ತುಮಕೂರು ಜಿಲ್ಲಾಧಿಕಾರಿಗೆ ಪಿ.ಶೇಷಾದ್ರಿ ಪತ್ರ
ಡಾ.ಸಿ.ಸೋಮಶೇಖರ್,
ಇದೇ ಕಾರ್ಯಕ್ರಮದಲ್ಲಿ, ಫೆಬ್ರವರಿ ೨೬ ರಂದು, ಬೆಳಗ್ಗೆ ಹನ್ನೊಂದು ಗಂಟೆಗೆ, ‘ಸಾಧಕರ ಸ್ಮರಣೆ’ ಕಾರ್ಯಕ್ರಮದಲ್ಲಿ ನನ್ನನ್ನು ಅಭಿನಂದಿಸಲಿರುವ ವಿಚಾರ ನನಗೆ ಆಹ್ವಾನ ಪತ್ರಿಕೆಯ ಮೂಲಕ ತಿಳಿಯಿತು! ಇದು ನನಗೆ ಏಕಕಾಲಕ್ಕೆ ಅಚ್ಚರಿಯನ್ನೂ, ಮುಜಗರವನ್ನೂ ಉಂಟು ಮಾಡಿತು... ಚಿತ್ರರಂಗದಲ್ಲಿ ಸಾಧನೆ ಮೆರೆದು ಮರೆಯಾದವರ ಸ್ಮರಣೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿರುವುದು ನನಗೆ ವೈಯಕ್ತಿಕವಾಗಿ ಸಮಂಜಸ ಎನ್ನಿಸಲಿಲ್ಲ. ನಾಲ್ಕು ದಿನದ ಕಾರ್ಯಕ್ರಮದಲ್ಲಿ ಪ್ರತ್ಯೇಕವಾಗಿ, ‘ಸನ್ಮಾನ ಸಮಾರಂಭವೇ’ ಇದ್ದು (ಉಮಾಶ್ರೀ ಕಾರ್ಯಕ್ರಮ) ಅಲ್ಲಿ ಇದನ್ನು ಏಕೆ ಸೇರಿಸಲಾಗಲಿಲ್ಲವೋ ತಿಳಿಯದು... ಇರಲಿ, ಇದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರವನ್ನು ತಮ್ಮ ಗಮನಕ್ಕೆ ತರಲು ಈ ಪತ್ರ ಬರೆಯುತ್ತಿದ್ದೇನೆ. ನಮ್ಮ ನಾಡಿನ ಸಂಸ್ಕೃತಿಯಲ್ಲಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳಂತೆ ಚಲನಚಿತ್ರವೂ ಒಂದು ಭಾಗ ಎಂಬುದು ಅನುಭವಿಗಳಾದ ತಮಗೆ ತಿಳಿದೇ ಇದೆ. ಇಂಥ ‘ಸಂಸ್ಕೃತಿಯ ಸಂಭ್ರಮ’ ಕಾರ್ಯಕ್ರಮಗಳಲ್ಲಿ ಚಲನಚಿತ್ರಕ್ಕೂ ಒಂದು ಸ್ಥಾನಮಾನ ದೊರೆಯಬೇಕು ಎಂಬುದು ನನ್ನ ಅಭಿಪ್ರಾಯ. ತಾರಾಮೇಳ ಹಾಗೂ ಅಭಿನಂದನೆಗಳಂತೆಯೇ ಸದಭಿರುಚಿಯ ಚಿತ್ರಗಳನ್ನು ಜನರಿಗೆ ಮುಟ್ಟಿಸುವುದೂ ಕೂಡ ಬಹು ಮುಖ್ಯವಾದದ್ದು. ಕರ್ನಾಟಕ ಸರ್ಕಾರ ಕನ್ನಡದ ಗುಣಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾಲದಿಂದಲೂ ಹತ್ತು ಹಲವು ಸವಲತ್ತುಗಳನ್ನು ಕನ್ನಡ ಚಿತ್ರಗಳಿಗೆ ನಿರಂತರವಾಗಿ ಒದಗಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡಚಿತ್ರರಂಗ ಸರ್ಕಾರಕ್ಕೆ ಆಭಾರಿಯಾಗಿದೆ. ಆದರೆ ಇಂಥ ಸದಭಿರುಚಿಯ ಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸುವ ದೃಷ್ಟಿಯಲ್ಲಿ ಸರ್ಕಾರದ ಕಡೆಯಿಂದ ಅಂಥ ಪ್ರಯತ್ನಗಳು ಆಗುತ್ತಿಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ. ಸರ್ಕಾರ ಪ್ರತಿವರ್ಷ ವಿವಿಧ ಜಿಲ್ಲೆಗಳಲ್ಲಿ ‘ಸಂಸ್ಕೃತಿ ಸಂಭ್ರಮ’ ಅಥವಾ ‘ಜಿಲ್ಲಾ ಉತ್ಸವ’ಗಳನ್ನು ಏರ್ಪಡಿಸುತ್ತಾ ಬಂದಿದೆ. ಕನಿಷ್ಠ ಆ ದಿನಗಳಲ್ಲಾದರೂ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಕಾರ್ಯಕ್ರಮದ ಅಂಗವಾಗಿ ಆಯಾ ಊರಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಮೂಲಕ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಈ ಹಿಂದೆ ದಾವಣೆಗೆರೆ ಹಾಗೂ ಶಿವಮೊಗ್ಗಗಳಲ್ಲಿ ಈ ಪ್ರಯತ್ನ ಆಗಿದೆ. ಆಗೆಲ್ಲಾ ನನ್ನ ಚಿತ್ರಗಳನ್ನು ಅಲ್ಲಿಯ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಪ್ರೋತ್ಸಾಹಿಸಿದ್ದಾರೆ. ಆ ಅಭಿಮಾನ ನನಗೆ ಆ ಜಿಲ್ಲೆಗಳ ಮೇಲೆ ಇದೆ.
ಈಗ ಜಿಲ್ಲೆಗೆ ಜಿಲ್ಲೆಯೇ ಸಂಭ್ರಮಿಸುವ ಹಬ್ಬ ಬಂದಿದೆ. ಈ ಸಂದರ್ಭದಲ್ಲಾದರೂ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಒಂದು ವೇದಿಕೆ ದೊರೆಯಬಹುದು ಎಂಬ ನನ್ನ ಬಹುದಿನದ ನಿರೀಕ್ಷೆ ಹುಸಿಯಾಗಿದೆ. ನಮ್ಮ ಜಿಲ್ಲೆಯಲ್ಲೇ, ನಮ್ಮ ಚಿತ್ರಗಳಿಗೇ, ನಮ್ಮ ತಂತ್ರಜ್ಞರಿಗೇ ಏಕೆ ಈ ತಾರತಮ್ಯ?
ನಿಜಕ್ಕೂ ಹೇಳುತ್ತೇನೆ, ನಮಗೆ ಈ ಹಾರ-ತುರಾಯಿ ಯಾವುದೂ ಬೇಡ, ನಮ್ಮ ಚಿತ್ರಗಳಿಗೆ ಒಂದು ಪ್ರದರ್ಶನದ ಅವಕಾಶ ಮಾಡಿಕೊಡಿ, ಪ್ಲೀಸ್. ಸಂಸ್ಕೃತಿಯ ಚಿಂತಕರಾದ, ಸ್ವತಃ ಸಾಹಿತಿಗಳಾದ ನಿಮಗೆ ನಮ್ಮ ಈ ಕಳಕಳಿಯ ಬೇಡಿಕೆ ಅರ್ಥವಾಗುತ್ತದೆ ಎಂದು ಭಾವಿಸಿ, ತಮಗೆ ಈ ಪತ್ರ ಬರೆಯುತ್ತಿದ್ದೇನೆ. ಮುಂದಿನದು ನಿಮಗೇ ಬಿಟ್ಟದ್ದು...
|
|