
ಪ್ರಜಾ ಪ್ರಭುತ್ವ (?) ದ ಯಶಸ್ಸಿನಲ್ಲಿ ಮಾಧ್ಯಮದ ಪರಿಶುದ್ಧತೆ ಮಹತ್ವದ್ದು. ನಮ್ಮ ಸಿನೆಮಾಗಳು ಹೇಗೆ ಕಲೆಯಿಂದ ಉದ್ಯಮವಾಗಿ ಪರಿವರ್ತನೆಗೊಂಡಿದೆವೆಯೋ ಹಾಗೇ ಮಾಧ್ಯಮಗಳು ಕೂಡ ಬಂಡವಾಳಶಾಹಿ ಹಿಡಿತದಲ್ಲಿ ಸಿಕ್ಕಿ ತನ್ನ ನೈಜ ಕರ್ತವ್ಯ ಮರೆಯುತ್ತಲಿದೆ. ಎಲ್ಲಾ ರಂಗಗಳೂ ಲಾಭದ ಹಪಾಹಪಿತನದಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮನ್ನೆಲ್ಲ ಎಚ್ಚರಿಸುವ ಕೆಲಸ ಅಗತ್ಯ; ಅನಿವಾರ್ಯ.
ಇದೇ ಉದ್ದೇಶವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ನಿರ್ದೇಶಿಸಿರುವ ರಣ್ ಚಿತ್ರ ತೆರೆಕಂಡಿದೆ. ಆದರೆ ಉದ್ದೇಶ ಈಡೇರಿಕೆಯಲ್ಲಿ ಎಷ್ಟರ ಮಟ್ಟಿಗೆ ಚಿತ್ರ ಸಫಲವಾಗಿದೆ..?
ಗಹನವಾದ ವಿಷಯವನ್ನ ಗಾಂಭಿರ್ಯದಿಂದ ನಿರ್ವಹಿಸದೆ ಚಿತ್ರದ ಕಥೆ ತೀರಾ ತೆಳುವಾಗಿದೆ. ಮಾಧ್ಯಮದೊಳಗಿನ ನೈಜ ತಲ್ಲಣಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರ ವಿಫಲವಾಗಿದೆ. ಸುದೀಪ್, ಅಮಿತಾಭ್, ಪರೇಶ್ ರಾವಲ್ ಹೀಗೆ ಯಾವ ಪಾತ್ರಗಳನ್ನೂ ಸರಿಯಾಗಿ ಪೋಷಿಸದೆ, ಅತ್ತ ಗಂಭೀರವೂ ಆಗದೇ ಇತ್ತ ವಿಡಂಬನೆಯೂ ಅಲ್ಲದೆ ಚಿತ್ರ ಅತಂತ್ರ ಪಿಶಾಚಿಯಾಗಿ ನಿಲ್ಲುತ್ತದೆ. ಕಳಪೆ ಸಂಭಾಷಣೆ ಕೂಡ ಚಿತ್ರದ ಸೋಲಿಗೆ ಸಾಕಷ್ಟು ಕೊಡುಗೆ ನೀಡಿದೆ.
ಪಾತ್ರಗಳಿಗಿರಬೇಕಾದ ತಳಮಳ ಕ್ಯಾಮೆರಾಗೆ ಬಂದು ಇಡೀ ಛಾಯಾಗ್ರಹಣವೇ ತಲೆ ಚಿಟ್ಟು ಹಿಡಿಸುತ್ತದೆ. ಸುದೀಪ್ ಆತ್ಮಹತ್ಯೆಯ ದೃಶ್ಯದಲ್ಲಿ ಹಾಗೂ ನಂತರದ ಗಂಭೀರವಾಗಿರಬೇಕಿದ್ದ ದೃಶ್ಯವೊಂದರಲ್ಲಿ ಪ್ರೇಕ್ಷಕರು ನಗುವುದು ಇಡೀ ಚಿತ್ರಕ್ಕೆ ಕನ್ನಡಿ ಹಿಡಿದಂತಿದೆ.
ಮಾಧ್ಯಮದಂತಹ ಸೂಕ್ಷ್ಮ ವಿಚಾರವನ್ನ ಪರದೆಯ ಮೇಲೆ ತರುವಾಗ ವಹಿಸಬೇಕಾದ ಸಾಮಾನ್ಯ ಎಚ್ಚರ ಕೂಡ ವರ್ಮಾ ವಹಿಸಿದಂತಿಲ್ಲ.
ಸುದೀಪ್ ರ ಅತಿ ನಾಟಕೀಯತೆಯ ಅಭಿನಯ, ಇಡೀ ಚಿತ್ರದಲ್ಲಿ ಬದಲಾಗದ ರಿತೇಶ್ ದೇಶಮುಖ್ ರ ಅಭಿವ್ಯಕ್ತಿ, ಸ್ಪೈಡರ್ ಮ್ಯಾನ ಚಿತ್ರವನ್ನ ನೆನಪಿಸುವ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಹಿಂಸಾತ್ಮಕವಾಗಿಸುತ್ತದೆ.