ದೃಶ್ಯಕ್ಕೊಂದು ನುಡಿಗಟ್ಟು

ವಿಮುಕ್ತೆಯಾದ ಚಂದ್ರಮುಖಿ ಭಾವನಾ ಸಂದರ್ಶನ

ಭಾವನಾ ಇಪ್ಪತ್ತರ ದಶಕದ ಆದಿಯಲ್ಲಿ ಕನ್ನಡಕ್ಕೆ ಸಿಕ್ಕ ಅಪರೂಪದ ಕಲಾವಿದೆ. ಚಂದ್ರಮುಖಿ ಪ್ರಾಣಸಖಿ ಚಿತ್ರದಿಂದ ಕನ್ನಡಿಗರ ಮನೆ ಮಾತಾದ ಭಾವನಾ ಪ್ರಜ್ಞಾವಂತ ಪ್ರೇಕ್ಷಕನ ಮೆಚ್ಚಿನ ತಾರೆ.ಮುಖ್ಯವಾಹಿನಿಯ ಕಮರ್ಷಿಯಲ್ ಸಿನೆಮಾಗಳಲ್ಲಿ ಅಭಿನಯಿಸುತ್ತಲೇ, ಬರಗೂರು, ಕವಿತಾ ಲಂಕೇಶ್, ಶೇಷಾದ್ರಿಯಂತಹ ನಿರ್ದೇಶನದ ಚಿತ್ರಗಳಲ್ಲೂ ಕಾಣಿಸಿಕೊಂಡರು. ಬಾಲಿವುಡ್ ಗೆ ಹಾರಿ ಅಮಿತಾಭ್ ರೊಂದಿಗೆ ಕೂಡ ನಟಿಸುವ ಅವಕಾಶ ಪಡೆದರು. ಗ್ಲ್ಯಾಮರ್ ಪಾತ್ರದಲ್ಲಿ ಕ್ಲಿಕ್ ಆಗದಿದ್ದರೂ ದೇವಿರಿ, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿನ ಅವರ ಅಭಿನಯ ನೆನಪಿನಲ್ಲುಳಿಯುವಂತಹದ್ದು. 

ಇಷ್ಟಾದರೂ ಕನ್ನಡ ಚಿತ್ರರಂಗದಲ್ಲಿನ ಕಹಿ ಅನುಭವಗಳು ಅವರಿಗೆ ಬೇಸರ ತರಿಸುತ್ತದೆ. ತಾನು ಕನ್ನಡಿಗಳು ಅಂತಾ ಗೊತ್ತೇ ಇರದ ನಿರ್ಮಾಪಕರು, ಸ್ಕ್ರಿಪ್ಟ್ ಕೂಡ ಚರ್ಚಿಸದ ನಿರ್ದೇಶಕರು. 

ಬರಲಿರುವ ಮಂಜಿನ ಹನಿ ಚಿತ್ರದ ಬಗ್ಗೆ ಅವರಿಗೆ ಅಪಾರ ನಿರೀಕ್ಷೆ ಇದೆ. 

ವಿಮುಕ್ತಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದ ಖುಷಿಯಲ್ಲಿ ಭಾವನಾರೊಡನೆ ಮಾತನಾಡಿದ ಸಂಗ್ರಹ ರೂಪ: 


ಬಿರು ಬಿಸಿಲಿನಲ್ಲಿ ಸಂಜಯನಗರದ ಭಾವನಾ ಫ಼್ಲಾಟ್ ತಲುಪಿದಾಗ ಸಾಯಂಕಾಲ ೪.೩೦. ಸರಳವಾದ ಉಡುಗೆಯಲ್ಲೇ ನಮ್ಮನ್ನ ಬರಮಾಡಿಕೊಂಡವರು ಮೊದಲು ಕೇಳಿದ್ದು ಟೀ ಕುಡಿಯುತ್ತಿರೋ ಕಾಫಿ ನೋ?

ನಾವು ನಾಚಿಕೆಯಿಂದ ನೀರು ಸಾಕು ಎಂದು ಸುಮ್ಮನೇ ಕುಳಿತೆವು.

"ನಮ್ಮಲ್ಲಿ ಟೀ ಚೆನ್ನಾಗಿ ಮಾಡ್ತಾರೆ. .." ಎಂದು ಟೀ ತರಿಸಿಟ್ಟರು. 


ಸಂ: ಭಾವನಾ ಅವರಿಗೆ ಸಿನೆಮಾ ಅಂದ್ರೆ ಏನೂ?

ಭಾವನಾ: ಸಿನೆಮಾ ಮೊದಲು ಹವ್ಯಾಸ ಆಗಿ ಶುರುವಾಯ್ತು. ನಂತರ ಆಸಕ್ತಿಯಾಗಿ ಬೆಳಿತು. ಚಂದ್ರಮುಖಿ ಪ್ರಾಣಸಖಿ ನಂತರ ಅದು ವೃತ್ತಿಯಾಯ್ತು. ಈಗ ಅದು ವೃತ್ತಿಗಿಂತ ಹೆಚ್ಚು. ಸಿನೆಮಾ ಅಂದರೆ ಬದುಕು, ಪ್ಯಾಶನ್. ಇದು ಬರಿ ಹಣ ಅಲ್ಲ. ವರ್ಷಕ್ಕೆರಡು ಸಿನೆಮಾ ಮಾಡಿದ್ರೆ ಅದು ಮಾಡಬಹುದು ಇದು ಮಾಡಬಹುದು ಅಂದ್ಕೊಂಳ್ತಿವಿ. ಆದರೆ ಬೆಳಿತಾ ಬೆಳಿತಾ ಇದು ಬರೀ ಹಣ ಅಲ್ಲ. ಬರೀ ವೃತ್ತಿ ಅಲ್ಲ ಅದಕ್ಕಿಂತ ಹೆಚ್ಚಿನ ಸೆಳೆತ ಇದೆ ಅಂತ ತಿಳಿಯುತ್ತೆ. 


ಸಂ: ಯಾವ ಸಂದರ್ಭದಲ್ಲಿ ಸಿನೆಮಾವನ್ನ ಆಸಕ್ತಿಯಿಂದ ವೃತ್ತಿಯಾಗಿ ಆರಿಸ್ಕೊಳ್ಳಬೇಕು ಅನ್ನಿಸ್ತು.

ಭಾವನಾ; ಬಹುಷಃ ಚಂದ್ರಮುಖಿ ಪ್ರಾಣಸಖಿಯ ನಂತರ. ಅದಕ್ಕೂ ಮೊದಲು ಎರಡು ಚಿತ್ರ ಮಾಡಿದ್ದಾಗ ಇದು ಇಷ್ಟೇ ಮುಂದೆ ಹೋಗಲಿಕ್ಕಿಲ್ಲ ಅನ್ನಿಸಿತ್ತು. ಅದರಲ್ಲೂ ಮದುವೆಯ ನಂತರ ನಟಿಯರನ್ನ ಸಿನೆಮಾ ರಂಗ ದೂರ ಇಡೋದ್ರಿಂದ ಮುಂದುವರೆಯುತ್ತೆ ಅನ್ನೋ ಭರವಸೆ ಇರ್ಲಿಲ್ಲ. ಬಟ್ ಚಂದ್ರಮುಖಿ... ಯ ನಂತರ ಎಲ್ಲ ಬದಲಾಯ್ತು. ಒಳ್ಳೆ ಸಪೋರ್ಟ್ ಸಿಗ್ತು. ಇನ್ನೂ ಒಳ್ಳೊಳ್ಳೆಯ ಪಾತ್ರ ಮಾಡು ಅಂತ ಹುರಿದುಂಬಿಸಿದರು. 


ಸಂ: ಚಂದ್ರಮುಖಿ.. ಗೂ ಮೊದಲು ಆ ತರಹದ ಪಾತ್ರ ಕನ್ನಡ ಸಿನೆಮಾಗಳಲ್ಲಿ ಬಂದಿರಲಿಲ್ಲ. ಸಿನೆಮಾಗೆ ಬರುವವರೆಲ್ಲ ಮೊದಲು ಗ್ಲಾಮರಸ್ ಅಥವಾ ಜನಪ್ರಿಯವಾದ ಪಾತ್ರಗಳಲ್ಲಿ ಕಾಣಿಸ್ಕೊಳಲಿಕ್ಕೆ ಇಷ್ಟ ಪಡ್ತಾರೆ. ಅಂತಾದರಲ್ಲಿ ಚಂದ್ರಮುಖಿ.. ಯನ್ನ ಹೇಗೆ ಒಪ್ಕೊಂಡ್ರಿ ಅಲ್ಲಿ ಪ್ರೇಮಾ ಕೂಡ ಇದ್ರು.

ಭಾವನಾ: ಹೌದು. ಸೀತಾರಾಮ್ ಕಾರಂತ್ ಪಾತ್ರದ ಎಳೆ ಅಷ್ಟೇ ಹೇಳಿದ್ರು. ಪ್ರೇಮಾ, ರಮೇಶ್ ಇರೋ ಚಿತ್ರದಲ್ಲಿ ನನ್ನದೇ ಮುಖ್ಯ ಭೂಮಿಕೆ ಇರುತ್ತೆ ಅಂತಾನೂ ಅಂದ್ಕೊಂಡಿರಲಿಲ್ಲ. ತೀರಾ ಬೋಲ್ಡ್ ಆದ ರೋಲ್.  ತಂದೆ ಯಾವಾಗ್ಲೂ ಹೇಳ್ತಾ ಇರ್ತಾರೆ- ಡು ಇಟ್ ಯುವರ್ ಬೆಸ್ಟ್. ಈಗಲೂ ಅಷ್ಟೇ 


ಸಂ: ಚಂದ್ರಮುಖಿಯ ನಂತರ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ನಟಿಸುತ್ತಲೇ ನೀವು ಪರ್ಯಾಯ ಸಿನೆಮಾಗಳಲ್ಲಿ- ಬರಗೂರು, ಕವಿತಾ ಲಂಕೇಶ್-ಶೇಷಾದ್ರಿ ಕೂಡ ನಟಿಸ್ತಾ ಬಂದ್ರಿ. ಇದು ಪ್ರಜಾ ಪೂರ್ವಕವೋ ಅಥವಾ ಆಕಸ್ಮಿಕವೋ?

ಭಾವನಾ; ಇದು ಆಕಸ್ಮಿಕವೇ ಆದರೆ ಎಲ್ರೂ ನನ್ನನ್ನ ಇದಕ್ಕೇ ಬ್ರಾಂಡ್ ಮಾಡಿಬಿಟ್ಟರು. ನಾನು ಯಾವುದೇ ಒಂದೆ ಬಗೆಯ ಚಿತ್ರಗಳಿಗೆ ಬ್ರಾಂಡ್ ಆಗಲಿಕ್ಕೆ ಇಷ್ಟಪಡಲ್ಲ. ಆದರೆ ಈ ಚಿತ್ರರಂಗದವರ ಮೆಂಟಾಲಿಟಿ ಅರ್ಥವಾಗೋಲ್ಲ. ಮೊನ್ನೆ ರಮೇಶ್ ಕೂಡ 'ಭಾವನಾ ನೀವು ಕ್ಯಾರೆಕ್ಟರ್ ರೋಲ್ ಗೆ ಸರೀರಿ. ಈ ಗ್ಲಾಮರ್ ರೋಲ್ ಎಲ್ಲ ಮಾಡಲಿಕ್ಕೆ ತುಂಬಾ ಜನ ಇದಾರೆ' ಅಂದ್ರು.  


ಸಂ: ಈಗಲೂ ಸ್ಕ್ರಿಪ್ಟ್ ನೋಡೆ ಸಿನೆಮಾ ಒಪ್ಕೊತೀರಾ?

ಭಾವನಾ: ಸ್ಕ್ರಿಪ್ಟ್ ಅಂದ್ರೆ ಯಾರೂ ತಿರುಗಿ ಕೂಡಾ ನೋಡೊದಿಲ್ಲ ಕನ್ನಡ ಸಿನೆಮಾ ರಂಗದಲ್ಲಿ. ಫೋನ್ ಮಾಡ್ತಾರೆ. ಸ್ಕ್ರಿಪ್ಟ್ ತನ್ನಿ, ನೋಡೋಣ ಅಂದ್ರೆ ಮತ್ತೆ ತಿರುಗಿಯೂ ನೋಡೋಲ್ಲ. ಇದರಲ್ಲೆ ಅವರ ಆಟಿಟ್ಯೂಡ್ ಗೊತ್ತಾಗಿಬಿಡುತ್ತೆ. 


ಸಂ:ವೃತ್ತಿಪರತೆ ಬಾಲಿವುಡ್ ಗೂ ನಮ್ಮ ಸಿನೆಮಾಗಳಿಗೂ ಹೇಗೆ ವಿಭಿನ್ನ?

ಭಾವನಾ: ವೃತ್ತಿಪರತೆ ಉದ್ಯಮಕ್ಕೆ ಸಂಬಂಧಿಸಿದ್ದಲ್ಲ. ಅದು ವೈಯಕ್ತಿಕವಾದದ್ದು. ಸಾಕಷ್ಟು ಜನ ಫೋನ್ ಮಾಡ್ತಾರೆ. ಅವರಿಗೆ ನಾನು ಕನ್ನಡದವಳು ಅಂತ ಗೊತ್ತಿರಲ್ಲ. ಕನ್ನಡ ಸಿನೆಮಾ ಮಾಡಿದೀನಿ ಅಂತ ಗೊತ್ತಿರಲ್ಲ. ಏನೋ ಅರ್ಥವೇ ಆಗೋದಿಲ್ಲ. 


ಸಂ; ನೀವು ಕಮರ್ಷಿಯಲ್ ಮತ್ತು ಕಲಾತ್ಮಕ ಎರಡೂ ಬಗೆಯ ಚಿತ್ರಗಳಲ್ಲಿ ಅಭಿನಯಿಸಿದ್ದೀರಾ? ಎರಡರ ಅನುಭವವೂ ಹೇಗೆ ವಿಭಿನ್ನ? ಮತ್ತು ಒಬ್ಬ ನಟಿಯಾಗಿ ಆ ಸ್ವಿಚ್ ಓವರ್ ಹೇಗೆ ಸಾಧ್ಯ?

ಭಾವನಾ: ಕಲಾತ್ಮಕ ಸಿನೆಮಾಗಳಲ್ಲಿ ಸ್ವಲ್ಪ ಹೋಮ್ ವರ್ಕ್ ಜಾಸ್ತಿ ಇರುತ್ತೆ. ಪಾತ್ರದ ಆಳ ಅಗಲಗಳನ್ನ ತಿಳಿದುಕೊಳ್ಳಬೇಕಾಗುತ್ತೆ. ಹಾಗಂತ ಕಮರ್ಶಿಯಲ್ ಸಿನೆಮಾಗಳಲ್ಲಿ ನಟಿಸುವುದೇನು ಸುಲಭ ಅಲ್ಲ, ಅಲ್ಲಿ ಸ್ವಲ್ಪ ನಾಟಕೀಯತೆ ಇರುತ್ತೆ. ಅದು ಎಷ್ಟರ ಮಟ್ಟಿಗೆ ಇರ್ಬೆಕನ್ನುವುದೇ ದೊಡ್ಡ ಸವಾಲು. ಕಲಾತ್ಮಕ ಸಿನೆಮಾ ನಟಿಸಿದ್ದರಿಂದ ಈ ಕಮರ್ಷಿಯಲ್ಲಿನವರು ನನ್ನನ್ನ ದೂರಾನೇ ಇಟ್ಟುಬಿಟ್ಟಿದಾರೆ.  

ಸಂ: ವಿಮುಕ್ತಿ ಬಗ್ಗೆ ಹೇಳಿ

ಭಾವನಾ:ತೀರಾ ವಿಭಿನ್ನವಾದ ಕಥಾ ಎಳೆ. ಭಾರತೀಯ ಚಿತ್ರರಂಗದಲ್ಲೇ ಇದನ್ನ ಯಾರಾದರೂ ಪ್ರಯತ್ನಿಸಿದ್ದಾರೋ ಗೊತ್ತಿಲ್ಲ. ಮಾನಸಿಕ ಅಸ್ವಸ್ಥಳಾಗಿರುವ ಹೆಣ್ಣೊಬ್ಬಳು ತನ್ನ ತಂದೆಯನ್ನೇ ಅಪಾರವಾಗಿ ಅವಲಂಬಿಸಿರುವ ಕಥೆ. ಶೂಟಿಂಗ್ ಟೈಮ್ ನಲ್ಲಿ ಬಹಳ ಹೆದರಿಕೆಯಾಗ್ತಾ ಇತ್ತು. ತುಂಬಾ ಚ್ಯಾಲೆಂಜಿಂಗ್ ಆದ ಅಭಿನಯ. ತೀರಾ ಬೋಲ್ಡ್ ಕೂಡ ಅಲ್ಲದ ಸೆಟ್ಲ್ ಕೂಡ ಅಲ್ಲದ ಪಾತ್ರ. ಒಂದು ಚೌಕಟ್ಟಲ್ಲೇ ಕಥೆ ಹೇಳಬೇಕಾಗುತ್ತದೆ. ನನಗೆ ಮಾತ್ರ ಅಲ್ಲ ನಿರ್ದೇಶಕ್ರಿಗೂ ಇದು ತುಂಬಾ ಚ್ಯಾಲೆಂಜಿಂಗ್ 


ಸಂ: ಶೇಷಾದ್ರಿ ಮತ್ತು ಬರಗೂರರ್ ಬಗ್ಗೆ

ಭಾವನಾ: ಬರಗೂರರ ಜೊತೆ ಐಯಾಮ್ ಕಂಪರ್ಟೆಬಲ್. ಬರಗೂರರ ಎಲ್ಲಾ ಕಥೆಗಳಲ್ಲೂ ಕ್ರಾಂತಿ-ಶಾಂತಿ ಥೀಮ್ ಬರುತ್ತೆ. ಅವರೊಳಗೊಬ್ಬ ಫ಼ೈಟರ್ ಇದಾನೆ. ಶೇಷಾದ್ರಿ ಅವರ ಜೊತೆ ನಾನು ಮೊದಲು ಕೆಲಸ ಮಾಡಿರಲಿಲ್ಲ. ಆಮೇಲೆ ಐ ಪೆಲ್ಟ್ ಕಂಪರ್ಟೆಬಲ್. 


ಸಂ: ಕನ್ನಡ ಸಿನೆಮಾ ಫಿಲಂ ಮೇಕಿಂಗ್ ಬಗ್ಗೆ

ಭಾವನಾ: ಕನ್ನಡದಲ್ಲಿ ಪ್ರತಿಭಾವಂತ ಕತೆಗಾರರಿದ್ದಾರೆ.  ಒಳ್ಳೊಳ್ಳೆಯ ಚಿತ್ರಗಳನ್ನ ಮಾಡುವ ಮನಸ್ಸಿನವರಿದ್ದಾರೆ. ಆದರೆ ಅವರ ಬಳಿ ಹಣ ಇಲ್ಲ. ಹಣ ಇರುವವರ ಬಳಿ ಅಭಿರುಚಿ ಇಲ್ಲ. ಹಾಗಾಗಿ ದೊಡ್ಡ ಗ್ಯಾಪ್ ಇದೆ. 


ಸಂ: ಕಲಾತ್ಮಕ ಸಿನೆಮಾಗಳಲ್ಲಿ ಅಭಿನಯಿಸುವುದರಿಂದ ಕಮರ್ಷಿಯಲ್ ಸಿನೆಮಾ ಅವಕಾಶಗಳು ತಪ್ಪಿ ಹೋದರು ಯಾಕೆ ಅದರಲ್ಲಿ ಅಭಿನಯಿಸ್ತೀರಾ?

ಭಾವನಾ: ಇದೊಂದು ಬಗೆಯ ಆತ್ಮ ತೃಪ್ತಿ ತಂದುಕೊಡುತ್ತೆ. 


ದಿನಾಂಕ ೩ನೇ ಫೆಬ್ರವರಿ
 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು