ಒಂದು ಮನೆಯಿದೆ: ತುಂಬ ಹಳೆಯದು. ಒಂದು ಕಾಲದಲ್ಲಿ ಸಾಕಷ್ಟು ಗಟ್ಟಿಯಾಗಿದ್ದಿರಬಹುದಾದ ಅದರ ಕಂಬಗಳು ಈಗ ಖಿಲವಾಗಿವೆ. ತೊಲೆ , ಗೋಡೆಗಳ ಮೇಲಿನ ಚಿತ್ತಾರವನ್ನು ಒರಲೆಗಳು ತಿಂದಿವೆ. ಜಾರಿ ಬೀಳಲು ಅನುವಾದ ಛಾವಣಿಯಲ್ಲಿ ಭಿಕ್ಷುಕನ ಗಡ್ಡದಂತೆ ಬೆಳೆದ ಹುಲ್ಲು. ಒಟ್ಟಿನಲ್ಲಿ ಆ ಮನೆಯ ಇರುವಿಕೆಯೇ ಆ ಊರಿನ ನಾಗರೀಕ ಸೂಕ್ಷ್ಮರಿಗೂ, ಹೊಸ ಹುರುಪಿನ ಜನಕ್ಕೂ ಹಿಂಸೆಯ ವಿಷಯ. ಕೊನೆಗೆ ಎಲ್ಲರ ತೀರ್ಮಾನದಂತೆ ಆ ಮನೆಯನ್ನು ಕೆಡಹುವ ನಿರ್ಧಾರವಾಗಿ ಜನ ಹಾರೆ ಗುದ್ದಲಿಗಳೊಂದಿಗೆ ಮನೆಯನ್ನು ಸುತ್ತುವರೆಯುತ್ತಾರೆ. ಪಾಯಕ್ಕೆ ಬಿದ್ದ ಪೆಟ್ಟು ಮನೆಯ ಗೋಡೆಯನ್ನು ನಡುಗಿಸಿದ ಹಾಗೆ... ಕಿಟಕಿ ಬಾಗಿಲುಗಳನ್ನು ಚಿಮ್ಮಿ ಎತ್ತಿದ ಹಾಗೆ... ಎಸೆದ ಕಲ್ಲುಗಳು ಹೆಂಚು ಹುಡಿ ಮಾಡಿದ ಹಾಗೆ... ಮನೆ ಒಡೆಯತೊಡಗುತ್ತದೆ.ಅದೇ ಸಮಯದಲ್ಲಿ ಆ ಮನೆಯ ಒಳಗಿರುವವವನಿಗೂ ತನ್ನ ಮನೆಯೆ ಬಗ್ಗೆ ತಿರಸ್ಕಾರವಿದೆ. ಅವನೂ ತನ್ನ ಮನೆಯನ್ನು ಅಪಾರ ನೋವು, ವಿಷಾದ ಗಳಿಂದಲೇ ಒಳಗಿನಿಂದಲೇ ಒಡೆಯತೊಡಗುತ್ತಾನೆ.
ಇಂಥಹ ಸಮಯದಲ್ಲಿ ಹೊರಗಿನ ಜನರು ಎಸೆಯುವ ಕಲ್ಲುಗಳು ಒಳಗಿರುವ, ಒಳಗಿದ್ದೂ ಹೊರಗಿನವರು ಮಾಡುತ್ತಿರುವ ಕೆಲಸವನ್ನೆ ತನ್ನ ನೋವನ್ನು ಮುಚ್ಚಿಟ್ಟುಕೊಂಡು ಮಾಡುತ್ತಿರುವ ಇವನಿಗೂ ಬೀಳಬಹುದು.
*
*
*
ದೇವನೂರ ಮಹಾದೇವ ಹೇಳಿದ ಕತೆಯಿದು. ಸ್ವಲ್ಪ ಹಿಗ್ಗಿಸಿ ನಾನು ಬಳಸಿಕೊಂಡಿದ್ದೇನೆ. ಮಠ ಸಿನೆಮಾದ ಬಗ್ಗೆ ಬರೆಯಬೇಕಾದಾಗ ಈ ಕಥೆ ನೆನಪಾಯಿತು. ಮಠದ ಸ್ವರೂಪದಲ್ಲಿರುವ, ತಾನು ಮಧ್ಯದಲ್ಲಿದ್ದು ಸುತ್ತಲೂ ಒಂದು ಭ್ರಮೆಯ ಮೋಡ ಸೃಷ್ಟಿಸುತ್ತಿರುವ- ಎಲ್ಲವನ್ನೂ ಈ ನಮ್ಮ ಕಾಲದಲ್ಲಿ ಒಡೆದು ನೋಡಲಾಗುತ್ತಿದೆ. ಸಾಹಿತ್ಯದಲ್ಲಿ, ಬಣ್ಣಗಳಲ್ಲಿ, ರೋಷಾವೇಶದ ಹಾಡುಗಳಲ್ಲಿ, ಮತ್ತು ಎಲ್ಲಕ್ಕಿಂತ ನೇರದಲ್ಲಿ ಚೂಪಾಗಿ- ದೃಶ್ಯ ಮಾಧ್ಯಮದಲ್ಲಿ: ಎಲ್ಲವನ್ನೂ ಒಡೆಯಲಾಗುತ್ತಿದೆ.
ಹೀಗೆ ಮಠಗಳ ಆಂತರ್ಯವನ್ನು ಒಡೆದು ತೋರಿಸುವ, ಒಡೆದು ನೋಡುವ ಚಿತ್ರ ಮಠ. ಕನ್ನಡದಲ್ಲಿ ಈ ರೀತಿಯದ್ದೊಂದು ಭೌದ್ಧಿಕ ತಾಂತ್ರಿಕತೆಯ, ಸ್ಪಷ್ಟವಾದ ಮತ್ತು ಪ್ರೇಕ್ಷಕರ ಅಪೇಕ್ಷೆಗೆ ಯಾಂತ್ರಿಕವಾಗಿ ಸ್ಪಂದಿಸುವ ಉದ್ದೇಶವನ್ನು ಮೀರಿದ, ಈ ಕ್ರಮದ ಮೊದಲ ಸಿನೆಮಾ ಇದು. ಬಹುಷಃ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಈ ರೀತಿಯದ್ದೊಂದು ಕಾನ್ಸೆಪ್ಟ್ ಎಲ್ಲೂ ಬಂದಿರಲಿಲ್ಲ. ಹೀಗೆಲ್ಲ ಹೇಳುತ್ತಲೇ ಕೆಲವೊಂದು ರೀತಿಯಲ್ಲಿ ಈ ಸಿನೆಮವನ್ನು ಒಡೆದು ನೋಡಲೂ ಬೇಕಾಗುತ್ತದೆ. ಹಾಗಾಗಿಯೇ ಮೇಲಿನ ಕತೆಯನ್ನು ಹೇಳಿದ್ದು. ನಿರ್ದೇಶಕ ಗುರುಪ್ರಸಾದ್ ಈ ಸಿನೆಮಾದ ಮೂಲಕ ಮಠಗಳನ್ನು ಒಡೆದು ನೋಡಲು ಹವಣಿಸಿದ್ದಾರೆ. ಹಾಗೆಯೇ ಇನ್ನೂ ಅನೇಕರು ಅನೇಕ ಕ್ರಮಗಳಿಂದಲೂ, ಹತಾರುಗಳಿಂದಲೂ ಈ ರೀತಿಯ ’ಮಠ’ಗಳನ್ನೂ ಒಡೆಯಲು ಪ್ರಯತ್ನಿಸಿದವರೇ. ಹೀಗೆ ಪ್ರಯತ್ನಿಸಿದ ಅನೇಕ ದೃಷ್ಟಿಗೆ ಈ ದೃಶ್ಯ ಮಾಧ್ಯಮದಲ್ಲಿನ ’ಒಡೆಯುವ ಕ್ರಮ’ ದ ಬಗ್ಗೆ ಕೆಲವು ತಕರಾರುಗಳಿರಬಹುದು. ಅವರಲ್ಲಿ ಕೆಲವರು ಹೊರಗಿನಿಂದ ಎಸೆಯಬಹುದಾದ ಕಲ್ಲುಗಳು ’ಮಠದ’ ಒಳಗಿನ ಕ್ರಿಟಿಕಲ್ ಇನ್ ಸೈಡರ್ ಗುರುಪ್ರಸಾದ್ ಗೂ ತಗುಲಬಹುದು.
ಅವರು ಕೋಂಚ ಸಹಿಸಿಕೊಳ್ಳಬೇಕು ಅಷ್ಟೇ.
೧
ಆಶಯವನ್ನು ಬಿಟ್ಟುಬಿಡೊಣ, "ಮಠ" ಕ್ಕೆ ಒಂದು ಅತ್ಯಂತ ಮಾನವೀಯವಾದ ನಿರೂಪಣೆಯಿದೆ. ಚೂಪಾದರೂ ಎಲ್ಲೂ ಅನಗತ್ಯ ಚುಚ್ಚದ ವಿವೇಚನೆಯಿದೆ. ಒಮ್ಮುಖವಾಗಿ ಎಲ್ಲವನ್ನೂ ಕೊಚ್ಚಿಕೊಂಡು ಹರಿಯದ ಹಾಗೆ ತನ್ನನ್ನೆ ತಡೆದು ನಿಲ್ಲಿಸಿಕೊಳ್ಳುವ ಅನೇಕ ಒಡ್ಡುಗಳಿವೆ. ತನ್ನ ಹಾಸ್ಯದ ಭಾರಕ್ಕೆ ತಾನೇ ಕುಸಿದು ವಿಷಾದದಲ್ಲಿ ಮುಗಿಯುವ ವಿಸ್ಮಯವಿದೆ.
ಮಠದ ದೃಶ್ಯಗಳ ಕಟ್ಟಡವು ಪರಸ್ಪರ ಅಷ್ಟೇನೂ ಗಾಢ ಸಂಬಂಧಗಳನ್ನು ಹೊಂದಿರುವ ಕ್ರಮದಲ್ಲಿಲ್ಲ. ಆದರೆ, ಬಿಡಿಬಿಡಿಯಾಗಿ ಕಾಣುವ ದೃಶ್ಯಗಳಲ್ಲಿ ಥಟ್ಟನೆ ಒಂದು ಸಂಬಂಧವನ್ನೂ, ಒಂದು ಭಾವವನ್ನೂ, ಒಂದು ಅರ್ಥವನ್ನೂ ಕಾಣಿಸಿಬಿಡುವ ನಿರ್ದೇಶಕನ ಜಾಣ್ಮೆ ಕೇವಲ ಚಾತುರ್ಯವಾಗಿ ಉಳಿಯುವುದಿಲ್ಲ. ಒಂದಿಡೀ ವ್ಯವಸ್ಥೆಯನ್ನು ನೋಡುವ ಕ್ರಮವನ್ನೇ ನಿರ್ದೇಶಕ ಆ ಮೂಲಕ ಹೊಳೆಯಿಸಿಬಿಡುತ್ತಾನೆ.
ಇ. ಎಮ್ ಫಾರ್‌ಸ್ಟರ್ ಎಂಬ ಲೇಖಕನ ಒಂದು ಮಾತಿದೆ. "ಓನ್ಲೀ ಕನೆಕ್ಟ್"- ಅಂತ.
ಅರ್ಥಾತ್ ಸಂಬಂಧವಿದೆ ಎಂದು ಕಾಣಿಸದೇ ಇರುವ ವಿಧ್ಯಮಾನಗಳ ನಡುವೆ ಥಟ್ಟನೆ ಒಂದು ಸಂಬಂಧವನ್ನು ಕಾಣಿಸಿಬಿಡುವುದು ಕೇವಲ ಜಾಣತನ ಮಾತ್ರವಷ್ಟೇ ಅಲ್ಲ; ಅದು ಒಂದು ನೋಡುವ ಕ್ರಮ ಸಹ ಅನ್ನುತ್ತಾನೆ ಅವನು.
ಇಡೀ ’ಮಠ’ ಸಿನೆಮಾದಲ್ಲಿಯೇ ಈ ಹೊಳೆಯಿಸುವ, ಕಾಣುವ ಕ್ರಮವಿದೆ. ಒಬ್ಬಳು ಕುರುಡಿ ಮತ್ತು ಒಬ್ಬ ಭಿಕ್ಷುಕನ ನಡುವಿನ ಸಂಬಂಧ, ಮಾತುಕತೆಗಳು ಮೊದಲಿನಿಂದಲೂ ಕೇವಲ ಬಿಡಿ ದೃಶ್ಯಗಳಾಗಿ ಕಾಣುವವು ಅಂತ್ಯದಲ್ಲಿ ಒಮ್ಮೆಗೆ ಒಂದು ದೃಶ್ಯದಲ್ಲಿ ಪೂರ್ಣ ಅರ್ಥದ ಮಿಂಚಾಗಿ ಹೋಳೆದುಬಿಡುವ ಅಪೂರ್ವವನ್ನೂ ನಿರ್ದೇಶಕ ಸಾಧಿಸಿ ಬಿಡುತ್ತಾನೆ.
ಕುರುಡಿ - ಭಿಕ್ಷುಕನ ನಡುವಿನ ಸಂಭಾಷಣೆಯ ಇಂಪ್ಯಾಕ್ಟ್ ಅನ್ನು ನಿರ್ದೇಶಕ ಚಿತ್ರಿಸುವುದು ಮಠಾಧಿಪತಿಗಳಾಗಲು ಬಂದ ಏಳು ಜನ ಹುಡುಗರ ಮೇಲೆ. ಅದಿರದಿದ್ದರೆ, ಆ ದೃಶ್ಯ ಕೇವಲ ಪ್ರೇಕ್ಷಕರನ್ನು ಉದ್ದೇಶಿಸಿದ ನೀತಿಪಾಠವಾಗುವ ಅಪಾಯವಿತ್ತು. ಅದನ್ನು ಆತ ಈ ಎರಡು ’ಬೇರೆ’ಗಳ ನಡುವಿನ ಜೋಡಿಸುವಿಕೆಯಿಂದ ಅರ್ಥಪೂರ್ಣವಾಗಿಸಿಬಿಡುತ್ತಾನೆ.
ಇಡೀ ’ಮಠ’ ಚಿತ್ರದ ಸ್ಟ್ರಕ್ಚರ್ ಈ ಬಗೆಯದ್ದು. ಮೊದಲಿನಿಂದಲೂ ’ಬಿಡಿ’ಯಾಗಿದ್ದ ದರಿದ್ರಲಕ್ಷ್ಮಿ ಪೂರ್ಣ ರೂಪಕವಾಗುವುದೂ, ಅಪ್ಪಯ್ಯನಿಗೆ ತನ್ನ ಪ್ರಯತ್ನದ ಫಲ ಅಂತ್ಯದಲ್ಲಿ ಗೋಚರಿಸುವುದೂ, ಎಲ್ಲವೂ ಈ ಬಿಡಿಗಳನ್ನು ಜೋಡಿಸಿ ಕಾಣುವ ಅಪೂರ್ವ ವಿನ್ಯಾಸದಿಂದಲೇ ಸಾಧ್ಯವಾದದ್ದು.
ಒಂದು ಕಲಾಕೃತಿಯ ಜೊತೆಗೆ ಮುಖಾಮುಖಿಯಾಗುವಾಗ ಅದರ ಆಕೃತಿಯೊಂದಿಗೆ ಗುದ್ದಾಡಬಾರದು, ಬದಕಾಗಿ ಅದ ಆಶಯವನ್ನು ನೋಡಬೇಕು, ವಿಮರ್ಷಿಸಬೇಕು ಅನ್ನುತ್ತಾರೆ ಹಿರಿಯರು. ಆದರೆ, ಮಠದಂಥಹ ಚಿತ್ರದಲ್ಲಿ ಆಳದ ಆಶಯವು ಮಾನವೀಯವೂ, ಪೂರ್ಣವೂ ಆಗಿದ್ದಾಗ, ಮೇಲಾಗಿ ಇದು ಸಿನೆಮ ವಿಮರ್ಷೆಯೂ ಆದಾಗ ಆಕೃತಿಯನ್ನೇ ನೋಡುವುದು ಅನಿವಾರ್ಯವಾಗುತ್ತದೆ. ಈ ವಿಷಯದಲ್ಲಿ ಮಠ ಚಿತ್ರಕ್ಕೊಂದು ಹೊಸ ಸಾಧ್ಯತೆಯಿದೆ. ಅದೆಂದರೆ ಈ ಚಿತ್ರದ ಅಪೂರ್ವ ಒಳನೋಟ ಮತ್ತು ಮಾನವೀಯ ಚಿತ್ರಗಳ ಘನತೆ ನಮಗೆ ತಾಗುವಂತೆ ಮಾಡುವುದು ಸಿನೆಮಾದ ವಿನ್ಯಾಸವೇ. ತನ್ನ ತಪ್ಪುಗಳೊಂದಿಗೆ ತಾನೇ ಮುಖಾಮುಖಿಯಾಗುತ್ತ, ತನ್ನನ್ನು ತಾನೇ ಓಡೆದುಕೊಳ್ಳುವ ಮಠ, ನಿರ್ಜೀವವಾಗದೇ ಅದರ ತೀವ್ರತೆಯಲ್ಲಿಯೇ ನಮ್ಮನ್ನು ತಲುಪುತ್ತದೆ.: ಎಲ್ಲಿಯೂ ಪೇಲವವಾಗದೇ , ತನ್ನ ವಾಚಾಳಿತನದಲ್ಲಿಯೂ ಮೌನದ ಮೃದುತ್ವವನ್ನು ಮೀರದೇ.
ಈಗ ತಕರಾರು: ಮಠದ ಈ ಅರ್ಥವನ್ನು ಹೋಳೆಯಿಸುವ ಗುಣವೇ ಹೊರಗಿನಿಂದ ಈ ಚಿತ್ರವನ್ನು ಏಕಮುಖಿಯನ್ನಾಗಿ ಮಾಡಿಬಿಡುತ್ತದೆಯೇ ಎಂಬ ಅನುಮಾನ. ಅದು ಹೀಗೆ. ಒಂದು ನೇರ, ಸ್ಪಷ್ಟ ’ಕಥೆ’ ಅಂತ ಇರುವ ಸಿನೆಮಾಕ್ಕೆ, ಒಂದು ರೂಪವಿರುತ್ತದೆ. ಅದು ಏನನ್ನು ಹೇಳ ಹೊರಟಿದೆಯೋ ಅದರ ಸ್ಪಷ್ಟ ದಾಟಿಸುವಿಕೆ ಇರುತ್ತದೆ. ಆದರೆ ಮಠ ಹಾಗಲ್ಲ. ಇಲ್ಲಿ ದೃಶ್ಯಗಳು ತಮ್ಮ ಬಿಡಿ ಬಿಡಿ ಯಿಂದ ಕಡೆಗೊಮ್ಮೆ ಇದ್ದಕ್ಕಿದ್ದಂತೆ ಒಂದಾಗಿ ಒಂದು ’ಅರ್ಥ’ ವನ್ನು ಹೊಮ್ಮಿಸಿಬಿಡುವುದರಿಂದ ಪ್ರೇಕ್ಷಕರಾದ ನಾವೂ ಆ ಸ್ಪಷ್ಟ ಅರ್ಥದ ಭಾಗವಾಗಿ ಬಿಡುತ್ತೇವೆ. ನಮಗೆ ಅದರ ಪೂರ್ಣತೆಯ ಜೊತೆ ಘರ್ಷಿಸುವ ಅವಕಾಶವೇ ಇಲ್ಲದಂತಾಗುತ್ತದೆ.
ಆಶಯದ ಜೊತೆ ವಾಗ್ವಾದ ಹೂಡದಂತೆ ನಮ್ಮನ್ನು ತಡೆಯುವ ಚಿತ್ರಕಥೆಯ ವಿನ್ಯಾಸವು ನಮ್ಮನ್ನು ನಿರ್ದೇಶಕನ ಮೂಗಿನ ನೇರಕ್ಕೆ ನೇತುಕಾಕುವ ಹುಕಿಯದ್ದೇ? ಕಡೆಗೆ ಅಂತಿಮದಲ್ಲಿ ಮೀಂಚುವ ಅರ್ಥದ ಜೊತೆ ನಾವು ಯುದ್ಧ ಮಾಡಬಹುದಾದರೂ, ಅದನ್ನು ಒಡೆಯಲು ಪ್ರಯತ್ನಿಸಬಹುದಾದರೂ ಅಷ್ಟರ ವೇಳೆಗೆ ನಾವೇ ದೃಶ್ಯಗಳ ಇಂಪ್ಯಾಕ್ಟ್ ನ ಮಳೆಯಲ್ಲಿ ನೆನೆದಿರುವುದು ನಮ್ಮನ್ನು ಈ ಮುಕ್ತತೆಯಿಂದ ನಿಯಂತ್ರಿಸಬಹುದು. ಇದು ಮಠದ ತಮಾಷೆ ಮತ್ತು ವ್ಯಂಗ್ಯ.
’ಮಠ’ ವನ್ನೂ, ಅದರ ಹೊಟ್ಟೆಯನ್ನೂ ಒಡೆಯಲು ಹೊರಟ ಚಿತ್ರ, ಪ್ರೇಕ್ಷಕನಿಂದ ತಾನು ಒಡೆಯಲ್ಪಡದಂತೆ ಕಾಪಾಡಿಕೊಳ್ಳುವ ಸ್ವಯಂ ದ್ವಂದ್ವಕ್ಕೆ ಒಳಗಾಗಿಬಿಡುತ್ತದೆ.
೨
ಅಂಥ ವಿಶೇಷವಾದ ಕಥೆ ಅಂತ ಏನಿಲ್ಲ. ಸಂಸಾರಿಯಾದ ಸ್ವಾಮಿಯೊಬ್ಬನ ಬದಲಾಗಿ ಹೊಸ ಮಠಾಧಿಪತಿಯನ್ನು ನೇಮಿಸಲು ಅಭ್ಯರ್ಥಿಗಾಗಿ ಪತ್ರಿಕಾ ಪ್ರಕಟಣೆ ಕೊಡಲಾಗುತ್ತದೆ. ಏಳು ಜನ ಅಭ್ಯರ್ಥಿಗಳು. ಅವರಿಗೆ ತರಬೇತಿ ನೀಡಲಾಗುತ್ತದೆ- ಮಠಧಿಪತಿಯಾಗಲು. ಹೊಟ್ಟೆಪಾಡಿಗೊಂದು ದಾರಿಯಾಯಿತೆಂದು ಎಲ್ಲರೂ ವಿದ್ಯೆ ಕಲಿಯದೇ, ಕಲಿತರೂ ಕಲಿತದ್ದನ್ನು ತೋರಿಸಿಕೊಳ್ಳದೇ ಕಾಲ ದೂಡುತ್ತಾರೆ. ಕಡೆಗೆ ಅಂತಿಮ ಪರೀಕ್ಷೆಯ ಸಂಧರ್ಭದಲ್ಲಿ ಒಬ್ಬ ವೇಂಕಟೇಶ ತನ್ನ ಮನಸ್ಸಿನ ರಾಜಕೀಯಕ್ಕೆ ಒಳಗಾಗಿ ಬೇರೆ ಆರು ಜನರಿಗೆ ವಂಚಿಸಿ ತಾನು ಮಠಾಧೀಶನಾಗಿಬಿಡುವುದರೊಂದಿಗೆ...
.... ಅಷ್ಟೇ ಅಲ್ಲ. ತನ್ನ ಮಠಾಧೀಶನ ಸ್ಥಾನವನ್ನು ಥಟ್ಟನೆ ನಿರಾಕರಿಸುವುದರೊಂದಿಗೆ ಚಿತ್ರ ಮುಗಿಯುತ್ತದೆ. ನಡುವೆ ಇನ್ನೂ ಏನೇನೋ ಆಗುತ್ತದೆ. ಮೊದಲಿನ ಸ್ವಾಮಿ ಕಾವಿ ಇಲ್ಲದೇ ಮಠಕ್ಕೆ ಮರಳುತ್ತಾನೆ. ಈ ಕಥನ ಚಕ್ರದಲ್ಲಿ ಎಲ್ಲ ಪಾತ್ರಗಲೂ ಅನನ್ಯ ರೂಪಕಗಳಾಗಿ ಮೂಡುತ್ತವೆ.
ಜಗತ್ತಿನಲ್ಲಿ ಎಲ್ಲರೂ ಕುರುಡಾಗಿಯೇ ಭವಿಷ್ಯ ಹೇಳುವರೆಂಬ ಅಪೂರ್ವ ಹೊಳಪಿನ ಕುರುಡಿ ಕವಡೆಯ ಹೆಂಗಸು. ಭಿಕ್ಷುಕ. ಕುರುಡು ಮಕ್ಕಳ ಸಾನಿಧ್ಯದಲ್ಲೂ ಅಮಾನವೀಯನಾಗಿಯೇ ಉಳಿಯುವ ಮ್ಯಾನೇಜರ್, ಅಪ್ಪಯ್ಯನ ಸಾತ್ವಿಕಕ್ಕೆ ಮೊನಚಾಗಿ ಮುಖಾಮುಖೀಯಾಗುವ ಮಗ- ಎಲ್ಲರೂ ರೂಪಕಗಳೇ ಇಲ್ಲಿ.
ಹೀಗೆ ಮಠಕ್ಕೆ ಒಂದು ನೇರ ರೇಖೆಯ ಗುರುತಿಸಬಲ್ಲ ಕಥೆಯಿಲ್ಲ. ಎಲ್ಲ ದೃಶ್ಯಗಲೂ ಕಥೆಯ ನೇರ ಭಾಗವಾಗಿ ಕಾಣದಾದರೂ ಒಂದು ದೃಶ್ಯದ ಗೈರಿನಲ್ಲೂ ಕಥೆಯ ಬಂಧ ಸಡಿಲಾಗಬಹುದು. ಈ ಎಚ್ಚರಿಕೆಯ ಕ್ರಮದಲ್ಲೆ ದೃಷ್ಟಿ ಚೂಪಾಗುತ್ತದೆ. ಚಿತ್ರಕತೆ ಎಲ್ಲೂ ಮೋಡಾಗದಂತೆ ಕಥೆಯ ಗುರಿ ಅದನ್ನು ಮುನ್ನಡೆಸುತ್ತದೆ,
ಇಂಥ ಮಠ ಚಿತ್ರಕ್ಕೆ ಒಂದು ಗುಣವಿದೆ. ಒಡೇಯುವಿಕೆಯದ್ದು. ಹೊರಗಿನ ಗಟ್ಟಿ ರೂಪಗಳ ಒಡೇಯುವಿಕೆಯ ಗುಣ ಮಾತ್ರವಲ್ಲ. ಅದು ತನ್ನ ಕಟ್ಟಡವನ್ನೇ ಒಡೇದುಕೊಳ್ಳುವ ಗುಣವುಳ್ಳದ್ದು. ಅಂದರೆ, ತಾನು ಏನನ್ನು ಉದ್ದೇಶಿಸಿದೆಯೋ ಅದನ್ನು ಮಾತ್ರವೇ ನೇರವಾಗಿ, ಎಚ್ಚರದಿಂದ ಮುರಿಯುತ್ತ ಹೋಗದೇ ತನ್ನ ನೇರ ಉದ್ದೇಶವನ್ನೇ ಸ್ವವಿಮರ್ಷೆಗೊಳಪಟ್ಟು ಮುರಿದುಕೊಳ್ಳುತ್ತದೆ. ಹಾಗಾಗಿ ಉದ್ದಕ್ಕೂ ಚಿತ್ರಕ್ಕೆ ತನ್ನ ಕುರಿತೇ ವಿಮರ್ಷೆಯ ಎಚ್ಚರವಿದೆ.
ವೇಶ್ಯೆಯ ಮನೆಗೆ ಕಾಮದ ಅಮಲಿನಲ್ಲಿ ಹೋಗುವವನ ದೃಶ್ಯವನ್ನು ಪ್ರೆಕ್ಷಕರ ಹೊಳೆಯುವಿಕೆಗಳನ್ನು ನಿರ್ದೇಶಕ ಕಟ್ಟುತ್ತಾನೆ. ಮಾತಿನ ಚಕಮಕಿ, ಆಟ, ಇತ್ಯಾದಿಗಳಲ್ಲಿ ರಂಗೇರಿಸುವ ಆ ದೃಶ್ಯ ಮುಗಿಯುವುದು ದಟ್ಟ ವಿಷಾದದ ಅರಿವಿನೊಂದಿಗೆ, ನಾಲಗೆಯ ನಿಶ್ಚೇಷ್ಟತೆಯೊಂದಿಗೆ. ಇಡೀ ಆತುರದ ಬೆಂಕಿಯು ತಟ್ಟನೆ ನಂದಿಹೋಗುತ್ತದೆ. ಕೇವಲ ಒಂದು ದೃಶ್ಯವಲ್ಲ. ಮಠದ ಎಲ್ಲ ದೃಶ್ಯ, ಸೀಕ್ವೆನ್ಸ್ ಗಳೂ ತಮ್ಮ ಚಹರೆಗಳನ್ನು, ಸ್ಥಾಪಿತ ರೂಪಗಳನ್ನೂ ಮುರಿದುಕೊಂಡೇ ಮುಗಿಯುತ್ತವೆ. ಕ್ರೈಂ ಸ್ಟೋರಿಯ ದೃಶ್ಯಾವಳಿಯೂ ಏನನ್ನೋ ಕಟ್ಟುತ್ತ ಏನೂ ಇಲ್ಲದ ಸ್ಥಿತಿಯಾಲ್ಲಿ ಮುರಿಯುತ್ತದೆ. ಪ್ರೇಮದ ಮಹಲನ್ನು ಕಟ್ಟಹೊರಟ ರಾಜ , ಆಳದ ಪ್ರೀತಿಯ ಜೀವಂತಿಕೆಯನ್ನು ಎದುರಿಸುವ ಅಪೂರ್ವದಲ್ಲಿ ಒಂದು ಉಪಕತೆ ಮುಗಿಯುತ್ತದೆ.
-ಹೀಗೆ.
ಇದರ ಮುಂದುವರಿಕೆಯೋ ಎನೋ, ಒಂದೊಂದು ಸಂಭಾಷಣೆಯೂ , ಒಂದೊಂದು ದೃಶ್ಯವೂ ತನ್ನದಲ್ಲದ, ತಾನು ಕಟ್ಟಿ ಕಾಣಿಸಲು ಹೊರಟದ್ದಕ್ಕಿಂತ ಭಿನ್ನ ನೆಲೆಗೆ ಜಿಗಿದು ಮುಗಿಯುವ ಹಾಗೆಯೇ, ಇಡೀ ಮಠ ಸಿನೆಮಾದ ಅಂತ್ಯವೂ-
ಮಠಾಧೀಶರಾಗಲು ಬಂದ ಹುಡುಗರು ಕಡೆಗೆ ಮನುಷ್ಯರಾಗುವುದರಲ್ಲಿಯೂ, ಮಠಾಧೀಶನಾದ ವೆಂಕಟೇಶ ಅದನ್ನು ತ್ಯಜಿಸುವುದರಲ್ಲಿಯೂ ತನ್ನ ಇಡೀ ರಚನೆಯನ್ನು ಒಡೆದುಕೊಳ್ಳುವ "ಮಠ"ದ ಗುಣವಿದೆ.
ಇದನ್ನು ನಾವು ಮುಂದುವರೆಸಿ ಹೇಳಬಹುದಾರೆ:
ಮಠ ಸಿನೆಮಾ ಒಡೆದದ್ದು ’ಮಠ’ ಗಳನ್ನು ಮಾತ್ರವೆ ಅಲ್ಲ; ತನ್ನದೇ ಸ್ಟ್ರಕ್ಚರ್ ಅನ್ನು ಮಾತ್ರವೇ ಅಲ್ಲ;-
- ಅದು ಒಡೆದದ್ದು ಕನ್ನಡ ಇಂಡಸ್ಟ್ರಿಯ ಸಿನೆಮಾ ಸಂರಚನೆಗಳ ಕ್ರಮವನ್ನೂ ಸಹ.
*
*
*
ಒಂದು ಸಿನೆಮಾದಲ್ಲಿ ಅದು ನೇರವಾಗಿ ತೋರಿಸುವುದರನ್ನಷ್ಟನ್ನೇ ಅಲ್ಲದೇ ಕೆಲವು ಪರೋಕ್ಷ ಹೊಳೆಯುವುದನ್ನೂ ಗಮನಿಸುವುದೂ, ದಾಖಲಿಸುವುದೂ ಉದ್ಧಟತನವಲ್ಲದೇ ಹೋದರೆ ಒಂದು ಗ್ರಹಿಕೆಯನ್ನು ಹೇಳಬೇಕು. ಮಠ ಚಿತ್ರ ಕಟ್ಟಿಕೊಡುವ ಮಠ ಗಳ ಪರಿಸರದಲ್ಲಿ ಭ್ರಷ್ಟತೆಯಿದೆ. ಕೊಲೆಗಳಾಗಿವೆ. ಅಸಹ್ಯ ಕಲೆಗಳಿವೆ. ಅಲ್ಲಿಗೆ ಮಠಾಧಿಪತಿಗಳಾಗುವ ಕಾರಣದಿಂದ ಬರುವ ಏಳು ಜನ ಯುವಕರೂ ವಯಕ್ತಿಕ ನೆಲೆಗಳಲ್ಲಿ ಭ್ರಷ್ಟರೇ. ಸುತ್ತಲಿನ ಪರಿಸರದ ಭ್ರಷ್ಟತೆಯನ್ನು ಆ ಎಲ್ಲ ಪಾತ್ರಗಳೂ ತಮ್ಮ ಮೊನಚಾದ ಹಾಸ್ಯದಲ್ಲಿ ನೋಡುತ್ತವೆ. ಯಾರೋ ಯಾರಿಗೋ ’ಮುಂಡಾಯಿಸಿದ್ದು’ ಅವುಗಳಿಗೆ ತಮಾಷೆಯೇ. ಮಠಾಧೀಶನೊಬನ ಸಾವು ಸೀರಿಯಸ್ಸಾದ್ದಲ್ಲ. ಆ ಹೆಣದ ವಿಲೇವಾರಿಯಷ್ಟೇ ಸಮಸ್ಯೆ. ಮಠಾಧಿಪತಿಯಾಗಲಿಕ್ಕೆ ಹಿರಿಯನನ್ನು ಕೊಂದ ಕಿರಿಯ ಸ್ವಾಮಿಯೂ ಈ ಏಳೂ ಪಾತ್ರಗಳ ಬಾಯಲ್ಲಿ ಹಾಸ್ಯಕ್ಕೆ ನೆಪ ಮಾತ್ರ.
ಅಂದರೆ , ಈ ಎಳೂ ಪಾತ್ರಗಳೂ ತಮ್ಮ ಸುತ್ತಲಿನ ಅಸಹನೀಯ ಭ್ರಷ್ಟತೆಯನ್ನು ತಮ್ಮ ಹಾಸ್ಯದಲ್ಲಿ ಕರಗಿಸಿಬಿಡುತ್ತವೆ; ಅವಕ್ಕದು ನೇರ ತಾಗುವ ಉರಿಯಲ್ಲ. ಆದರೆ ಒಮ್ಮೆ ಒಬ್ಬ ವೆಂಕಟೇಶ ತಾನು ಮಠಾಧಿಪತಿಯಾಗಲಿಕ್ಕೆ ಉಳಿದೆಲ್ಲರಿಗೆ ವಂಚಿಸಿಬಿಡುತ್ತಾನೆ. ಆಗ:
-ಆಗ ತಣ್ಣಗಾಗುತ್ತವೆ ಎಲ್ಲ ಆರೂ ಇತರ ಪಾತ್ರಗಳು.
ಆಗ ತಾಗುತ್ತದೆ ಸುಳ್ಳಿನ ಉರಿ.
ಮನುಷ್ಯ ಸಂಕುಲದ ಭ್ರಷ್ಟತೆಯ ಮೂಲ ಬೀಜ ಇರುವುದು ಅವನ ವಯಕ್ತಿಕ ಸುಳ್ಳುಗಳಲ್ಲಿಯೇ. ವಂಚನೆಯ ಹುಕಿಗಳಲ್ಲಿಯೇ. ಇದು ಏಕಾಏಕಿ ಅರಿವಾಗಿಹೋದ ಆ ಪಾತ್ರಗಳು ಇದರ ಅಘಾತವನ್ನು ತಡೆಯಲಾರದೇ ಎಲ್ಲ ಪಾತ್ರಗಲೂ ಮೂಕವಾಗುತ್ತವೆ. ಹಾಸ್ಯದ ಹೆಣಕ್ಕೆ ಕಣ್ಣೀರೆಂಬ ಭಾಷೆಯ ತರ್ಪಣ ಬಿಡುತ್ತವೆ. ಚಿತ್ರ ಇದನ್ನು ನೇರ ಚಿತ್ರಿಸದೇ ಇರಬಹುದು. ಆದರೆ ಮನುಷ್ಯನ ಆಳದ ಭ್ರಷ್ಟತೆ ಅವನ ಪರಿಸರವನ್ನು ಕಂಗೆಡಿಸುವ, ನೋವಿಗೆ ನೂಕುವ ಸತ್ಯವನ್ನು ಮಠ ಅನಾವರಣಗೊಳಿಸುತ್ತದೆಂದು ನನಗೆ ಅನ್ನಿಸಿದ್ದು "ಓನ್ಲೀ ಕನೆಕ್ಟ್" ಕೂಡ ಇರಬಹುದು. ಆದರೆ ಅದು ಸತ್ಯವೂ ಹೌದಲ್ಲವೇ?
ಜೊತೆಗೆ ತನ್ನೆಲ್ಲ ಸ್ವಯಂ ಒಡೆದುಕೊಳ್ಳುವ ಗುಣಗಳಂತೆಯೇ ತನ್ನ ಹಾಸ್ಯದ ತಿಳಿವನ್ನು ಕದಡಿಕೊಳ್ಳಲು ಮಠ ತನಗೇ ತಾನೇ ಎಸೆದುಕೊಂಡ ಕಟುವಾದ ಕಲ್ಲೂ ಇದಿರಬಹುದು.
-೩-
ತನ್ನ ಕರೆಕ್ಟ್-ನೆಸ್ ನ ಕಾರಣದಿಂದಲೇ ಮಠ ಸಿನೆಮಾ ಪೂರ್ವನಿರ್ಧರಿತ ಅನ್ನಿಸುವುದು ಹೌದು. ಇದನ್ನು ಅದರ ಹೆಚ್ಚುಗಾರಿಕೆ ಎನ್ನಬೇಕೆಂದು ಹೇಳಬೇಕೆಂದು ನನಗೇನೂ ಅನ್ನಿಸುವುದಿಲ್ಲ. ಏಕೆಂದರೆ, ಈ ರೀತಿಯ ಪ್ರೀ ಡಿಟರ್‌ಮಿನೇಷನ್ ನ ಗುಣ ಯಾವುದೇ ಒಂದು ಕೃತಿಯ ಪೊಯೆಟ್ರಿ ಯನ್ನು ಇಲ್ಲವಾಗಿಸಿಬಿಡುತ್ತದೆ. ದೃಶ್ಯ ಮಾಧ್ಯಮಕ್ಕೆ ಈ ಪೂರ್ವಯೋಜಿತ ಮೇಕಿಂಗ್ ನ ಕ್ರಮ ಅನಿವಾರ್ಯವೇ. ಆದರೂ ಅದು ತನ್ನ ಕರೆಕ್ಟ್‌ನೆಸ್ ಗಳನ್ನು ಚೂರಾದರೂ ದೂರ ಮಾಡಿ ನೋಡುವುದು ಒಳ್ಳೆಯದು. ರೂಪಕದ ಈ ಮಾತು ಗುರು- ಗೆ ಅರ್ಥವಾದೀತು. ಈ ಪೂರ್ವನಿರ್ಧಾರದ ಕಾರಣದಿಂದಲೇ ಮಠದ ಭಾಗವಾಯಿತೇನೋ ಎಂದು ಕಾಣಿಸುವ ಹಾಡು-- ವಾಂಟೆಡ್... ವಾಂಟೆಡ್.... ಏಕೆಂದರೆ ಆ ಹಾಡು ತನ್ನ ಅನಿವಾರ್ಯ ಉಪಸ್ಥಿತಿಯನ್ನು ಅಲ್ಲಿ ಮೂಡಿಸುವುದಿಲ್ಲ.
ಗುರು ಈ ಪ್ರೀ-ಡಿಟರ್ಮಿನೇಷನ್ ಅನ್ನು ಪ್ರೀ-ಕನ್ಸೀವ್ಡ್ ಎಂದು ತಿದ್ದಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅವೆರಡಕ್ಕೂ ವ್ಯತ್ಯಾಸವಿದೆ. ಒಬ್ಬಳು ತಾಯಿಗೆ ತನ್ನ ಹೊಟ್ಟೆಯೊಳಗಿನ ಮಗು ಹೇಗಿದೆ ಎಂದು ಕಲ್ಪನೆಗಳಿರುತ್ತವೇಯೇ ಹೊರತು, ಅದ ಮೂಗು ವಕ್ರವಾಗಿದೆ, ಕಣ್ಣೂ ಕಿರಿದಾಗಿದೆ ಎಂದೆಲ್ಲ ಗೊತ್ತಿರುವುದಿಲ್ಲ. ಅವಳು ಕನ್ಸೀವ್ಡ್ ಹೌದು. ಆದರೆ ಡಿಟರ್ಮೈನ್ಡ್ ಅಲ್ಲ. ಕಲ್ಪನೆಯ ನೆಲೆಯಲ್ಲಿಯೇ ಅಲ್ಲವಾದರೂ ಕ್ರಿಯೆಯ ಸಂಧರ್ಭದಲ್ಲಿಯಾದರೂ ವಕ್ರವಾಗಬೇಕಾದ ಅನಿವಾರ್ಯತೆ ಒಂದು ಕೃತಿಗಿರುತ್ತದೆ. ಮಠಕ್ಕೆ ಚೂರು ಅದಿರಬೇಕಿತ್ತು. ಸ್ಪಷ್ಟತೆಯನ್ನೇ ಯಾವುದೇ ಕೃತಿಯ ಒಳ್ಳೆಯ ಗುಣವನ್ನಾಗಿ ಗ್ರಹಿಸುವುದು ಅಪಾಯಕಾರಿ. ಎಲ್ಲದಕ್ಕೂ ತಾನು ಅಂತ್ಯ ಒದಗಿಸಬಲ್ಲೆನೆಂಬ ನವಿರಾದ ಅಹಂಕಾರ ಹೊಂದಿದ ಮತ್ತು ಸಮಸ್ಯೆಯನ್ನು ಉತ್ತರ ಒದಗಿಸುವ ಮೂಲೋದ್ದೇಶದಿಂದಲೇ ಕೈಗೆತ್ತಿಕೊಳ್ಳುವ ಕೃತಿಯು ಈ ರೀತಿ ಪ್ರಿ-ಡಿಟರ್ಮೈನ್ಡ್ ಆಗುತ್ತದೆ: ಭೈರಪ್ಪನವರ ಕಾದಂಬರಿಗಳ ಹಾಗೆ. ತಾನು ಒಳಗಾಗಿರುವ ಅಥವ ತನ್ನನ್ನು ಒಳಗೊಂಡಿರುವ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂಬ ಆತಂಕದಿಂದಲೂ, ನಿಸ್ಸಹಾಯಕತೆಯಿಂದಲೂ ಆ ಸಮಸ್ಯೆಗೆ ಎದುರಾಗುವ ರೀತಿಯು ನಮ್ಮನ್ನು ಹೆಚ್ಚು ನಿಜವಾಗಿಸುತ್ತದೆ. ಚೈತನ್ಯರನ್ನಾಗಿಸುತ್ತದೆ: ಲಂಕೇಶರ ಹಾಗೆ.
ಕಮರ್ಶಿಯಲಿ ಜನರನ್ನು ತಲುಪಬೇಕಾದ ಒತ್ತಡಗಳುಳ್ಳ ’ಮಠ’ ದಂಥಹ ಸಿನೆಮಾಗಳಲ್ಲಿ ಇನ್ನೂ ಏನನ್ನೋ ಬಯಸುವುದೂ, ಕಣ್ಣು ಕಿರಿದಾಗಿಸಿ ಸೂಕ್ಷ್ಮ ವಾಗುವುದೂ ದುಬಾರಿಯಾದೀತು. ಮತ್ತು ಸಾಹಿತ್ಯದ ಅಸ್ಪಷ್ಟತೆಯನ್ನು ಚಿತ್ರವೊಂದರಲ್ಲಿ ಹುಡುಕುವ ದೃಷ್ಟಿಕೋನವೂ ತಪ್ಪಿರಬಹುದು. ಆದರೆ ಹೀಗೆ ನೋಡಿದಾಗ ನಾವು ಹೇಳಬಹುದಾದ್ದೆಂದರೆ ಮಠವನ್ನು ಒಡೇಯಲೆತ್ನಿಸುವ, ಮಠವನ್ನು ಕಟ್ಟಲೆತ್ನಿಸುವ ಪಾತ್ರಗಳೂ, ನಿರ್ದೇಶಕನೂ ನಿಸ್ಸಹಾಯಕರಾಗಬೇಕು. ತನ್ಮೂಲಕ ಚೈತನ್ಯಶೀಲರೂ. ಇದು ವಾದವಲ್ಲ; ಆಶಯ. ಏತಕ್ಕಾಗಿ ಮಾತನ್ನು ಹೇಳಬೇಲಾಗಿ ಬಂತೆಂದರೆ ಮಠಕ್ಕೆ ಈ ಸಾಧ್ಯತೆಯಿದೆ. ಯಾವಾಗ ನಂಬಿಕೆ ದ್ರೋಹದಿಂದ ಕಂಗಾಲಾದ ಪಾತ್ರಗಳು ತಮ್ಮ ಎಂದಿನ ಹಾಸ್ಯವನ್ನು ಮರೆತು ಅಸಾಧ್ಯದ, ತಮ್ಮದಲ್ಲದ ನಿಸ್ಸಹಾಯಕ ಮೌನಕ್ಕೆ ಶರಣಾಗುತ್ತವೋ ಆಗ ಇಡೀ ಚಿತ್ರ ಅನನ್ಯ ವಾಗುತ್ತದೆ. ಬೇರೆಯದೇ ಮಜಲಿಗೆ ಹೊರಳಿಕೊಳ್ಳುತ್ತದೆ. ಮಠಕ್ಕೆ ಬಂದ ಹಣದಿಂದ ಅಲ್ಲಿಯ ಸಮಸ್ಯೆ ’ಸ್ಪಷ್ಟ’ ಪರಿಹಾರವಾಗಿ ಆ ಮಕ್ಕಳಿಗೆ ಊಟವಾದಷ್ಟೇ ಮುಖ್ಯವಾದದ್ದು ಈ ನಿಸ್ಸಹಾಯಕ ಮೌನದ ಅಪರಿಹಾರ್ಯತೆಯನ್ನು ನಿರ್ದೇಶಕ ( ತನಗರಿವಿಲ್ಲದೆಯಾದರೂ) ಸೄಷ್ಟಿಸುವುದು.. ಏಕೆಂದರೆ ಆ ಆರೂ ಪಾತ್ರಗಳೂ ಕಾರಣವಿಲ್ಲದ ವಂಚನೆಗೊಳಗಾದವು. ಸಮಸ್ಯೆಯ ಪರಿಹಾರದ ಸೃಷ್ಟಿಗಿಂತಲೂ ಕಲೆಯ ದೃಷ್ಟಿ ಯಿಂದ ಮುಖ್ಯವಾಗುವುದು ಈ ಕೈಲಾಗದ ಮೌನದ ಸೃಷ್ಟಿಯೇ.
ಸಂಗೀತ, ಛಾಯಾಗ್ರಹಣದ ಬಗ್ಗೆ ಹೇಳುವುದು ಬೇಡ. ಅವು ತಾವೇ ತಾವಾದ ತಾಂತ್ರಿಕತೆಗಿಂತಲೂ ನಿರ್ದೇಶಕನ ಭೌದ್ಧಿಕ ತಾಂತ್ರೀಕತೆಯ ಭಾಗಗಳಾಗಿಯೇ ಹೆಚ್ಚಿನ ಕಾರ್ಯ ನಿರ್ವಹಿಸುತ್ತವೆ: ಚೆನ್ನಾಗಿದೆ. ಎಲ್ಲ ಕಟ್ಟುವುದನ್ನು ಅವು ನಿರಾಳ ಕಟ್ಟುತ್ತವೆ. ಕೆಡವಬೇಕಾದರೂ ಅದೇ ನಿರಾಳದಲ್ಲಿ ಸ್ಪಷ್ಟವಾಗಿ ಕೆಡಹುತ್ತವೆ.
-೪-
ಒಂದು ಸಿನೆಮಾವನ್ನು ಹೇಗೆ ನೋಡಬಾರದು ಎಂಬುದಕ್ಕೆ ಉತ್ತಮ ಉದಾಹಾರಣೆ ಈ ಬರಹ. ವೈಯಕ್ತಿಕವಾಗಿ ನನಗೆ ಇಷ್ಟವಾದ ಸಿನೆಮ ಮಠ. ಅದು ಪೂರ್ಣ ಇಷ್ಟವಾಗಿದ್ದು. ಅದನ್ನ ಹೀಗೆ ಬಿಡಿಸಿ ನೋಡಬೇಕಾದಾಗಲೇ ಅದು ಹಾಳಾಗಿ ಬಿಡುತ್ತದೇನೋ. ನೋಡುವ ಕಣ್ಣು, ಮನಸ್ಸು ಪರಿಣಾಮಗಳನ್ನು ಗ್ರಹಿಸುತ್ತದೆ. ಬರೆಯುವಾಗ ಮಾತ್ರ ಈ ಮೇಕಿಂಗ್ ನ್, ಮತ್ತು ಪರಿಣಾಮಗಳನ್ನು ಉದ್ದೀಪಿಸುವ ಕ್ರಮಗಳ ಹುಡುಕಾಟ.
ಮಠವನ್ನು ಕುರಿತು ಬರೆಯುವಾಗ ಆ ಬರಹ ಕೂಡ ಹೀಗೆ ತನ್ನನ್ನು ಹಿಂದಿರುಗಿ ನೋಡಿಕೊಳ್ಳುವ ಗುಣವನ್ನು ಆವಾಹಿಸಿಕೊಳ್ಳೂವುದು ಆಶ್ಚರ್ಯ ಮತ್ತು ಆನಿವಾರ್ಯ. ಹೇಗೆ ಸಿನೆಮಾದ ಚಿತ್ರಕಥೆಯು ತನ್ನ ಮುಖವನ್ನು ತನ್ನದೇ ಕಾಲುಸಂಧಿಯಿಂದ ತೂರಿಸಿಕೊಂಡು ತನ್ನದೇ ಪೃಷ್ಠವನ್ನು ದರ್ಶಿಸುತ್ತದೆಯೋ ಅದೆ ಕ್ರಮ ಈ ಬರಹದ್ದು. ಒಡೆಯುವಿಕೆಯ ಹಾದಿಯ ವಿವರಿಸುವಿಕೆಯು ಒಡೆದೊಡೆದ ಕ್ರಮದ್ದೇ.
ಮಠ ಕನ್ನಡದಲ್ಲೊಂದು ಸೃಷ್ಟಿ. ಅದು ಥಿಯೇಟರುಗಳಿಂದ ಹೊರಬಂದ ಮೇಲೆಯೇ ಜಾಸ್ತಿ ಜನ ಅದನ್ನು ನೋಡಿದರು. ಅದರ ಆಳಗಳನ್ನು ಬಲ್ಲದವರೂ ಕೂಡ ಅದರ ಬಗ್ಗೆ ಖುಷಿಯಿಂದ ಮಾತಾಡುತ್ತಾರೆ.ಎರಡೂ ವರ್ಗಕ್ಕೆ ಸೇರುತ್ತಲೇ ಎಲ್ಲರಿಗೂ ತಾಕಿದ ಚಿತ್ರ ಅದು. ಹೆಚ್ಚು ಬೌದ್ಧಿಕವಾಗಿ ಕೆದಕಿದಷ್ಟೂ ನಾವು ಅದನ್ನು ಕೆಡಿಸಿದ ಹಾಗೂ ಆಗಬಹುದು.
ಹಾಗಾಗಿ:
ಇದು ಎಲ್ಲರೂ ನೋಡಲೇಬೇಕಾದ ಚಿತ್ರ: ಮಠ.
-೫-
ಅರಿಸ್ಟಾಟಲ್ ಹೇಳುತ್ತಾನೆ:
"People gets the government that they deserve"- ಅಂತ.
ಕೇವಲ ಸರ್ಕಾರಗಳಿಗೆ ಸಂಬಂಧಿಸಿದ ಮಾತಲ್ಲವಿದು. ಜನ ಯಾವುದಕ್ಕೆ ಅರ್ಹರಿರುತ್ತಾರೋ ಅವರು ಅದನ್ನೇ ಪಡೆಯುತ್ತಾರೆ. ಲಾಂಗು ಮಚ್ಚಿನ ಸಿನೆಮಾಗಳನ್ನೇ ಜನ ನೋಡುತ್ತಾರಾದರೆ ಮಾಡುವವರು ಅದನ್ನೇ ಮಾಡುತ್ತಾರೆ. ನೋಡುವ ಜನ ಬದಲಾಗದೇ ರಕ್ತ ಹರಿಯುವುದು ನಿಲ್ಲದು. ಜನರನ್ನು ಬದಲಾಯಿಸಿ, ಈ ಬದಿಗೆ ಎಳೆದು ತರುವುದು ಮಠದಂಥ ಸಿನೆಮಾಗಳೇ. ತನ್ನ ಮನೆಯ ಕೆಡುಕನ್ನು ಮೇಲಿನ ಹಾಸ್ಯದಿಂದಲೂ, ಒಳಗಿನ ನೋವಿನಿಂದಲೂ ಮಠ ಕೆಡಹುವುದನ್ನು ನಾವು ನೋಡಬೇಕು.
ಅದೇ ಮಾತನ್ನು ಮಠಗಳ ವಿಷಯದಲ್ಲೂ ಹೇಳಬಹುದೇನೋ. ಭಕ್ತರ ಭ್ರಷ್ಟತೆಗಳು ಮಠಗಳಲ್ಲೂ ಪ್ರತಿಫಲಿಸುತ್ತವೆ.
"People gets the matas that they deserve".
ಅವಿನಾಶ್ ಜಿ ಹುಟ್ಟಿದ್ದು ಹೆಗ್ಗೋಡು. ವಯಸ್ಸು ೨೦. ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಸಿ.ಎ ವಿದ್ಯಾರ್ಥಿ.ಶಿವಮೊಗ್ಗೆಯಲ್ಲಿ ನಡೆದ ಕರ್ನಾಟಕದ ಮೊಟ್ಟಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಹದಿನಾರನೆಯ ವಯಸ್ಸಿನಲ್ಲೇ ನವಜಾತ ಎಂಬ ಸ್ಥಳಿಯ ಮಾಸಿಕ ಪತ್ರಿಕೆಯ ಸಂಪಾದಕತ್ವ. ಬರವಣಿಗೆ ಮತ್ತು ಓದು ಆಸಕ್ತಿಯ ವಿಷಯ.