ದೃಶ್ಯಕ್ಕೊಂದು ನುಡಿಗಟ್ಟು

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನೆಡೆಯುವ ಪ್ರತಿಷ್ಟಿತ ವನ್ಯಜೀವಿ ಛಾಯಾಗ್ರಾಹಣ ವಿಶ್ವಕಪ್ ಗೆ ಈ ಬಾರಿ ನಾವು ಅತಿಥೇಯರು. ಈ ಸಂದರ್ಭದಲ್ಲಿ

ಈ ವಿಶ್ವಕಪ್ ನ ಜ್ಯೂರಿ ಗಳ ಒಬ್ಬರಾದ ಬಿ. ಶ್ರೀನಿವಾಸ ಅವರೊಂದಿಗೆ ನೆಡೆಸಿದ ಮಾತುಕತೆ ಇಲ್ಲಿದೆ.

ಸಂದರ್ಶಕರು : ರುದ್ರಮೂರ್ತಿ, ಸಂವಾದ.ಕಾಂ



ಬೆಂಗಳೂರಿನಲ್ಲಿ ಮತ್ತೊಂದು ಅಪರೂಪದ ವಿಶ್ವಕಪ್!



ಪರಿಚಯ:

ಒಂದು ಕಾಲಕ್ಕೆ ಶ್ರೀಮಂತಿಕೆಯ ಕುರುಹಾಗಿದ್ದ ಮತ್ತು ಆ ವರ್ಗಕ್ಕಷ್ಟೆ ಕೈಗೆಟುಕುವಂತಿದ್ದ ಛಾಯಾಚಿತ್ರ  ತೆಗೆಯುವ ಅಪರೂಪದ ಕಾರ್ಯಕ್ರಮಗಳಲ್ಲಿ ತಂದೆಯವರು ’ಮೂರುಕಾಲು ಪೆಟ್ಟಿಗೆ’ ಹಿಂದೆ ಕರಿ ಮುಸುಕು ಹಾಕಿಕೊಂಡು ’ಫಳಕ್’ ಅಂತ ಬೆಳ್ಳಿ ಬೆಳಕು ಮಿಂಚಿಸುತ್ತಿದ್ದ ಅಚ್ಚರಿಯನ್ನು ಆ ಹುಡುಗ ಕುತೂಹಲ ದಿಂದ ಗಮನಿಸುತ್ತಲೇ ಇದ್ದ. ಮುಂದೊಂದು ದಿನ ಇಡೀ ವಿಶ್ವದಲ್ಲೇ ದಾಖಲೆ ನಿರ್ಮಿಸುವ ಮಟ್ಟದಲ್ಲಿ ಇದೇ ಕಲೆ ಪ್ರಶಸ್ತಿ ಮತ್ತು ಪ್ರಖ್ಯಾತಿಯನ್ನ ತನ್ನ ಮಡಿಲಿಗೆ ತಂದು ಸುರಿಯುತ್ತದೆಂಬ ಕನಸನ್ನ ಆತ ಖಂಡಿತ ಕಂಡಿರಲಿಕ್ಕಿಲ್ಲ. ಆ ಹೊತ್ತು ಹುಟ್ಟಿದ ಕುತೂಹಲ, ಕೇವಲ ಆತನ ಪರಿಶ್ರಮದಿಂದ ಬೆಳೆದು ಹೆಮ್ಮರವಾಗಿ, ಡಾಕ್ಟರೇಟ್ ಪದವಿಗೆ ಸಮಾನವಾದ ಕಿರೀಟವನ್ನ ಹತ್ತನೇ ತರಗತಿಗೇ ಓದನ್ನು ಮೊಟಕುಗೊಳಿಸಿದ ಆತನಿದ್ದಲಿಗೇ ಬಂದು ಮುಡಿಗೇರಿಸಿತು. ಇಂದು ’ಬಿ.ಶ್ರೀನಿವಾಸ್’ ಹವ್ಯಾಸಿ ಛಾಯಾಚಿತ್ರ ರಂಗದಲ್ಲಿ ವಿಶ್ವವಿಖ್ಯಾತಿ ಪಡೆದ ಹೆಸರು. ಅವರು ತೆಗೆದ ಒಂದೊಂದು ಚಿತ್ರದ ಬೆರಗನ್ನು ಇವತ್ತು ಇಡೀ ಜಗತ್ತೇ ನೋಡಿ ’ವಾಹ್ಹ್’ ಅನ್ನುತ್ತಲೇ ಇದೆ - ಆ ಮೂಲಕ ಕನ್ನಡದ ಮಣ್ಣಿನ ಹಿರಿಮೆಯನ್ನು ಹೆಚ್ಚಿಸುತ್ತಲೇ ಇದೆ.



ಓದು ಕೈಬಿಟ್ಟರೇನಂತೆ - ಕಲೆ ಕೈಹಿಡಿಯಿತು, ಬದುಕನ್ನೂ ಕಟ್ಟಿಕೊಟ್ಟಿತು. ಮದುವೆ ಮನೆಯ ’ಶುಭಂ ಸೀನು’ ಗಳಿಗೆ ’ರೆಡಿ-ಸ್ಮೈಲ್ ಪ್ಲೀಸ್’ ಅನ್ನುವಲ್ಲಿಗೆ ಸೀಮಿತವಾಗಿದ್ದ ಪ್ರತಿಭೆ ಇವತ್ತು ಕ್ಯಾಮೆರ ಹಿಡಿದು ನಿಂತರೆ ಇಡೀ ಪ್ರಕೃತಿಮಾತೆ ತನ್ನೆಲ್ಲಾ ಪರಿವಾರದೊಡನೆ ಇಷ್ಟಗಲ ಮುಖವರಳಿಸಿ ನಿಲ್ಲುತ್ತಾಳೆ! ಆ ಮಾಯಾಜಾಲಕ್ಕೆ ಜಗತ್ತು ಮತ್ತೆ ಮತ್ತೆ ತಲೆದೂಗುತ್ತದೆ. ಈ ಬಗೆಯ ಸಮ್ಮೋಹನ ಸಾಧ್ಯವಾಗೋದು ಏನಾದ್ರೂ ಹೊಸತನ್ನ ಸಾಧಿಸಬೇಕೆಂಬ ಹಟತೊಟ್ಟವರಿಗೆ ಮಾತ್ರ, ಆ ಕನಸುಗಳಿಗೆ ಪರಿಶ್ರಮದ ನೀರೆರೆದು ನನಸಾಗಿಸಿಕೊಳ್ಳುವವರಿಗೆ ಮಾತ್ರ.



ಬಿ. ಶ್ರೀನಿವಾಸ್ ಅಂತಹ ಸಾಧಕರಲ್ಲಿ ಒಬ್ಬರು. ಗುರು ಸಿ.ರಾಜಗೋಪಾಲ್ ಅವರಿಂದ ಪ್ರಭಾವಿತರಾಗಿ, ಅವರ ಮಾರ್ಗದರ್ಶನದಲ್ಲಿ ಈ ರಂಗದ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡು  ಅಪಾರ ಸಂಯಮ ಬೇಡುವ, ವನ್ಯಜೀವಿ ಛಾಯಾಗ್ರಾಹಣದ ಕಲೆಯನ್ನು ಭಾರತದಲ್ಲಿ ತಂತ್ರಜ್ಞಾನ ಇನ್ನೂ ಕಣ್ಣುಬಿಡುತ್ತಿರುವಾಗಲೇ ಕರಗತ ಮಾಡಿಕೊಂಡರು. ೨೯ರ ಹರೆಯದಲ್ಲೇ ಇಂಗ್ಲೇಂಡಿನ ಪ್ರತಿಷ್ಟಿತ ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಅಸೋಸಿಯೇಟ್‍ಶಿಪ್ ಪಡೆದರು, ಆನಂತರದ್ದೆಲ್ಲ ಇತಿಹಾಸ.  ಎಫ್.ಆರ್.ಪಿ.ಎಸ್, ಎಫ್.ಐ.ಏ.ಪಿ , ಇತ್ಯಾದಿ ವಿಶ್ವ ಮಟ್ಟದಲ್ಲಿ ಇರುವ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳೂ ಮನೆಯ ಶೋಕೇಸಿನಲ್ಲಿ ಜಾಗ ಪಡೆದುಕೊಂಡವು. ಎಮ್.ಎಫ್.ಐ.ಏ.ಪಿ ಅಂತೂ ೩೫ನೇ ವಯಸ್ಸಿನಲ್ಲಿ - ಈ ಗೌರವ ಪಡೆದ ವಿಶ್ವದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಯೊಂದಿಗೇ ಬಂತು. ರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಮಾನ್ಯತೆಗಳಿಗಂತೂ ಲೆಖ್ಖವೇ ಇಲ್ಲ. ಪಿಕ್ಟೊರಿಯಲ್ ಮತ್ತು ವನ್ಯಜೀವಿ ಈ ಎರಡೂ ವಿಭಾಗಗಳಲ್ಲಿ ರಾಯಲ್ ಫೋಟೊಗ್ರಫಿಕ್ ಸೊಸೈಟಿ ಎಫ್.ಆರ್.ಪಿ.ಎಸ್. ಡಿಸ್ಟಿಂಕ್ಶನ್ ಗೌರವ ಕೊಟ್ಟು ಗೌರವಿಸಿತು. ಈ ದಾಖಲೆಯನ್ನು ಭಾರತದಲ್ಲಿ ಈವರೆಗೂ ಯಾರಿಗೂ ಸರಿಗಟ್ಟಲಾಗಿಲ್ಲ ಎಂಬುದು ಕರ್ನಾಟಕದ ಮತ್ತೊಂದು ಹೆಮ್ಮೆ!



ಕಪ್ಪು-ಬಿಳುಪೇ ಆಗಲಿ, ವರ್ಣಪಾರದರ್ಶಿಕೆಗಳೇ ಆಗಲಿ ಎಳ್ಳಷ್ಟೂ ಹುಳುಕಿಲ್ಲದ ನಿಖರತೆ,  ನೆರಳು-ಬೆಳಕಿನಾಟದ ಕುಶಲತೆ ಇವರ ಕೃತಿಗಳನ್ನು ಜೀವಂತವಾಗಿಸುತ್ತವೆ. ಶ್ರೀನಿವಾಸ್ ಈ ಹೊತ್ತಿನ ಕರ್ನಾಟಕದ ಬಹುತೇಕ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ’ಬಾಸ್’ ಅಷ್ಟೇ ಆಗಲಿಲ್ಲ, ದೇಶದ ಉದ್ದಗಲ ಇರುವ ಎಲ್ಲಾ ಕಾಡುಮೇಡುಗಳಲ್ಲಿನ ವನ್ಯಜೀವಿಗಳ ಚಿತ್ರ ತೆಗೆದು ಪ್ರದರ್ಶಿಸಿ, ಆ ಮೂಲಕ ಸಮಾಜದಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾದರು. ಕಪ್ಪು-ಬಿಳುಪು ಫಿಲಮ್ ಕ್ಯಾಮೆರಾಗಳಿಂದ ಹಿಡಿದು ಇವತ್ತಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮೆರಾ ಯುಗದದವರೆಗೂ ತನ್ನದೆ ಛಾಪು ಮೂಡಿಸಿ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಹೆಸರನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಅಜರಾಮರವಾಗಿಸಿದ್ದಾರೆ. ಇಂಥಹ ಮಹಾನ್ ಪ್ರತಿಭೆಗೆ ಫೆಡೆರೇಶನ್ ಆಫ್ ಇಂಡಿಯನ್ ಫೋಟೊಗ್ರಫಿ ಈ ಬಾರಿಯ ’೧೫ನೇ ಅಂತರ್ರಾಷ್ಟ್ರೀಯ ವನ್ಯಜೀವಿ ವಿಶ್ವಕಪ್’ ನಲ್ಲಿ ಕರ್ನಾಟಕದ ಮತ್ತೊಬ್ಬ ಪ್ರತಿಭಾನ್ವಿತ ಛಾಯಾಗ್ರಾಹಕ ಟಿ.ಎನ್.ಎ. ಪೆರುಮಾಳ್ ಅವರೊಟ್ಟಿಗೆ ಕೂತು ಜಾಗತಿಕ ಮಟ್ಟದಲ್ಲಿ ವಿಜೇತರನ್ನ ಆರಿಸುವ ಜವಾಬ್ದಾರಿ ಕೊಟ್ಟು ತನ್ನ ಗೌರವವನ್ನ ತಾನೇ ಹೆಚ್ಚಿಸಿಕೊಂಡಿದೆ.

ಈ ಸಂದರ್ಭದಲ್ಲಿ ಅವರೊಂದಿಗೆ ಸಂವಾದ.ಕಾಂ ತಂಡ ನೆಡೆಸಿದ ಮಾತುಕತೆ ಇಲ್ಲಿದೆ.



ಸಂ: ನಮಸ್ತೆ ಸಾರ್, ೧೫ನೇ ಜಾಗತಿಕ ವನ್ಯಜೀವಿ ಛಾಯಾಗ್ರಾಹಣ ವಿಶ್ವಕಪ್ ನ ಜ್ಯೂರಿಗಳ ತಂಡದಲ್ಲಿ ಭಾರತವನ್ನ ಪ್ರತಿನಿಧಿಸ್ತಾ ಇದ್ದೀರ ಇದಕ್ಕಾಗಿ ಅಭಿನಂದನೆಗಳು. ಈ ಸಂದರ್ಭದಲ್ಲಿ ಈ ವಿಶ್ವಕಪ್ ಬಗ್ಗೆ, ಅದರ ಮಹತ್ವದ ಬಗ್ಗೆ ವಿವರ ತಿಳಿಸ್ತೀರಾ.



ಶ್ರೀ: ವಂದನೆಗಳು, ನೋಡಿ ಕ್ರೀಡಾಪ್ರಪಂಚದಲ್ಲಿ ವಿಶ್ವಕಪ್ ಕ್ರಿಕೆಟ್ ಮತ್ತು ಫುಟ್ಬಾಲ್ ಎಷ್ಟು ಪ್ರಖ್ಯಾತಿಯುಳ್ಳ ಈವೆಂಟ್‍ಗಳೋ ಅದೇ ರೀತಿ ಫೋಟೋಗ್ರಫಿನಲ್ಲಿ ಕೂಡ ವಿಶ್ವಕಪ್ ಮಾದರಿಯನ್ನನುಸರಿಸಿ ಎರಡು ವರ್ಷಕ್ಕೊಮ್ಮೆ ಜಾಗತಿಕ ಮಟ್ಟದಲ್ಲಿ ಫೆಡೆರೇಶನ್ ಇಂಟ‍ನ್ಯಾಶನಲ್ ಡಿ’ ಲಾರ್ಟ್ ಫೋಟೊಗ್ರಫಿಕ್ ( Federation    Internationale   De  L'Art    Photographique - FIAP)  ಅನ್ನೋ ಸಂಸ್ಥೆ ವನ್ಯಜೀವಿ ಮತ್ತು ಪಿಕ್ಟೋರಿಯಲ್ ವಿಭಾಗಗಳಲ್ಲಿ ವಿಶ್ವಕಪ್ ನಡೆಸ್ತದೆ. ಪ್ರಪಂಚದ ವಿವಿಧ ದೇಶಗಳ ಫೊಟೊಗ್ರಫಿ ಸಂಸ್ಥೆಗಳು ತಮ್ಮ ದೇಶದ ಛಾಯಾಗ್ರಾಹಕರ ಅತ್ಯುತ್ತಮ ಕೃತಿಗಳೊಡನೆ ಸ್ಪರ್ಧೆಗೆ ಇಳಿಯುತ್ತವೆ. ಈ ಬಾರಿಯ ೧೫ನೇ ವನ್ಯಜೀವಿ ವರ್ಲ್ಡ್ ಕಪ್ ( 15th Nature Biennial - FIAP Nature world cup)  ನ ಆತಿಥ್ಯ ನಮ್ಮದು, ಸುಮಾರು ೩೦ ರಿಂದ ೪೦ ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸೋ ನಿರೀಕ್ಷೆ ಇದೆ.



ಇಂಟ‍ನ್ಯಾಶನಲ್ ಡಿ’ ಲಾರ್ಟ್ ಫೋಟೊಗ್ರಫಿ ಬಗ್ಗೆ ಹೇಳೋದಾದ್ರೆ ಈ ಜಾಗತಿಕ ಸಂಸ್ಥೆಯ ಮುಖ್ಯಸ್ಥರ ದೇಶದಲ್ಲಿ ಮುಖ್ಯಕಛೇರಿ ಹೊಂದಿರುತ್ತೆ,  ಪ್ರಸ್ತುತ ಇದು ಹಾಲೆಂಡ್ ನಲ್ಲಿದೆ. ಪ್ರತಿಯೊಂದು ದೇಶದ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಉದಾಹರಣೆಗೆ ನಮ್ಮ ಫೆಡೆರೇಶನ್ ಆಫ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆ, ಈ ವಿಶ್ವ ಮಟ್ಟದ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಇರ್ತವೆ. ಈ ಎಲ್ಲಾ ಸಂಸ್ಥೆಗಳ ಸಹಯೋಗದಲ್ಲಿ ಈ ವರ್ಲ್ಡ್ ಕಪ್ ಈವೆಂಟ್ ನೆಡೆಯುತ್ತದೆ. ಭಾಗವಹಿಸುವ ಪ್ರತಿ ದೇಶವೂ ಕಪ್ಪು-ಬಿಳುಪು ಅಥವಾ ವರ್ಣಪಾರದರ್ಶಿಕೆಗಳಲ್ಲಿ ೧೦ ಪ್ರಿಂಟ್ ಮತ್ತು ೨೦ ಪ್ರೊಜೆಕ್ಷನ್ ಇಮೇಜ್ ಗಳನ್ನು ಕಳುಹಿಸೋದಕ್ಕೆ ಅವಕಾಶ ಇರುತ್ತೆ. ಈ ಬಾರಿ ಪಕ್ಷಿಗಳ ಮತ್ತು ವನ್ಯಪ್ರಾಣಿಗಳ ಆಹಾರಕ್ರಮಗಳನ್ನು ಸೆರೆಹಿಡಿದ ಚಿತ್ರಗಳನ್ನು ಆಹ್ವಾನಿಸ್ತಾ ಇದ್ದೇವೆ.



ಸಂ: ಈ ಬಾರಿಯ ಈವೆಂಟ್ ನಲ್ಲಿ ಭಾರತದ ಪಾತ್ರ ಮತ್ತು ಸ್ಪರ್ಧೆಯ ವಿವರ ಹೇಳ್ತೀರಾ?  

ಶ್ರೀ: ಈ ೧೫ನೇ ವರ್ಲ್ಡ್ ಕಪ್ ಅನ್ನು  FIP - Kalkatta  ಮತ್ತು  YPS - Bangalore  ಆಯೋಜಿಸುವ ಹೊಣೆ ಹೊತ್ತಿದ್ದಾರೆ.

ಮರ್ಸಿಡಿಸ್ ಬೆಂಜ಼್ ತಾಜ್ ವೆಸ್ಟೆಂಡ್ ಮತ್ತು ಭಾರತ್ ಪೆಟ್ರೋಲಿಯಂ ಇವರ ಪ್ರಾಯೋಜಕತ್ವದಲ್ಲಿ ಸುಮಾರು ೨೦ -೨೫ ಲಕ್ಷ  ದ ಬಡ್ಜೆಟ್ ಇಟ್ಕೊಂಡು ’ವರ್ಲ್ಡ್ ಕಪ್’, ದೇಶೀಯ/ವೈಯಕ್ತಿಕ ವಿಭಾಗದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮತ್ತು ’ಹಾನರರಿ ಅವಾರ್ಡ್’ ಗಳನ್ನು ಒಳಗೊಂಡ ಸ್ಪರ್ಧೆ ಆಗಸ್ಟ್ ೧೧ರಿಂದ ನಿಂದ ಡಿಸೆಂಬರ್ ೩೧ ರವರೆಗೆ ವಿವಿಧ ಹಂತಗಳಲ್ಲಿ ನೆಡೆಯಲಿದೆ.

ವಿವಿಧ ದೇಶಗಳ ಕೆಳಕಂಡ ೫ ಜನ ಜಡ್ಜ್‍ಗಳ ತಂಡ



Mr. Riccardo Busi, MFIAP, HonEFIAP from Italy

Mr. Jacky Martin, EFIAP, HonEFIAP from France

Dr. Grame Guy from Singapore

Ms. Jill Sneesby, ESFIAP from South Africa

Mr. TNA Perumal, MFIAP from India

Mr. B. Srinivasa, MFIAP from India



ವಿಜೇತರನ್ನ ಆಯ್ಕೆ ಮಾಡಲಿದೆ.

ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನ ಅಕ್ಟೊಬರ್ ೬ ರಿಂದ ೧೧ ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ವನ್ಯಜೀವಿ ಸಪ್ತಾಹದ ಅಡಿಯಲ್ಲಿ ನೆಡೆಯಲಿದೆ.

ವೈ.ಪಿ.ಎಸ್. ನಂಥ ಸಂಸ್ಥೆಗಳ ಮೂಲಕವಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಎಲ್ಲಾ ಛಾಯಾಗ್ರಹಕರಿಗೆ ಇದೆ. ಸ್ಥಳೀಯ ಸಂಸ್ಥೆಗಳು ಆರಿಸಿ ಕಳುಹಿಸಿದ ಚಿತ್ರಗಳಲ್ಲಿ ಎಫ್.ಐ.ಪಿ. ನ ಕಮಿಟಿ ನಮ್ಮ ದೇಶವನ್ನು ಪ್ರತಿನಿಧಿಸುವ ಪ್ರತಿಗಳನ್ನು ಆಯ್ಕೆ ಮಾಡಿ ಮುಖ್ಯ ಸ್ಪರ್ಧೆಗೆ ಕಳುಹಿಸುತ್ತದೆ.

ಹೆಚ್ಚಿನ ವಿವರಗಳು  http://www.fiap.net/index-en.php  ಜಾಲತಾಣದಲ್ಲಿ ದೊರೆಯುತ್ತವೆ.



ಸಂ: ಈ ಬಗೆಯ ಈವೆಂಟ್ ನಲ್ಲಿ ಭಾರತದ ಈವರೆಗಿನ ಸಾಧನೆ ಬಗ್ಗೆ ಹೇಳ್ತೀರಾ?  

ಶ್ರೀ: ೧೯೮೧ ರಲ್ಲಿ ಶುರುವಾದ ಈ ವರ್ಲ್ಡ್ ಕಪ್ ಕಿರೀಟವನ್ನ ಧರಿಸಿದ್ದೇ ಅಲ್ಲದೇ ನಂತರದ ೩ ಬಾರಿ - ೮೩,೮೫ ಮತ್ತು ೮೭ರ ವರ್ಲ್ಡ್ ಕಪ್ ಗಳನ್ನು ಸಾಲು ಸಾಲಾಗಿ ತನ್ನದಾಗಿಸಿಕೊಂಡ ಹಿರಿಮೆ ಭಾರತದ್ದು. ಈ ಸಾಧನೆಯಲ್ಲಿ ಕರ್ನಾಟಕ - ವಿಶೇಷವಾಗಿ ಬೆಂಗಳೂರು ಮಹತ್ತರ ಪಾತ್ರ ವಹಿಸಿದೆ.

ಆ ನಂತರದ ಈವರೆಗಿನ ಎಲ್ಲಾ ಸ್ಪರ್ಧೆಗಳಲ್ಲೂ ಭಾರತ ಮೊದಲ ಹತ್ತು ಸ್ಥಾನಗಳಲ್ಲಿ ಇದ್ದೇ ಇದೆ. ಬೇರೆ ಮುಂದುವರೆದ ದೇಶಗಳಲ್ಲಿ ದೊರೆಯುವ ತಂತ್ರಜ್ಞಾನ, ಅವಕಾಶ ಮತ್ತು ಪ್ರೋತ್ಸಾಹ ಗಳಿಗೆ ಹೋಲಿಸಿದರೆ ನಮ್ಮಲ್ಲಿನ ಈ ಎಲ್ಲಾ ಸೀಮಿತ ಪರಿಧಿಯೊಳಗೂ ಈ ಬಗೆಯ ಸಾಧನೆ ನಿಜಕ್ಕೂ ಪ್ರಶಂಸನೀಯ.

ನಿಮಗೆ ಗೊತ್ತಿರೋ ಹಾಗೆ ಬೆಂಗಳೂರು ತನ್ನ ಇತರ ಮತ್ತೆಲ್ಲಾ ವಿಶೇಷಣಗಳೊಂದಿಗೆ ’ವನ್ಯಜೀವಿ ಛಾಯಾಗ್ರಾಹಕರ ತವರೂರು’ ಅಂತಲೂ ಪ್ರಖ್ಯಾತಿ ಪಡೆದಿದೆ. ಅಂತರ್ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ  ಛಾಯಾಗ್ರಾಹಕರ ಪೈಕಿ ಎಫ್.ಆರ್.ಪಿ.ಎಸ್. ಪಡೆದ ೧೦-೧೧ ಜನ ಬೆಂಗಳೂರಿನವರು.  ಈವರೆಗೆ ಇಡೀ ಭಾರತದಲ್ಲಿ, ಡಾಕ್ಟರೇಟ್ ಪದವಿಗೆ ಸಮಾನವಾದ ಎಮ್.ಎಫ್.ಏ.ಪಿ. ಪಡೆದಿರುವ ಏಳೂ ಜನ ಬೆಂಗಳೂರಿಗರೆ!

ಇವರೆಲ್ಲರ ಸಾಧನೆಗಳನ್ನು ಪರಿಗಣಿಸಿ, ಅವರ ಪ್ರೋತ್ಸಾಹದಿಂದೊಂದಿಗೆ, ಯೂತ್ ಫೋಟೊಗ್ರಫಿಕ್ ಸೊಸೈಟಿ - ವೈ.ಪಿ.ಎಸ್ ಹಾಗೂ ಫೆಡೆರೇಶನ್ ಆಫ್ ಇಂಡಿಯನ್ ಫೊಟೊಗ್ರಫಿ- ಎಫ್.ಐ.ಪಿ. ಯ ಈ ಬಾರಿಯ ಆತಿಥ್ಯದ ಕೋರಿಕೆಗೆ ಈ ಗೌರವದ ಮನ್ನಣೆ ದೊರೆತಿದೆ.



ಸಂ: ಈ ಸ್ಪರ್ಧೆಯಲ್ಲಿನ ಆಯ್ಕೆಗಳಿಗೆ ಇರುವ ಮಾನದಂಡ ಮತ್ತು ಇಲ್ಲಿಂದ ಬಿತ್ತರವಾಗಲಿರುವ ಸಂದೇಶದ ಬಗ್ಗೆ ಹೇಳ್ತೀರಾ.

ಶ್ರೀ : ಗುಣಮಟ್ಟ, ಸ್ಪಷ್ಟತೆ, ನೆರಳು-ಬೆಳಕಿನ ಗರಿಷ್ಟ ಸಂಯೋಜನೆ, ಚಿತ್ರ ತೆಗೆದ ಕೋನ, ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರ ನಿರೂಪಿಸುವ ಕತೆ ಇವನ್ನ ಮಾನದಂಡವಾಗಿ ಇಟ್ಕೊಂಡಿದೀವಿ.

ಎಲ್ಲೆಡೆ ಕೇಳಿಬರುತ್ತಿರುವ ಪರಿಸರದ ಬಗೆಗಿನ ಕಾಳಜಿ, ಸಂರಕ್ಷಣೆ, ಹವಾಮಾನ ವೈಪರಿತ್ಯಗಳ ಮೂಲಕಾರಣಗಳ ಮೇಲೆ ಯಾವತ್ತೂ ಹವ್ಯಾಸಿ ಛಾಯಾಚಿತ್ರಕಾರರು ಬೆಳಕು ಚೆಲ್ಲಿ ಅರಿವು ಮೂಡಿಸ್ತಾನೆ ಇದಾರೆ. ಈ ಸ್ಪರ್ಧೆ ಕೂಡ ಇದನ್ನೇ ಜಾಗತಿಕ ಮಟ್ಟದಲ್ಲಿ ಬಿತ್ತರಿಸಲಿದೆ. ಅಷ್ಟೆ ಅಲ್ಲದೆ ಪ್ರಪಂಚದ ಬೇರೆ ಬೇರೆ ಪರಿಸರಗಳ ವೈವಿಧ್ಯತೆಗಳನ್ನ ಜನಸಾಮಾನ್ಯರಿಗೆ ತೆರೆದಿಡುತ್ತಿದೆ. ದೇಶ-ದೇಶದ ನಡುವಿನ ಸ್ನೇಹ ವೃದ್ಧಿಯ ಯತ್ನ, ತಂತ್ರಜ್ಞಾನ ಹಾಗೂ ಈ ರಂಗದ ಬೆಳವಣಿಗೆಗಳ ವಿನಿಮಯದ ಸಾಧ್ಯತೆಗಳು ಕೂಡ ಇವೆ.



ಸಂ: ಈ ಸಂದರ್ಭದಲ್ಲಿ ಈ ರಂಗಕ್ಕೆ ಕರ್ನಾಟಕದ ಕೊಡುಗೆ ಬಗ್ಗೆ ಒಂದಿಷ್ಟು ಮಾಹಿತಿ ಕೊಡ್ತೀರಾ.

ಶ್ರೀ : ಈ ಸಂದರ್ಭದಲ್ಲಷ್ಟೇ ಅಲ್ಲ ನಿತ್ಯ ಸ್ಮರಣೀಯರಾದ ಸುಮಾರು ಜನರ ಕೊಡುಗೆ ಇದೆ. ನನ್ನ ಈ ಬಗೆಯ ಏಳಿಗೆಗೆ ಕಾರಣರಾದ ನನ್ನ ಗುರು ಸಿ. ರಾಜಗೋಪಾಲ್, ಬಿ.ಎಸ್. ಸುಂದರಮ್, ಫೇಡೆರೇಶನ್ ಆಫ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆಯ ಸ್ಥಾಪಕರಾದ ಡಾ. ಜಿ. ಥಾಮಸ್,  ನಮ್ಮ ಭಾರತದಲ್ಲಿ ವನ್ಯಜೀವಿ ಛಾಯಾಗ್ರಾಹಣಕ್ಕೆ ನಾಂದಿ ಹಾಡಿದ ಬಿಶಪ್ ಕಾಟನ್ ಶಾಲೆಯ ಪ್ರೊಫೆಸರ್ ಓ.ಸಿ. ಎಡ್ವರ್ಡ್ಸ್ ಇವರೆಲ್ಲರನ್ನ ನೆನೆಯದೆ ಇರಲಾದೀತೇ? ಇವರೆಲ್ಲರ ನಿಸ್ವಾರ್ಥ ಸೇವೆಯ ಫಲವೇ ನಾವು ಇಂದು ನೋಡುತ್ತಿರುವ ಎಫ್.ಐ.ಪಿ ಮತ್ತು ವೈ.ಪಿ.ಎಸ್. ನಂಥ ಮೇರು ಸಂಸ್ಥೆಗಳು. ವನ್ಯಜೀವಿ ಛಾಯಾಗ್ರಾಹಕರಾಗಿ ಪ್ರಖ್ಯಾತರಾದ ಇ. ಹನುಮಂತರಾವ್, ಆರ್. ದೇವ್, ಭಾರತದ ಮೊದಲ ಎಂ.ಆರ್ ಎಂ.ಎಫ್.ಐ.ಏ.ಪಿ. ಡಿಸ್ಟಿಂಕ್ಶನ್ ಪಡೆದ ವೈ.ಎಂ. ಘೋರ್ಪಡೆ, ಟಿ.ಏನ್.ಏ. ಪೆರುಮಾಳ್, ಎಸ್.ಸತೀಶ್, ಎಚ್.ವಿ.ಪ್ರವೀಣ್ ಕುಮಾರ್, ಈ ಬಾರಿಯ  ಎಂ.ಎಫ್.ಐ.ಏ.ಪಿ. ಡಿಸ್ಟಿಂಕ್ಶನ್ ಪಡೆದ ಎಮ್.ಎನ್.ಜಯಕುಮಾರ್, ಫೋಟೊಜರ್ನಲಿಸಮ್ ನಲ್ಲಿ ಖ್ಯಾತಿಗಳಿಸಿದ ಮೈಸೂರಿನ ಟಿ.ಎಸ್. ಸತ್ಯನ್, ಮುಂತಾದವರು ಈ ಕ್ಷೇತ್ರಕ್ಕೆ ಕರ್ನಾಟಕದ ಅಪೂರ್ವ ಕೊಡುಗೆಗಳು.



ಸಂ: ಈ ಸಂದರ್ಭದಲ್ಲಿ ಉದಯೋನ್ಮುಖ ವನ್ಯಜೀವಿ ಛಾಯಾಗ್ರಾಹಕರಿಗೆ ನಿಮ್ಮ ಸಂದೇಶ ಅಥ್ವಾ ಕಿವಿಮಾತು.

ಶ್ರೀ : ಹೇಳಿ ಕೇಳಿ ಈ ಕಲೆ ಅಪಾರ ಸಂಯಮ, ತಾಳ್ಮೆ ಬೇಡುವಂತಹುದು ಅದಕ್ಕಾಗಿ ತಯಾರಾಗಬೇಕಾಗ್ತದೆ. ತಂತ್ರಜ್ಞಾನ ಇಂದು ತುಂಬಾ ಬೆಳೆದಿದೆ ಅದರ ಆಳ ತಿಳಿದುಕೊಂಡು ಅದನ್ನು ದುಡಿಸಿಕೊಳ್ಳೋ ಜಾಣ್ಮೆ ಕಲೀಬೇಕು. ಪ್ರತಿಯೊಬ್ಬರೂ ಕಲಿಯುವ ಹಂತದಲ್ಲಿ ಹೊರತು ತಮ್ಮದೇ ಶೈಲಿಯನ್ನು ರೂಢಿಸಿಕೊಂಡರೆ ಉತ್ತಮ. ನೆರಳುಬೆಳಕಿನ ಗರಿಷ್ಟ ಸಂಯೋಜನೆಗೆ ಆದ್ಯತೆ ನೀಡಬೇಕು. ಪರಿಪೂರ್ಣ ಎನ್ನುವ ಚಿತ್ರ ಒಡಮೂಡಲು ಸಾಧ್ಯ ಆಗೋದು ನಾವು ಮಾಡುವ ನಮ್ಮ ಕೆಲಸವನ್ನ ಪ್ರೀತಿಸಿದಾಗ ಮಾತ್ರ - ಶ್ರದ್ಧೆ ಇದ್ದಾಗ ಮಾತ್ರ.  ಆದ್ರಿಂದ ಕ್ಯಾಮೆರಾದ ಬಗ್ಗೆ, ನೀವು ತೆಗೆಯಲಿರುವ ವಸ್ತುವಿನ ಬಗ್ಗೆ  ಕೂಡ ಪ್ರೀತಿ ಬೆಳಸಿಕೊಳ್ಳೊದು ಅಗತ್ಯ ಅನಿಸ್ತದೆ. ಕೊನೆಯದಾಗಿ ಫೋಟೋಗ್ರಫಿ ಮೊದಲು ಆತ್ಮತೃಪ್ತಿಗೆ ನಂತರ ಇತರರಿಗೆ ಅನ್ನೋದು ನೆನಪಿನಲ್ಲಿರಲಿ.



ಸಂ:ನಿಮ್ಮ ಅಮೂಲ್ಯ ಸಮಯವನ್ನ ನಮಗಾಗಿ ಮೀಸಲಿಟ್ಟು ಇಷ್ಟೊಂದು ವಿವರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.

ಶ್ರೀ:ನಿಮಗೂ ಸಹ ಧನ್ಯವಾದಗಳು, ಶುಭವಾಗಲಿ.

ಇನ್ನಷ್ಟು ಲೇಖನಗಳು