
ಒಳ್ಳೆಯ ಚಿಂತನೆಯೊಂದು ದೃಶ್ಯರೂಪಕ್ಕೆ ಬರಬೇಕಾದರೆ ಸಿನೆಮಾ ನಿರೂಪಣೆಗೆ ಕಥೆಯನ್ನ ಒಗ್ಗಿಸಿಕೊಳ್ಳಬೇಕಾದದ್ದು ಅಗತ್ಯ. ಇಲ್ಲವಾದರೆ ನಿರ್ದೇಶಕ ಹೇಳಬೇಕಾದದ್ದು ನೋಡುಗನಿಗೆ ರೀಚ್ ಆಗದ ಸಾಧ್ಯತೆಗಳು ತುಂಬಾ ಹೆಚ್ಚು. ಸೂರ್ಯಕಾಂತಿ ಒಂದು ಒಳ್ಳೆಯ ಉದಾಹರಣೆ.
ಪತ್ರಕರ್ತ ನಾರಾಯಣಸ್ವಾಮಿಯವರ ಕಥೆ-ಚಿತ್ರಕಥೆ-ಸಂಭಾಷಣೆ ಇರುವ ಸೂರ್ಯಕಾಂತಿಯ ನಿರ್ವಹಣೆ ತೀರಾ ದುರ್ಬಲವಾಗಿದೆ. ಇಡೀ ಕಥೆ ನಿಂತಿರುವುದು ಎರಡು ಜನರೇಷನ್ ಗಳ ನಡುವಣ ವಿಭಿನ್ನ ಚಿಂತನಾ ಕ್ರಮದಲ್ಲಿ. ನಷ್ಟದಲ್ಲಿ ನಡೆಯುತ್ತಿದ್ದರೂ ಫ಼್ಯಾಕ್ಟರಿಯನ್ನು ಅದನ್ನು ನಂಬಿಕೊಂಡು ಬದುಕುತ್ತಿರುವ ಜನರಿಗಾಗಿ ಮುನ್ನಡಸಲೇಬೇಕೆಂಬ ಹಠದ ತಂದೆ. ಆರ್ಥಿಕ ಸದೃಢತೆ ಹಾಗೂ ತನ್ನ ವೈಯಕ್ತಿಕ ಹಿತಚಿಂತನೆಯೇ ಮುಖ್ಯ ಎಂದು ನಂಬಿರುವ ಮಗ. ಇನ್ನೊಂದು ಎಳೆಯಲ್ಲಿ ಅನಾಥ ಹುಡುಗನನ್ನ ಸಲುಹಿ ಅವನನ್ನ ತನ್ನಂತೆ ಸುಪಾರಿ ಕಿಲ್ಲರ್ ಆಗಿ ಬೆಳೆಸುವ ಭೂಗತ ದೊರೆಯೊಬ್ಬ ಅವನಲ್ಲಿ ಮಗನೆಂಬ ಮಮತೆ ಬೆಳೆಸಿಕೊಳ್ಳುತ್ತಾನೆ. ಹೀಗೆ ಎಲ್ಲೆಲ್ಲೋ ಸಾಗುವ ಕಥೆ ಹಣ, ಕೀರ್ತಿ, ಮೌಲ್ಯ, ಕೊಲೆಗಳ ನಡುವೆ ಗಿರಕಿ ಹೊಡೆಯುತ್ತದೆ.
ಚೇತನ್ ನನ್ನು ನಟನಿಗಿಂತ ಹೆಚ್ಚಾಗಿ ಸ್ಟಾರ್ ಮಾಡಲು ಹೋಗಿ ನಿರ್ದೇಶಕ ಚೈತನ್ಯ ಮುಗ್ಗರಿಸಿದ್ದಾರೆ. ಸಂಭಾಷಣೆ ಪುಸ್ತಕೀಯವಾಗಿ ಕಳಪೆಯಾಗಿದೆ. ಹಿನ್ನೆಲೆ ಸಂಗೀತ, ಸ್ಕ್ರಿಪ್ಟ್, ಎಲ್ಲವೂ ಅಯೋಮಯ. ರಾಮಕೃಷ್ಣ ಅಂತಹ ನಟನಿಂದಾನೂ ನಾಟಕೀಯ ಅಭಿನಯ ತೆಗೆಸಿರುವುದು ನಿರ್ದೇಶಕರ ಏಕೈಕ ಅಚೀವಮೆಂಟ್.
ಒಂದು ಒಳ್ಳೆಯ ಸಬ್ಜೆಕ್ಟ್ ಹೇಗೆ ಕೆಟ್ಟ ಚಿತ್ರವಾಗಬಲ್ಲದು ಎನ್ನುವುದಕ್ಕೆ ಸೂರ್ಯಕಾಂತಿ ತಾಜಾ ಸಾಕ್ಷಿ. ನವ ನಿರ್ದೇಶಕರಿಗೆ ಎಚ್ಚರಿಕೆಯ ಘಂಟೆ.