ಮತ್ತೆ ಮತ್ತೆ ...ಮಳೆಮುಂಗಾರು ಮಳೆಯ ಕೊನೆಯಲ್ಲಿ ’ಪ್ರೇಮ ಮಧುರ ತ್ಯಾಗ ಅಮರ" ಎಂದು ಪ್ಯಾಥೊ ಸಾಂಗ್ ಹಾಡುತ್ತ ನಡೆದ ಪ್ರೀತಮ್ ಎಲ್ಲಿ ಹೋದ?- ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ’ಮಳೆಯಲಿ, ಜೊತೆಯಲಿ’ ನೋಡಿ. ಇದು ಮುಂಗಾರು ಇಂತಿಪ್ಪ ಮುಂದುವರೆದ ಭಾಗದಲ್ಲಿ ಪ್ರೀತಮ್ ಮುಂಗಾರು ಮಳೆಯ ಟ್ರಾಜಿಡಿಯಿಂದ ಹೊರ ಬಂದು ಸತತ ಎಂಟನೇ ಬಾರಿಗೆ ಪಿ.ಯು.ಸಿ ಪರೀಕ್ಷೆ ಬರೆದು ಆಶ್ಚರ್ಯಕರ ರೀತಿಯಲ್ಲಿ ಪಾಸಾಗುತ್ತಾನೆ. ಮುಂದೆ ಪ್ರೀತಮ್ ನ ತಂದೆ ಗುರುಬಲ ಮುಗಿಯುವುದರ ಒಳಗಾಗಿ ಮಗನಿಗೆ ಮದುವೆ ಮಾಡುವ ಆಲೋಚನೆಯಿಂದ ಪ್ರೀತಮ್ ನನ್ನು ಸಕಲೇಶಪುರಕ್ಕೆ ಕಳಿಸುತ್ತಾರೆ. ಅಲ್ಲಿ ಒಬ್ಬ ನಾಯಕಿಯ ರೂಪಕ್ಕೆ ಮರುಳಾಗಿ, ಇನ್ನೊಬ್ಬ ನಾಯಕಿಯ ನೆರವಿನಿಂದ ಆಕೆಯ ಮನಗೆಲ್ಲುವ ಕಾಯಕದಲ್ಲಿ ತೊಡಗುತ್ತಾನೆ. ಆದರೆ ಈ ಪ್ರಕ್ರಿಯೆಯಲ್ಲಿ ಎರಡನೆಯ ನಾಯಕಿಯ ಪ್ರೇಮ ಪಾಶದೊಳಗೂ ಬೀಳುತ್ತಾನೆ. ಕಣ್ಣು ಮೆಚ್ಚಿದ ಹುಡುಗಿ ಜೊತೆ ನೂರು ವರ್ಷ ಬಾಳೊದಕ್ಕಿಂತ ಮನಸ್ಸು ಮೆಚ್ಚಿದ ಹುಡುಗಿ ಜೊತೆ ಮೂರು ದಿನ ಬಾಳೋದು ಲೇಸು ಎಂದು ಎರಡನೇ ನಾಯಕಿಯನ್ನೇ ಪ್ರೀತಿಸಲು ನಿರ್ಧರಿಸುತ್ತಾನೆ. ಇಲ್ಲಿ ಕುತೂಹಲದ ಅಂಶವೆಂದರೆ, ಎರಡನೇ ನಾಯಕಿಯನ್ನು ನಾಯಕ ಮೆಚ್ಚುವುದು ಮನಸ್ಸಿನಿಂದ ಎಂದು ಸಂಭಾಷಣೆ ಹೇಳಿದರೂ ಅದು ಪ್ರೇಕ್ಷಕನ ದಾರಿ ತಪ್ಪಿಸುವ ಮಾತು. ನಿಜವಾದ ಅರ್ಥದಲ್ಲಿ ತೀರಾ ಸರಳ ಉಡುಗೆ ತೊಡುವ ಎರಡನೆಯ ನಾಯಕಿ , ನಾಯಕನ ಕಣ್ಣನ್ನ ಸೆಳೆದಿರುವುದಿಲ್ಲ. ದೃಶ್ಯವೊಂದರಲ್ಲಿ ಎರಡನೆಯ ನಾಯಕಿ ಮೊದಲನೆಯ ನಾಯಕಿಯ ತರಹವೇ ಮಾಡ್ ಆಗಿ ಕಂಡಾಕ್ಷಣ ಅವನ ನೋಟವೇ ಬದಲಾಗುತ್ತದೆ. ಆ ದೃಶ್ಯ ಸಂಯೋಜಿಸಿರುವ ರೀತಿ, ಅದಕ್ಕೆ ತಕ್ಕನಾದ ಹಿನ್ನೆಲೆ ಸಂಗೀತ. ಅದರ ಮುಂದಿನ ದೃಶ್ಯದಲ್ಲೇ ನಾಯಕ ಮೊದಲನೆಯ ನಾಯಕಿಯನ್ನ ಬಿಟ್ಟು ಎರಡನೆಯ ನಾಯಕಿಯನ್ನ ಆಯ್ಕೆ ಮಾಡಿಕೊಳ್ಳುವುದು- ಇವೆಲ್ಲಾ ಈ ಸಂಗತಿಯನ್ನು ಪುಷ್ಠಿಕರಿಸುತ್ತವೆ. ಈ ಮೂಲಕ ಮುಂಗಾರು ಮಳೆಯ ನೈತಿಕ ಅಪಾಯಗಳನ್ನು ಅಥವಾ ಪಲ್ಲಟಗಳನ್ನು ಈ ಸಿನೆಮಾ ಇನ್ನಷ್ಟು ನೇರವಾಗಿಯೇ ಸಮರ್ಥಿಸಿಕೊಳ್ಳುತ್ತದೆ. ಇಷ್ಟ ಬಂದಂತೆ ತನ್ನ ಪ್ರೇಯಸಿಯನ್ನ ಬದಲಾಯಿಸುವ ಪ್ರೀತಮ್ ಮುಂಗಾರು ಮಳೆಯಲ್ಲಿ ಮಾಡಿದ್ದು ಫ಼್ಲರ್ಟೇ.. ಇಲ್ಲಿ ಮಾಡುತ್ತಿರುವುದು ಕೂಡ ಅದೇ. ನಗರದ ಸಮಸ್ತ ಫ಼್ಲರ್ಟ್ ಪ್ರಿಯರ ಪ್ರತಿನಿಧಿಯಾಗಿ ಪ್ರೀತಮ್ ನಿಲ್ಲುತ್ತಾನೆ. ಎರಡನೆಯ ನಾಯಕಿ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದೂ ಅವಳನ್ನು ಪ್ರೀತಿಸುವ (ಪ್ಲರ್ಟ್ ಮಾಡುವ) ನಾಯಕನ ನಿರ್ಧಾರದೊಂದಿಗೆ ಚಿತ್ರ ಕೊನೆಗೊಳ್ಳುವುದು, ಈ ಪ್ಲರ್ಟ್ ಪ್ರಿಯನ ಆಟ ಇನ್ನೂ ಮುಗಿದಿಲ್ಲ ಎಂದು ಹೇಳುವಂತಿದೆ. ಸುಖಾ ಸುಮ್ಮನೆ ಸುರಿವ ಮಳೆ.. ಮಳೆಯ ತಂಪಿಗೆ ಚುರುಮುರಿಯಂತ ಸಂಭಾಷಣೆ ಉದುರಿಸುವ ಗಣೇಶ್, ಇವುಗಳ ನಡುವೆ ಚಿತ್ರದ ತುಂಬೆಲ್ಲಾ ಇಷ್ಟವಾಗುವುದು ಎರಡನೆಯ ನಾಯಕಿಯ ಅಭಿನಯ ಮಾತ್ರ. ಮಿಕ್ಕಿದ್ದೆಲ್ಲಾ ಮುಂಗಾರು ಮಳೆಯಲ್ಲಿ ಕೊಚ್ಚಿ ಹೋಗಿದೆ..
|
|