ಜಸ್ಟ್..ಮಿಸ್ ಆಗದಿರಲಿ
ಬೆಂಗಳೂರಿನಂತಹ ನಗರಗಳಲ್ಲಿ ಮತ್ತವಿಲಾಸದಲ್ಲಿ ಮುಳುಗಿರುವ ಯುವಜನಾಂಗ ಬದುಕನ್ನ ಎದುರುಹಾಕಿಕೊಳ್ಳುವ ರೀತಿಯೇ ಬೇರೆಯಾಗಿದೆ. ಸಂಬಂಧಗಳು ಬೇಕು; ಆದರೆ ಬದ್ದತೆ ಬೇಡ. ಒಬ್ಬರು ಇನ್ನೊಬ್ಬರನ್ನ ಸಹಿಸಿಕೊಳ್ಳುವವರೆಗೆ ಮಾತ್ರ ಒಡನಾಟ, ನಂತರ ಜೂಟಾಟ. ಇಂತಹ ಮತ್ತವಿಲಾಸದಲ್ಲಿ, ಬಯಸಿ ಬಂದ ಯುವತಿಯರನ್ನೆಲ್ಲ ನಿರಾಕರಿಸದೇ, ಕಮಿಟ್ ಕೂಡ ಆಗದ ನಾಯಕ "ಜಗತ್ತಿನ ಹಿಂದೆ ನಾವಿರಬಾರದು, ನಮ್ಮ ಹಿಂದೆ ಜಗತ್ತಿರಬೇಕು" ಅನ್ನುತ್ತಾನೆ. ಇವನನ್ನ ಅತಿಯಾಗಿ ಹಚ್ಚಿಕೊಳ್ಳುವ ಯುವತಿಯೊಬ್ಬಳು ಇವನಿಂದ ತಿರಸ್ಕರಿಸಲ್ಪಟ್ಟು ದುರಂತಕ್ಕೊಳಗಾದ ನಾಯಕ ಆಘಾತಕ್ಕೊಳಗಾಗುತ್ತಾನೆ. ತನ್ನನ್ನು ಕಾಡುವ ತಪ್ಪಿತಸ್ಥ ಭಾವದಿಂದ ಹತಾಶನಾಗುವ ನಾಯಕನ ವ್ಯಕ್ತಿತ್ವ ಸಾವಕಾಶವಾಗಿ ಬದಲಾಗುತ್ತಾ ಹೋಗುತ್ತದೆ. ಅಲ್ಲಿ ಸಂಭವಿಸುವ ಇನ್ನೊಂದು ಪ್ರೇಮ ಕಥೆ, ಅದನ್ನ ಪಡೆದೇ ತೀರಲು ಆತನ ಹೆಣಗಾಟಗಳು, ಕೊನೆಯಲ್ಲಿ ತನ್ನ ಪ್ರೇಮ ಕಥೆಯನ್ನ ಆಸ್ವಾದಿಸುತ್ತಿದ್ದ ಸಹಪ್ರಯಾಣಿಕನೇ ತನ್ನ ಕಥೆಯ ದುರಂತ ಕೊನೆಯ ಭಾಗವಾಗುವುದು ಎಲ್ಲವೂ ಗಂಭೀರವಾಗಿ ಮೂಡಿ ಬಂದಿದೆ. ನಿಸ್ಸಂದೇಹವಾಗಿ ಇದು ಸುದೀಪ್ ನಿರ್ದೇಶಿಸಿದ ಚಿತ್ರಗಳಲ್ಲೇ ಅತ್ಯುತ್ತಮವಾದದ್ದು. ನಿರ್ದೇಶಕರಾಗಿ ಅವರು ಇನ್ನಷ್ಟು ಮಾಗಿದ್ದಾರೆ. ರಮ್ಯರ ಅಭಿನಯ ಅವರ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಚೆನ್ನಾಗಿ ಮೂಡಿ ಬಂದಿದೆ. ಕುತೂಹಲಕ್ಕೆ ಕೇಳಿಸಿಕೊಂಡ ಕಥೆ ತನ್ನ ಬದುಕಲ್ಲೇ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿಂದ ಅಧಿರನಾಗುವ ಪಾತ್ರದಲ್ಲಿ ರಾಜೇಶ್ ಇಷ್ಟವಾಗುತ್ತಾರೆ.
ಜಸ್ಟ್ ಮಿಸ್ ಮಾಡದಿರಿ!
|
|