ದೃಶ್ಯಕ್ಕೊಂದು ನುಡಿಗಟ್ಟು

ಹೀಗೊಂದು ಶುಕ್ರವಾರದ ಸಾಯಂಕಾಲ

 ಈ ಶುಕ್ರವಾರ ಮನಸ್ಸಿಗೇನೋ ಕಸಿವಿಸಿ. ವಿಮುಕ್ತಿ ಬಿಡುಗಡೆಯಾದ ದಿನವೇ ಮೈ ನೇಮ್ ಈಸ್ ಖಾನ್ ಕೂಡ ಬಿಡುಗಡೆಯಾಗಿತ್ತು. ಎಲ್ಲಾ ವಾರ್ತಾ ವಾಹಿನಿಗಳು ಮುಂಬೈ ನಲ್ಲಿ ಮೈ ನೇಮ್ ಈಸ್ ಖಾನ್ ಬಿಡುಗಡೆಗೆ ಶಿವಸೇನೆಯಿಂದ ಉಂಟಾದ ಭೀತಿ, ಶಾರೂಖ್ ನ ಫ್ಯಾನ್ ಗಳು ದಂಡೋಪಾದಿಯಲ್ಲಿ ಸಿನೆಮಾ ಮಂದಿರಕ್ಕೆ ಬರುತ್ತಿದ್ದ ದೃಶ್ಯಗಳು ಇವನ್ನೆಲ್ಲಾ ಬಿತ್ತರಿಸುವಲ್ಲಿ ಮಗ್ನವಾಗಿದ್ದವು. ಸಿನೆಮಾ ಹಾಲ್ ಗಳು ಹೌಸ್ ಫುಲ್ ಆಗಿ ಶಾರೂಖ್ ಖಾನ್ ಮತ್ತು ಶಿವಸೇನೆಯ ನಡುವಿನ ಸಮರದಲ್ಲಿ ಶಾರೂಖ್ ಖಾನ್ ನೇ ವಿಜಯಿ ಎಂದು ಘೋಷಿಸಿದ್ದೂ ಆಯಿತು. ವಾಸ್ತವದಲ್ಲಿ ಇದು ಸೇನೆ ಮತ್ತು ಶಾರೂಖ್ ನ ನಡುವಿನ ಘರ್ಷಣೆಯೇ ಆಗಿರಲಿಲ್ಲ. ಸಾಮ್ನಾದಲ್ಲಿ ಬಾಳಾ ಠಾಕ್ರೆ ಬರೆದ ಅಂಕಣವನ್ನ ಮಾಧ್ಯಮದವರು ತಿರಸ್ಕರಿಸಿಬಿಟ್ಟಿದ್ದರೇ ಈ ರಗಳೆಗಳೇ ನಡೆಯುತ್ತಿರಲಿಲ್ಲ. ಸ್ವತಃ ಮುಂಬೈನಲ್ಲೇ ತನ್ನ ಚಾರ್ಮ್ ಕಳೆದುಕೊಂಡಿರುವ , ಶಿವಸೇನೆಯ ಈ ಮಾತನ್ನ ಮಾಧ್ಯಮ ಇಷ್ಟೊಂದು ಗಮನ ನೀಡಬೇಕಿರಲಿಲ್ಲ. ತಾನೇ ಬೆಂಕಿ ಹಚ್ಚಿ ಉರಿಸಿದ ಈ ಪ್ರಕರಣಕ್ಕೆ ತಾನೇ ನೀರು ಸುರಿದು ಮೀಡಿಯಾ ತಣ್ಣಗಾಯಿತು. ಇವೆಲ್ಲದರ ಮಧ್ಯೆ ಹಿಂಸೆ ಅನುಭವಿಸಿದ್ದು ಮಾತ್ರ ಶಾರೂಖ್ ಖಾನ್ . ಪದೇ ಪದೇ ತನ್ನ ರಾಷ್ಟ್ರೀಯತೆಯನ್ನು ಪ್ರಶ್ನಿಸಲಾಗುತ್ತಿದೆ ಎನ್ನುವ ನೋವು ಆಳದಲ್ಲಿ ಆತನಿಗಿತ್ತು. ಮಾತನ್ನ ಸೂಕ್ಷ್ಮವಾಗಿ ಜೋಡಿಸಿ ತಾನು ಮುಸ್ಲಿಂ ಆಗಿದ್ಯಾಗೂ ಮೊದಲಿಗೆ ಭಾರತೀಯ ಎಂಬುದನ್ನ ಒತ್ತಿ ಒತ್ತಿ ಆತ ಹೇಳಬೇಕಿತ್ತು. ಅದನ್ನಾತ ಚೆನ್ನಾಗಿಯೇ ನಿರ್ವಹಿಸಿದ.ಇರಲಿ. ಇದನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಪಿವಿಆರ್ ಬಳಿ ನುಸುಳಿದಾಗ ಮೈ ನೇಮ್ ಈಸ್ ಖಾನ್ ಗಾಗಿ ಟಿಕೆಟ್ ಪರದಾಟ ನಡೆದಿತ್ತು. ವಿಮುಕ್ತಿ ಎನ್ನುವ ಸಿನೆಮಾ ಒಂದು ಪ್ರದರ್ಶಿತವಾಗುತ್ತಿದೆ ಎಂಬುದನ್ನೇ ಅರಿಯದವನ ಬಳಿ ವಿಮುಕ್ತಿಗೆರಡು ಟಿಕೆಟ್ ಖರಿದಿಸಿದ್ದೂ ಆಯ್ತು. ಇಡೀ ಥಿಯೇಟರ್ ಹಾಲಿನಲ್ಲಿದ್ದದ್ದು ಒಂಬತ್ತೇ ಒಂಬತ್ತು ಜನ. ಮನಸಿಗೆ ಇನ್ನಷ್ಟು ಕಿರಿಕಿರಿ.ವಿಮುಕ್ತಿ ನವೋದಯದ ಕಥೆಯೊಂದನ್ನ ದೃಶ್ಯರೂಪದಲ್ಲಿ ನೋಡಿದ ಅನುಭವಾಗುತ್ತದೆ. ಶೇಷಾದ್ರಿಯವರ ಹಿಂದಿನ ಚಿತ್ರಗಳೂ ಅಷ್ಟೇ. ಅವರ ಚಿತ್ರಗಳಿಗೆಲ್ಲ ಈ ಗುಣ ಇದೆ. ಬಹುಷಃ ಇದಕ್ಕೆ ಅವರ ನೇರ ನಿರೂಪಣಾ ಶೈಲಿಯೂ ಕಾರಣವಿರಬಹುದು. ಕಾಸರವಳ್ಳಿಯವರಲ್ಲಿನ ತಪ್ತತೆ ಶೇಷಾದ್ರಿ ಸಿನೆಮಾಗಳಲ್ಲಿಲ್ಲ. ಕಾಸರವಳ್ಳಿ ಸಿನೆಮಾ ಕಾಡಿದಷ್ಟು ಶೇಷಾದ್ರಿ ಸಿನೆಮಾ ಕಾಡುವುದಿಲ್ಲ. ಕಾಸರವಳ್ಳಿಯ ಸಿನೆಮಾ ನೋಡು ನೋಡುತ್ತಿದ್ದಂತೆ ಅದು ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.  ಸುಮ್ಮನೇ ಮಧ್ಯಾಹ್ನದ ತಂಪಲ್ಲಿ ಕುಳಿತು ಓದುವ ಮಾಸ್ತಿ ಕತೆಗಳಂತೆ ಶೇಷಾದ್ರಿ ಸಿನೆಮಾ.  ಇಷ್ಟರ ಮಟ್ಟಿಗೆ ಅವರು ಭಿನ್ನ.ತೀರಾ ಸೂಕ್ಷ್ಮವಾದ ಕಥೆಯನ್ನ ಹೇಳುತ್ತ ಹೊರಡುತ್ತದೆ, ವಿಮುಕ್ತಿ. ಬಾಲ್ಯದಿಂದಲೂ ಅಪ್ಪನನ್ನು ಹಚ್ಚಿಕೊಂಡ ಮಗಳೊಬ್ಬಳು ತಾನು ಮದುವೆಯಾದ ಮೇಲೂ ಗಂಡನಿಗಿಂತ ಹೆಚ್ಚಾಗಿ ಅಪ್ಪನ ಬಗ್ಗೇ ಹೆಚ್ಚಾಗಿ ಪೊಸೆಸ್ಸಿವ್ ಆಗಿಬಿಟ್ಟಿದ್ದಾಳೆ. ನಿರ್ದೇಶಕರಿಗೆ ಈ ವ್ಯಾಮೋಹದ ಸ್ಥಿತಿಯನ್ನ ಪ್ರೇಕ್ಷಕರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಈ ದಿಸೆಯಲ್ಲಿ ಕೆಲ ಅನಗತ್ಯ ಶಾಟ್ ಗಳು ಬಂದು ಹೋಗುತ್ತವೆ. ಮಾಧವಿ (ಮಗಳು)ಗೆ ಯಾಕೆ ಅಪ್ಪ ಕೇಶವನ ಮೇಲೆ ಇಷ್ಟೊಂದು ವ್ಯಾಮೋಹ ಎನ್ನುವ ಬಗ್ಗೆ ನಿಖರವಾದ ವಿವರಗಳು ಸಿಕ್ಕುವುದಿಲ್ಲ. ಅಪ್ಪನ ಚಿತ್ರಕಲೆಯನ್ನ ಇಷ್ಟ ಪಟ್ಟ ಮಾತ್ರಕ್ಕೆ ಅದು ಅಪ್ಪನ ಮೇಲಿನ ವ್ಯಾಮೋಹವಾಗಿ ಪರಿವರ್ತಿತವಾಗಬೇಕಿಲ್ಲವಷ್ಟೇ?ಹಾಗೆಯೇ, ಕೇಶವ ಕೂಡ ಮಗಳ ಈ ನಡವಳಿಕೆ (ಅದೊಂದು ಕಾಯಿಲೆಯೆಂದು ತಿಳಿದಿದ್ದರೂ)ಗೆ ಹೊಂದಿಕೊಳ್ಳಲು ಪ್ರಯತ್ನಿಸದೇ ಏಕಾ ಏಕೀ ಮನೆ ಬಿಟ್ಟು ಹೊರಟು ನಿಲ್ಲುವುದನ್ನ ಕೂಡ ಒಪ್ಪಿಕೊಳ್ಳುವುದು ಕಷ್ಟ. ಇದರ ಹಿಂದಿನ ದೃಶ್ಯದಲ್ಲಿ ತನ್ನ ಅಪ್ಪನ ಕ್ರಿಯಾಕರ್ಮ ಮಾಡಿರದ ಪಾಪಪ್ರಜ್ಞೆ ಅವನನ್ನ ಕಾಡುವ ದೃಶ್ಯ ಬರುತ್ತದೆ; ಆದರದು ಅದಕ್ಕೆ ಸಮರ್ಥನೀಯವೆಂದೆನಿಸುವುದಿಲ್ಲ.ಮನೆ ಬಿಟ್ಟು ಹೋದ ಅಪ್ಪನನ್ನು ಎಂಟು ವರುಷಗಳ ನಂತರ - ಪತ್ರಿಕೆಯಲ್ಲಿ ಸಿಕ್ಕ ಸುಳಿವೊಂದರಿಂದ- ಕಾಶಿಗೆ ಹುಡುಕಿ ಹೊರಡುತ್ತಾಳೆ, ಮಾಧವಿ.  ಕಾಶಿಯ ಪರಿಸರದ ಅನುಭವದಲ್ಲಿ ಮಾಧವಿಯ ಆಲೋಚನೆಗಳು ಹೊಸ ದಿಕ್ಕನ್ನ ಕಂಡು ಕೊಳ್ಳುತ್ತಾಳೆ.  ಮುಕ್ತಿಧಾಮದಲ್ಲಿ ಸಾವಿಗೆ ಕಾದು ಕುಳಿತ ವೃದ್ಧರು, ಎಲ್ಲರ ಮುಕ್ತಿಗೆ ಸಾಕ್ಷಿಯಾಗಿ ಹರಿವ ಗಂಗೆ ಇವೆಲ್ಲ ಮಾಧವಿಯನ್ನು ಅಂತರಂಗದಲ್ಲಿ ಇನ್ನಷ್ಟು ಗಟ್ಟಿಗೊಳಿಸುತ್ತವೆ. ಭಾವನಾರ ಮಾಗಿದ ಅಭಿನಯ ಈ ದೃಶ್ಯಗಳಲ್ಲೆಲ್ಲ ಪಕ್ವವಾಗಿ ಮೂಡಿಬಂದಿದೆ. ಗಂಗೆ, ಕಾಶಿಯನ್ನ ಸೆರೆ ಹಿಡಿದ ರಾಮಚಂದ್ರರ ಶಾಟ್ ಗಳು ಬಹುಕಾಲ ಕಾಡುತ್ತವೆ. ವಿಮುಕ್ತಿ ಮಾಧವಿಯ ಕಥೆ. ತನ್ನನ್ನಾವರಿಸಿಕೊಂಡಿರುವ ವ್ಯಾಮೋಹದಿಂದ ಆಕೆ ಕಂಡುಕೊಳ್ಳುವ ನೈಜ ಪ್ರೀತಿಯ ನವಿರಾದ ಹಾದಿಯೇ, ವಿಮುಕ್ತಿ.ಚಿತ್ರ ನೋಡಿ ಹೊರಬಂದಾಗ ಮೈ ನೇಮ್ ಈಸ್ ಖಾನ್ ಕೂಡ ಬಿಟ್ಟಿತ್ತು ಅಂತ ಕಾಣುತ್ತೆ. ಏನೋ ಕಳಕೊಂಡ ಖುಷಿಯಲ್ಲಿ ಜನ ಹೊರ ಬರುತ್ತಿದ್ದರೆ, ನನ್ನಲ್ಲಿನ್ನೂ ಆ ಸಾಲುಗಳು ಕಾಡುತ್ತಿತ್ತು." ನಾವೆಲ್ಲ ಹೀಗೆ; ಇಲ್ಲದ್ದನ್ನ ಇದೆ ಅಂದುಕೊಳ್ತಾ ಕೊರಗ್ತಾ ಇರ್ತೀವಿ. ಅದರಿಂದನೇ ಈ ನೋವು, ನಿರಾಶೆ ಎಲ್ಲ. ಮನುಷ್ಯ ಇದೆಲ್ಲದನ್ನ ಮೀರಬೇಕು" ದಿನಾಂಕ: ೧೩ನೇ ಫೆಬ್ರವರಿ ೨೦೧೦

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು