"ನಾನೊಬ್ಬ ದೊಡ್ಡ ಜೀರೋ"- ರಾಮಕೃಷ್ಣರಂಗನಾಯಕಿಯಲ್ಲಿ ಅಮ್ಮನನ್ನೇ ಮೋಹಿಸುವ ಪ್ಲೇ ಬಾಯ್ ಪಾತ್ರದಿಂದ , ವಿಮುಕ್ತಿಯಲ್ಲಿ ಮಗಳಿಂದಲೇ ಮೋಹಿಸಲ್ಪಡುವ ಪ್ರಬುದ್ಧ ತಂದೆಯ ಪಾತ್ರ. ರಾಮಕೃಷ್ಣರ ಸಿನೆಮಾ ಗ್ರಾಫ್, ಕನ್ನಡ ಚಿತ್ರರಂಗದ-ಗುಣಮಟ್ಟದ- ಗ್ರಾಫ್ ಕೂಡ ಆಗಿರುವುದು ಕುತೂಹಲದ ಅಂಶ. ೭೦-೮೦ ರ ದಶಕದ ಕನ್ನಡ ಚಿತ್ರಗಳಲ್ಲಿನ ವೈವಿಧ್ಯತೆ ೯೦ ರ ದಶಕದ ನಂತರ ಅದು ಕುಸಿದ ಪರಿಗೆ ರಾಮಕೃಷ್ಣ ಜೀವಂತ ಸಾಕ್ಷಿಯಾಗಿದ್ದಾರೆ. "ನಾನು ನಟಿಸಿದ್ದು ೨೦೦ಕ್ಕೂ ಮೀರಿದ್ದು ಚಿತ್ರಗಳು. ಆದರೆ ಹೆಸರಿಸುವಂತದ್ದು ಇಪ್ಪತ್ತೂ ಮೀರುವುದಿಲ್ಲ" ಎನ್ನುವುದರಲ್ಲೇ ರಾಮಕೃಷ್ಣರ ಪ್ರತಿಭೆ ಎಷ್ಟು ಪೋಲಾಗಿದೆ ಎನ್ನುವ ಸತ್ಯವಿದೆ. "ಪಾಲಿಗೆ ಬಂದದ್ದು ಪಂಚಾಮ್ರುತ ಅಂತ ಅಭಿನಯಿಸಿದೆ. ಗುಬ್ಬಿ ವೀರಣ್ಣ, ಕೆ.ಬಾಲಚಂದರ್, ರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು, ಪುಟ್ಟಣ್ಣ ಅಂತಹವರೊಂದಿಗೆ ಕೆಲಸ ಮಾಡಿದ ಪುಣ್ಯ ಸಿಕ್ಕಿದೆ" ಎಂದು ರಾಮಕೃಷ್ಣ ವಿನಯರಾಗಿ ತೃಪ್ತರಾದಂತೆನಿಸಿದರೂ ಮನಸೆಲ್ಲೆಲ್ಲೋ ಎಡವಿದ ನೋವಿದೆ. ಎಲೆ ಮರೆಯ ಕಾಯಿಯಾಗಿಯೇ ಉಳಿದು ಬಿಟ್ಟೇನಲ್ಲ ಎಂಬ ಸಂಕಟವಿದೆ. ವಿಮುಕ್ತಿಗಿಂತ ಮುಂಚೆಯೂ ರಾಮಕೃಷ್ಣ ಒಳ್ಳೆಯ ನಟ. ಮಾನಸ ಸರೋವರ, ಋಣ ಮುಕ್ತಳು, ಪಡುವಾರಳ್ಳಿ ಪಾಂಡವರು, ರಂಗನಾಯಕಿ , ಬೆಂಕಿಯಲ್ಲಿ ಅರಳಿದ ಹೂವು ವಿನಂತ ಚಿತ್ರಗಳಲ್ಲಿ ಮರೆಯಲಾಗದ ಅನುಭವ ನೀಡಿರುವ ರಾಮಕೃಷ್ಣ ಈಗ ಅದನ್ನ ಸಾಬೀತು ಪಡಿಸುವ ಅಗತ್ಯ ಇಲ್ಲ. ಆದರೇ ಪುಟ್ಟಣ್ಣರಂತಹ ನಿರ್ದೇಶಕರ ನಂತರ ರಾಮಕೃಷ್ಣರ ಪ್ರತಿಭೆಯನ್ನ ಸಮರ್ಥವಾಗಿ ಬಳಸಿಕೊಂಡ ಇನ್ನೊಬ್ಬ ನಿರ್ದೇಶಕ ಬಂದಿರಲಿಲ್ಲ. ವಿಮುಕ್ತಿ ಯ ಮೂಲಕ ಶೇಷಾದ್ರಿ ಆ ಕೆಲಸ ಮಾಡಿದ್ದಾರೆ. ಮೂವತ್ತೇರಡು ವರುಷದ ಸಿನೆಮಾ ಜೀವನದಲ್ಲಿ ಅಂದಿನ ಪುಟ್ಟಣ್ಣ, ಬಾಲಚಂದರ್, ಇಂದಿನ ಶೇಷಾದ್ರಿ, ಚೈತನ್ಯರಂತಹ ನಿರ್ದೇಶಕರ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದರೆ.. "ಅವರೆಲ್ಲಾ ಪ್ರತಿಭಾವಂತರು; ನಾನೊಬ್ಬ ದೊಡ್ಡ ಸೊನ್ನೆ" ಎಂದು ಬಿಡುವುದೇ! " ಶೇಷಾದ್ರಿ, ಒಳ್ಳೆಯ ನಿರ್ದೇಶಕರು. ಚೈತನ್ಯರ ಬಗ್ಗೆಯೂ ನನಗೆ ಒಳ್ಳೆಯ ಗೌರವ ಇದೆ. ಜಿಎಸ್ ಎಸ್ ಮೊಮ್ಮಗ ಅವರು. ಮೇಲಾಗಿ ಆ ದಿನಗಳು ಅಂತಹ ಚಿತ್ರ ಕೊಟ್ಟಿದ್ದಾರೆ. ಸೂರ್ಯಕಾಂತಿ ಮಾಡುವಾಗ ನನ್ನ ಮೇಲೆ ಕೂಗಾಡಿದರವರು. ಆಗ ಅಂದ್ಕೊಂಡೆ, ಇವನೊಳಗೆ ಎನೋ ಇದೆ. ಒಳ್ಳೆಯದನ್ನ ಹೊರತರಲು ಆತ ಶ್ರಮಿಸುವ ಬಗ್ಗೆ ಮೆಚ್ಚಿಗೆ ಇದೆ." ಸೂರ್ಯಕಾಂತಿ ಅಂತ ಕಮರ್ಷಿಯಲ್ ಹಾಗೂ ವಿಮುಕ್ತಿ ಯಂತಹ ಕಲಾತ್ಮಕ ಸಿನೆಮಾ ಬಗ್ಗೆ ಮಾತನಾಡಿದಾಗ ಈ ವರ್ಗೀಕರಣವನ್ನೇ ಒಪ್ಪಲಿಲ್ಲ ಅವರು. " ಎಲ್ಲಾ ಸಿನೆಮಾನೂ ಕಮರ್ಷಿಯಲ್ಲೇ. ಎಲ್ಲರೂ ಹಣಕ್ಕಾಗೇ ಸಿನೆಮಾ ಮಾಡ್ತಾರೆ. ಐ ಹೇಟ್ ಕಲಾತ್ಮಕ, ಕಮರ್ಷಿಯಲ್. ಪಾತ್ರವೊಂದು ಕಲಾತ್ಮಕವಾಗಿ ಮೂಡಿಬರಬಹುದು ಅಷ್ಟೇ." ಎಂದ ಅವರು ಪರ್ಯಾಯ ಸಿನೆಮಾಗಳು ಒಂದು ಕಾಲದಲ್ಲಿ ಇದ್ದದನ್ನು ನೆನೆಸಿಕೊಂಡರು. "ರಾಜ್ ಎತ್ತರೇಕೇರಿದ್ದ ಕಾಲದಲ್ಲಿ ಚೋಮನದುಡಿಯಂತಹ ಚಿತ್ರ ಬಂತು, ಶತದಿನೋತ್ಸವ ಓಡಿದ ಸಿನೆಮಾ ಅದು. ಅದು ನಿಜವಾದ ಪ್ಯಾರಲಲ್ ಸಿನೆಮಾ. ಒಂದು ಕಡೆ ರಾಜ್ ಪ್ರಭಾವ, ಅವರ ಸ್ಟಾರ್ ಗಿರಿ. ಇನ್ನೊಂದೆಡೆ ಚೋಮನದುಡಿಯಂತಹ ಚಿತ್ರ, ಮಗದೆಡೆ ಕಾರ್ನಾಡರು. ಹೀಗೆ ಅದನ್ನ ಒಂದಕ್ಕೊಂದು ಪ್ಯಾರಲಲ್ ಅಂತ ಒಪ್ಕೊಬಹುದು. ಆದರೆ ಈಗ ಇಲ್ಲ." ಬಾಲಚಂದರ್ ಅವರ ಎ ಮ್ಯಾರೇಜ್ ಮೇಡ್ ಇನ್ ಸಲೂನ್ ಎಂಬ ನಾಟಕವಾದಾರಿತ ತಮಿಳು ಚಿತ್ರದಲ್ಲಿ ಅಭಿನಯಿಸಿದೆ. ಆಗ ಕರ್ನಾಟಕದಲ್ಲಿ ಗೋಕಾಕ್ ಚಳುವಳಿ ಜೋರಿನಲ್ಲಿ ಸಾಗಿತ್ತು. ರಾಜ್ ಸಹನಟರೊಡನೆ ರಾಜ್ಯಾದ್ಯಾಂತ ಪ್ರವಾಸ ಮಾಡ್ತಾ ಇದ್ರು. ಗೋಕಾಕ್ ಚಳುವಳಿ ಒಂದರ್ಥದಲ್ಲಿ ತಮಿಳು ವಿರೋಧಿ ಚಳುವಳಿಯಾಗಿಯೂ ಬಿಂಬಿತವಾಗಿತ್ತು. ನೆವ ಗೋಕಾಕ್ ವರದಿಯ ಅನುಷ್ಠಾನದ್ದಾಗಿದ್ದರೂ ವಾಸ್ತವದಲ್ಲಿ ಅದು ಬೆಂಗಳೂರಿನಲ್ಲಿ ಹೆಚ್ಚಿದ್ದ ತಮಿಳರ ಪ್ರಾಬಲ್ಯರ ವಿರುದ್ಧವೂ ಆಗಿತ್ತು. ಮದರಾಸಿನ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನನ್ನನ್ನ ಕೇಳಿದ್ರು-ಅಲ್ಲಿ ಕರ್ನಾಟಕದಲ್ಲಿ ಕನ್ನಡಿಗರ ತಮಿಳರ ಗಲಾಟೆ ನಡೆದಿದೆ, ನೀವು ಇಲ್ಲೇನೂ ಮಾಡ್ತಾ ಇದೀರಾ ಅಂತ. ಬಾಲಚಂದರ್ ಹೇಳಿದ್ರು- "ನಾನು ಎಲ್ಲ ಭಾಷೆ ಸಿನೆಮಾ ಮಾಡಿದಿನಿ. ಶಿವಾಜಿರಾವ್ ನ ಕರ್ಕೊಂಡು ಬಂದು ಇಲ್ಲಿ ರಜನೀಕಾಂತ್ ಮಾಡ್ದೆ. ಕಮಲ್ ಹಾಸನ್ ನ ಕರ್ಕೊಂಡು ಬಂದು ಇಲ್ಲೊಂದು ಚಿತ್ರ ಮಾಡ್ದೆ. ಅವನು ಇಲ್ಲಿ ಮಾಡಿದ ಪಾತ್ರಾನ ಅಲ್ಲಿ ಬೆಂಕಿಯಲ್ಲಿ ಅರಳಿದ ಹೂವಿನಲ್ಲಿ ರಾಮಕೃಷ್ಣನ ಹತ್ರ ಮಾಡಿಸ್ದೆ. ನಾನು ರಾಷ್ಟ್ರೀಯ ನಿರ್ದೇಶಕ ಅಂತ ನೀವು ಒಪ್ಪೊದಾದರೆ, ನಟರನ್ನೆಲ್ಲಾ ಈ ಭಾಷಾ ರಾಜಕೀಯಕ್ಕೆ ಎಳಿಬಾರ್ದು' ಅಂದಿದ್ರು." ಆ ಚಿತ್ರದ ನಂತರ ನಾನು ಮತ್ತೆ ಬಾಲಚಂದರ್ ನ ನೋಡಲಿಲ್ಲ. ಒಂದು ಹತ್ತು ಹನ್ನೆರಡು ವರ್ಷದ ನಂತರ ಅವರನ್ನು ಭೇಟಿಯಾದಾಗ ಅವರು ನನ್ನನ್ನ ಚೆನ್ನಾಗಿ ಬೈದು ಬಿಟ್ರು." ಹಾಗಾದರೆ ರಾಮಕೃಷ್ಣ ಅವರು ಜನಪ್ರಿಯನಾಗಬಹುದಾದ ಅಪಾರ ಸಾಧ್ಯತೆಗಳನ್ನ ಕಳೆದುಕೊಂಡಿದ್ದು ಅವರ ಸ್ವಯಂಕೃತಪರಾಧವೇ? ಹೌದು ಎನ್ನುತ್ತಾರವರು. " ಇದು ನನ್ನದೇ ಸೋಮಾರಿತನದ, ಪರಿಶ್ರಮವಿಲ್ಲದ ಬದುಕಿನಿಂದ ಆಗಿದ್ದು. ಆ ಸಿನೆಮಾದ ನಂತರ ಬಾಲ್ ಚಂದರ್ ನನ್ನು ಕಾಣಲಿಲ್ಲ. ನಂತರ ಪಾತ್ರಗಳ ಬಗ್ಗೆ ಚೂಸಿಯಾಗಲಿಲ್ಲ. ನಾನೇ ಬೇರೆ ನಿರ್ದೇಶಕರಿಂದ ಕಲಿತಿದ್ದನ್ನ ತೆರೆಯ ಮೇಲೆ ತರಬಹುದಿತ್ತು. ಅದನ್ನೂ ಮಾಡಲಿಲ್ಲ. ಇದೆಲ್ಲಾ ನನ್ನ ಸ್ವಯಂಕೃತಪರಾಧವೇ ಹೊರತು ಯಾರ ಮೇಲೂ ಗೂಬೆ ಕೂರಿಸಲು ಇಷ್ಟವಿಲ್ಲ." ವಿಮುಕ್ತಿ ಸಿನೆಮಾದ ಕುರಿತು ಮಾತಿಗಿಳಿದಾಗ "ಶೇಷಾದ್ರಿ ಮತ್ತು ರಾಮಂಚಂದ್ರರಂತಹವರ ಜೊತೆ ಕೆಲಸ ಮಾಡಿದ್ದರಿಂದ ಸಾಕಷ್ಟು ಕಲಿತೆ. ರಾಮಚಂದ್ರರೇ ಚಿತ್ರದ ನಿಜವಾದ ಹೀರೊ. ಪ್ರತಿ ಪ್ರೇಮ್ ಅನ್ನು ಅದು ಅಲ್ಲಿ ಯಾಕೆ ಬರಬೇಕು ಎಂದು ಪ್ರಶ್ನೆ ಮಾಡಿಯೇ ಮುಂದಿಡುತ್ತಿದ್ದರು. ಚಿತ್ರದ ಸಾಧ್ಯತೆಯನ್ನ ಹೆಚ್ಚಿಸಿದ್ದಾರೆ ಅವರು. ನನಗೆ ನನ್ನ ಪಾತ್ರ ಯಾಕೋ ಪರಿಪೂರ್ಣ ಅಂತ ಅನ್ನಿಸಲಿಲ್ಲ. ಇನ್ನೂ ಚೆನ್ನಾಗಿ ಮಾಡಬಹುದಿತ್ತು. ತುಂಬಾ ಸೂಕ್ಷ್ಮವಾದ ಪಾತ್ರ ಅದು. ಮಗಳೇ ಅಪ್ಪನನ್ನು ಮೋಹಿಸುವುದನ್ನೆಲ್ಲ ತೋರಿಸಿಬಿಟ್ಟರೇ ಪ್ರೇಕ್ಷಕರ ಮನಸ್ಸನ್ನು ಕದಡಿದ ಹಾಗಾಗುವುದಿಲ್ಲವೇ? ತಪ್ಪು ಸಂದೇಶ ರವಾನೆಯಾಗೋ ಸಾಧ್ಯತೆ ಇರ್ತದೆ. ಆದರೂ ಸಾಕಷ್ಟು ತೃಪ್ತಿ ಕೊಟ್ಟ ಪಾತ್ರ ಅದು." ರಾಮಕೃಷ್ಣರ ಮಾತು ಕೇಳಿದಂತೆ ಕನ್ನಡ ಸಿನೆಮಾದ ಪುರಾಣ, ಇತಿಹಾಸವೆಲ್ಲ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ವೈಯಕ್ತಿಯ ಬೆಳವಣಿಗೆಗಳು, ಚಿತ್ರರಂಗದ ಬದಲಾವಣೆಗಳು, ಅಂದಿನ ದಿನಗಳ ಸಂಭ್ರಮ, ಇಂದಿನ ಏಕತಾನತೆ ಎಲ್ಲ ಹಾದು ಹೋಯಿತು. ಗುಬ್ಬಿ ವೀರಣ್ಣ ಕಂಪೆನಿಯ ನಾಟಕದ ದಿನಗಳು, ತನ್ನ ಪ್ರತಿಭೆಯನ್ನ ಹೊರಗೆಳೆದ ಪುಟ್ಟಣ್ಣ ಕಣಗಾಲ್, ಬಬ್ರುವಾಹನದಲ್ಲಿ ಕೃಷ್ಣನ ಪಾತ್ರ ಕೊಟ್ಟ ರಾಜ್, ಶಂಕರ್ ನಾಗ್, ರಜನೀಕಾಂತ್, ಬಾಲಚಂದರ್ ಹೀಗೆ ಅತಿರಥ ಮಹಾರಥರೆಲ್ಲಾ ನುಸುಳುತ್ತಾರೆ. ರಾಮಕೃಷ್ಣರು ಹೇಳಿದ ಇತ್ತೀಚಿನ ಈ ಘಟನೆಯೊಂದರಿಂದ ಈ ಬರಹವನ್ನು ಮುಗಿಸಬಹುದೇನೋ. ಕನ್ನಡ ಸಿನೆಮಾ ಪ್ರೇಕ್ಷಕನ ಮನಸ್ಸಿನಲ್ಲಿ ರಾಮಕೃಷ್ಣರಂತಹ ನಟರು ಅಚ್ಚೋಳಿದ ರೀತಿ, ಇಂತಹ ಪ್ರತಿಭೆಯನ್ನ ಸರಿಯಾಗಿ ದುಡಿಸಿಕೊಳ್ಳದ ನಮ್ಮ ಸೃಜನಶೀಲ ದಾರಿದ್ರ್ಯ, ಸಿನೆಮಾವೊಂದು ಸಾಮಾನ್ಯನಲ್ಲಿ ಉಂಟುಮಾಡುವ ಪ್ರಭಾವ ಎಲ್ಲವನ್ನೂ ಈ ಪ್ರಸಂಗ ಬಿಚ್ಚಿಡುತ್ತದೆ. " ಒಮ್ಮೆ ಹಳ್ಳಿ ಮದುವೆಗೆ ಹೋಗಿದ್ದೆ. ಅಲ್ಲಿ ಚಿತ್ರ ನಟ ಅಂದರೆ ನಾನೊಬ್ನೆ. ಹಾಗಾಗಿ ಎಲ್ಲ ನನ್ನ ನೋಡ್ತಾ ಇದ್ರು. ಏನಪ್ಪಾ ಮದುವೆ ನೋಡೋದು ಬಿಟ್ಟು ನನ್ನ ನೋಡ್ತಾ ಇದಾರೆ ಅಂತ ಅಂದ್ಕೊಂಡೆ. ನಟನನ್ನ ನೋಡೋದು ಸಹಜ ಅಂತ ಸುಮ್ನೆನೂ ಆದೆ. ಎಲ್ಲಾ ರೈತ ಕುಟುಂಬದವರು ಅಲ್ಲಿದ್ದವರು. ಸ್ವಲ್ಪ ಹೊತ್ತಿನ ನಂತರ ಒಂದು ಕುರ್ಚಿ ತಂದಿಟ್ರು. ಕುತ್ಕೊಳ್ಳಿ ಅಂದ್ರು. ಹಳ್ಳಿ ಮದುವೆಲಿ ಕುರ್ಚಿಗಳು ಎಲ್ಲಿರುತ್ವೆ. ನಾನೊಬ್ನೆ ಕುರ್ಚಿಲಿ ಕುತ್ಕೊಳ್ಳೋದು ಹೇಗೆ. ಇನ್ನು ಡೈಲಾಗ್ ಹೊಡಿ ಅಂತಾರೆ, ಹಾಡು ಅಂತಾರೆ, ಹೇಗಪ್ಪಾ ಇಲ್ಲಿಂದ ತಪ್ಪಿಸ್ಕೊಳ್ಳೋದು ಅನ್ನೋ ಯೋಚ್ನೆ. ಆದರೆ ಅವರು ಒಂದೇ ಪ್ರಶ್ನೆ ಕೇಳಿದ್ದು " ನಿಮ್ಮ ತೊಂದರೆ ಏನು ಅಂತ ಹೇಳಿ" ಅಂದ್ರು. ನನಗೆ ದಿಗಿಲಾಯ್ತು. ಏನಪ್ಪಾ ಏನು ಕೇಳ್ತಾ ಇದಾರೆ ಅಂತ ಅರ್ಥ ಆಗಲಿಲ್ಲ. ಕುಡಿದು ಗಿಡಿದು ಬಂದಿದಾರ ಅಂತ ಅಂದ್ಕೊಂಡೆ. "ಏನಿಲ್ರಪ್ಪಾ, ದೇವರು ನನಗೆ ಎಲ್ಲಾ ಕೊಟ್ಟಿದಾನೆ" ಅಂದೆ. ಆದ್ರೂ ಕೇಳಲಿಲ್ಲ " ಇಲ್ಲ ನಮಗೆ ದೇವ್ರು ಎಲ್ಲಾ ಕೊಟ್ಟಿದಾನೆ, ನಾವೊಬ್ಬ ಕಲಾವಿದನ್ನ ಸಾಕಬೇಕಿಗ. ನೀವು ಹೇಳಿ ನಿಮ್ಮ ಕಷ್ಟ ಎನು ಅಂತ? ನಾವೆಲ್ಲ ಒಳ್ಳೆ ಬೆಳೆ ಬೆಳಿತಿವಿ. ನಿಮಗೆ ವರ್ಷಕ್ಕಾಗೋಷ್ಟು, ಧವಸ, ಧಾನ್ಯ ಎಲ್ಲ ಕಳಿಸ್ತಿವಿ. ನೀವೆನೂ ಚಿಂತೆ ಮಾಡ್ಬೇಡಿ" ಇವ್ರೆಲ್ಲ ಯಾಕೆ ಹೀಗೆ ಆಡ್ತಾ ಇದಾರೆ. ನನಗೆ ಹೇಗೆ ಪ್ರತಿಕ್ರಿಯಿಸೋದು ಅಂತಾನೇ ತಿಳಿಲಿಲ್ಲ. "ಅಲ್ಲಾ ಸಾರ್, ಬಬ್ರುವಾಹನ ಪಿಚ್ಚರಲ್ಲಿ ಕೃಷ್ನನ ಪಾತ್ರ ಮಾಡ್ದೋವ್ರು ನೀವು. ಅಣ್ಣಾವ್ರು, ಬಿ.ಸರೋಜಾದೇವಿ ಅವ್ರೆಲ್ಲಾ ನಿಮ್ಮ ಕಾಲಿಗೆ ಬಿದ್ದಿದಾರೆ. ಅಷ್ಟು ಚಿಕ್ಕವಯಸ್ಸಲ್ಲೇ ಅಂಥ ದೊಡ್ಡವರೆಲ್ಲ ನಿಮ್ಮ ಕಾಲಿಗೆ ಬಿದ್ದಿರಬೇಕಾದ್ರೆ, ನೀವೇನಿದು ಈ ರವಿಚಂದ್ರನ್ ಸಿಪಾಯಿ ಪಿಚ್ಚರಲ್ಲಿ ತಲೆ ಹಿಡುಕನ ಪಾತ್ರ ಮಾಡೋದು. ನೀವು ಆ ಗೌರವನ ಉಳಿಸ್ಕೋಬೇಕಲ್ವಾ?" ಅಂದು ಬಿಡೋದೆ. ಅಬ್ಬಾ ಸಿನೆಮಾ ಪ್ರಭಾವವೇ? ಅಂದ್ಕೊಂಡೆ. ಆಮೇಲೆ ಅವರಿಗೂ ಹೇಳ್ದೆ ಅನ್ನಿ ರವಿಚಂದ್ರನ್ ಕೂಡ ಕಡಿಮೆ ಕಲಾವಿದ ಅಲ್ಲ. ವೀರಾಸ್ವಾಮಿ ಮಗ, ನನ್ನ ಸ್ನೇಹಿತ ಅಂತ. ಆದರೆ ಜನರ ಮನಸ್ಸು ನೋಡಿ" ರಾಮಕೃಷ್ಣ ಅಂತಹ ಗೌರವವನ್ನು ಉಳಿಸಿಕೊಳ್ಳಬಹುದಿತ್ತೆ? ಅವರಾಗೇ ಯಾಕೆ ಎಡವಿದರೂ? ಅಷ್ಟಾಗಿಯೂ ಶೇಷಾದ್ರಿ ಅಂತವರನ್ನು ಬಿಟ್ಟರೆ ಉಳಿದ ಹೊಸ ಕ್ರಿಯೆಟಿವ್ ನಿರ್ದೇಶಕರಿಗೆ ಇಂತಹ ನಟನ ಸಾಧ್ಯತೆ ಕಾಣುತ್ತಿಲ್ಲವೇ? ವಾಟ್ ಅ ವೇಸ್ಟ್ ಆಫ್ ಟ್ಯಾಲೆಂಟ್ .. ಎಂಬೆಲ್ಲಾ ಪ್ರಶ್ನೆಗಳೊಡನೆ ಅವರಮ್ಮ ಮಾಡಿಕೊಟ್ಟ ಸ್ವಲ್ಪ ಹೆಚ್ಚೇ ಸಿಹಿಯಾದ ಚಹಾ ಸೇವಿಸಿ ಹೊರ ಬಂದೆವು. ಎಷ್ಟೆಂದರೂ ನಮ್ಮ ಮಲೆನಾಡ ಕಡೆಯವರಲ್ಲವೇ, ಚಹಾನೂ ಸಕ್ಕರೆ ಸಿಹಿ; ಹಾಗೆ ಮಾತೂ!
|
|