕೆಯನ್ನು ನಿರಾಕರಿಸುತ್ತ, ಕೆಲವು ಒಳ್ಳೆಯ, ಸೆನ್ಸಿಬಲ್ ಎಂಬು ಕರೆಯಬಹುದಾದ ಸಿನೆಮಾಗಳ ಪಟ್ಟಿಯನ್ನು ನೀಡಿದಳು.

ಅವುಗಳಲ್ಲಿ ಒಂದು: ಅಡಾಲ ವಿರ್ಜೀನ್. ಹಾಗೆಂದರೆ ಕ್ರೇಝಿ ವರ್ಜಿನ್; ಅರ್ಥಾತ್ ಹುಚ್ಚು ಕನ್ಯೆ (?) ಇದೊಂದು ಒಳ್ಳೆಯ ಕಾಮಿಡಿ ಸಿನೆಮಾ. ಒಳ್ಳೆಯ ಎಂಬ ವಿಶೇಷಣವನ್ನು ಬಳಸುವುದು ದುಬಾರಿಯಾದೀತಾದರೂ ಇತರ ಸಿನೆಮಾಗಳ ಹೋಲಿಕೆಯೊಂದಿಗೆ ಈ ಬಳಕೆ ಸಹಜವಾಗಿ ಕಾಣುತ್ತದೆ. ಇದೊಂದು, ನಮ್ಮ ಸಿಲ್ಲಿ ಲಲ್ಲಿಯ ಗುಣಮಟ್ಟವುಳ್ಳ ಸಿನೆಮಾ. ಕತೆ ಮತ್ತು ಸಂಭಾಷಣೆಗಳಿಗೂ ಈ ಮಾತುಗಳು ಅನ್ವಯವಾಗುತ್ತವೆ. ಈ ಸಿನೆಮಾಗಳು ಇಲ್ಲಿ ನಮ್ಮ ಸೀರಿಯಲ್ಲಿನ ಮಾದರಿಯಲ್ಲಿ ಟಿ.ವಿ ಗಳಲ್ಲಿ ಪ್ರದರ್ಶಿಸಲ್ಪಡುತ್ತವೆ. ಜನ ಈ ಎಪಿಸೋಡುಗಳನ್ನೇ ಫಿಲ್ಮ್ ಎಂದು ಕರೆಯುತ್ತಾರೆ.

ಹಿಂದೊಮ್ಮೆ ಪರ್ಯಾಯ ಸಿನೆಮಾಗಳ ಬಗ್ಗೆ ಬರೆಯುತ್ತ ನಾನು, ಸಿನೆಮಾವನ್ನು ಅದರ ಎಲ್ಲ ಇತರ ಅಂಗಗಳಾದ - ಛಾಯಾಗ್ರಹಣ, ಕೋರಿಯೋಗ್ರಫಿ, ಸಂಗೀತ - ಎಲ್ಲವನ್ನೂ ಸಿನೆಮಾ ಒಂದರ ಬಿಡಿಭಾಗಗಳಾಗಿ ಪರಿಗಣಿಸಿ, ಒಂದೊಂದನ್ನೂ ಹೊಸ ವಿನ್ಯಾಸ, ಕ್ರಮ ಮತ್ತು ನವೀನ ಸಾಧ್ಯತೆ ಗಳ ( ಪರ್ಯಾಯದ ) ಅಡಿಗೆ ತರುವುದರ ಮೂಲಕ ಒಂದು ಪರ್ಯಾಯ ಸಿನೆಮಾ ಅಥವಾ ಪರ್ಯಾಯ ಅಲೆ ಸಾಧ್ಯವಾಗಬಹುದೆಂದು ಸೂಚಿಸಿದ್ದೆ. ನೂತನ ಟೆಕ್ನಾಲಜಿಗಳ ಆಗಮನ ಹೊಸ ಸಿನೆಮಾಗಳನ್ನು, ಹೊಸ ಬಗೆಯ ಸಿನೆಮಾ ಕ್ಷಿತಿಜದ ವಿಸ್ತರಣೆಯನ್ನೂ ವಿಶಾಲಾರ್ಥದಲ್ಲಿ ಸಾಧ್ಯವಾಗಿಸುತ್ತದೆ ಎಂಬ ವಾದ ನನ್ನದಾಗಿತ್ತು.( ಹೆಚ್ಚಿನ ಓದಿಗೆ ನೋಡಿ: ‘ಪರ್ಯಾಯ ಪರ್ಯಾಯವಲ್ಲ’ ಸಂವಾದದ ಹಳೆಯ ಸಂಚಿಕೆ ) ಆದರೆ ಆ ಬಳಿಕ ಶೇಖರ್ ಪೂರ್ಣ ರವರು ಈ ವಾದವನ್ನು ಅಲ್ಲಗೆಳೆಯುತ್ತ ಸಿನೆಮಾ ಕೇವಲ ನಿರ್ದೇಶಕನ ಮತ್ತು ಆತನ ಪ್ರಜ್ಞೆಯ ಮೂಲಕ ಮೂಡುತ್ತದೆಂದೂ, ತಂತ್ರಜ್ಞಾನದ ಅಪಾರ ಸೌಲಭ್ಯ ಮತ್ತು ಬಳಕೆಗಳಿಲ್ಲದೆಯೂ ಆತ ತನ್ನ ಚಿಂತನೆಯನ್ನು ಸಿನೆಮಾವಾಗಿ ಹೊರತರಬಲ್ಲೆನೆಂದೂ ಹೇಳಿದ್ದರು ( ಈ ಪ್ರಯೋಗ ತಪ್ಪು; ಅವರು ಹೇಳುವುದಿಲ್ಲ, ವಾದಿಸಿದರು! )

ಅದು ಸರಿಯೆಂದು ನನಗೆ ಈಗಲೂ ಆಗಲೂ ಅನ್ನಿಸುತ್ತದೆ. ಆದರೆ ಈ ಬಡ ದೇಶದ ಸಿನೆಮಾ ಸಂಸ್ಕೃತಿ ಮತ್ತು ಸಾಧ್ಯತೆಗಳ ಬಗ್ಗೆ ಆಲೋಚಿಸಿದಾಗ ನನ್ನ ಹಳೆಯ ವಾದವೇ ಸರಿಯಿದ್ದೀತೆಂದೂ ಅನ್ನಿಸುತ್ತದೆ. ಇಲ್ಲಿ ನಿಸ್ಸಂದೇಹವಾಗಿ ಎಲ್ಲೆಡೆಯೂ ಇರುವಂತೆ ಸೂಕ್ಷ್ಮ ಸಿನೆಮಾಸಕ್ತರೂ, ಹೊಸತನ್ನು ಮಾಡುವ ಹಂಬಲವುಳ್ಳವರೂ ಇದ್ದಾರೆ. ಆದರೆ ಅದು ಇಲ್ಲಿನ ತಂತ್ರಜ್ಞಾನದ ಕೊರತೆ ಮತ್ತು ಬಡತನಗಳ ನಡುವೆ ಸಾಧ್ಯವೇ ಇಲ್ಲ. ಮಲಗಾಸಿ ನಿನೆಮಾಗಳು ಬಹುತೇಕವಾಗಿ ನಮ್ಮ ಮದುವೆ ವೀಡಿಯೋಗಳ ಗುಣಮಟ್ಟವುಳ್ಳವು. ನನ್ನ ಈ ವಾದ ತಪ್ಪಿರಬಹುದೆಂದು ನನಗೇ ಅನ್ನಿಸುತ್ತಿದ್ದರೂ, ಕೆಲವೇ ಆಸಕ್ತರು ಸೇರಿಕೊಂಡು ಒಳ್ಳೆಯ ಚಿತ್ರಕತೆ ಮತ್ತು ಇತರ ಅಗತ್ಯ ಅಂಶಗಳೊಂದಿಗೆ ಒಂದು ಸಿನೆಮಾವನ್ನು  ಸಾಧ್ಯವಾಗಿಸಬಹುದೆಂದು ಹೊಳೆಯುತ್ತಿದ್ದರೂ- ಟೆಕ್ನಾಲಜಿಗಳ ಕೊರತೆ ಮತ್ತು ಬಡತನ ಸಿನೆಮಾ ಕ್ರಿಯಾಶೀಲತೆಯ ಮೇಲೆ ಖಂಡಿತ ತನ್ನ ಪರಿಣಾಮ ಉಂಟುಮಾಡುತ್ತದೆ ಎಂದು ವಾದಿಸುವ ಆಸೆಯಾಗುತ್ತದೆ.

ಹಾಲೀವುಡ್ ಈ ಪ್ರಮಾಣದಲ್ಲಿ ನಮ್ಮ ಥ್ರಿಲ್ಲರ್ ಮಂಜುಗಳ ಮತ್ತು ದರ್ಶನ್‍ಗಳ ಮಾದರಿಯ ಸಿನೆಮಾಗಳನ್ನು ಉತ್ಪಾದಿಸುತ್ತದೆ ಎಂದು ಅರಿವಾದದ್ದು ಇಲ್ಲಿಗೆ ಬಂದ ಮೇಲೆಯೇ. ಈ ಹಿಂಸಾತ್ಮಕ ಸಿನೆಮಾಗಳಲ್ಲಿ ಇಲ್ಲದಿರುವ ಎರಡು ಮುಖ್ಯ ಅಂಶಗಳೆಂದರೆ ಕತೆ ಮತ್ತು ತರ್ಕ. ಹುಚ್ಚಾಸ್ಪತ್ರೆ ಯಿಂದ ತಪ್ಪಿಸಿಕೊಂಡ ಒಬ್ಬ ಹುಚ್ಚನನ್ನು ಕಾಪಾಡಲೋ ಅಥವಾ ಅಪಹರಿಸಲ್ಪಟ್ಟ ಒಬ್ಬ ಬಾಲಕಿಯ ಜೀವ ಉಳಿಸಲೋ ಹೆಲಿಕಾಪ್ಟರ್ ಗಳು, ವಿಮಾನಗಳು, ತಿಕ್ಕಲು ಯೋಧರು ಸಾವಿರಾರು ಜನರನ್ನು ಹೊಸಕಿ ಹಾಕುತ್ತ, ಕೇಕೆಹಾಕುತ್ತ ಕಾರ್ಯನಿರ್ವಹಿಸುತ್ತವೆ. ಎಲ್ಲ ಸಿನೆಮಾಗಳು ಒಂದೋ ಮಿಲಿಟರಿ ಯುದ್ಧಗಳು ಅಥವಾ ಜಪಾನೀ, ಚೈನೀ ಶೈಲಿಯ ಸಮರಕಲೆಗಳನ್ನೊಳಗೊಂಡಂಥವು. ತಮಾಶೆ ಮತ್ತು ದುರಂತಗಳು ಇವು: ಈ ಎಲ್ಲ ಜಪಾನೀ ಮತ್ತು ಚೀನಿ ಹೀರೋಗಳು ಅಮೇರಿಕಾದಲ್ಲಿ ಬದುಕುತ್ತಿರುವಂಥವರು ಮತ್ತು ಅಮೇರಿಕಾಕ್ಕಾಗಿ ದುಡಿಯುತ್ತಿರುವಂಥವರು. ದುರಂತವೆಂದರೆ ಈ ಎಲ್ಲ ಹಾಳು ಹೀರೋಯಿಕ್, ಹಿಂಸಾತ್ಮಕ ಸಿನೆಮಾಗಳೂ ನಾಜೂಕಾಗಿ ಅಮೇರಿಕಾದ ಅಂತರ್ರಾಷ್ಟ್ರೀಯ ನೀತಿ ಮತ್ತು ಸಂಬಂಧಗಳನ್ನೂ, ಇತರ ದೇಶಗಳ ತಪ್ಪುಗಳನ್ನೂ ಮತ್ತು ಅವುಗಳಿಗಾಗಿ ಆ ದೇಶಗಳು ತೆರಬೇಕಾದ ದಂಡಗಳನ್ನೂ ಪ್ರತಿಪಾದಿಸುತ್ತವೆ. ಇದು ಕೇವಲ ಒಂದು ಸಿನೆಮಾದ ಕಥೆಯಲ್ಲ. ಎಲ್ಲ ಸಿನೆಮಾವೂ ಈ ಕೆಲಸವನ್ನು ತಪ್ಪಿಲ್ಲದೇ ಮಾಡುತ್ತವೆ. ಒಂದು ಉದಾಹಾರಣೆ ಕೊಡುವುದಾದರೆ ಜೂಡೋ ಸಮರಕಲೆಯನ್ನೊಳಗೊಂಡ ಒಂದು ಸಿನೆಮಾದಲ್ಲಿ, ಅಮೇರಿಕಾದ ಮತ್ತು ಉತ್ತರ ಕೋರ‍ಿಯಾದ ತಂಡಗಳು ಅಂತಿಮ ಸುತ್ತನ್ನು ಪ್ರವೇಶಿಸುತ್ತವೆ. ರೋಚಕತೆಯನ್ನು ಮೈಗೂಡಿಸಿಕೊಳ್ಳುತ್ತ ಬೆಳೆಯುವ ಹೊಡೆದಾಟದಲ್ಲಿ ಅಂತಿಮವಾಗಿ ಅಮೇರಿಕಾದ ಸ್ಪರ್ಧಿ - ಗೆಲುವಿಗೆ ಇನ್ನೊಂದೇ ಒಂದು ಅಂಕದ ಅವಶ್ಯಕತೆಯಿರುವ ಹಂತದಲ್ಲಿ - ಎದುರಾಳಿಯನ್ನು ಹೊಡೇಯದೇ ನಿರ್ಗಮಿಸುತ್ತಾನೆ; ಕಾರಣ ಆ ಕಡೆಯ ಹೊಡೆತವನ್ನು ತಾಳಿಕೊಳ್ಳಲಾರದಷ್ಟು ಎದುರಾಳಿ ಸೋತಿರುತ್ತಾನೆ. ಈ ಅಮೇರಿಕಾದ ಸ್ಪರ್ಧಿಯ ಅಣ್ಣನನ್ನು ಹಿಂದೆ ಸಾಯಹೊಡೆದಿದ್ದವನು ಅದೇ ಕೋರಿಯಾದ ಆಟಗಾರನಾಗಿದ್ದರೂ ಈತ ಆತನ ಜೀವ ಉಳಿಸಿ, ತಾನು ಸೋತು ಹಿಂದೆಗೆಯುತ್ತಾನೆ. ಆದರೆ ಬಳಿಕ ಆ ಕೋರಿಯಾದ ಆಟಗಾರ ತನ್ನ ಪದಕವನ್ನು ಅಮೇರಿಕಾದ ಆಟಗಾರನ ಕೊರ‍ಳಿಗೆ ಹಾಕುವುದರ ಮೂಲಕ ಬಾಗುತ್ತಾನೆ.

ಇಲ್ಲಿನ ಹಿಂಸಾತ್ಮಕ ಸಿನೆಮಾಗಳನ್ನು ಜನ ಆಸ್ವಾದಿಸುವುದನ್ನೂ, ಪ್ರತಿ ಗುಂಡಿನ ಚಕಮಕಿಯನ್ನೂ ಸುಖಿಸುತ್ತ ಕಣ್ಣರಳಿಸುವುದನ್ನೂ ನೋಡಿದಾಗ ನನ್ನ ಸ್ನೇಹಿತನ ಜೊತೆ ನೋಡಿದ ಸಿನೆಮಾವೊಂದು ನೆನಪಾಗುತ್ತದೆ. ನಾನು ಮತ್ತು ನನ್ನ ಸ್ನೇಹಿತ ಸತೀಶ ಯಾವುದೋ ಕನ್ನಡ ಸಿನೆಮಾವೊಂದನ್ನು ಥೇಟರಿನಲ್ಲಿ ನೋಡುತ್ತಿದ್ದೆವು. ಭಾವನಾತ್ಮಕವಾದ ಸನ್ನಿವೇಶ ಅದು; ತಾಯಿ ಮತ್ತು ಮಗನ ನಡುವೆ ಸಣ್ಣ ಮಟ್ಟದ ವಾಗ್ವಾದವೊಂದು ನಡೆಯುತ್ತಿರುತ್ತದೆ. ಆ ಸಂಭಾಷಣೆಗಳು ನೋಡುಗನನ್ನು ತೀವ್ರವಾಗಿ ತಾಕುತ್ತ, ಭಾವನೆಗಳ ತಾಕಲಾಟ ಮೂಡಿಸುತ್ತ ಮುನ್ನಡೆಯುತ್ತಿರುವಾಗ, ಸಹನೆ ಕಳೆದುಕೊಂಡ ತಾಯಿ ಮಗನ ಕಪಾಳಕ್ಕೆ ಬಿಗಿಯುತ್ತಾಳೆ. ಆಗ ಇದ್ದಕ್ಕಿದ್ದಂತೆ ಬಾಲ್ಕನಿಯ ಕೆಳಭಾಗದಿಂದ ಭರಪೂರ ಚಪ್ಪಾಳೆಗಳು ನಮಗೆ ಕೇಳಿಬಂದವು. ನಾವಿಬ್ಬರೂ ಕ್ಷಣಕಾಲ ಗೊಂದಲಗೊಂಡೆವು: ಇದ್ದಕ್ಕಿದ್ದಂತೆ ನಮಗೆ ಹೊಳೆದ ಅಂಶವೆಂದರೆ, ಚಪ್ಪಾಳೆ ತಟ್ಟಿದವರು ಬಹುಶಃ ದರ್ಶನ್ ಸಿನೆಮಾಗಳ ಅಭಿಮಾನಿಗಳಿರಬೇಕು. ಸಮಯ, ಸನ್ನಿವೇಶ, ಅರ್ಥ ಇವುಗಳ್ಯಾವುದರ ಹಂಗು ಈ ಚಪ್ಪಾಳೆ ತಟ್ಟಿದ ಕೈಗಳಿಗೆ ಅನಗತ್ಯ. ಹೊಡೆತ ಬಿದ್ದ ತಕ್ಷಣ ಅವು ತಾನೇತಾನಾಗಿ ಚಪ್ಪಾಳೆಗಳಿಗೆ ಅಣಿಯಾಗುತ್ತವೆ: ಹೀರೋ ವಿಲನ್ ಗೆ ಹೊಡೆಯಲೀ, ತಾಯಿ ಮಗನಿಗೆ, ತಂಗಿಗೆ ಅಣ್ಣ... ವ್ಯತ್ಯಾಸವೇನಿಲ್ಲ. ಪುಣ್ಯಕ್ಕೆ ಈ ಹಾಳು ಹಾಲೀವುಡ್ ಸಿನೆಮಾಗಳಲ್ಲಿ ತಾಯಿ ಸೆಂಟಿಮೆಂಟ್ ಇಲ್ಲ. ಮರಹತ್ತಿ ಕುಳಿತ ಮಗನನ್ನು ಇಳಿಸಲು ತಾಯಿ ಗದ್ದೆಯಲ್ಲಿ ನರ್ತಿಸುವುದನ್ನು ಇಲ್ಲಿನ ಜನ ಪ್ರಾಯಶಃ ಇಷ್ಟಪಡಲಾರರು. ಏನಿದ್ದರೂ ಅವಳು ಕೋವಿ ಹಿಡಿದು ಅವನನ್ನು ಹೆದರಿಸಿ ಕೆಳಗಿಳಿಸಬೇಕಷ್ಟೇ. 

ಸಿನೆಮಾಗಳಲ್ಲಿ ಹುಗಿದಿಟ್ಟ ಈ ಕಳ್ಳ ರಾಜಕೀಯ ನೋಡುಗನ ಮೇಲೆ ಮಾಡಬಹುದಾದ ಪರಿಣಾಮಗಳ ಕುರಿತು ಫ್ರೆಂಚ್ ಸ್ನೇಹಿತನೊಬ್ಬನ ಬಳಿ ಮಾತನಾಡುತ್ತಿದ್ದಾಗ ಆತ ತನ್ನ ರಾಜಕೀಯವನ್ನೇ ನೆಟ್ಟಗೆ ಅರ್ಥಮಾಡಿಕೊಂಡು ಸರಿಮಾಡಿಕೊಳ್ಳದ ಈ ದೇಶ ಅಂತರ್ರಾಷ್ಟ್ರೀಯ ರಾಜಕೀಯವನ್ನು ಸಿನೆಮಾಗಳಲ್ಲಿ ಹುಡುಕುತ್ತ ಹೊಡೆದಾಟದ ಮೋಜನ್ನು ಕಳೆದುಕೊಳ್ಳುವ ಮೂರ್ಖತನ ಮಾಡಲಾರದೆಂದು ನಕ್ಕ. ಈತನ ಬಳಿಯೇ ನಾನು, ಮಡಗಾಸ್ಕರ್ ಸಿನೆಮಾ ಕುರಿತಾದ ಲೇಖನ ಬರೆಯಬೇಕಾಗಿರುವುದಾಗಿಯೂ ಆದರೆ ಏನೂ ಇಲ್ಲದ್ದರ ಕುರಿತು ಬರೆಯುವುದೇನು ಎಂದೂ ಚಿಂತಾಕ್ರಾಂತನಾಗಿದ್ದಾಗ ಆತ ಕೊಟ್ಟ ಸಲಹೆಯೇ ಈ ಲೇಖನದ ವ್ಯಂಗ್ಯ ಮತ್ತು ತಾತ್ಸಾರಗಳನ್ನೊಳಗೊಂಡ ಶೈಲಿಯ ಬರಹ.

ಇಡೀ ದೇಶಕ್ಕೆ ಒಟ್ಟಾರೆಯಾಗಿ ಎಂಟಕ್ಕಿಂತ ಕಡಿಮೆ ಛಾನಲ್‌ಗಳೂ, ಸರಿಯಾಗಿ ನಾಲ್ಕು ಜಾಹೀರಾತುಗಳೂ ಇವೆ. ದಿನವಿಡೀ ಗಂಭೀರವಾಗಿದ್ದು, ಬೋರಾಗಿದ್ದರೆ ವಾರ್ತೆ ನೋಡಿ ನಗಲೂ ಇಲ್ಲಿ ಅವಕಾಶವಿದೆ. ವರ್ಷಕ್ಕಿಂತ ಹಳೆಯ ಫೂಟೇಜ್ ಗಳನ್ನೇ ಅವುಗಳಲ್ಲಿ ಪುನರಾವರ್ತಿಸಲಾಗುತ್ತದೆ. ಒಂದು ರಿಯಾಲಿಟಿ ಶೋ ವಾರದ ಹಿಂದೆ ಅಂತ್ಯಕಂಡಿದ್ದು ಇನ್ನೊಂದು ಸಧ್ಯದಲ್ಲೇ ಆರಂಭವಾಗಬಹುದು. ಡಾಕ್ಯುಮೆಂಟರಿಗಳೆಂಬ ಕನಿಷ್ಟ ಹಣವೂ ವಾಪಸ್ಸು ಬಾರದ ವ್ಯವಾಹಾರವನ್ನು ನಡೆಸಲು ಆರ್ಥಿಕವಾಗಿ ಈ ದೇಶ ಅಶಕ್ತವಾದ್ದರಿಂದ, ರಾಜಕೀಯ ಡಾಕ್ಯುಮೆಂಟರಿಗಳನ್ನೂ, ಹಳೆಯ ಫ್ರೆಂಚ್ ವಾಸಾಹತು ಕಾಲದ “ಮೆಮ್ವಾರ್” ಗಳನ್ನೂ ಕೆಲವು ಸಂಸ್ಥೆಗಳ ಸಹಾಯದಿಂದಲೂ, ಮುಖ್ಯವಾಗಿ ಫ್ರೆಂಚ್ ಸರ್ಕಾರದ ಸಹಾಯದಿಂದಲೂ ಚಿತ್ರಿಸಲಾಗುತ್ತದೆ. ಆರ್ಥಿಕ ನಿಃಶಕ್ತಿ, ಕಲಾತ್ಮಕ ಪ್ರತಿಭಟನೆಯ ಮಾರ್ಗಗಳ ಸಾಧ್ಯತೆಯನ್ನು ಇಲ್ಲವಾಗಿಸಿರುವುದು ನಿಜ. ಸೆಂಟರ್ ಫಾರ್ ಕಲ್ಚರಲ್ ಸ್ಟಡಿಸ್ ದ ಆಲ್ಬರ್ಟ್ ಕಾಮು ಒಂದು ಒಳ್ಳೆಯ ಸಿನೆಮಾ ಮತ್ತು ಸಾಹಿತ್ಯ ಸಂಗ್ರಹವುಳ್ಳ ಸಂಸ್ಥೆ; ಇದು ರಾಜಧಾನಿಯಲ್ಲಿದೆ. ಬಹಳಷ್ಟು ಇಲ್ಲಿನ ಸಿನೆಮಾ ಸಂಗ್ರಹ ಫ್ರೆಂಚ್ ಆಗಿದ್ದು, ಇತರ ಕ್ಲಾಸಿಕ್ ಗಳು ಸಿಗುವುದು ದುಸ್ತರ.

ಮಡಗಾಸ್ಕರ್ ನ ಸಿನೆಮಾಗಳ ರೂಪುರೇಷೆ ಮತ್ತು ಅಭಿರುಚಿ ಗಳನ್ನು ವಿಸ್ತೃತವಾಗಿ ವಿವರಿಸಲು ಇಲ್ಲಿ ಏನೂ ಇಲ್ಲದ್ದರಿಂದ,  ಸಮಗ್ರವಾಗಿ ಮಡಗಾಸ್ಕರ್ ಸಿನೆಮಾ ಜಗತ್ತನ್ನು ಕಟ್ಟಿಕೊಡಬಲ್ಲ ಎರಡು ರೂಪಕಾತ್ಮಕ ಉದಾಹಾರಣೆಗಳನ್ನು ಎತ್ತಿಕೊಳ್ಳುತ್ತೇನೆ. ಈ ಬರಹಕ್ಕೆ ನಾನು ಯೋಜಿಸಿದ್ದ ಎರಡು ತಲೆಬರಹಗಳಲ್ಲಿ ಒಂದು ಮೇಲಿದೆ. ಇನ್ನೊಂದೆಂದರೆ, “ ಮಡಗಾಸ್ಕರ್: ಅ ಮ್ಯೂಸಿಕಲ್ ವಯಲೆನ್ಸ್ ”

ಬಹುಪಾಲು ಆಫ್ರಿಕಾದ ದೇಶಗಳಂತೆ, ಇಲ್ಲೂ ಮಿಲಿಟರಿ ಯೂನಿಫಾರ್ಮಿನ, ಕಯ್ಯಲ್ಲಿ ಎ.ಕೆ ೪೭ ಹಿಡಿದ ಚಿಗುರು ಮೀಸೆಯ ಹುಡುಗರು ರಸ್ತೆಯಲ್ಲಿ ಗುಂಪಾಗಿ ಸಂಚರಿಸುವುದನ್ನೂ, ಮಿಲಿಟರಿ ಜೀಪುಗಳು ಗಂಭೀರವಾಗಿ ಹರಿದಾಡುವುದನ್ನೂ ನೋಡಬಹುದು. ವಿಶೇಷವೆಂದರೆ, ಪ್ರತಿದಿನವೂ ರಸ್ತೆಯಲ್ಲಿ ಈ ಮಿಲಿಟರಿ ವಾಹನಗಳೊಂದಿಗೆ ಸೈನಿಕರನ್ನು ನೋಡಿದಾಗ ಸಾಶ್ಚರ್ಯ-ಕುತೂಹಲಗಳಾಗುತ್ತವೆ. ಕಾರಣ ಈ ಎಲ್ಲ ಸೈನಿಕರೂ ಕಯ್ಯಲ್ಲಿ ಬಂದೂಕು ಹಿಡಿದು ದೊಡ್ಡ ದನಿಯಲ್ಲಿ ಜಾಝ್ ಅಥವಾ ಇನ್ಯಾವುದೋ ಮಲಗಾಸಿ ಹಾಡು ಹಾಡುತ್ತ ವಾಹನಗಳಲ್ಲಿ ನರ್ತಿಸುತ್ತಿರುತ್ತಾರೆ. ಸಂಗೀತವೆಂಬುದು ಇಲ್ಲಿನ ಜನರ ಪಾಲಿನ ನಿತ್ಯ ದೇವರು; ಈ ಮಾತನ್ನು ನೀವು ಅಂಡರ್ ಲೈನಿನೊಂದಿಗೆ ಓದಿಕೊಳ್ಳಬಹುದು. ರಸ್ತೆ ರಸ್ತೆಗಳಲ್ಲಿ ಗಿಟಾರಿನೊಂದಿಗೆ ಕುಳಿತ ಯವ್ವನಿಗರೂ, ಅವರ ಸಂಗೀತಕ್ಕೂ ಮತ್ತು ಮಧ್ಯದ ಮತ್ತಿಗೂ ತೊನೆದಾಡುವ ಹಳಬರೂ. ಸಂಗೀತವೆಂಬುದು ಅಕ್ಷರಶಃ ಇಲ್ಲಿನ ಹಾದಿ ಬೀದಿ, ಮೈ-ಮನಸ್ಸುಗಳನ್ನು ಆಳುತ್ತದೆ. ವರುಷಕ್ಕೊಮ್ಮೆ ಅಕ್ಟೋಬರಿನಲ್ಲಿ ಜರುಗುವ ಮಡಜಾಝ್‌ಕರ್ ಎಂಬ ಮೇಳದಲ್ಲಿ ಪಾಲ್ಗೊಳ್ಳಲೂ, ಕಛೇರಿ ನೀಡಲೂ ಯೂರೋಪಿನಿಂದ ಜಾತ್ರೆ ನೆರೆಯುತ್ತದೆ.

ಕಯ್ಯಲ್ಲಿ ಗಿಟಾರು ಹಿಡಿದು ಹಾಡುತ್ತ ಮೈಮರೆತ ಯುವಕರಿಗೂ, ಕಯ್ಯಲ್ಲಿ ಬಂದೂಕು ಹಿಡಿದು ಹಾಡುತ್ತ ಸಾಗುವ ಸೈನಿಕರಿಗೂ ಇಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಹಿಂಸೆ ಮತ್ತು ಹಾಡುಗಳೆರಡೂ ಈ ದೇಶದ ಸಹಜ ಭಾಗಗಳೇ ಎಂಬಂತೆ ಇಲ್ಲಿನ ಮನಸ್ಸು ವರ್ತಿಸುವುದರಿಂದ ( ಇದನ್ನು ನಾನು ಯಾವ ಕಾರಣಕ್ಕೂ ಇಲ್ಲಿನೆಲ್ಲರ ಏಕ ಅಭಿಪ್ರಾಯದಂತೆ ಬರೆಯುತ್ತಿಲ್ಲ. ಆದರೆ ಸಿನೆಮಾ ನೋಡುವ ಮಾಸ್ ನ ದೃಷ್ಟಿಯಲ್ಲಿ ಇಟ್ಟುಕೊಂಡು ಮಾತ್ರ ) ನಿಧಾನ ಗತಿಯ ಯಾವ ಸಿನೆಮಾಗಳು ಸಧ್ಯದ ವಾಸ್ತವದಲ್ಲಿ ಇಲ್ಲಿನ ವಾತಾವರಣದಲ್ಲಿ ಸಹಜವಾಗುವುದು ದುಸ್ತರ.

ಈ ಮ್ಯೂಸಿಕಲ್ ವಯಲೆನ್ಸ್ ಎಂಬ ಅಸಹಜ ಪದಪುಂಜಕ್ಕೆ ಇನ್ನೊಂದು ಎಡವಟ್ಟು ಸಮರ್ಥನೆ ಕೊಡಬಹುದಾದರೆ, ಅದು ಹೀಗೆ. ಈ ದೇಶದ ಸದ್ಯದ ಮೂವ್ವತ್ತ ಮೂರರ ಹರೆಯದ, ಅನನುಭವಿ ಅಧ್ಯಕ್ಷ ಕೆಲವು ತಿಂಗಳ ಹಿಂದೆ ಮಿಲಿಟರಿ ದಂಗೆ ಮತ್ತು ಬೆಂಬಲಗಳೊಂದಿಗೆ ಅಧಿಕಾರಕ್ಕೆ ಬಂದವನು. ಅದಕ್ಕಿಂತ ಮೊದಲು ಕೆಲವು ವರುಷಗಳ ಹಿಂದೆ ಆತ ಇಲ್ಲಿನ ಕ್ಲಬ್ಬೊಂದರಲ್ಲಿ ಡಿ.ಜೆ ಯಾಗಿ ಕೆಲಸ ಮಾಡುತ್ತಿದ್ದ! ಹಾಗಾಗಿ ರಾಜಕೀಯವಾಗಿಯೂ ಹಿಂಸೆ ಮತ್ತು ಸಂಗೀತಗಳು ಬೆರೆತಿರುವುದರಿಂದ ಇಲ್ಲಿನ ಮನಸ್ಸು ಮತ್ತು ಸಿನೆಮಾಗಳು ಇವೆರಡರ ಸಮ್ಮಿಶ್ರ ಆವರಣದಿಂದ ತಪ್ಪಿಸಿಕೊಳ್ಳಲಾರವು.

ನಾನು ಖಂಡಿತ ಇಲ್ಲಿನ ಪರಿಸ್ಥಿತಿ ಮತ್ತು ಶೂನ್ಯವನ್ನು ಭಾರತದ ಸಿನೆಮಾ ಸಾಧ್ಯತೆಗಳಿಗೋ, ಹಾಲಿವುಡ್ಡಿಗೋ ಅಥವಾ ಇನ್ಯಾವುದೇ ಕ್ಲಾಸಿಕ್ ಗಳಿಗೋ ಹೋಲಿಸಿ ಬರೆಯುತ್ತಿಲ್ಲ. ಮೊದಲೇ ನಾನು ಹೇಳಿದಂತೆ, ವಿನಾಕಾರಣ ಸಿನೆಮಾ ಮತ್ತು ಇನ್ಯಾವುದೇ ದೃಶ್ಯ ಮಾಧ್ಯಮದ ಕ್ರಿಯಾತ್ಮಕತೆಯಿಲ್ಲದ ಈ ದಟ್ಟ ನಿರ್ವಾತದಲ್ಲಿ ಯಾವುದೇ ಆಶಾವಾದವನ್ನು ಹೊಂದುವುದು ಅಸಾಧ್ಯ ಸಾಧ್ಯತೆ ಮಾತ್ರವಾಗಿ ಕಾಣಿಸುತ್ತದೆ. ಈ ರೀತಿಯದ್ದೊಂದು ಸಮರ್ಥನೆ ಮತ್ತು ಮೇಲಿನೆರಡು ರೂಪಕಾತ್ಮಕ ಚಿತ್ರಣಗಳು ಅನಿವಾರ್ಯವೆಂದು ಸಾರುತ್ತ...

ನಮಸ್ಕಾರ. 




ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು