ದೃಶ್ಯಕ್ಕೊಂದು ನುಡಿಗಟ್ಟು

ಮಠ - ಗೆದ್ದಿದ್ದೆಲ್ಲಿ? ಸೋತಿದ್ದೆಲ್ಲಿ? (ಎರಡನೆ ಬಹುಮಾನ ಪುರಸ್ಕೃತ ವಿಮರ್ಶೆ)

‘ಮಠ’ದಂತಹ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಅಪರೂಪ, ಬಹಳ ಬ್ರಿಲಿಯಂಟಾಗಿದೆ, ಈಗಿನ ಸಮಾಜಕ್ಕೆ ಕನ್ನಡಿ ಹಿಡಿದಿದೆ, ಇದು ಹೊಸರೀತಿಯ ಕಾಮಿಡಿ, ನವರಸನಾಯಕ ಜಗ್ಗೇಶರ ನೂರನೆ ಚಲನಚಿತ್ರವಾಗಲು ಲಾಯಕ್ಕಾಗಿದೆ ಎನ್ನುವಂಥ ದೇಶಾವರಿ ಮಾತುಗಳೆಲ್ಲ ಗಾಂಧೀನಗರದ ಸುತ್ತಮುತ್ತ ಕೇಳಿಬಂದಿರುವಂಥದೇನೇ. ಆದರೂ ಮಠ ಬಾಕ್ಸ್ ಆಫೀಸಿನಲ್ಲಿ ‘ಸೂಪರ್ ಹಿಟ್’ ಅನಿಸಿಕೊಳ್ಳಲಿಲ್ಲ. ಒಂದು ವರ್ಗದ ಜನ ಮಾತ್ರ ಇದನ್ನ ಇಷ್ಟಪಟ್ಟರು, ಅದರಲ್ಲಿ ಕೆಲವಾರು ಜನ ಮಾತ್ರ ಈ ಚಲನಚಿತ್ರದ ಬಗ್ಗೆ ಬಹಿರಂಗ ಚರ್ಚೆ ನಡೆಸಿದರು. ಇನ್ನು ಕೆಲವರು ಈ ಚಿತ್ರದ ಜೋಕುಗಳನ್ನು, ಡೈಲಾಗುಗಳನ್ನು ಗೆಳೆಯರ ನಡುವೆ ಹೇಳಿ ನಗಾಡಿಕೊಂಡರು. ‘ಮಠ’ ಈಗಿನ ಆಲಸೀ ಯುವಜನತೆಗೆ, ಮೌಲ್ಯಗಳೆಲ್ಲ ನಶಿಸಿಹೋಗಿರುವ ಮಠಗಳಿಗೆ ಅಲಾರ್ಮ್ ಕ್ಲಾಕಿನ ಕೆಲಸ ಮಾಡಿದೆ ಎನ್ನುವುದು ಚಿತ್ರ ನೋಡಿದವರ ಒಟ್ಟಾರ ಭಾವನೆ. ಇನ್ನು ಕೆಲವರು ಈ ಚಿತ್ರ ನೋಡಿ ವಿಪರೀತ ಕೋಪಿಸಿಕೊಂಡಿದ್ದಾರೆ. ‘ಇದು ವಲ್ಗರ್ ಆಗಿದೆ. ಮನೆಮಂದಿಯೆಲ್ಲ ಕೂತು ನೋಡುವ ಹಾಗೇ ಇಲ್ಲ. ನಾವು ಶತಮಾನಗಳಿಂದ ಗೌರವಿಸಿಕೊಂಡು ಬಂದಿರುವ ಮಠಗಳು ಹಾಗೂ ಮಠಾಧೀಶರುಗಳನ್ನು ಅವಹೇಳನ ಮಾಡಿದೆ. ಮಠದಲ್ಲಿ ನಾಯಿಯನ್ನು ತೋರಿಸಿರುವುದು, ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನು ಕೂಡ ಭಾವೀ ಮಠಾಧಿಪತಿಗಳ ಸ್ಥಾನಕ್ಕೆ ತಂದು ಕೂರಿಸಿರುವುದು ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದೆ’ ಎಂದು ಕೂಗಾಡಿದವರೂ ಇಲ್ಲದಿಲ್ಲ.

ಸತ್ಯ ಕೂಡ ಹೀಗೆಯೆ..

ಸತ್ಯ ಎಲ್ಲರೆದುರಿಗೆ ಬಹಿರಂಗವಾದಾಗ ಕೆಲವರು ಮಾತ್ರ ಅದನ್ನು ಕಾಣುವ ಧೈರ್ಯ ಮಾಡುತ್ತಾರೆ, ಅವರಲ್ಲಿ ಕೆಲವೇ ಜನ ಅದನ್ನು ಬಹಿರಂಗವಾಗಿ ಚರ್ಚಿಸುವ ಯತ್ನ ಮಾಡುತ್ತಾರೆ. ಕೆಲವರು ಗುಸುಗುಸು ಮಾಡಲು ತಮ್ಮ ಹಾಸ್ಯಕ್ಕೆ ವಸ್ತುವಾಗಿ ಬಳಸಿಕೊಂಡರೆ ಇನ್ನು ಕೆಲವರು ಸತ್ಯವನ್ನು ಜನರಲೈಸ್ ಮಾಡಿ ಸುಮ್ಮನಾಗುತ್ತಾರೆ. ಸತ್ಯವನ್ನು ‘ಇದು ನಗ್ನವಾಗಿದೆ, ಇದನ್ನು ನಮ್ಮ ಸಮಾಜ ಸ್ವೀಕರಿಸಲು ಆಗದು, ಇದು ಹೊರಬರುವುದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ, ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ಇದು ಹೊರಬರದಿದ್ದರೇ ಒಳಿತು’ ಅನ್ನುವವರು ಹೆಚ್ಚಿಗೆ ಇದ್ದಾರೆ. ‘ಮಠ’ ಇಂತಹ ನಗ್ನ ಸತ್ಯಗಳ ಸಾಲಿಗೆ ಸೇರುತ್ತದೆ.


ವಿಷಾದವೆಂದರೆ ಹಾಲಿವುಡ್, ಬಾಲಿವುಡ್ಡುಗಳಲ್ಲಿ ಪ್ರಸಿದ್ಧಿ ಪಡೆದಿರುವ ‘ಸ್ಪೂಫ್’ ಎಂಬ ಹಾಸ್ಯದ ರೀತಿ ನಮ್ಮಲ್ಲಿ ಇನ್ನೂ ಬರಬೇಕಾಗಿರುವುದು. ಸ್ಪೂಫುಗಳು ನಮ್ಮ ಸುತ್ತಮುತ್ತ ಕಾಣಬರುವ ವ್ಯಕ್ತಿಗಳು ಹಾಗೂ ಘಟನೆಗಳನ್ನೆ ಆಧರಿಸಿರುತ್ತವೆ. ಇಲ್ಲಿ ಅಸಲೀ ಘಟನೆಯನ್ನೋ, ವ್ಯಕ್ತಿಯನ್ನೊ ಹಾಸ್ಯದ ಲೇಪ ಹಚ್ಚಿ ತಮಾಷೆ ಮಾಡುವುದರ ಮೂಲಕ ಬೇರೆಯೆ ರೀತಿ ಬಿಂಬಿಸಲಾಗುತ್ತದೆ. ‘ಮಠ’ ಚಲನಚಿತ್ರವೂ ಹಲವಾರು ಘಟನೆಗಳನ್ನು ಆಧರಿಸಿದ ಒಂದು ‘ಸ್ಪೂಫ್’ ಎನ್ನುವುದರಲ್ಲಿ ಸಂಶಯವೇ ಇಲ್ಲ. ಚಿತ್ರದ ಆರಂಭದಲ್ಲಿ ಕಾಣಿಸುವ ‘ಈ ಚಿತ್ರಕಥೆ, ಇಲ್ಲಿ ಬರುವ ಪಾತ್ರಗಳು, ಕ್ಷೇತ್ರಗಳು, ಸನ್ನಿವೇಶಗಳು ಎಲ್ಲ ಕಾಲ್ಪನಿಕ. ಮೃತ ಅಥವಾ ಜೀವಂತ ವ್ಯಕ್ತಿ, ಸಂಸ್ಥೆಗಳೊಡನೆ ಸಂಬಂಧ ಕಂಡುಬಂದಲ್ಲಿ ಅದು ಕಾಕತಾಳೀಯವಾದ್ದೇ’ ಎಂಬ ಜಾಳಾದ ಮಾಮೂಲಿ ಸೇಫ್ಟಿಲಾಕರಿನಂತಹ ಸ್ಟೇಟ್ಮೆಂಟು ಮುಂದುವರೆದು ‘ಹಾಗೇನಾದರು ಸಂಬಂಧ ಇದ್ದೇ ಇದ್ದಲ್ಲಿ ಅದು ನಮ್ಮ ಸಮಾಜದ ದುರದೃಷ್ಟಕರ ಬೆಳವಣಿಗೆ ಮಾತ್ರ’ ಎಂದು ಕೊನೆಯಾಗುತ್ತದೆ. ಇಲ್ಲಿಯೇ ಚಿತ್ರದ ಬಗ್ಗೆ ಕುತೂಹಲ ಮೂಡುತ್ತದೆ.


ಮೊದಲಿಗೆ ಚಲನಚಿತ್ರದಲ್ಲಿ ಸಂಕೇತಗಳ ಬಳಕೆ ಹೇರಳವಾಗಿದೆ. ಮಠದ ನಾಯಿಗೆ ‘ಮನಸ್ಸಾಕ್ಷಿ’ ಎಂಬ ಹೆಸರು, ಮಠದ ಹೊಸಿಲಿನಲ್ಲಿ ಕೂತು ಭವಿಷ್ಯ ಹೇಳುವಾಕೆ ಕುರುಡಿಯಾಗಿರುವುದು, ಮಠಕ್ಕೆ ದರಿದ್ರಲಕ್ಷ್ಮಿಯ ಪಾದಾರ್ಪಣೆ ಮತ್ತು ಅದರಿಂದುಟಾಗುವ ಅವಸಾನ, ‘ಕೊಳಲು’ಸ್ವಾಮಿಯ ಸಂಸಾರದ ಸೆಳೆತ, ‘ಎದ್ದುಕಾಣಲೆಂದು’ ಮುಖಕ್ಕೆ ರಾಶಿ ಪೌಡರು ಬಳಿದುಕೊಳ್ಳುವ ಟೆಂಟುರಾಜಣ್ಣ, ಎಲ್ಲಕಿಂತ ಹೆಚ್ಚಾಗಿ ಅರಿಷಡ್ವರ್ಗಗಳನ್ನು ಬಿಂಬಿಸುವ ಆರು ಅಭ್ಯರ್ಥಿಗಳು, ಮಠವನ್ನು ಒಬ್ಬ ವಿದೇಶೀ ಮಹಿಳೆ ಉಳಿಸುವುದು, ಹಾಗೂ ಯಾವುದೆ ಹೆಸರಿರದೆ ಬರಿ ‘ಮಠ’ವಾಗಿರುವ ಮಠ - ಇವೆಲ್ಲವೂ ಚಿತ್ರಕಥೆಗೆ ಗಟ್ಟಿತನ ಒದಗಿಸುತ್ತವೆ.


ಗೋವಿಂದ ಮತ್ತು ವಿದೇಶೀ ಸಿಸ್ಟರ್ ಮಾರ್ಥಾರನ್ನು ಸೂತ್ರಧಾರರ ಕೆಲಸಕ್ಕೆ ನಿರ್ದೇಶಕ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಉಪಕಥೆಗಳು ಸುಮಾರಿದ್ದರು ಎಲ್ಲೂ ಮುಖ್ಯ ಕಥೆಗೆ ಧಕ್ಕೆಯಾಗದ ಹಾಗೆ ಅವನ್ನು ಬಳಸಿಕೊಳ್ಳಲಾಗಿದೆ. ಬಿಡಿ ಎಳೆಗಳು ಎಲ್ಲೂ ಉಳಿಯದ ಹಾಗೆ ನೋಡಿಕೊಂಡಿರುವುದು ನಿರ್ದೇಶಕನ ಕಥೆಗಾರಿಕೆ ಜಾಣ್ಮೆಯನ್ನು ಬಿಂಬಿಸುತ್ತದೆ. ಆದರೆ ಗುರುಪ್ರಸಾದರಿಗೆ ಬಿಡುವು ನೀಡಿದ್ದರೆ ಇಡೀ ಚಿತ್ರವನ್ನೆ ಕೊನೆಯಪಕ್ಷ ಮೂರು ಭಾಗಗಳಾಗಿ ಹಂಚಬಹುದಿತ್ತೇನೊ. ಮೊದಲನೆಯದಾಗಿ ಮಠದ ಅಭ್ಯರ್ಥಿಗಳ ಕಥೆಗಳು, ಆಮೇಲೆ ಚಿತ್ರದಲ್ಲಿ ‘ಉಪ್ಕಥೆ’ಗೋವಿಂದ ಸಿಸ್ಟರ್ ಮಾರ್ಥಾರಿಗೆ ಹೇಳುವ ಕಥೆಗಳು, ಟ್ರೇನಿಂಗು ಪಡೆಯಲು ಹೋಗುವ ಮಠದ ಕಥೆ, ಖೈದಿಗಳ ಮನಪರಿವರ್ತನೆಯ ಸೀನುಗಳು, ಮಧ್ಯಮಧ್ಯದಲ್ಲಿ ಅಭ್ಯರ್ಥಿಗಳ ಥರಾವರಿ ಇಮ್ಯಾಜಿನೇಶನ್ನುಗಳು, ಇದರ ಜತೆಗೆ ಗೋವಿಂದನ ಗೊಂದಲ ಹುಟ್ಟಿಸುವ ಸೂಪರ್ ಫಾಸ್ಟ್ ಫ್ಲಾಶ್ ಬ್ಯಾಕುಗಳು, ಇವೆಲ್ಲದರ ನಡುವೆ ಸಾಗುವ ಮುಖ್ಯಕಥೆ.. ಉಶ್!! ಕಥೆಯಲ್ಲಿ, ನಿರೂಪಣೆಯಲ್ಲಿ ಹೊಸತನವಿದ್ದರು ಅದು ನೂರಾರು ವಿಷಯಗಳ ಕಡೆ ಗಮನ ಹರಿಸಿರುವುದು ಸಾಮಾನ್ಯ ಪ್ರೇಕ್ಷಕನ ಗಮನವನ್ನು ಬಹಳ ಕಡೆ ಅಂಕುಡೊಂಕು ಮಾಡುತ್ತದೆ, ಆದರೆ ಚಿಟ್ಟುಹಿಡಿಸುವುದಿಲ್ಲ.


ಪಾತ್ರಗಳೆಡೆ ಹೊರಳಿದರೆ ಸಾತ್ವಿಕ ಅಪ್ಪಯ್ಯನವರು ಹಾಗೂ ಅವರ ನಾಸ್ತಿಕ ಮಗನ ಸಂಬಂಧ ಬಹಳ ‘ನೈಜ’ವಾಗಿ (ಮಗ ಇದ್ದಕ್ಕಿದ್ದಂತೆ ನಿರ್ದೇಶಕನಾಗಿ ಸುದರ್ಶನರಿಗೆ ಡಯಲಾಗು ಹೇಳುವಂತೆ ಧಮಕಿ ಹಾಕುವುದು ಚೆನ್ನಾಗಿದೆ!!) ಮೂಡಿಬಂದಿದ್ದರೆ, ಮಂಡ್ಯ ನಾಗೇಶನ ಅಜ್ಜಿ ಅತನನ್ನು ಕ್ಷುಲ್ಲಕ ಕಾರಣಕ್ಕೆ ಅಂಗಡಿಯಿಂದ ಆಚೆತಳ್ಳಿ ಮನೆಯಿಂದ ಉಚ್ಛಾಟಿಸುವುದು ಅಸಹಜ ಅನ್ನಿಸುತ್ತದೆ. ಡೇಂಜರ್ ಬಾಷ, ‘ಮಸಣದ ಮಗ’ ಸಿದ್ಧನ ಜನ್ಮ, ವೇಣುಗೋಪಾಲನ ಕುಡಿತ ಹಾಗೂ ಚಿಂತಾಮಣಿಯ ಲೆಕ್ಕಾಚಾರದ ಕಥೆಗಳು ಸಾಕಷ್ಟು ನಗೆ ಉಕ್ಕಿಸಿದರೆ, ಶಶಿಧರ ಭಟ್ಟರ ಕಥೆ ಆತನ ಕಾಮುಕತೆಯ ಹಿನ್ನೆಲೆಯನ್ನು ಬಲವಾಗಿ ನಿರೂಪಿಸಿದಂತೆ ಇಲ್ಲ. ಸರ್ವರ್ ವೆಂಕಟೇಶನ ಕಥೆ ಕೃತಿಚೌರ್ಯವನ್ನು ಮಾರ್ಮಿಕವಾಗಿ ಬಿಂಬಿಸಿದರೂ ಅದಕ್ಕೂ ಮಠಸೇರಲು ಆತ ಬಂದದ್ದಕ್ಕು ಕನೆಕ್ಷನ್ನು ದೊರಕುವದಿಲ್ಲ. ಇವರ ಕಾರನಗಳು ಕಾರಣಗಳೇ ಅಲ್ಲ. ಆದರೆ ಇವರೆಲ್ಲ ತಮ್ಮತಮ್ಮ ನಿರುದ್ಯೋಗೀ ಸ್ಥಿತಿಗೆ ಯಾವುದೇ ಪಕ್ಕಾ ಕಾರಣಗಳನ್ನು ಒದಗಿಸದೆ ತಮ್ಮ ದುರವಸ್ಥೆಯನ್ನು ಸಮರ್ಥವಾಗಿ ತೋರುವುದು ಪ್ರೇಕ್ಷಕರಲ್ಲಿ ಅವರ ಬಗ್ಗೆ ಅನಾದರ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಏಳೂ ಜನ ಮಠಾಧಿಪತಿಗಳಲ್ಲಿ ನಾವು ಇರಬಾರದೆಂದು ಬಯಸುವ ಎಲ್ಲ ರೀತಿನೀತಿಗಳ ದ್ಯೋತಕಗಳೇ ತಾವೆಂಬಂತೆ ವರ್ತಿಸುತ್ತಾರೆ. ಕುಡಿತ, ಜೂಜು, ಅಶ್ಲೀಲ ಸಿನೆಮಾ, ಪುಂಡುಪೋಕರಿತನ, ಸೋಮಾರಿಬುದ್ಧಿ, ಸಂಪ್ರದಾಯಕ್ಕೆ ಅಗೌರವ.. ಇನ್ನೂ ಇವರ ಕೊರತೆಗಳು ಮುಂದುವರೆಯುತ್ತ ಹೋಗುತ್ತವೆ. ಅಪ್ಪಯ್ಯ ಇವರೆಲ್ಲರ ನಡುವೆ ಹೈರಾಣಾಗಿ ಹತ್ತಿರದ ಮಠವೊಂದಕ್ಕೆ ಇವರನ್ನೆಲ್ಲ ಟ್ರೈನಿಂಗಿಗೆ ಕಳಿಸಿದರೆ ಅಲ್ಲಿನ ಘೋರರಾಜಕೀಯ, ಕೊಲೆ, ಕಿರಿಸ್ವಾಮಿಯ ಕಳ್ಳಪ್ರಣಯಗಳು ಅಭ್ಯರ್ಥಿಗಳಿಗೇ ಗಾಬರಿ ಉಂಟುಮಾಡುತ್ತದೆ. ಈ ಮಧ್ಯೆ ಇವರೆಲ್ಲರೂ ಸೇರಿ ರಾಜಣ್ಣನ ಟೆಂಟಿಗೆ ‘ಸಿನೆಮಾ’ ನೋಡಲು ಹೋಗಿ ಅಪ್ಪಯ್ಯನವರ ಮಗನ ಕೈಲಿ ಸಿಕ್ಕಿಹಾಕಿಕೊಂಡು ಕೊನೆಗೆ ಆತನನ್ನೆ ಹಿಗ್ಗಾಮುಗ್ಗಾ ಚಚ್ಚುವದು ಅವರ ಬಗ್ಗೆ ಇನ್ನಷ್ಟು ಕೋಪ ಮೂಡಿಸುತ್ತದೆ.


ಈಗ ಉಪಕಥೆಗಳ ವಿಶೇಷತೆಗಳ ಬಗ್ಗೆ ಹೇಳದಿದ್ದರೆ ಸಾರಿಗೆ ಒಗ್ಗರಣೆ ಮರೆತಂತೆಯೇ ಸರಿ. ಮಳ್ಳಿಯ ಕಥೆ ಸಮಾಜದ ಕಣ್ಣಲ್ಲಿ ಕೀಳಾಗಿರುವ ವೇಶ್ಯೆಯ ಅಂತರಾಳವನ್ನು ಕೆದಕುತ್ತದೆ. ರಾಜನೊಬ್ಬನ ಹೆಂಡತಿಯ ಸ್ಮಾರಕವನ್ನು ನಿರ್ಮಿಸಲು ಹೋಗಿ ಆತನಿಂದಲೆ ಅಕಾಲಸಾವಿಗೀಡಾಗುವ ಜಕಣಾಚಾರಿ ಮತ್ತವನ ಪ್ರೇಯಸಿಯ ಕಥೆಯಲ್ಲಿ ಹಾಗೂ ರಾವಣನ ಪೀಠದ ಕಥೆಯಲ್ಲಿ ಹಲವಾರು ವಿಶೇಷಗಳಿವೆ. ಈ ಎರಡೂ ಕಥೆಗಳ ಹಿನ್ನೆಲೆ ಐತಿಹಾಸಿಕ ಹಾಗೂ ಪೌರಾಣಿಕ, ಆದರೆ ಬಳಸಿರುವ ಭಾಷೆ ಆಧುನಿಕ. ರಾವಣನ ಡಯಲಾಗ್ ಡೆಲಿವರಿ ಬಲು ಖುಷಿ ಕೊಡುತ್ತದೆ. ಜಕಣಾಚಾರಿಯ ಕಥೆ ಕಪ್ಪುಬಿಳುಪು ಸಿನೆಮಾದ ಕ್ಲಾಸಿಕ್ ಅನುಭವವನ್ನು ಹಾಸ್ಯದ ಮಿಶ್ರಣದೊಂದಿಗೆ ತುಂಬಿಕೊಡುತ್ತದೆ. ಗೋವಿಂದನ ಕಥೆಗಳು ನಿಜವಾದವೆ ಅಥವಾ ಆತ ಅವನ್ನು ಕಟ್ಟಿಹೇಳುತ್ತಿದ್ದಾನೆಯೆ ಎಂಬ ಅನುಮಾನ ಪ್ರೇಕ್ಷಕರಲ್ಲಿ ನಗುವಿನ ಜತೆಗೇ ಬಂದುಹೋಗುತ್ತದೆ.
ಹಾಗೂ ಹೀಗೂ ಕೊನೆಗೆ ಅಪ್ಪಯ್ಯ ಮತ್ತು ಸದಾನಂದ ಅಭ್ಯರ್ಥಿಗಳಲ್ಲಿ ಮಠಾಧಿಪತಿ ‘ಪೋಸ್ಟಿ’ನ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲರೂ ತಮ್ಮ ತಮ್ಮ ಪಾಠಗಳನ್ನು ಸ್ವಾರ್ಥಕ್ಕಾಗಿಯಾದರು ಕಲಿಯಲಾರಂಭಿಸುತ್ತಾರೆ. ಖೈದಿಗಳಿಗೇ ಪ್ರವಚನ ನೀಡುತ್ತಾರೆ!! ಆದರೆ ಕೊನೆಯ ಪರೀಕ್ಷೆಯಲ್ಲಿ ವೆಂಕಟೇಶನ ಜಾಣ್ಮೆ ಹಾಗೂ ರಾಜಕೀಯದ ಮುಂದೆ ಎಲ್ಲ ವ್ಯರ್ಥವಾಗುತ್ತದೆ. ಬೇಸರಿಸಿ ಕೂತ ಆರು ಜನರೂ ಮಠದ ಭಿಕ್ಷುಕ ಹಾಗೂ ಅಂಧ ಜ್ಯೋತಿಷಿಯ ನಡುವೆ ನಡೆಯುವ ಘಟನೆಯೊಂದರಿಂದ ದುಡಿದು ತಿನ್ನುವ ಮಹತ್ವವನ್ನು ಅರಿಯುವದು, ವೆಂಕಟೇಶ ಪೀಠಾರೋಹಣದ ದಿನವೇ ತನ್ನ ಮುಂದಿನ ಕಪಟಜೀವನವನ್ನು ನೆನೆದು ಗಾಬರಿಯಾಗಿ ಪೀಠಕ್ಕೆ ಒಲ್ಲೆನೆನ್ನುವದು, ಹಾಗೂ ಅವರೆಲ್ಲರ ನಂತರದ ಜೀವನದ ಚಿತ್ರಣ ‘ಮಾರಲಿಸ್ಟಿಕ್’ ಆಗಿವೆ.


ಒಟ್ಟಾರೆ ಬಹಳ ‘ರಸ್ಟಿಕ್’ ಅನುಭವ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರು ಅಗಿಯುವ ಬಟರ್ ಪಾಪ್ಕಾರ್ನ್ ಅಂತೂ ಅಲ್ಲವೇ ಅಲ್ಲ. ಚಿತ್ರದುದ್ದಕ್ಕೂ ಇಂದಿನ ಮಠಗಳಲ್ಲಿ ನಡೆದಿರುವ ನಡೆಯುತ್ತಲಿರುವ ಹಲವಾರು ಘಟನೆಗಳನ್ನು ಹಾಸ್ಯಪೂರಿತವಾಗಿ ಹೇಳಲಾಗಿದೆಯಾದರು, ಉದ್ದೇಶಿತ ಮೊನಚು ನಮ್ಮನ್ನು ಇರಿಯದೆ ಬಿಡದು. ನಿರುದ್ಯೋಗಿಗಳನ್ನು ಲೇವಡಿ ಮಾಡಲಾಗಿದೆ ಅನ್ನಿಸಿದರು ನಿರುದ್ಯೋಗ ಇಂದು ಯುವಕಯುವತಿಯರನ್ನು ಎಳೆಯುತ್ತಿರುವ ಹಾದಿಗಳನ್ನು ನೋಡಿದರೆ ಇದರಲ್ಲಿ ಅತಿಶಯ ಏನಿಲ್ಲ. ಡಯಲಾಗುಗಳ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಜಗ್ಗೇಶರ ವಿವಿಧ ಮುಖಭಂಗಿಗಳೇ ಸಾಕಷ್ಟು ಕೆಲಸ ಮಾಡುತ್ತವೆ. ಇತರ ಪಾತ್ರಧಾರಿಗಳು ಚೆನ್ನಾಗಿ ನಟಿಸಿದ್ದಾರೆ. ಅಂಧಜ್ಯೋತಿಷಿಯ ಪಾತ್ರದ ಭಾಗೀರಥಿ ಭರವಸೆ ಮೂಡಿಸುತ್ತಾರೆ. ಪಾತಾಜೆಯವರ ಕ್ಯಾಮೆರಾ ಓಕೆ. ಸಂಗೀತದಲ್ಲಿ ಯಾವುದೇ ಒರಿಜಿನಾಲಿಟಿ ಇಲ್ಲ. ಎಲ್ಲ ಪ್ರಚಲಿತ ಆಂಗ್ಲ, ಹಿಂದೀ ಆಲ್ಬಮುಗಳಿಂದ ಖುಲ್ಲಂಖುಲ್ಲಾ ಕದಿಯಲಾಗಿದೆ. ಇರುವ ಮೂರು ಹಾಡುಗಳಲ್ಲಿ ಯಾವೂ ನೆನಪಿರವು. ಆಗೀಗ ಮಂತ್ರಘೋಷದ ಬಳಕೆ ಕಿವಿಗೆ, ಮನಕ್ಕೆ ಇನಿದಾಗಿದೆ. ಗುರುಪ್ರಸಾದರು ತಮ್ಮ ಚೊಚ್ಚಲ ಸಿನೆಮಾದಲ್ಲಿ ತಮ್ಮೆಲ್ಲ ಉತ್ಸಾಹ ತುಂಬಿದ್ದಾರೆ. ಆದರೆ ಅವರು ಹೇಳುವ ವಿಷಯಗಳು ಅನೇಕವಿವೆ, ಸಮಯ ಮೂರು ಗಂಟೆಗಳು ಮಾತ್ರವಿದೆ. ಗುರುಪ್ರಸಾದರು ತಮ್ಮ ಉತ್ಸಾಹವನ್ನು ‘ಒನ್ ಇಶ್ಯೂ - ಒನ್ ಮೂವೀ’ ಎಂಬ ಸೂತ್ರಕ್ಕೆ ಅಳವಡಿಸಿಕೊಂಡು ಮುಂದುವರೆದರೆ ಕನ್ನಡ ಚಿತ್ರರಂಗದ ಅದೃಷ್ಟ ಖುಲಾಯಿಸಬಹುದು. ಹೊಸತನ್ನು ಕೊಡುವ ಉತ್ಸಾಹ, ಅದಕ್ಕೆ ತಕ್ಕ ಆಳ, ಜಾಣ್ಮೆ ಅವರಲ್ಲಿದೆ.


ಕೊನೆಯದಾಗಿ, ‘ಮಠ’ ಮನೆಯವರೆಲ್ಲ ಕೂತು ನೋಡುವ ಸಿನೆಮಾ ಖಂಡಿತಾ ಅಲ್ಲ. ಏಕೆಂದರೆ ಸತ್ಯವನ್ನು ತಿರುಚೀ ತಿರುಚೀ ಅಭ್ಯಾಸವಾದ ನಮಗೆ ಅದನ್ನು ಜೀರ್ಣಮಾಡಿಕೊಳ್ಳುವ ಶಕ್ತಿ ಇಲ್ಲವೇ ಇಲ್ಲ. ಹೊಸತನ್ನು ಬರಮಾಡಿಕೊಂಡು ಅದರ ಗುಣಾವಗುಣಗಳನ್ನು ಮುಕ್ತವಾಗಿ ಚರ್ಚಿಸಿ ಅದರಿಂದ ಸಮಾಜಕ್ಕೆ ಉಪಯೋಗವಾಗುವಂತೆ ಮಾಡುವ ಕಾಲ ಎಂದಾದರು ಬಂದೀತೆ? ‘ಮಠ’ದ ಕಾವಲುಗಾರ ‘ಮನಸ್ಸಾಕ್ಷಿ’ಯೇ ಇದಕ್ಕೆ ಉತ್ತರ ಹೇಳಬೇಕು!!


ಟೀನಾ ಶಶಿಕಾಂತ್  ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಕಾರ್ಕಳ, ಶಿವಮೊಗ್ಗಗಳಲ್ಲಿ ವಿದ್ಯಾಭ್ಯಾಸ. ಕುವೆಂಪು ವಿಶ್ವವಿದ್ಯಾನಿಲಯದಿಂದ ಆಂಗ್ಲಸಾಹಿತ್ಯದಲ್ಲಿ ಪದವಿ. ಉದಯವಾಣಿ ದಿನಪತ್ರಿಕೆಯಲ್ಲಿ ಅಂಕಣ - ’ಕಣ್ಣ ಕೋಣೆಯ ಕಿಟಕಿ’. ಬ್ಲಾಗಿಂಗ್, ಚಾರಣ, ಮೀಡಿಯಾವಾಚ್, ಬರವಣಿಗೆ - ಇವು ಆಸಕ್ತಿಯ ವಿಷಯಗಳು.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು