ನಾನು ನೋಡಿದ ಸಿನೆಮಾ: ಗೋಕುಲ

ಪ್ರಕಾಶ್ ರ ಚಿತ್ರಗಳು ನಿರಾಯಾಸವಾಗಿ ಹರಿವ ನದಿಗಳಂತೆ. ಅವರ ಚಿತ್ರಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುವುದಿಲ್ಲ. ಆರಕ್ಕೆರಿಸಿ ಮೂರಕ್ಕಿಳಿಸುವುದೂ ಇಲ್ಲ. ಎಲ್ಲ ನೀವಂದುಕೊಂಡಂತೆ ಸರಾಗವಾಗಿ ಕಥೆ ಸಾಗುತ್ತದೆ. ಅವರ ಹಿಂದಿನೆಲ್ಲ ಚಿತ್ರಗಳಂತೆ ಗೋಕುಲವೂ ಸಹ. ಕನ್ನಡ ಸಿನೆಮಾ ಪರಂಪರೆಯನ್ನ ನಿಷ್ಠೆಯಿಂದ ಮುಂದುವರೆಸಿಕೊಂಡು ಹೋಗುವ ಪಣ ತೊಟ್ಟಿದ್ದಾರೆ ಪ್ರಕಾಶ್.

ಇಷ್ಟಾದರೂ ಅವರ ವಸ್ತು ಆಯ್ಕೆಯ ಬಗ್ಗೆ ಮೆಚ್ಚಿಗೆ ಸೂಚಿಸಲೇಬೇಕು. ಮೊದಲ ಚಿತ್ರ ಖುಷಿ ದಾರಿ ತಪ್ಪಿದ ಶ್ರೀಮಂತರ ಮಕ್ಕಳ ಕಥೆ ಹೇಳಿದರೆ, ರಿಶಿ ತನ್ನ ತಮ್ಮನ್ನನು ತನ್ನವನೆಂದು ಒಪ್ಪಿಕೊಳ್ಳಲಾಗದ ಅಣ್ಣನ ಸಂಕಟದ ಕಥೆ. ದಾಂಪತ್ಯದ ಮಹತ್ವವನ್ನ ಸಾರುವ ಮಿಲನ, ರೌಡಿಯ ಮಗನಾಗಿ ಸಮಾಜದ ಕ್ರೂರ ವ್ಯವಸ್ಥೆಗೆ ಬಲಿ ಪಶುವಾಗುವ ವಂಶಿ ಹೀಗೆ ಕಥೆಯ ಮಟ್ಟಿಗೆ ಎಲ್ಲವೂ ವಿಶಿಷ್ಟವೇ. ಪ್ರಕಾಶ್ ಸೋಲುವುದು ಅದರ ನಿರೂಪಣೆಯಲ್ಲಿ. ಪಾತ್ರಗಳ ಸೂಕ್ಷ್ಮತೆಯಲ್ಲಿ. ಓವರ್ ಸೆಂಟಿಮೆಂಟಿಗೆ ಶರಣಾಗುವುದರಲ್ಲಿ.

ಗೋಕುಲ ಕೂಡ ನಂಬಿಕೆ-ಅಪನಂಬಿಕೆಗಳ ಸುತ್ತ ಸುತ್ತುವ ಕಥೆ. ಕೃಷ್ಣ ಗೋಕುಲೆಯಿಂದ ಮಥುರೆಗೆ ಹೊರಟರೆ ಈ ನಮ್ಮ ನಾಯಕರು ಮಥುರೆ ಎಂಬ ಅನಾಥಾಶ್ರಮದಿಂದ ಗೋಕುಲೆಗೆ ಪಯಣಿಸುತ್ತಾರೆ. ಚಿತ್ರ ವೃದ್ದ ದಂಪತಿಗಳ ಮುಗ್ಧತೆ, ಅವರನ್ನ ಮೋಸ ಗೋಳಿಸಲು ಹೊಂಚು ಹಾಕಿದ ನಾಲ್ವರು ಯುವಕರು, ಅವರ ಜೊತೆಗೊಬ್ಬ ರೌಡಿಯ ನಡುವೆ  ಸುತ್ತುತ್ತದೆ. ನಂಬಿಕೆ, ಅಪನಂಬಿಕೆ, ಸುಳ್ಳು ಸತ್ಯಗಳ ನಡುವೆ ಸುತ್ತುವ ಕಥೆ ಕೊನೆಗೆ ವೃದ್ಧೆ ಆ ಯುವಕರನ್ನೆಲ್ಲ ಕ್ಷಮಿಸುವುದರೊಂದಿಗೆ ಮುಗಿಯುತ್ತದೆ.

ಸುಳ್ಳು-ಸತ್ಯ ಗಳ ನಡುವೆ ಕಥೆ ಗಟ್ಟಿಯಾಗುವ ಸಾಧ್ಯತೆಗಳಿದ್ದರೂ ನಿರ್ದೇಶಕರು ಅದರತ್ತ ಚಿತ್ತ ಹರಿಸಿದಂತಿಲ್ಲ. ಹಾಗಾಗಿ ಇದು ಇನ್ನೊಂದು ಮಾಮೂಲಿ ಚಿತ್ರವಾಗಿ ಉಳಿದುಬಿಡುತ್ತದೆ.

ಅನಾಥಾಶ್ರಮದಿಂದ ಬಂದವರೆಲ್ಲ ಏಕಾಏಕಿ ಖದೀಮರಾಗುತ್ತೆರೆಂಬುದು ಕಥೆಯ ಪ್ರಮುಖ ದೋಷ. ಸಂಭಾಷಣೆಯೊಂದರಲ್ಲಿ ಭ್ರಷ್ಟರ ಸಾಲಿನಲ್ಲಿ ಕೂಲಿಯವನನ್ನು ಸೇರಿ ಅಪಮಾನಿಸಿರುವುದು ಸಂಭಾಷಣೆಕಾರನ ಕೀಳು ಅಭಿರುಚಿಯನ್ನ ತೋರಿಸುತ್ತದೆ.


೧೯-೧೨-೦೯


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಕನ್ನಡEnglish ಸಹಾಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಸಂಚಿಕೆಗಳು

ಈ ಸಂಚಿಕೆಯ ಅಂಕಣಗಳು